ದುಲೀಪ್ ಟ್ರೋಫಿಯಲ್ಲೂ ವಿಫಲ; ಕೆಎಲ್ ರಾಹುಲ್ ಟೆಸ್ಟ್ ಕಂಬ್ಯಾಕ್ ಹಾದಿ ಮತ್ತಷ್ಟು ಕಠಿಣ, ಫ್ಯಾನ್ಸ್‌ ನಿರಾಶೆ
ಕನ್ನಡ ಸುದ್ದಿ  /  ಕ್ರಿಕೆಟ್  /  ದುಲೀಪ್ ಟ್ರೋಫಿಯಲ್ಲೂ ವಿಫಲ; ಕೆಎಲ್ ರಾಹುಲ್ ಟೆಸ್ಟ್ ಕಂಬ್ಯಾಕ್ ಹಾದಿ ಮತ್ತಷ್ಟು ಕಠಿಣ, ಫ್ಯಾನ್ಸ್‌ ನಿರಾಶೆ

ದುಲೀಪ್ ಟ್ರೋಫಿಯಲ್ಲೂ ವಿಫಲ; ಕೆಎಲ್ ರಾಹುಲ್ ಟೆಸ್ಟ್ ಕಂಬ್ಯಾಕ್ ಹಾದಿ ಮತ್ತಷ್ಟು ಕಠಿಣ, ಫ್ಯಾನ್ಸ್‌ ನಿರಾಶೆ

KL Rahul: ದುಲೀಪ್‌ ಟ್ರೋಫಿಯಲ್ಲಿ ಭಾರತ 'ಬಿ' ತಂಡದ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ ಕೆಎಲ್ ರಾಹುಲ್ ಹೇಳಿಕೊಳ್ಳುವ ಪ್ರದರ್ಶನ ನೀಡಿಲ್ಲ. ಹೀಗಾಗಿ ಬಾಂಗ್ಲಾದೇಶ ವಿರುದ್ಧದ ಮುಂದಿನ ಟೆಸ್ಟ್‌ ಸರಣಿಗೆ ಆಯ್ಕೆಯಾಗುವುದು ಕಷ್ಟವಾಗಿದೆ.

ಕೆಎಲ್ ರಾಹುಲ್ ಟೆಸ್ಟ್ ಕಂಬ್ಯಾಕ್ ಹಾದಿ ಮತ್ತಷ್ಟು ಕಠಿಣ
ಕೆಎಲ್ ರಾಹುಲ್ ಟೆಸ್ಟ್ ಕಂಬ್ಯಾಕ್ ಹಾದಿ ಮತ್ತಷ್ಟು ಕಠಿಣ (X)

ದುಲೀಪ್ ಟ್ರೋಫಿ ಆರಂಭವಾಗಿದೆ. ಕ್ರಿಕೆಟ್ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಭಾರತ 'ಬಿ' ವಿರುದ್ಧದ ಪಂದ್ಯದಲ್ಲಿ ಭಾರತ ‘ಎ’ ತಂಡದ ಪರ 111 ಎಸೆತಗಳಲ್ಲಿ ಕೇವಲ 37 ರನ್ ಬಾರಿಸುವಲ್ಲಿ ಟೀಮ್‌ ಇಂಡಿಯಾ ಬ್ಯಾಟರ್ ಸುಸ್ತಾದರು. ಇದರೊಂದಿಗೆ ಭಾರತ ಟೆಸ್ಟ್‌ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆಯಿಂದ ಮತ್ತಷ್ಟು ದೂರವಾಗಿದ್ದಾರೆ. ಮೊದಲ ಇನ್ನಿಂಗ್ಸ್‌ನ 49ನೇ ಓವರ್‌ನಲ್ಲಿ ವಾಷಿಂಗ್ಟನ್ ಸುಂದರ್ ಎಸೆತದಲ್ಲಿ ಕ್ಲೀನ್‌ ಬೋಲ್ಡ್ ಆದ ರಾಹುಲ್‌, ಅನಿರೀಕ್ಷಿತ ರೀತಿಯಲ್ಲಿ ಔಟಾದರು. ಇದರೊಂದಿಗೆ ಉತ್ತಮ ಪ್ರದರ್ಶನದ ಭರವಸೆ ಮತ್ತೆ ಕಮರಿತು.

ಸುಂದರ್ ಆಫ್-ಸ್ಟಂಪ್‌ನಲ್ಲಿ ಎಸೆದ ಚೆಂಡನ್ನು ರಾಹುಲ್ ಪ್ಯಾಡಲ್-ಸ್ವೀಪ್‌ ಮಾಡಲು ಪ್ರಯತ್ನಿಸಿದರು. ಚೆಂಡಿನ ತಿರುವು ರಾಹುಲ್ ಅವರನ್ನು ಗೊಂದಲಕ್ಕೀಡು ಮಾಡಿತು. ಚೆಂಡು ಅವರ ಬ್ಯಾಟ್ ದಾಟಿ ಲೆಗ್ ಸ್ಟಂಪ್‌ಗೆ ಅಪ್ಪಳಿಸಿತು. ನಿಧಾನಗತಿಯಲ್ಲಿ ಕ್ರೀಸ್‌ಕಚ್ಚಿ ಆಡುತ್ತಿದ್ದ ರಾಹುಲ್ ಉತ್ತಮ ಮೊತ್ತ ಕಲೆಹಾಕುವ ಭರವಸೆಯಲ್ಲಿದ್ದರು. ಆದರೆ ವಾಷಿಂಗ್ಟನ್‌ ಚಾಣಾಕ್ಷ ಬೌಲಿಂಗ್‌ನಿಂದಾಗಿ ವಿಕೆಟ್‌ ಕಳೆದುಕೊಂಡರು. ಮಹತ್ವದ ವಿಕೆಟ್‌ ಪಡೆಯುವುದರೊಂದಿಗೆ ಭಾರತ ಬಿ ತಂಡ ಪಂದ್ಯದಲ್ಲಿ ಮುನ್ನಡೆ ಸಾಧಿಸಿತು. ರಾಹುಲ್ ಔಟಾದ ನಂತರ ಎ ತಂಡವು ಪ್ರಬಲ ಜೊತೆಯಾಟ ಆಡಲು ವಿಫಲವಾಯಿತು. ಅಂತಿಮವಾಗಿ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 231 ರನ್‌ಗಳಿಗೆ ಆಲೌಟ್ ಆಯಿತು.

ರಾಹುಲ್ ಅಲ್ಪಮೊತ್ತಕ್ಕೆ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆಯೇ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಟೀಕೆಗಳು ಕೇಳಿಬರುತ್ತಿವೆ. ಅಭಿಮಾನಿಗಳು ಕೂಡಾ ರಾಹುಲ್ ಅವರ ಇನ್ನಿಂಗ್ಸ್‌ನಿಂದ ಆಕ್ರೋಶಗೊಂಡಿದ್ದಾರೆ. ಕ್ರೀಸ್‌ನಲ್ಲಿ ದೀರ್ಘಕಾಲ ಇದ್ದರೂ, ಸ್ಟಾರ್ ಬ್ಯಾಟರ್‌ ತಮ್ಮ ಇನ್ನಿಂಗ್ಸ್ ಅನ್ನು ಉತ್ತಮವಾಗಿ ಮುಂದುವರೆಸಲು ವಿಫಲವಾದ ಬಗ್ಗೆ ಫ್ಯಾನ್ಸ್‌ ನಿರಾಶರಾಗಿದ್ದಾರೆ.

ಅಭಿಮಾನಿಗಳ ಪ್ರತಿಕ್ರಿಯೆ ಹೀಗಿತ್ತು

ಭಾರತವು ಮುಂದೆ ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿಯಲಿದೆ. ಅದಕ್ಕೂ ಮುಂಚಿತವಾಗಿ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಕೆಎಲ್ ರಾಹುಲ್ ಪಾಲಿಗೆ ದುಲೀಪ್‌ ಟ್ರೋಫಿ ಪ್ರದರ್ಶನವು ನಿರ್ಣಾಯಕವಾಗಿದೆ. ಅತ್ತ ರಿಷಭ್ ಪಂತ್ ಪುನರಾಗಮನ ಮತ್ತು ಇಂಗ್ಲೆಂಡ್ ವಿರುದ್ಧ ಧ್ರುವ್ ಜುರೆಲ್ ಮತ್ತು ಸರ್ಫರಾಜ್ ಖಾನ್ ಅವರ ಪ್ರಭಾವಶಾಲಿ ಪ್ರದರ್ಶನದಿಂದಾಗಿ, ರಾಹುಲ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟಕರವಾಗಿದೆ. ಹೀಗಾಗಿ ಉತ್ತಮ ಪ್ರದರ್ಶನ ನೀಡುವುದು ಅನಿವಾರ್ಯ.

ಬಾಂಗ್ಲಾದೇಶ ಸರಣಿಗೆ ಭಾರತ ತಂಡದ ಆಯ್ಕೆ ದಿನವು ಇನ್ನೇನು ಸಮೀಪಿಸುತ್ತಿದೆ. ಹೀಗಾಗಿ ದುಲೀಪ್ ಟ್ರೋಫಿಯಲ್ಲಿ ಅವರ ಪ್ರದರ್ಶನವು ನಿರ್ಣಾಯಕವಾಗಿದೆ. ಆಯ್ಕೆದಾರರು ಅಂತಿಮ ತಂಡವನ್ನು ಹೆಸರಿಸುವ ಮೊದಲು ಆಟಗಾರರನ್ನು ಅಳೆದು ತೂಗಿ ಆಯ್ಕೆ ಮಾಡುತ್ತಾರೆ. ಹೀಗಾಗಿ ರಾಹುಲ್ ಮೇಲೆ ಒತ್ತಡ ಹೆಚ್ಚಲಿದೆ. ಬಾಂಗ್ಲಾದೇಶ ಟೆಸ್ಟ್ ಸರಣಿಯು ಸೆಪ್ಟೆಂಬರ್ 19ರಿಂದ ಚೆನ್ನೈನಲ್ಲಿ ಆರಂಭವಾಗುತ್ತಿದೆ. ಮೊದಲ ಸುತ್ತಿನ ದುಲೀಪ್‌ ಟ್ರೋಫಿ ಪಂದ್ಯಹಳ ಮುಕ್ತಾಯದ ಬಳಿಕ ತಂಡವನ್ನು ಘೋಷಿಸುವ ನಿರೀಕ್ಷೆಯಿದೆ.

Whats_app_banner