ವಿವಾದಾತ್ಮಕ ಔಟ್; ಅಂಪೈರ್ ನಿರ್ಧಾರಕ್ಕೆ ನಗುತ್ತಾ ಅಸಮಾಧಾನದಿಂದ ಮೈದಾನ ತೊರೆದ ಕೆಎಲ್ ರಾಹುಲ್ -ವಿಡಿಯೋ
ಕನ್ನಡ ಸುದ್ದಿ  /  ಕ್ರಿಕೆಟ್  /  ವಿವಾದಾತ್ಮಕ ಔಟ್; ಅಂಪೈರ್ ನಿರ್ಧಾರಕ್ಕೆ ನಗುತ್ತಾ ಅಸಮಾಧಾನದಿಂದ ಮೈದಾನ ತೊರೆದ ಕೆಎಲ್ ರಾಹುಲ್ -ವಿಡಿಯೋ

ವಿವಾದಾತ್ಮಕ ಔಟ್; ಅಂಪೈರ್ ನಿರ್ಧಾರಕ್ಕೆ ನಗುತ್ತಾ ಅಸಮಾಧಾನದಿಂದ ಮೈದಾನ ತೊರೆದ ಕೆಎಲ್ ರಾಹುಲ್ -ವಿಡಿಯೋ

KL Rahul: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಕೆಎಲ್ ರಾಹುಲ್ ಅವರನ್ನು ಮೂರನೇ ಅಂಪೈರ್ ವಿವಾದಾತ್ಮಕ ರೀತಿಯಲ್ಲಿ ಔಟ್ ಎಂದು ಘೋಷಿಸಿದರು. ಇದು ರಾಹುಲ್‌ ಅಸಮಾಧಾನಕ್ಕೆ ಕಾರಣವಾಯ್ತು. ಅಂಪೈರ್‌ ನೋಡಿ ಅವರು ನಗುತ್ತಾ ಮೈದಾನ ತೊರೆದರು.

ವಿವಾದಾತ್ಮಕ ಔಟ್; ಅಂಪೈರ್ ನಿರ್ಧಾರಕ್ಕೆ ನಕ್ಕು ಮೈದಾನ ತೊರೆದ ಕೆಎಲ್ ರಾಹುಲ್ -ವಿಡಿಯೋ
ವಿವಾದಾತ್ಮಕ ಔಟ್; ಅಂಪೈರ್ ನಿರ್ಧಾರಕ್ಕೆ ನಕ್ಕು ಮೈದಾನ ತೊರೆದ ಕೆಎಲ್ ರಾಹುಲ್ -ವಿಡಿಯೋ (Screengrab)

ಬಾರ್ಡರ್‌-ಗವಾಸ್ಕರ್‌ ಟ್ರೋಫಿಯ ಮೊದಲ ಪಂದ್ಯದ ಆರಂಭದಲ್ಲೇ ಭಾರತ ನೀರಸ ಪ್ರದರ್ಶನ ನೀಡಿದೆ. ಮೊದಲ ಸೆಷನ್‌ನಲ್ಲೇ ಅಲ್ಪ ಮೊತ್ತಕ್ಕೆ ಪ್ರಮುಖ ನಾಲ್ಕು ವಿಕೆಟ್‌ ಕಳೆದುಕೊಂಡು ಹಿನ್ನಡೆ ಅನುಭವಿಸಿತು. ಈ ನಡುವೆ ಕನ್ನಡಿಗ ಕೆಎಲ್ ರಾಹುಲ್ ಅವರ ವಿವಾದಾತ್ಮಕ ಔಟ್, ಅಭಿಮಾನಿಗಳು ಮಾತ್ರವಲ್ಲದೆ ವೀಕ್ಷಕ ವಿವರಣೆಗಾರರಿಗೆ ಅಚ್ಚರಿ ಮೂಡಿಸಿದೆ. ಟೀಮ್‌ ಇಂಡಿಯಾ ನಿಯಮಿತ ನಾಯಕ ರೋಹಿತ್ ಶರ್ಮಾ ಬದಲಿಗೆ ಇನ್ನಿಂಗ್ಸ್ ಆರಂಭಿಸಿದ ರಾಹುಲ್, ಆಸ್ಟ್ರೇಲಿಯಾದ ಅಪಾಯಕಾರಿ ವೇಗದ ದಾಳಿಯನ್ನು ದಿಟ್ಟವಾಗಿ ಎದುರಿಸಿದರು. ಆದರೆ, ತಂಡದ ಮೊತ್ತ 47 ರನ್‌ ಆಗುವಷ್ಟರಲ್ಲಿ ರಾಹುಲ್ ಕೂಡಾ ವಿವಾದಾತ್ಮಕ ರೀತಿಯಲ್ಲಿ ಔಟಾದರು. ರಾಹುಲ್‌ ಗಳಿಕೆ 74 ಎಸೆತಗಳಲ್ಲಿ 26 ರನ್ ಮಾತ್ರ.

ಕೆಎಲ್‌ ರಾಹುಲ್‌ ಔಟ್‌ ಎಂದು ಆನ್‌ ಫೀಲ್ಡ್‌ ಅಂಪೈರ್‌ ಘೋಷಿಸಲಿಲ್ಲ. ಆದರೆ, ಆಸ್ಟ್ರೇಲಿಯಾ ವಿಕೆಟ್‌ ಕೀಪರ್‌ ಕ್ಯಾಚ್‌ಗಾಗಿ ಮೂರನೇ ಅಂಪೈರ್‌ಗೆ ರಿವ್ಯೂ ಹಾಕಿತು. ಥರ್ಡ್ ಅಂಪೈರ್‌ ನಿರ್ಧಾರ ಬದಲಿಸಿ, ರಾಹುಲ್‌ ಔಟ್‌ ಎಂದು ಘೋಷಿಸಿದರು. ಇದು ಕನ್ನಡದ ಬ್ಯಾಟರ್‌ಗೆ ಕಿರಿಕಿರಿ ಉಂಟುಮಾಡಿತು. ಭಾರತದ ಬ್ಯಾಟರ್ ಅಂಪೈರ್ ನಿರ್ಧಾರ ನೋಡಿ ನಕ್ಕರು.‌ ಕ್ರೀಸ್‌ಕಚ್ಚಿ ಆಡಿ ತಂಡವನ್ನು ಮುನ್ನಡೆಸಬೇಕೆಂದುಕೊಂಡಿದ್ದ ಅವರು, ನಿಧಾನವಾಗಿ ಪೆವಿಲಿಯನ್‌ ಕಡೆ ಹೆಜ್ಜೆ ಹಾಕುತ್ತಾ, ಅಂಪೈರ್‌ಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾ ಸಾಗಿದರು.

ಮಿಚೆಲ್ ಸ್ಟಾರ್ಕ್ ಎಸೆದ ಚೆಂಡು ರಾಹುಲ್ ಅವರ ಬ್ಯಾಟ್‌ನಿಂದ ಔಟ್‌ಸೈಡ್‌ ಎಡ್ಜ್‌ ಆಗಿ ವಿಕೆಟ್‌ ಕೀಪರ್‌ ಕಡೆ ಹೋಯ್ತು. ಇನ್ನು ರಿವ್ಯೂ ಮಾಡಲು ಆಸೀಸ್‌ ಆಟಗಾರರು ಕೆಲಕಾಲ ಯೋಚಿಸಿದರು. ಏಕೆಂದರೆ ಅದಾಗಲೇ ರಿಷಭ್ ಪಂತ್ ವಿರುದ್ಧ ಡಿಆರ್‌ಎಸ್ ಕೇಳಿ ಕಳೆದುಕೊಂಡಿತ್ತು. ಆದರೆ, ಕೀಪರ್‌ ಅಲೆಕ್ಸ್ ಕ್ಯಾರಿ ಶಬ್ದ ಕೇಳಿದ ಬಗ್ಗೆ ಖಚಿತವಾಗಿದ್ದರು. ಹೀಗಾಗಿ ನಾಯಕ ಕಮಿನ್ಸ್‌ ರಿವ್ಯೂ ಮಾಡಿದರು.

ಕೆಎಲ್ ರಾಹುಲ್ ಔಟಾದ ವಿಡಿಯೋ ಇಲ್ಲಿದೆ

ರಿವ್ಯೂ ವೇಳೆ ಅಲ್ಟ್ರಾ-ಎಡ್ಜ್‌ನಲ್ಲಿ ಸ್ವಲ್ಪ ಸ್ಪೈಕ್ ಕಂಡುಬಂತು. ಚೆಂಡು ರಾಹುಲ್‌ ಬ್ಯಾಟ್‌ ಪಕ್ಕದಿಂದ ಹಾದುಹೋದ ಕೊನೆಯ ಕ್ಷಣದಲ್ಲಿ ಚೆಂಡು ಪ್ಯಾಡ್‌ಗೆ ಅಪ್ಪಳಿಸಿದೆ ಎಂಬುದಾಗಿ ರಿಪ್ಲೇ ತೋರಿಸಿದೆ. ಸ್ಪೈಕ್ ಅಲ್ಟ್ರಾ-ಎಡ್ಜ್‌ನಲ್ಲಿ ಕಾಣಿಸಿಕೊಂಡಾಗ, ಬ್ಯಾಟ್ ಮತ್ತು ಪ್ಯಾಡ್ ನಡುವೆ ಅಂತರವಿರುವುದು ಕಾಣಿಸಿದೆ. ಹೀಗಾಗಿ ಆ ಶಬ್ದವು ರಾಹುಲ್ ಬ್ಯಾಟಿಂಗ್ ಪ್ಯಾಡ್‌ಗೆ ಹೊಡೆದಿತ್ತು ಎಂಬುದು ಸದ್ಯದ ಗೊಂದಲ. ರಾಹುಲ್‌ ಅವರ ಪ್ರತಿಕ್ರಿಯೆ ನೋಡಿದಾಗ, ಚೆಂಡು ಬ್ಯಾಟ್‌ ಬದಲಾಗಿ ಪ್ಯಾಡ್‌ಗೆ ಬಡಿದಿವೆ. ಹೀಗಾಗಿ ಮೈದಾನದ ಬೃಹತ್‌ ಪರದೆಯ ಮೇಲೆ ಔಟ್ ಎಂದು ಕಾಣಿಸಿಕೊಂಡಾಗ ರಾಹುಲ್‌ ಅದನ್ನು ಒಪ್ಪಲು ಸಿದ್ಧರಿರಲಿಲ್ಲ.

ವೀಕ್ಷಕ ವಿವರಣೆಕಾರರ ಪ್ರತಿಕ್ರಿಯೆ

ಈ ಬಗ್ಗೆ ವೀಕ್ಷಕ ವಿವರಣೆಕಾರ ಮಾರ್ಕ್ ನಿಕೋಲಸ್, ಕಾಮೆಂಟರಿಯಲ್ಲಿ ಹೀಗೆ ಹೇಳಿದ್ದಾರೆ. “ಸ್ಟಂಪ್ ಮೈಕ್‌ನಲ್ಲಿ ಏನೋ ಟ್ರಿಕ್ ಇದೆ ಎಂದು ನನಗನಿಸುತ್ತಿದೆ. ರಿಪ್ಲೇ ವೀಕ್ಷಿಸಿದಾಗ, ಮೈದಾನದ ಅಂಪೈರ್‌ ನಿರ್ಧಾರವನ್ನು ಬದಲಿಸಲು ಸಾಕಷ್ಟು ಪುರಾವೆಗಳಿವೆ ಎಂದು ನನಗೆ ಅನಿಸುತ್ತಿಲ್ಲ” ಎಂದು ಹೇಳಿದ್ದಾರೆ.

ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್‌ ಶೂನ್ಯಕ್ಕೆ ಔಟಾಗಿ ನಿರಾಶೆ ಮೂಡಿಸಿದರು. ಇದೇ ವೇಳೆ ಕನ್ನಡಿಗಗ ದೇವದತ್‌ ಪಡಿಕ್ಕಲ್ ಕೂಡಾ ಸೊನ್ನೆ ಸುತ್ತಿದರು. ಆ ಬಳಿಕ ಭರವಸೆಯ ಆಟಗಾರ ವಿರಾಟ್ ಕೊಹ್ಲಿ ಗಳಿಕೆ ಕೇವಲ 5 ರನ್‌ ಮಾತ್ರ. ಧ್ರುವ್ ಜುರೆಲ್‌ 11 ರನ್‌ ಗಳಿಸಿದರೆ, ವಾಷಿಂಗ್ಟನ್‌ ಸುಂದರ್‌ 4 ರನ್‌ ಕಲೆ ಹಾಕಿ ನಿರ್ಗಮಿಸಿದರು.

ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಭಾರತದ ಸ್ಟ್ಯಾಂಡ್-ಇನ್ ನಾಯಕ ಜಸ್ಪ್ರೀತ್ ಬುಮ್ರಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ನಿತೀಶ್ ಕುಮಾರ್ ರೆಡ್ಡಿ ಮತ್ತು ಹರ್ಷಿತ್ ರಾಣಾ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು . ಇದೇ ವೇಳೆ ಅನುಭವಿ ಆಟಗಾರರಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಆಡುವ ಬಳಗದಿಂದ ಹೊರಗುಳಿದಿದ್ದಾರೆ.

Whats_app_banner