ಕೆಎಲ್ ರಾಹುಲ್ ಕಡೆಗಣಿಸಿ ಆರ್ಸಿಬಿ ಮಾಜಿ ನಾಯಕನಿಗೆ ಉಪನಾಯಕ ಪಟ್ಟ ಕಟ್ಟಿದ ಡೆಲ್ಲಿ ಕ್ಯಾಪಿಟಲ್ಸ್, ಆಕ್ರೋಶ
ನಾಯಕನ ನಂತರ ಡೆಲ್ಲಿ ಕ್ಯಾಪಿಟಲ್ಸ್ ಈಗ ಉಪನಾಯಕನನ್ನು ಸಹ ಘೋಷಿಸಿದೆ. ಆದರೆ, ಕೆಎಲ್ ರಾಹುಲ್ ಅವರನ್ನು ಮತ್ತೆ ಕಡೆಗಣಿಸಿ ಆರ್ಸಿಬಿ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ರನ್ನು ವೈಸ್ ಕ್ಯಾಪ್ಟನ್ ಆಗಿ ನೇಮಕ ಮಾಡಲಾಗಿದೆ.

18ನೇ ಆವೃತ್ತಿಯ ಐಪಿಎಲ್ಗೆ ಅಕ್ಷರ್ ಪಟೇಲ್ ಅವರನ್ನು ನಾಯಕನನ್ನಾಗಿ ಘೋಷಿಸಿದ ಕೆಲವೇ ದಿನಗಳ ನಂತರ ಡೆಲ್ಲಿ ಕ್ಯಾಪಿಟಲ್ಸ್ ಈಗ ಉಪನಾಯಕನನ್ನು ಪ್ರಕಟಿಸಿದೆ. ಆದರೆ, ಈ ಹೆಸರು ತಿಳಿದರೆ ಕೆಎಲ್ ರಾಹುಲ್ ಅಭಿಮಾನಿಗಳು ಖಂಡಿತವಾಗಿಯೂ ಆಘಾತಕ್ಕೊಳಗಾಗುತ್ತಾರೆ. ಕೆಎಲ್ ರಾಹುಲ್ ಅವರನ್ನು ಉಪನಾಯಕನ ಸ್ಥಾನಕ್ಕೂ ನಿರ್ಲಕ್ಷಿಸಲಾಗಿದೆ. ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆರ್ಸಿಬಿ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಅವರನ್ನು ಉಪನಾಯಕನನ್ನಾಗಿ ಟೀಮ್ ಮ್ಯಾನೇಜ್ಮೆಂಟ್ ಘೋಷಿಸಿದೆ.
ಕಳೆದ ಮೂರು ಸೀಸನ್ಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸಿದ್ದ ಫಾಫ್ ಡು ಪ್ಲೆಸಿಸ್, ದಕ್ಷಿಣ ಆಫ್ರಿಕಾದ ನಾಯಕರಾಗಿಯೂ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಅಕ್ಷರ್ಗೆ ಸಾರಥ್ಯ ವಹಿಸಿದ ಹಿನ್ನೆಲೆ ವೈಸ್ ಕ್ಯಾಪ್ಟನ್ಸಿ ಪಟ್ಟ ಕೆಎಲ್ ರಾಹುಲ್ಗೆ ನೀಡಬಹುದು ಎಂದು ನಿರೀಕ್ಷಿಸಲಾಗಿತ್ತು. ನಿರೀಕ್ಷೆ ಹುಸಿ ಮಾಡಿದೆ. ಉಪನಾಯಕನ ಘೋಷಣೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಡೆಲ್ಲಿ ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ ಫಾಫ್ ಡು ಪ್ಲೆಸಿಸ್ ಅವರು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಯಾರೊಂದಿಗೋ ಫೋನ್ನಲ್ಲಿ ಮಾತನಾಡುತ್ತಾ, ಹೊಸ ಸೀಸನ್ಗೆ ಕಾತರದಿಂದ ಕಾಯುತ್ತಿರುವುದಾಗಿ ಹೇಳಿದ್ದಾರೆ.
ಫಾಫ್ ಡು ಪ್ಲೆಸಿಸ್ರನ್ನು ಖರೀದಿಸಿದ್ದು ಎಷ್ಟಕ್ಕೆ?
ಸೌದಿ ಅರೇಬಿಯಾದಲ್ಲಿ ನಡೆದ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫಾಫ್ ಡು ಪ್ಲೆಸಿಸ್ ಅವರನ್ನು 2 ಕೋಟಿ ರೂ.ಗೆ ಖರೀದಿಸಿತು. ಆರಂಭಿಕ ಪ್ಲೇಯಿಂಗ್ 11ರಲ್ಲಿ ಫಾಫ್ ಗೆ ಅವಕಾಶ ಸಿಗುವುದಿಲ್ಲ ಎಂದು ಅನೇಕ ಅಭಿಮಾನಿಗಳು ನಂಬಿದ್ದರು. ಆದಾಗ್ಯೂ, ಹ್ಯಾರಿ ಬ್ರೂಕ್ ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿದ್ದರಿಂದ ಯೋಜನೆ ಬದಲಾಗಿದೆ. ಸತತ ಮೂರು ಋತುಗಳಲ್ಲಿ ಫಾಫ್ ಅವರ ಅದ್ಭುತ ಪ್ರದರ್ಶನದ ಹೊರತಾಗಿಯೂ ಆರ್ಸಿಬಿ ಫಾಫ್ರನ್ನು ಉಳಿಸಿಕೊಳ್ಳಲಿಲ್ಲ. 2024ರ ಋತುವಿನಲ್ಲಿ ಫಾಫ್ 438 ರನ್ ಗಳಿಸಿದ್ದರು. 2023ರಲ್ಲಿ ಫಾಫ್ 730 ರನ್ ಹಾಗೂ 2022ರಲ್ಲಿ 468 ರನ್ ಗಳಿಸಿದ್ದರು. ಐಪಿಎಲ್ನಲ್ಲಿ ಫಾಫ್ 145 ಪಂದ್ಯಗಳ 138 ಇನ್ನಿಂಗ್ಸ್ಗಳಲ್ಲಿ 4571 ರನ್ ಸಿಡಿಸಿದ್ದಾರೆ. ಅವರು 37 ಅರ್ಧಶತಕ ಬಾರಿಸಿದ್ದಾರೆ. ಐಪಿಎಲ್ನಲ್ಲಿ ರೈಸಿಂಗ್ ಪುಣೆ, ಸೂಪರ್ಜೈಂಟ್ಸ್, ಚೆನ್ನೈ ಸೂಪರ್ ಕಿಂಗ್ಸ್, ಆರ್ಸಿಬಿ ಪರ ಆಡಿದ್ದಾರೆ.
ನಾಯಕತ್ವ ಪಡೆದಿದ್ದ ಅಕ್ಷರ್ ಪಟೇಲ್ ಕೂಡ ಈ ಹಿಂದೆ ಸಂತಸ ವ್ಯಕ್ತಪಡಿಸಿದ್ದರು. ಡೆಲ್ಲಿ ತಂಡದ ನಾಯಕತ್ವ ಸಿಕ್ಕಿದ್ದು ನನಗೆ ದೊಡ್ಡ ಗೌರವ. ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಮಾಲೀಕರು. ಸಹಾಯಕ ಸಿಬ್ಬಂದಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಅಕ್ಷರ್ ಅವರನ್ನು ಫ್ರಾಂಚೈಸಿ 18 ಕೋಟಿ ರೂಗೆ ರಿಟೈನ್ ಮಾಡಿಕೊಂಡಿತ್ತು.
ಡೆಲ್ಲಿ ಕ್ಯಾಪಿಟಲ್ಸ್ ತಂಡ
ಅಕ್ಷರ್ ಪಟೇಲ್ (ನಾಯಕ), ಫಾಫ್ ಡು ಪ್ಲೆಸಿಸ್ (ಉಪನಾಯಕ), ಕುಲ್ದೀಪ್ ಯಾದವ್, ಅಭಿಷೇಕ್ ಪೊರೆಲ್, ಮಿಚೆಲ್ ಸ್ಟಾರ್ಕ್, ಕೆಎಲ್ ರಾಹುಲ್, ಜೇಕ್ ಫ್ರೇಸರ್-ಮೆಕ್ಗುರ್ಕ್, ಟಿ ನಟರಾಜನ್, ಕರುಣ್ ನಾಯರ್, ಸಮೀರ್ ರಿಜ್ವಿ, ಅಶುತೋಷ್ ಶರ್ಮಾ, ಮೋಹಿತ್ ಶರ್ಮಾ, ಮುಖೇಶ್ ಕುಮಾರ್, ದರ್ಶನ್ ನಲ್ಕಂಡೆ, ವಿಪ್ರಜ್ ನಿಗಮ್, ದುಷ್ಮಂತ ಚಮೀರಾ, ಡೊನೊವನ್ ಫೆರೇರಾ, ಅಜಯ್ ಮಂಡಲ್, ಮನ್ವಂತ್ ಕುಮಾರ್, ತ್ರಿಪುರಾನಾ ವಿಜಯ್, ಮಾಧವ್ ತಿವಾರಿ.
