ಲಂಡನ್‌ಗೆ ಹಾರಿದ ಕೆಎಲ್ ರಾಹುಲ್, ಐದನೇ ಟೆಸ್ಟ್‌ ಆಡೋದು ಅನುಮಾನ; ಧರ್ಮಶಾಲಾ ಟೆಸ್ಟ್‌ಗೆ ಮಾರಕ ವೇಗಿ ಕಂಬ್ಯಾಕ್-kl rahul sent to london due to discomfort in quadriceps jasprit bumrah ready for 5th test against england ind vs eng jra ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಲಂಡನ್‌ಗೆ ಹಾರಿದ ಕೆಎಲ್ ರಾಹುಲ್, ಐದನೇ ಟೆಸ್ಟ್‌ ಆಡೋದು ಅನುಮಾನ; ಧರ್ಮಶಾಲಾ ಟೆಸ್ಟ್‌ಗೆ ಮಾರಕ ವೇಗಿ ಕಂಬ್ಯಾಕ್

ಲಂಡನ್‌ಗೆ ಹಾರಿದ ಕೆಎಲ್ ರಾಹುಲ್, ಐದನೇ ಟೆಸ್ಟ್‌ ಆಡೋದು ಅನುಮಾನ; ಧರ್ಮಶಾಲಾ ಟೆಸ್ಟ್‌ಗೆ ಮಾರಕ ವೇಗಿ ಕಂಬ್ಯಾಕ್

India vs England: ಇಂಗ್ಲೆಂಡ್ ವಿರುದ್ಧ ಧರ್ಮಶಾಲಾದಲ್ಲಿ ನಡೆಯಲಿರುವ 5ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಕೆಎಲ್ ರಾಹುಲ್ ಹಾಗೂ ಜಸ್ಪ್ರೀತ್ ಬುಮ್ರಾ ಲಭ್ಯತೆ ಚರ್ಚೆಯ ವಿಷಯವಾಗಿದೆ. ಕನ್ನಡಿಗ ರಾಹುಲ್‌ ಟೆಸ್ಟ್‌ ತಂಡಕ್ಕೆ ಮರಳುವ ಸಾಧ್ಯತೆ ತೀರಾ ಕಡಿಮೆ. ಇದೇ ವೇಳೆ ಬುಮ್ರಾ ತಂಡಕ್ಕೆ ಮರಳುವುದು ಬಹುತೇಕ ಖಚಿತವಾಗಿದೆ.

ಲಂಡನ್‌ಗೆ ಹಾರಿದ ಕೆಎಲ್ ರಾಹುಲ್
ಲಂಡನ್‌ಗೆ ಹಾರಿದ ಕೆಎಲ್ ರಾಹುಲ್ (REUTERS)

ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ (India vs England) ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ ಭಾರತ ತಂಡವು‌ ಸರಣಿ ವಶಪಡಿಸಿಕೊಂಡಿದೆ. ರಾಂಚಿಯಲ್ಲಿ ನಡೆದ ನಾಲ್ಕನೇ ಟೆಸ್ಟ್‌ ಪಂದ್ಯವನ್ನು ಭರ್ಜರಿಯಾಗಿ ಗೆದ್ದ ರೋಹಿತ್‌ ಶರ್ಮಾ ಪಡೆ, 3-1 ಅಂತರದಿಂದ ಮುನ್ನಡೆ ಸಾಧಿಸಿದೆ. ಈ ನಡುವೆ, ಐದನೇ ಟೆಸ್ಟ್‌ ಪಂದ್ಯಕ್ಕೂ ಮುನ್ನ ಅನುಭವಿ ಹಾಗೂ ಬಲಿಷ್ಠ ಆಟಗಾರರ ಕೊರತೆ ತಂಡಕ್ಕೆ ಇನ್ನೂ ಚಿಂತೆಯಾಗಿ ಉಳಿದಿದೆ.

ಮುಖ್ಯವಾಗಿ ಕೆಎಲ್ ರಾಹುಲ್ (KL Rahul) ಅವರ ಫಿಟ್ನೆಸ್ ಮತ್ತು ಜಸ್ಪ್ರೀತ್ ಬುಮ್ರಾ (Jasprit Bumrah) ಅವರ ಕೆಲಸದ ಹೊರೆಯು, ಅಂತಿಮ ಟೆಸ್ಟ್ ಪಂದ್ಯಕ್ಕೂ ಮುನ್ನ ಚರ್ಚೆಯ ವಿಷಯವಾಗಿದೆ. ಸತತ ಮೂರು ಪಂದ್ಯಗಳನ್ನು ಗೆದ್ದಿರುವ ಭಾರತ ತಂಡವು, ಮಾರ್ಚ್‌ 7ರಿಂದ ಧರ್ಮಶಾಲಾದಲ್ಲಿ ನಡೆಯಲಿರುವ ಸರಣಿಯ ಕೊನೆಯ ಪಂದ್ಯದಲ್ಲೂ ಗೆಲ್ಲುವ ಲೆಕ್ಕಾಚಾರ ಹಾಕಿಕೊಂಡಿದೆ.‌

ಇದನ್ನೂ ಓದಿ | T20 Record: ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ; ರೋಹಿತ್ ಶರ್ಮಾ ದಾಖಲೆ ಮುರಿದ ನಮೀಬಿಯಾ ಆಟಗಾರ

ನಾಲ್ಕನೇ ಟೆಸ್ಟ್ ಕೂಡಾ ಕೇವಲ ನಾಲ್ಕು ದಿನಗಳಲ್ಲಿ ಕೊನೆಗೊಂಡಿದ್ದರಿಂದ, ಉಭಯ ತಂಡಗಳಿಗೆ ಕನಿಷ್ಠ ಒಂಬತ್ತು ದಿನಗಳ ವಿಶ್ರಾಂತಿ ಸಿಕ್ಕಿದೆ. ರಾಂಚಿ ಟೆಸ್ಟ್‌ ಪಂದ್ಯದ ಬಳಿಕ ಭಾರತ ತಂಡದ ಆಟಗಾರರು ತಮ್ಮ ತಮ್ಮ ವೈಯಕ್ತಿಕ ಕೆಲಸಗಳ ಮೇಲೆ ವಿವಿಧೆಡೆಗೆ ಚದುರಿ ಹೋಗಿದ್ದಾರೆ. ಮಾರ್ಚ್ 2ರಂದು ಚಂಡೀಗಢದಲ್ಲಿ ಎಲ್ಲರೂ ಸೇರುವಂತೆ ಆಟಗಾರರಿಗೆ ಸೂಚನೆ ನೀಡಲಾಗಿದೆ. ಹೀಗಾಗಿ ಬುಮ್ರಾ ಮುಂದಿನ ಟೆಸ್ಟ್‌ಗೆ ಮರಳುವುದು ಬಹುತೇಕ ಖಚಿತ.

ಸದ್ಯ ಮುಂದಿನ ಟೆಸ್ಟ್‌ಗೂ ಮುನ್ನ ಕೆಎಲ್ ರಾಹುಲ್ ತಂಡಕ್ಕೆ ಮರಳುವ ಕುರಿತು ಸ್ಪಷ್ಟನೆ ಇಲ್ಲ. ಗಾಯದಿಂದಾಗಿ ಅವರು ಸರಣಿಯ ಎರಡು, ಮೂರು ಮತ್ತು ನಾಲ್ಕನೇ ಟೆಸ್ಟ್‌ಗಳಿಂದ ಹೊರಗಿದ್ದರು. ಇದೀಗ ಐದನೇ ಟೆಸ್ಟ್‌ಗೂ ಮುನ್ನ ಲಭ್ಯವಿರುವ ದಿನಗಳು ಕನ್ನಡಿಗನ ಪುನರಾಗಮನಕ್ಕೆ ಸಾಲುವುದಿಲ್ಲ ಎನ್ನಲಾಗುತ್ತಿಲ್ಲ. ಕ್ರಿಕ್‌ಬಜ್‌ ವರದಿಯ ಪ್ರಕಾರ, ರಾಹುಲ್ ಬಲ ಮೊಣಕಾಲಿನ ಅಸ್ವಸ್ಥತೆಯು ಇನ್ನೂ ಕಡಿಮೆಯಾಗಿಲ್ಲ. ಹೀಗಾಗಿ ತಜ್ಞರ ಅಭಿಪ್ರಾಯ ಪಡೆಯಲು ಅವರನ್ನು ಲಂಡನ್‌ಗೆ ಕಳುಹಿಸಲಾಗಿದೆ ಎಂದು ವರದಿ ಹೇಳಿದೆ.

ಇದನ್ನೂ ಓದಿ | WPL 2024: ಅಜೇಯ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವಿನ ಕನಸಲ್ಲಿ‌ ಯುಪಿ ವಾರಿಯರ್ಸ್;‌ ಸಂಭಾವ್ಯ ತಂಡ, ಲೈವ್‌ ವಿವರ ಹೀಗಿದೆ

ಇಂಗ್ಲೆಂಡ್‌ ವಿರುದ್ಧ ಹೈದರಾಬಾದ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ರಾಹುಲ್ 86 ರನ್ ಗಳಿಸಿದ್ದರು. ಆ ಬಳಿಕ ಬಲ ಕ್ವಾಡ್ರಿಸೆಪ್ಸ್ ಗಾಯದಿಂದಾಗಿ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಮರಳಿದರು. ಕಳೆದ ವರ್ಷವಷ್ಟೇ ಇದೇ ಸಮಸ್ಯೆಯಿಂದಾಗಿ ರಾಹುಲ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಮತ್ತೆ ಮೊಣಕಾಲಿನ ಸಮಸ್ಯೆ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

ಕೆಎಲ್ ರಾಹುಲ್‌ ದ್ವಿಪಾತ್ರ ತಂಡಕ್ಕೆ ಮುಖ್ಯ

ವಿಕೆಟ್‌ ಕೀಪರ್‌ ಕೂಡಾ ಆಗಿರುವ ರಾಹುಲ್‌ ಪಾತ್ರ ಭಾರತ ತಂಡಕ್ಕೆ ತುಂಬಾ ಪ್ರಮುಖವಾಗಿದೆ. ಏಕದಿನ ವಿಶ್ವಕಪ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದ ಅವರು, ಎಲ್ಲಾ ಮೂರು ಸ್ವರೂಪದ ಕ್ರಿಕೆಟ್‌ಗಳಲ್ಲೂ ಕೀಪರ್ ಆಗಿ ಭಾರತ ತಂಡದಲ್ಲಿ ಪ್ರಮಖ ಆಟಗಾರ. ಹೀಗಾಗಿ ಟೀಮ್‌ ಇಂಡಿಯಾದಲ್ಲಿ ಅವರ ದ್ವಿಪಾತ್ರವನ್ನು ಪರಿಗಣಿಸಿ, ಫಿಸಿಯೋಗಳು ಮತ್ತು ತಂಡದ ಮ್ಯಾನೇಜ್ಮೆಂಟ್ ಅಪಾಯವನ್ನು ಮೇಲೆಳೆದುಕೊಳ್ಳಲು ಸಿದ್ಧವಿಲ್ಲ.

ಇದನ್ನೂ ಓದಿ | ಕೊನೆಗೂ ರಣಜಿ ಆಡಲು ಮುಂದಾದ ಶ್ರೇಯಸ್‌ ಅಯ್ಯರ್; ತಮಿಳುನಾಡು ವಿರುದ್ಧದ ಸೆಮಿಫೈನಲ್‌ನಲ್ಲಿ ಮುಂಬೈ ಪರ ಕಣಕ್ಕೆ

ಐಪಿಎಲ್‌ 2024ರ ಆವೃತ್ತಿಯು ಮಾರ್ಚ್ 22ರಿಂದ ಆರಂಭವಾಗಲಿದೆ. ಅದಕ್ಕೂ ಮುನ್ನ ಭಾರತ ತಂಡವು ಧರ್ಮಶಾಲಾ ಟೆಸ್ಟ್ ಪಂದ್ಯವನ್ನು ಕೊನೆಯಾದಾಗಿ ಆಡುತ್ತಿದೆ. ಹೀಗಾಗಿ ಮಿಲಿಯನ್‌ ಡಾಲರ್‌ ಟೂರ್ನಿಯಲ್ಲಿ ರಾಹುಲ್ ಭಾಗಿಯಾಗುವುದು ಬಹುತೇಕ ಖಚಿತ. ಐಪಿಎಲ್‌ಗೂ ಮುನ್ನ 31 ವರ್ಷದ ಆಟಗಾರ ಫಿಟ್ ಆಗಲು ಸಾಕಷ್ಟು ಸಮಯ ಸಿಗಲಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)