ಇದು ನನ್ನ ಗ್ರೌಂಡ್, ನನ್ನ ತವರು; ಬೇರೆಯವರಿಗಿಂತ ಚೆನ್ನಾಗಿ ನನಗೊತ್ತು: ಆರ್‌ಸಿಬಿ ವಿರುದ್ಧ ಗೆದ್ದ ಬಳಿಕ ಕೆಎಲ್ ರಾಹುಲ್ ಮಾತು
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಅಜೇಯ 93 ರನ್ ಸಿಡಿಸಿದರು. ಇದು ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 6 ವಿಕೆಟ್‌ಗಳಿಂದ ಮಣಿಸಲು ನೆರವಾಯ್ತು. ಪಂದ್ಯದ ಬಳಿಕ ಕೆಎಲ್ ರಾಹುಲ್ ಹೇಳಿರುವ ಮಾತು ಇಲ್ಲಿದೆ.

“ಇದು ನನ್ನ ಗ್ರೌಂಡ್, ಇದು ನನ್ನ ತವರು. ಈ ಮೈದಾನದ ಬಗ್ಗೆ ಬೇರೆಯವರಿಗಿಂತ ಚೆನ್ನಾಗಿ ನನಗೊತ್ತು”. ಇದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ಮಣಿಸಿದ ಬಳಿಕ ಕೆಎಲ್ ರಾಹುಲ್ ಹೇಳಿದ ಮಾತು. ಅವರ ಮಾತಿನಲ್ಲಿ ಕಿಚ್ಚಿತ್ತು. ತನ್ನ ವೃತ್ತಿಬದುಕಿನ ಆರಂಭದಿಂದಲೂ ಆಡಿ ಬೆಳೆದ ಮೈದಾನದಲ್ಲಿ ಪಂದ್ಯ ಗೆದ್ದ ಹೆಮ್ಮೆ ಇತ್ತು. ಎದುರಾಳಿ ತಂಡದ ವಿರುದ್ಧ ಅದರದ್ದೇ ತವರಿನಲ್ಲಿ ಏಕಾಂಗಿಯಾಗಿ ಆಡಿ ಗುರಿ ತಲುಪಿದ ಖುಷಿ ಇತ್ತು. ಬಹುಶಃ ಇಂಥಾ ಇನ್ನಿಂಗ್ಸ್ ಅನ್ನು ಕನ್ನಡಿಗ ಕೆಎಲ್ ರಾಹುಲ್ ಜೀವನದುದ್ದಕ್ಕೂ ಮರೆಯುವ ಸಾಧ್ಯತೆ ಇಲ್ಲ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ (ಏ.10) ನಡೆದ ಐಪಿಎಲ್ 2025ರ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 6 ವಿಕೆಟ್‌ಗಳಿಂದ ಗೆದ್ದು ಬೀಗಿತು. ಇದು ತವರು ಮೈದಾನದಲ್ಲಿ ಆರ್‌ಸಿಬಿಗೆ ಸತತ ಎರಡನೇ ಸೋಲು. ಟೂರ್ನಿಯಲ್ಲಿ ತವರಿನ ಹೊರಗೆ ಆಡಿದ ಎಲ್ಲಾ ಪಂದ್ಯಗಳಲ್ಲಿ ಗೆದ್ದ ತಂಡ, ತವರಿನಲ್ಲಿ ಎರಡೂ ಪಂದ್ಯಗಳನ್ನು ಸೋತಿದೆ.
ಪಂದ್ಯದಲ್ಲಿ 32 ವರ್ಷದ ಕೆಎಲ್ ರಾಹುಲ್, ಅಜೇಯ 93 ರನ್ ಗಳಿಸಿ ತಮ್ಮ ತಂಡವನ್ನು ಗೆಲುವಿನ ದಡ ಸೇರಿದರು. 164 ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಒಂದು ಹಂತದಲ್ಲಿ 4 ವಿಕೆಟ್ ನಷ್ಟಕ್ಕೆ ಕೇವಲ 58 ರನ್ ಮಾತ್ರ ಗಳಿಸಿತ್ತು. ಆದರೆ ರಾಹುಲ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಐದನೇ ವಿಕೆಟ್‌ಗೆ ಅಜೇಯ 111 ರನ್‌ಗಳ ಜೊತೆಯಾಟವಾಡಿದರು.
ಈ ಪಿಚ್ ನನಗೆ ಚೆನ್ನಾಗಿ ಗೊತ್ತಿದೆ
ನಿಧಾನಗತಿಯ ಆಟ ಆರಂಭಿಸಿದ ರಾಹುಲ್, ಕೊನೆಗೆ 53 ಎಸೆತಗಳಲ್ಲಿ 93 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಕೆಎಲ್ ರಾಹುಲ್ ಅವರ ಇನ್ನಿಂಗ್ಸ್‌ನಲ್ಲಿ ಏಳು ಬೌಂಡರಿಗಳು ಮತ್ತು ಆರು ಆಕರ್ಷಕ ಸಿಕ್ಸರ್‌ಗಳು ಸೇರಿದ್ದವು. ಈ ವೇಳೆ ಮಾತನಾಡಿದ ಅವರು, ಬೆಂಗಳೂರಿನ ಪಿಚ್ ಪರಿಸ್ಥಿತಿ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ. ಹೀಗಾಗಿ ತಮ್ಮ ಇನ್ನಿಂಗ್ಸ್ ಅನ್ನು ಹೇಗೆ ಆಡಬೇಕೆಂದು ತಿಳಿದಿತ್ತು ಎಂದು ಹೇಳಿದರು.
ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಗೆಲುವಿನ ದಡ ಸೇರಿಸಿದ ಬಳಿಕ, ಕೆಎಲ್ ರಾಹುಲ್ ಎದೆ ತಟ್ಟಿ ನಿಂತರು. ತಮ್ಮ ಬ್ಯಾಟ್‌ನಿಂದ ಮೈದಾನದಲ್ಲಿ ಒಂದು ವೃತ್ತಾಕಾರದ ರಚನೆ ಮಾಡಿ ಮಧ್ಯದಲ್ಲಿ ಬ್ಯಾಟ್ ಇಟ್ಟರು. ಆ ಮೂಲಕ 'ಇದು ನನ್ನ ಮೈದಾನ' ಎಂದು ಹೇಳಿದನು.
ಪಂದ್ಯದ ನಂತರದ ಪ್ರಸ್ತುತಿಯಲ್ಲಿ ಮಾತನಾಡಿದ ರಾಹುಲ್, "ಇದು ನನ್ನ ಮೈದಾನ, ಇದು ನನ್ನ ಮನೆ. ಈ ಮೈದಾನದ ಬಗ್ಗೆ ಎಲ್ಲರಿಗಿಂತ ಚೆನ್ನಾಗಿ ನನಗೆ ಗೊತ್ತಿದೆ. ಇಲ್ಲಿ ಆಡುವುದನ್ನು ಆನಂದಿಸಿದ್ದೇನೆ" ಎಂದು ಹೇಳಿದರು.
ಕೆಎಲ್ ರಾಹುಲ್ ಪಿಚ್ ಅನ್ನು ಚೆನ್ನಾಗಿ ಅರಿತು ಬ್ಯಾಟ್ ಬೀಡಿಸಿದರು. ವಿಕೆಟ್ ಕೀಪಿಂಗ್ ಮಾಡುವಾಗ ಪಿಚ್ ಅನ್ನು ಚೆನ್ನಾಗಿ ಅರಿತುಕೊಂಡೆ ಎಂದರು. ಚೇಸಿಂಗ್ ವೇಳೆ ಆರ್‌ಸಿಬಿ ತಂಡದ ಅತ್ಯುತ್ತಮ ಬೌಲರ್ ಆಗಿರುವ ಜೋಶ್ ಹೇಜಲ್‌ವುಡ್ ಎಸೆದ 15ನೇ ಓವರ್‌ನಲ್ಲಿ ರಾಹುಲ್ 22 ರನ್ ಸಿಡಿಸಿದರು.
ಕ್ಯಾಚ್ ಡ್ರಾಪ್‌ನಿಂದ ಜೀವದಾನ
ಕೆಎಲ್ ರಾಹುಲ್ ಇನ್ನಿಂಗ್ಸ್ ಆರಂಭದಲ್ಲಿ ಆರ್‌ಸಿಬಿ ನಾಯಕ ರಜತ್ ಪಾಟೀದಾರ್, ಕೆಎಲ್‌ಗೆ ಜೀವದಾನ ನೀಡಿದ್ದರು. ಕೆಎಲ್ ರಾಹುಲ್ ಅವರ ಕ್ಲಿಷ್ಟಕರ ಕ್ಯಾಚ್ ಅನ್ನು ಕೈಬಿಟ್ಟರು. ಇದು ಪಂದ್ಯದ ಅತಿದೊಡ್ಡ ತಿರುವು ಎಂಬುದು ಸಾಬೀತಾಯ್ತು.
ಐಪಿಎಲ್ 2025ರಲ್ಲಿ ಕೆಎಲ್ ರಾಹುಲ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಟೂರ್ನಿಯಲ್ಲಿ ಈವರೆಗೆ ಆಡಿದ ಮೂರು ಪಂದ್ಯಗಳಲ್ಲಿ 185 ರನ್ ಗಳಿಸಿದ್ದಾರೆ. ಅವರು ಪ್ರಸ್ತುತ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ.
