ಚಾಂಪಿಯನ್ಸ್ ಟ್ರೋಫಿ: ಕೆಎಲ್ ರಾಹುಲ್, ಜಡೇಜಾ, ಶಮಿ ಆಯ್ಕೆ ಅನುಮಾನ; ಯಶಸ್ವಿ ಜೈಸ್ವಾಲ್‌ಗೆ ಮಣೆ ಸಾಧ್ಯತೆ
ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಯ್ಕೆ ಬಹುತೇಕ ಖಚಿತ. ಇದೇ ವೇಳೆ ಕೆಎಲ್ ರಾಹುಲ್ ಸೇರಿದಂತೆ ಮೂವರು ಹಿರಿಯ ಕ್ರಿಕೆಟಿಗರು ತಂಡದಿಂದ ಹೊರಬೀಳುವ ಸಾಧ್ಯತೆ ಇದೆ.
ಫೆಬ್ರುವರಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ನಡೆಯಲಿದೆ. ಟೂರ್ನಿಯಲ್ಲಿ ಭಾಗವಹಿಸುವ ತಂಡಗಳನ್ನು ಘೋಷಿಸಲು ಕೆಲವೇ ದಿನಗಳ ಗುಡುವು ಬಾಕಿ ಉಳಿದಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಮುಗಿಸಿರುವ ಭಾರತ ತಂಡವು ಮುಂದೆ ವೈಟ್ ಬಾಲ್ ಕ್ರಿಕೆಟ್‌ನತ್ತ ಗಮನ ಹರಿಸಲಿದೆ. ಬಿಸಿಸಿಐ ಆಯ್ಕೆದಾರರು ಈ ವಾರದ ಅಂತ್ಯದ ವೇಳೆಗೆ 15 ಸದಸ್ಯರ ತಂಡವನ್ನು ಬಹಿರಂಗಪಡಿಸುವ ನಿರೀಕ್ಷೆಯಿದೆ. ಅದಕ್ಕೂ ಮುನ್ನವೇ ಭಾರತ ತಂಡದ ಆಟಗಾರರಲ್ಲಿ ಯಾರೆಲ್ಲಾ ಇರಲಿದ್ದಾರೆ ಎಂಬ ಬಗ್ಗೆ ಊಹಾಪೋಹಗಳು ಆರಂಭವಾಗಿವೆ.
ಆಯ್ಕೆ ಸಮಿತಿಯು ಅನುಭವ ಹಾಗೂ ಯುವ ಆಟಗಾರರ ಮಿಶ್ರಣ ಮಾಡುವ ಸಾಧ್ಯತೆ ಇದೆ. ಸುದ್ದಿಸಂಸ್ಥೆ ಪಿಟಿಐ ವರದಿಯ ಪ್ರಕಾರ, ಹಿರಿಯ ಬ್ಯಾಟರ್‌ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರನ್ನು ಏಕದಿನ ತಂಡದಲ್ಲಿ ಉಳಿಸಲಾಗುತ್ತದೆ. ಆದರೆ, ಆಯ್ಕೆಯ ನಿರೀಕ್ಷೆ ಮೂಡಿಸಿರುವ ಮೂವರು ಹಿರಿಯ ಕ್ರಿಕೆಟಿಗರನ್ನು ಹೊರಗಿಡುವ ಸಾಧ್ಯತೆ ಇದೆ.
ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಈ ವಾರಾಂತ್ಯದಲ್ಲಿ ತಂಡವನ್ನು ಆಯ್ಕೆ ಮಾಡಲು ಸಭೆ ಸೇರಲಿದೆ. ಈ ವೇಳೆ ಕನ್ನಡಿಗ ಕೆಎಲ್ ರಾಹುಲ್, ಮೊಹಮ್ಮದ್ ಶಮಿ ಮತ್ತು ರವೀಂದ್ರ ಜಡೇಜಾ ಅವರನ್ನು ಆಯ್ಕೆ ಮಾಡುವ ಕುರಿತು ಚರ್ಚಿಸಬಹುದು.
ರಿಷಭ್ ಪಂತ್‌ಗೆ ಆದ್ಯತೆ, ಕೆಎಲ್ ರಾಹುಲ್ ಬ್ಯಾಕಪ್
2023ರ ಏಕದಿನ ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ ಗಾಯಗೊಂಡ ನಂತರ, ಕೆಎಲ್ ರಾಹುಲ್ ಅವರನ್ನು ಉಪನಾಯಕನಾಗಿ ನೇಮಿಸಲಾಯ್ತು. ಟೂರ್ನಿಯಲ್ಲಿ ವಿಕೆಟ್ ಕೀಪರ್ ಆಗಿ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ನಿರ್ಣಾಯಕ ಪಾತ್ರ ವಹಿಸಿದ್ದರು. ಆದರೆ, ಇದೀಗ ಚಾಂಪಿಯನ್ಸ್ ಟ್ರೋಫಿಯಲ್ಲಿ ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗುವ ನಿರೀಕ್ಷೆಯಿದೆ. ಹೀಗಾಗಿ ಮುಂಬರುವ ಐಸಿಸಿ ಪಂದ್ಯಾವಳಿಗೆ ರಾಹುಲ್ ಅವರನ್ನು ಬ್ಯಾಕಪ್ ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡುವ ಕುರಿತು ಆಯ್ಕೆದಾರರು ಚರ್ಚಿಸುವ ನಿರೀಕ್ಷೆಯಿದೆ.
ವಿಶೇಷವೆಂದರೆ, ವಿಶ್ವಕಪ್ ನಂತರ ನಡೆದ ಭಾರತದ ಕೊನೆಯ ಎರಡು ಏಕದಿನ ಸರಣಿಗಳಲ್ಲಿ ರಾಹುಲ್ ಆಡಿದ್ದಾರೆ. 2023ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ತಂಡವನ್ನು ಮುನ್ನಡೆಸಿದ್ದ ರಾಹುಲ್, 2024ರಲ್ಲಿ ಶ್ರೀಲಂಕಾದಲ್ಲಿ ಭಾರತ ಆಡಿದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ವಿಕೆಟ್ ಕೀಪಿಂಗ್ ಮಾಡಿದ್ದರು.
ಜೈಸ್ವಾಲ್‌ಗೆ ಮಣೆ
ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಬ್ಯಾಕಪ್ ಓಪನರ್ ಆಗಿ ಆಯ್ಕೆಯಾಗುವ ನಿರೀಕ್ಷೆಯಿದೆ. ಭಾರತದ ಅತ್ಯಂತ ಭರವಸೆಯ ಟೆಸ್ಟ್ ಆಟಗಾರ ಎಂಬುದನ್ನು ಈಗಾಗಲೇ ಅವರು ಸಾಬೀತುಪಡಿಸಿದ್ದಾರೆ. 2022ರ ನವೆಂಬರ್‌ನಲ್ಲಿ ಕೊನೆಯ ಬಾರಿಗೆ ಲಿಸ್ಟ್ ಎ ಪಂದ್ಯವನ್ನು ಆಡಿದ್ದ ನಂತರ, ಇನ್ನೂ ಅವರು ಏಕದಿನ ಕ್ಯಾಪ್ ಗಳಿಸಿಲ್ಲ.
ಸದ್ಯ ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ವೈಟ್-ಬಾಲ್ ಪಂದ್ಯಾವಳಿಗೆ ಆಯ್ಕೆ ಮಾಡಲು ಬಿಸಿಸಿಐ ಆಸಕ್ತಿ ತೋರಿದೆ. ರವೀಂದ್ರ ಜಡೇಜಾ ಅವರ ಬ್ಯಾಟಿಂಗ್ ಮೊದಲಿನಷ್ಟು ಉತ್ತಮವಾಗಿಲ್ಲ. ಹೀಗಾಗಿ ಅನುಭವಿ ಆಲ್‌ರೌಂಡರ್ ಆಯ್ಕೆ ಅನುಮಾನ ಎಂಬಂತಿದೆ.
ಅತ್ತ ಪಾದದ ಗಾಯದಿಂದಾಗಿ 2023ರ ಏಕದಿನ ವಿಶ್ವಕಪ್ ನಂತರ ಭಾರತ ತಂಡದಿಂದ ಹೊರಗುಳಿದಿರುವ ಶಮಿ, ಆಡುವ ಹಂತಕ್ಕೆ ಬಂದಿದ್ದರೂ ಅವರ ಫಿಟ್ನೆಸ್ ಮತ್ತು ತಂಡದ ಮ್ಯಾನೇಜ್‌ಮೆಂಟ್ ನಡುವಿನ ಸಂವಹನದ ಬಗ್ಗೆ ಇನ್ನೂ ಸ್ಪಷ್ಟವಿಲ್ಲ. ಪ್ರಸ್ತುತ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಿದ್ದಾರೆ. ಆದರೆ ಚಾಂಪಿಯನ್ಸ್ ಟ್ರೋಫಿಗೆ ಇವರ ಆಯ್ಕೆ ಸಾಧ್ಯತೆ ಕಡಿಮೆ ಎಂದು ವರದಿ ತಿಳಿಸಿದೆ.