ಆರ್ಸಿಬಿಗೆ ಜೀವದಾನದ ಲಾಭ ಪಡೆದ ಕನ್ನಡಿಗನೇ ವಿಲನ್; ಸತತ 4ನೇ ಗೆಲುವು ದಾಖಲಿಸಿದ ಡೆಲ್ಲಿ ಕ್ಯಾಪಿಟಲ್ಸ್
RCB vs DC, IPL 2025: ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್ನ 24ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು.

ಎರಡು ರನ್ ಗಳಿಸಿದ್ದಾಗ ಜೀವದಾನ ಪಡೆದ ಕೆಎಲ್ ರಾಹುಲ್ (93*) ಸತತ 2ನೇ ಅರ್ಧಶತಕದ ಸಹಾಯದಿಂದ ಮತ್ತು ವಿಪ್ರಜ್ ನಿಗಮ್ (18/2), ಕುಲ್ದೀಪ್ ಯಾದವ್ (17/2) ಕೈಚಳಕದ ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್ಗಳ ಅಂತರದಿಂದ ಮಣಿಸಿದೆ. ಇದು ಡೆಲ್ಲಿಗೆ ಸತತ 4ನೇ ಗೆಲುವು. ಆರ್ಸಿಬಿಗೆ ಇದು ತವರಿನಲ್ಲಿ ಸತತ 2ನೇ ಸೋಲು. ಅಂಕಪಟ್ಟಿಯಲ್ಲಿ ಡಿಸಿ 2ನೇ ಸ್ಥಾನ ಭದ್ರಪಡಿಸಿಕೊಂಡರೆ, ಬೆಂಗಳೂರು 3ನೇ ಸ್ಥಾನದಲ್ಲೇ ಮುಂದುವರೆದಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್ ಗುಂಪು ಹಂತದ 24ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತು. ಆರಂಭಿಕ 5 ಓವರ್ಗಳಲ್ಲಿ ಮತ್ತು ಕೊನೆಯ 2 ಓವರ್ಗಳಲ್ಲಿ ರನ್ ಹರಿದು ಬಂದಿತ್ತು. ಆದರೆ ಉಳಿದ ಓವರ್ಗಳಲ್ಲಿ ರನ್ ಗಳಿಸಲು ಬ್ಯಾಟರ್ಗಳು ಪರದಾಟ ನಡೆಸಿದರು. ಕುಲ್ದೀಪ್ ಯಾದವ್ ಮತ್ತು ವಿಪ್ರಜ್ ನಿಗಮ್ ಮಧ್ಯಮ ಓವರ್ಗಳಲ್ಲಿ ರನ್ ನಿಯಂತ್ರಿಸಿ ಗಮನ ಸೆಳೆದರು.
164 ರನ್ಗಳ ಗುರಿ ಬೆನ್ನಟ್ಟಿದ ಡೆಲ್ಲಿಯೂ ಆರಂಭದಲ್ಲೇ ಸತತ ವಿಕೆಟ್ ಕಳೆದುಕೊಂಡು ಇಕ್ಕಟ್ಟಿಗೆ ಸಿಲುಕಿತ್ತು. ಆದರೆ, 2 ರನ್ ಗಳಿಸಿದ್ದಾಗ ಜೀವದಾನ ಪಡೆದ ಕನ್ನಡಿಗ ಕೆಎಲ್ ರಾಹುಲ್ ಭರ್ಜರಿ ಅರ್ಧಶತಕ ಸಿಡಿಸಿ ಆರ್ಸಿಬಿ ಗೆಲುವಿನ ಕನಸಿಗೆ ಅಡ್ಡಿಯಾದರು. ಕೆಎಲ್ ರಾಹುಲ್-ಟ್ರಿಸ್ಟಾನ್ ಸ್ಟಬ್ಸ್ ಜೊತೆಗೂಡಿ 5ನೇ ವಿಕೆಟ್ಗೆ ಶತಕದ ಜೊತೆಯಾಟ ಆಡಿದರು. ಆರಂಭದಲ್ಲಿ ಮಿಂಚಿದ ಆರ್ಸಿಬಿ ಬೌಲರ್ಗಳು ಕೊನೆಯಲ್ಲಿ ಪರದಾಡಿದರು. ಡೆಲ್ಲಿ 17.5 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿ ಗೆಲುವಿನ ಕೇಕೆ ಹಾಕಿತು.
ಇದನ್ನೂ ಓದಿ: ಸಿಎಸ್ಕೆ ಮತ್ತೆ ಧೋನಿ ನಾಯಕ
3.4 ಓವರ್ಗೆ 61 ರನ್, ಕೊನೆಯ 98 ಎಸೆತಗಳಿಗೆ 102 ರನ್
ಆರ್ಸಿಬಿ ಮೊದಲ 22 ಎಸೆತಗಳಲ್ಲಿ 61 ರನ್ ಗಳಿಸಿತ್ತು. ಈ ಸ್ಕೋರ್ ಬೃಹತ್ ಮೊತ್ತ ಕಲೆ ಹಾಕುವ ಮುನ್ಸೂಚನೆ ನೀಡಿತ್ತು. ಅದರಲ್ಲೂ 3ನೇ ಓವರ್ನಲ್ಲಿ ಮಿಚೆಲ್ ಸ್ಟಾರ್ಕ್ಗೆ ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ 30 ರನ್ ಚಚ್ಚಿ ದೊಡ್ಡ ಭರವಸೆ ನೀಡಿದ್ದರು. 3.5ನೇ ಓವರ್ನಿಂದ ಶುರುವಾದ ವಿಕೆಟ್ ಪತನ ಸ್ಕೋರ್ ಕುಸಿತಕ್ಕೆ ಕಾರಣವಾಯಿತು. ಅಬ್ಬರಿಸುತ್ತಿದ್ದ ಸಾಲ್ಟ್ 37 ರನ್ ಗಳಿಸಿ ಔಟಾದರೆ, ಕೊಹ್ಲಿ 22ಕ್ಕೆ ಆಟ ಮುಗಿಸಿದರು. ಪಡಿಕ್ಕಲ್ (1), ರಜತ್ (25), ಲಿವಿಂಗ್ಸ್ಟೋನ್ (4), ಜಿತೇಶ್ (3) ನಿರಾಸೆ ಮೂಡಿಸಿದರು.
ಕೊನೆಯಲ್ಲಿ ಕೃನಾಲ್ ಪಾಂಡ್ಯ 18 ರನ್ ಗಳಿಸಿದರೆ, ಬಿರುಸಿನ ಬ್ಯಾಟಿಂಗ್ ಮಾಡಿದ ಟಿಮ್ ಡೇವಿಡ್ 20 ಎಸೆತಗಳಲ್ಲಿ 37 ರನ್ ಬಾರಿಸಿದರು, ಇದರ ಪರಿಣಾಮ 150ರೊಳಗೆ ಕುಸಿಯಬೇಕಿದ್ದ ತಂಡವನ್ನು 160ರ ಗಡಿ ದಾಟಿಸಿದರು. ಕೊನೆಯ 98 ಎಸೆತಗಳಲ್ಲಿ ಬಂದಿದ್ದು 102 ರನ್ ಮಾತ್ರ. ಮತ್ತೊಂದೆಡೆ ಡೆಲ್ಲಿ ಬೌಲರ್ಸ್ ಕೂಡ ಪರಿಣಾಮಕಾರಿ ಪ್ರದರ್ಶನ ನೀಡುವ ಮೂಲಕ ಆರ್ಸಿಬಿಯನ್ನು ಕಟ್ಟಿಹಾಕಿದರು. ಕುಲ್ದೀಪ್ 17ಕ್ಕೆ 2 ವಿಕೆಟ್ ಪಡೆದರೆ, ವಿಪ್ರಜ್ 18ಕ್ಕೆ 2 ವಿಕೆಟ್ ಉರುಳಿಸಿ ಮಿಂಚಿದರು.
ಇದನ್ನೂ ಓದಿ: 1900ರ ಬಳಿಕ ಒಲಿಂಪಿಕ್ಸ್ಗೆ ಕ್ರಿಕೆಟ್ ಸೇರ್ಪಡೆ
ಕೆಎಲ್ ರಾಹುಲ್ ಅಬ್ಬರ, ಆರ್ಸಿಬಿ ತತ್ತರ
164 ರನ್ಗಳ ಗುರಿ ಬೆನ್ನಟ್ಟುವ ಅವಧಿಯಲ್ಲಿ ಡೆಲ್ಲಿ 52 ಎಸೆತಗಳಲ್ಲಿ 58 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಫಾಫ್ ಡು ಪ್ಲೆಸಿಸ್ (2), ಜೇಕ್ ಪ್ರೇಸರ್ ಮೆಕ್ಗುರ್ಕ್ (7), ಅಭಿಷೇಕ್ ಪೋರೆಲ್ (7), ಅಕ್ಷರ್ ಪಟೇಲ್ (15) ಬೇಗನೇ ಔಟಾದರು. ಆದರೆ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಕೆಎಲ್ ರಾಹುಲ್ 2 ರನ್ ಗಳಿಸಿದ್ದಾಗ ರಜತ್ ಪಾಟೀದಾರ್ ಅವರಿಂದ ಜೀವದಾನ ಪಡೆದರು. ಬಳಿಕ ಕ್ರೀಸ್ನಲ್ಲಿ ಸೆಟಲ್ ಆದರು. ಇದು ಆರ್ಸಿಬಿಗೆ ದೊಡ್ಡ ಮುಳುವಾಯಿತು.
ಜೀವದಾನದ ಲಾಭ ಪಡೆದ ಕನ್ನಡಿಗ 53 ಎಸೆತಗಳಲ್ಲಿ 7 ಬೌಂಡರಿ, 6 ಸಿಕ್ಸರ್ ಸಹಿತ ಅಜೇಯ 93 ರನ್ ಬಾರಿಸಿದರು. ರಾಹುಲ್ಗೆ ಟ್ರಿಸ್ಟಾನ್ ಸ್ಟಬ್ಸ್ ಸಖತ್ ಸಾಥ್ ಕೊಟ್ಟರು. ಇವರಿಬ್ಬರ ನಡುವೆ ಐದನೇ ವಿಕೆಟ್ಗೆ ಮುರಿಯದ 111 ರನ್ ಹರಿದು ಬಂತು. ಇದು ಡೆಲ್ಲಿ ಪರ ಐತಿಹಾಸಿಕ ದಾಖಲೆಯಾಗಿದೆ. ಸ್ಟಬ್ಸ್ 23 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 38 ರನ್ ಬಾರಿಸಿದರು. ಅಂತಿಮವಾಗಿ ಡೆಲ್ಲಿ ಸತತ 4ನೇ ಗೆಲುವು ದಾಖಲಿಸಿತು. ಇದೇ ಮೊದಲ ಬಾರಿಗೆ ಆರಂಭಿಕ ನಾಲ್ಕು ಪಂದ್ಯಗಳನ್ನೂ ಗೆದ್ದ ಸಾಧನೆ ಮಾಡಿದೆ.
