ಕನ್ನಡ ಸುದ್ದಿ  /  ಕ್ರಿಕೆಟ್  /  ಒತ್ತಡದೊಂದಿಗೆ ರಾಜಕೀಯವೂ ಇದೆ; ಕೆಎಲ್‌ ರಾಹುಲ್ ಸಲಹೆ ಬಳಿಕ ಭಾರತ ತಂಡದ ಕೋಚ್ ಹುದ್ದೆ ಬೇಡ ಎಂದ ಜಸ್ಟಿನ್ ಲ್ಯಾಂಗರ್

ಒತ್ತಡದೊಂದಿಗೆ ರಾಜಕೀಯವೂ ಇದೆ; ಕೆಎಲ್‌ ರಾಹುಲ್ ಸಲಹೆ ಬಳಿಕ ಭಾರತ ತಂಡದ ಕೋಚ್ ಹುದ್ದೆ ಬೇಡ ಎಂದ ಜಸ್ಟಿನ್ ಲ್ಯಾಂಗರ್

ಕನ್ನಡಿಗ ಕೆಎಲ್ ರಾಹುಲ್ ನೀಡಿದ ಸಲಹೆಯ ನಂತರ ಭಾರತದ ಮುಖ್ಯ ಕೋಚ್ ಹುದ್ದೆ ಬೇಡ ಎಂದು ಜಸ್ಟಿನ್‌ ಲ್ಯಾಂಗರ್‌ ಹೇಳಿದ್ದಾರೆ. ಹಾಗಿದ್ದರೆ ರಾಹುಲ್‌ ನೀಡಿದ ಸಲಹೆ ಏನು ಎಂಬುದನ್ನು ನೋಡೋಣ.

ಕೆಎಲ್‌ ರಾಹುಲ್ ಸಲಹೆ ಬಳಿಕ ಭಾರತ ತಂಡದ ಕೋಚ್ ಹುದ್ದೆ ಬೇಡ ಎಂದ ಜಸ್ಟಿನ್ ಲ್ಯಾಂಗರ್
ಕೆಎಲ್‌ ರಾಹುಲ್ ಸಲಹೆ ಬಳಿಕ ಭಾರತ ತಂಡದ ಕೋಚ್ ಹುದ್ದೆ ಬೇಡ ಎಂದ ಜಸ್ಟಿನ್ ಲ್ಯಾಂಗರ್ (PTI)

ಭಾರತ ಪುರುಷರ ಕ್ರಿಕೆಟ್‌ ತಂಡಕ್ಕೆ ಮುಂದಿನ ಮುಖ್ಯ ಕೋಚ್ ಹುಡುಕಾಟ ಪ್ರಕ್ರಿಯೆ ಚುರುಕು ಪಡೆದಿದೆ. ಮುಂದಿನ ತಿಂಗಳು ವೆಸ್ಟ್‌ ಇಂಡೀಸ್‌ ಹಾಗೂ ಯುಎಸ್‌ಎ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯಾವಳಿ ಮುಗಿದ ಬೆನ್ನಲ್ಲೇ ಟೀಮ್‌ ಇಂಡಿಯಾ ಹಾಲಿ ಹೆಡ್‌ ಕೋಚ್ ರಾಹುಲ್ ದ್ರಾವಿಡ್ ‌ಅಧಿಕಾರಾವಧಿ ಮುಕ್ತಾಯಗೊಳ್ಳಲಿದೆ. ಹೀಗಾಗಿ ವಿಶ್ವದ ಶ್ರೀಮಂತ ಕ್ರಿಕೆಟ್‌ ಸಂಸ್ಥೆಯ ಪ್ರಮುಖ ಹುದ್ದೆ ಯಾರ ಪಾಲಾಗಲಿದೆ ಎಂಬುದು ಕುತೂಹಲ ಮೂಡಿಸಿದೆ. ವಿಶ್ವ ಕ್ರಿಕೆಟ್‌ನ ಮಹತ್ವದ ಜವಾಬ್ದಾರಿ ವಹಿಸಿಕೊಳ್ಳಲು ಹಲವು ದಿಗ್ಗಜ ಕ್ರಿಕೆಟಿಗರು ಹಿಂದೆ ಸರಿದಿದ್ದಾರೆ. ಹೀಗಾಗಿ ಈ ಕುರಿತು ಈಗಲೇ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.

ಟ್ರೆಂಡಿಂಗ್​ ಸುದ್ದಿ

ಉನ್ನತ ಹುದ್ದೆಗೆ ಭಾರತ ಹಾಗೂ ವಿದೇಶಗಳ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಹಲವರಿದ್ದಾರೆ. ಅವರಲ್ಲಿ ಕೆಲವು ದಿಗ್ಗಜರು ಈಗಾಗಲೇ ಸ್ಪರ್ಧೆಯಿಂದ ಹೊರಗುಳಿದಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಮಾಜಿ ನಾಯಕ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಹಾಲಿ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಅವರು, ಐಪಿಎಲ್ ಪಂದ್ಯಾವಳಿ ನಡುವೆ ತಮ್ಮನ್ನು ಅನೌಪಚಾರಿಕವಾಗಿ ಸಂಪರ್ಕಿಸಲಾಗಿದೆ ಎಂದು ಒಪ್ಪಿಕೊಂಡಿದ್ದರು. ಆದರೆ, ಆ ಆಸಕ್ತಿ ತಮಗಿಲ್ಲ ಎಂದು ಹೇಳಿದ್ದಾರೆ. ಈ ನಡುವೆ, ಸಂಭಾವ್ಯರ ಪಟ್ಟಿಯಲ್ಲಿ ಸಿಎಸ್‌ಕೆ ಹೆಡ್‌ ಕೋಚ್‌ ಸ್ಟೀಫನ್ ಫ್ಲೆಮಿಂಗ್ ಕೂಡಾ ಸೇರಿದ್ದರು. ಆದರೆ, ಭಾರತೀಯ ಕ್ರಿಕೆಟ್‌ ತಂಡದ ಪ್ರಮುಖ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಅವರು ಆಸಕ್ತಿ ಹೊಂದಿಲ್ಲ ಎಂದು ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥ್ ಹೇಳಿದ್ದಾರೆ.

ಇದೀಗ ರಿಕಿ ಪಾಂಟಿಂಗ್ ಅವರ ಮಾಜಿ ಸಹ ಆಟಗಾರ ಜಸ್ಟಿನ್ ಲ್ಯಾಂಗರ್ ಕೂಡಾ, ಮುಖ್ಯ ತರಬೇತುದಾರನ ಕೆಲಸದಿಂದ ತಾನು ದಣಿದಿರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ | ಆರ್​ಆರ್ ವಿರುದ್ಧ ಹೃದಯ ವಿದ್ರಾವಕ ಸೋಲಿಗೆ ಇವರೇ ಕಾರಣವೆಂದ ಆರ್​ಸಿಬಿ ನಾಯಕ ಫಾಫ್ ಡು ಪ್ಲೆಸಿಸ್

“ತಂಡವೊಂದರ ಕೋಚ್‌ ಹುದ್ದೆ ಅದ್ಭುತ ಕೆಲಸ. ಆದರೆ ನಾನು ಅದರಿಂದ ಹೊರಗಿದ್ದೇನೆ. ಇದು ಸರ್ವವ್ಯಾಪಿ ಪಾತ್ರ ಎಂದು ನನಗೆ ತಿಳಿದಿದೆ. ಆಸ್ಟ್ರೇಲಿಯಾ ತಂಡದೊಂದಿಗೆ ನಾಲ್ಕು ವರ್ಷಗಳ ಕಾಲ ಈ ಕೆಲಸ ಮಾಡಿದ್ದೇನೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಈಗಾಗಲೇ ದಣಿದಿದ್ದೇನೆ” ಎಂದು ಲ್ಯಾಂಗರ್ ಬಿಬಿಸಿಯ ಸ್ಟಂಪ್ಡ್ ಪಾಡ್‌ಕಾಸ್ಟ್‌ನಲ್ಲಿ ಹೇಳಿದ್ದಾರೆ.

ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮುಖ್ಯ ಕೋಚ್ ಆಗಿದ್ದ ಲ್ಯಾಂಗರ್, ಭಾರತ ತಂಡ ಹೇಗಿದೆ ಎಂಬುದರ ಕುರಿತಾಗಿ ತಂಡದ ನಾಯಕ ಕೆಎಲ್ ರಾಹುಲ್ ಅವರೊಂದಿಗೆ ಸಂಭಾಷಣೆ ನಡೆಸಿದ್ದಾಗಿ ಹೇಳಿದರು. ಭಾರತದಲ್ಲಿ ಈ ಜವಾಬ್ದಾರಿ ನಿರ್ವಹಿಸುವಲ್ಲಿ ಇರುವ ಒತ್ತಡ ಕುರಿತು ಅವರು ಹೇಳಿದರು.

ಟೀಮ್‌ ಇಂಡಿಯಾದಲ್ಲಿ ರಾಜಕೀಯ ಮತ್ತು ಒತ್ತಡವಿದೆ

“ಐಪಿಎಲ್ ತಂಡದಲ್ಲಿ ಒತ್ತಡ ಮತ್ತು ರಾಜಕೀಯವಿದೆ ಎಂದು ನೀವು ಭಾವಿಸಿದರೆ, ಅದನ್ನು ಸಾವಿರದಿಂದ ಗುಣಿಸಿ. ಭಾರತಕ್ಕೆ ತರಬೇತಿ ನೀಡುವುದೆಂದರೆ ಹಾಗೆಯೇ ಇರುತ್ತದೆ ಎಂದು ರಾಹುಲ್‌ ಹೇಳಿದರು. ಅದು ಉತ್ತಮ ಸಲಹೆ ಎಂದು ನನಗನಿಸಿತು. ಇದು ಅದ್ಭುತ ಕೆಲಸ ಹೌದು. ಆದರೆ ಈ ಸಮಯದಲ್ಲಿ ನನಗೆ ಅದು ಸೂಕ್ತ ಅಲ್ಲ,” ಎಂದು ಲ್ಯಾಂಗರ್ ಹೇಳಿದ್ದಾರೆ.

2018ರ ಮೇ ತಿಂಗಳಿಂದ 2022ರ ಫೆಬ್ರವರಿವರೆಗೆ ಲ್ಯಾಂಗರ್ ಅವರು ಆಸ್ಟ್ರೇಲಿಯಾದ ಮುಖ್ಯ ಕೋಚ್ ಆಗಿದ್ದರು. ಆದರೆ, ಆಟಗಾರರು ಮತ್ತು ಹೊಸ ನಾಯಕ ಪ್ಯಾಟ್ ಕಮಿನ್ಸ್ ಅವರೊಂದಿಗೆ ಭಿನ್ನಾಭಿಪ್ರಾಯ ಇದೆ ಎಂಬ ವದಂತಿಗಳ ನಡುವೆ ಅವರು ರಾಜೀನಾಮೆ ನೀಡಿದರು.

ಇದನ್ನೂ ಓದಿ: ವಿಶ್ವ ಕ್ರಿಕೆಟ್‌ನ ಅತಿ ದೊಡ್ಡ ಸವಾಲು; ಭಾರತ ತಂಡದ ಮುಖ್ಯ ಕೋಚ್ ಹುದ್ದೆ ಕುರಿತು ಜಸ್ಟಿನ್ ಲ್ಯಾಂಗರ್ ಪ್ರತಿಕ್ರಿಯೆ

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ