ಕನ್ನಡ ಸುದ್ದಿ  /  Cricket  /  Kl Rahul Reports At Bengaluru Nca After Returning London Set To Consider T20 World Cup Squad India Ind Vs Eng Test Jra

ಲಂಡನ್‌ನಿಂದ ಮರಳಿ ಎನ್‌ಸಿಎ ಹಾಜರಾದ ಕೆಎಲ್‌ ರಾಹುಲ್;‌ ಟಿ20 ವಿಶ್ವಕಪ್‌ಗೆ ವಿಕೆಟ್ ಕೀಪರ್ ಆಗಿ ಮುಂಚೂಣಿಯಲ್ಲಿ ಕನ್ನಡಿಗ

‌KL Rahul T20 World Cup: ಗಾಯದ ಸಮಸ್ಯೆಯಿಂದಾಗಿ ತಜ್ಞರನ್ನು ಸಂಪರ್ಕಿಸಲು ಲಂಡಮ್‌ಗೆ ತೆರಳಿದ್ದ ಕೆಎಲ್ ರಾಹುಲ್, ತವರಿಗೆ ಮರಳಿದ್ದಾರೆ. ಇದೀಗ ಬೆಂಗಳೂರಿನ ಎನ್‌ಸಿಎಗೆ ಹಾಜರಾಗಿದ್ದಾರೆ. ಮುಂಬರುವ ಟಿ20 ವಿಶ್ವಕಪ್‌ ತಂಡದಲ್ಲಿ‌ ವಿಕೆಟ್‌ ಕೀಪರ್ ಸ್ಥಾನಕ್ಕೆ ಕನ್ನಡಿಗ ಮುಂಚೂಣಿಯಲ್ಲಿದ್ದಾರೆ.

ಲಂಡನ್‌ನಿಂದ ಮರಳಿ ಎನ್‌ಸಿಎ ಹಾಜರಾದ ಕೆಎಲ್‌ ರಾಹುಲ್
ಲಂಡನ್‌ನಿಂದ ಮರಳಿ ಎನ್‌ಸಿಎ ಹಾಜರಾದ ಕೆಎಲ್‌ ರಾಹುಲ್

ಲಂಡನ್‌ಗೆ ಹಾರಿದ್ದ ಕನ್ನಡಿಗ ಕೆಎಲ್‌ ರಾಹುಲ್‌ (KL Rahul) ಭಾರತಕ್ಕೆ ಮರಳಿದ್ದಾರೆ. ಇಂಗ್ಲೆಂಡ್ ವಿರುದ್ಧದ ಕೊನೆಯ ನಾಲ್ಕು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿರುವ ರಾಹುಲ್, ಸದ್ಯ ಪುನರ್ವಸತಿಗಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಬಂದಿದ್ದಾರೆ. ಐಪಿಎಲ್ 2023ರ ಆವೃತ್ತಿ ವೇಳೆ ಕ್ವಾಡ್ರಿಸೆಪ್ಸ್ ಇಂಜುರಿಗೆ ಒಳಗಾದ ಅವರು, ಕಳೆದ ವರ್ಷ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ, ಮತ್ತೆ ನೋವು ಉಲ್ಬಣಗೊಂಡ ಕಾರಣದಿಂದಾಗಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ನಂತರ ತಂಡದಿಂದ ಹೊರಬಿದ್ದರು. ತಜ್ಞ ವೈದ್ಯರ ಅಭಿಪ್ರಾಯ ಕಲೆ ಹಾಕಲು ಲಂಡನ್‌ಗೆ ಹಾರಿದ್ದ ವಿಕೆಟ್ ಕೀಪರ್, ಸದ್ಯ ಭಾರತಕ್ಕೆ ಮರಳಿದ್ದಾರೆ. ಮುಂದೆ ರಾಹುಲ್ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.

ಇಂಗ್ಲೆಂಡ್‌ನಿಂದ ಮರಳಿದ ಬೆನ್ನಲ್ಲೇ ರಾಹುಲ್ ಎನ್‌ಸಿಎಗೆ ಹಾಜರಾಗಿದ್ದಾರೆ. ಇಲ್ಲಿ ತರಬೇತಿ ಪಡೆಯುತ್ತಿರುವ ಫೋಟೋಗಳನ್ನು ರಾಹುಲ್‌ ತಮ್ಮ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಗಾಯದಿಂದಾಗಿ ಕಳೆದ ವರ್ಷ ನಡೆದ ಐಪಿಎಲ್‌ನ ದ್ವಿತೀಯಾರ್ಧವನ್ನು ಮಿಸ್‌ ಮಾಡಿಕೊಂಡಿದ್ದ ಕನ್ನಡಿಗ, ಆ ಬಳಿಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವನ್ನೂ ಕಳೆದುಕೊಂಡಿದ್ದರು. 2023ರ ಏಷ್ಯಾಕಪ್ ಮೂಲಕ ಮತ್ತೆ ತಂಡಕ್ಕೆ ಮರಳಿದ ಅವರು, ಅಮೋಘ ಫಾರ್ಮ್‌ ಕಂಡುಕೊಂಡರು. ಪಾಕಿಸ್ತಾನದ ವಿರುದ್ಧ ವಿರಾಟ್‌ ಕೊಹ್ಲಿ ಜೊತೆಗೂಡಿ ರಾಹುಲ್‌ ಸಿಡಿಸಿದ ಸ್ಫೋಟಕ ಶತಕವು, ಅವರ ಸಾಮರ್ಥ್ಯ ತೋರಿಸಿತು. ಅದರ ಬೆನ್ನಲ್ಲೇ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ತಂಡದಲ್ಲಿ ನಿರ್ಣಾಯಕ ಪ್ರದರ್ಶನ ನೀಡಿದರು.‌

ಇನ್ನಷ್ಟು ಕ್ರೀಡಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಏಕದಿನ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿದ ರಾಹುಲ್, ಟೆಸ್ಟ್‌ನಲ್ಲಿಯೂ ಮುನ್ನೆಲೆಗೆ ಬಂದರು. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಮಧ್ಯಮ ಕ್ರಮಾಂಕದ ಪ್ರಮುಖ ಬ್ಯಾಟರ್‌ ಆಗಿ ಹೊರಹೊಮ್ಮಿದರು. ಅದರ ಬೆನ್ನಲ್ಲೇ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್‌ ಸರಣಿಗೆ ಆಯ್ಕೆಯಾದ ರಾಹುಲ್‌, ಹೈದರಾಬಾದ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕ್ರಮವಾಗಿ 86 ಮತ್ತು 22 ರನ್ ಗಳಿಸಿದರು. ಆ ಬಳಿಕ ಮೊಣಕಾಲು ನೋವಿನಿಂದಾಗಿ ವಿಶಾಖಪಟ್ಟಣದಲ್ಲಿ ನಡೆದ ಸರಣಿಯ ಎರಡನೇ ಪಂದ್ಯದಿಂದ ಹೊರಗುಳಿದರು.

ಸದ್ಯ ರಾಹುಲ್‌ ಗಮನ ಐಪಿಎಲ್‌ ಮೇಲಿದೆ. ಲಖ್ನೋ ತಂಡವನ್ನು ಮುನ್ನಡೆಸಲಿರುವ ಅವರು, ಆ ಬಳಿಕ ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇದೆ.

ಕೆಎಲ್‌ ಚಿತ್ತ ಟಿ20 ವಿಶ್ವಕಪ್

ಐಪಿಎಲ್‌ ಬೆನ್ನಲ್ಲೇ ಜೂನ್‌ ತಿಂಗಳಲ್ಲಿ ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಟಿ20 ವಿಶ್ವಕಪ್‌ ಪಂದ್ಯಾವಳಿ ನಡೆಯುತ್ತಿದೆ. ತಂಡದಲ್ಲಿ ವಿಕೆಟ್ ಕೀಪರ್ ಹಾಗೂ ಬ್ಯಾಟರ್‌ ಸ್ಥಾನಕ್ಕೆ ರಾಹುಲ್ ಅವರನ್ನು ಪರಿಗಣಿಸಲಾಗುತ್ತಿದೆ ಎಂದು ಪಿಟಿಐ ಸುದ್ದಿ ವರದಿ ಮಾಡಿದೆ. ಹೀಗಾಗಿ ಐಪಿಎಲ್‌ನಲ್ಲಿ ರಾಹುಲ್‌ ಪ್ರದರ್ಶನವು ಟಿ20 ವಿಶ್ವಕಪ್‌ಗೆ ಆಯ್ಕೆಗೆ ನಿರ್ಣಾಯಕವಾಗಲಿದೆ. ರಾಹುಲ್‌ ಮಾತ್ರವಲ್ಲದೆ, ಟೀಮ್‌ ಇಂಡಿಯಾ ಆಯ್ಕೆಗೆ ಐಪಿಎಲ್‌ ಪ್ರದರ್ಶನ ಪ್ರಮುಖವಾಗಲಿದೆ.

ಟಿ20ಯಲ್ಲಿ ವಿಕೆಟ್‌ ಕೀಪರ್ ಸ್ಥಾನಕ್ಕಾಗಿ ಭಾರಿ ಪೈಪೋಟಿ ಇದೆ. ಸಂಜು ಸ್ಯಾಮ್ಸನ್, ಜಿತೇಶ್ ಶರ್ಮಾ ಮತ್ತು ಧ್ರುವ್ ಜುರೆಲ್ ಕಠಿಣ ಪೈಪೋಟಿ ನೀಡುತ್ತಿದ್ದಾರೆ. ಈ ನಡುವೆ ರಿಷಭ್ ಪಂತ್ ಕೂಡ ದೀರ್ಘಕಾಲದ ಗಾಯದ ಮೈದಾನಕ್ಕಿಳಿಯಲು ಸಜ್ಜಾಗಿದ್ದಾರೆ.

ಸದ್ಯದ ಪ್ರದರ್ಶನದ ಪ್ರಕಾರ, ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಟಿ20 ವಿಶ್ವಕಪ್‌ಗೆ ಆರಂಭಿಕರಾಗಿ ಆಯ್ಕೆಯಾಗುವುದು ಬಹುತೇಕ ಖಚಿತ. ಹೀಗಾಗಿ ರಾಹುಲ್ ಕ್ರಮಾಂಕ ಯಾವುದು ಎಂಬುದು ಸದ್ಯದ ಕುತೂಹಲ. ಏಕದಿನ ಪಂದ್ಯ ಸ್ವರೂಪದಲ್ಲಿ ಮಾಡಿದಂತೆ ರಾಹುಲ್ ಅವರನ್ನು ಕೆಳಕ್ರಮಾಂಕದಲ್ಲಿ ಆಡಿಸಿದರೂ ಅಚ್ಚರಿಯಿಲ್ಲ.

ಇದನ್ನೂ ಓದಿ | ಟೆಸ್ಟ್ ಕ್ರಿಕೆಟ್‌ನಲ್ಲಿ ಕುಲ್ದೀಪ್‌ ಯಾದವ್‌ ಮತ್ತೊಂದು ದಾಖಲೆ; ಕಡಿಮೆ ಎಸೆತಗಳಲ್ಲಿ ವೇಗವಾಗಿ 50 ವಿಕೆಟ್ ಕಿತ್ತ ಸ್ಪಿನ್ನರ್

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point