ಕೈಗ್ ಹಾಕೋಲೋ ಎಂದು ಪ್ರಸಿದ್ಧ್​ ಕೃಷ್ಣಗೆ ಕನ್ನಡದಲ್ಲೇ ಬೈದ ಕೆಎಲ್ ರಾಹುಲ್; ವಿಡಿಯೋ ವೈರಲ್
ಕನ್ನಡ ಸುದ್ದಿ  /  ಕ್ರಿಕೆಟ್  /  ಕೈಗ್ ಹಾಕೋಲೋ ಎಂದು ಪ್ರಸಿದ್ಧ್​ ಕೃಷ್ಣಗೆ ಕನ್ನಡದಲ್ಲೇ ಬೈದ ಕೆಎಲ್ ರಾಹುಲ್; ವಿಡಿಯೋ ವೈರಲ್

ಕೈಗ್ ಹಾಕೋಲೋ ಎಂದು ಪ್ರಸಿದ್ಧ್​ ಕೃಷ್ಣಗೆ ಕನ್ನಡದಲ್ಲೇ ಬೈದ ಕೆಎಲ್ ರಾಹುಲ್; ವಿಡಿಯೋ ವೈರಲ್

KL Rahul Speaking in Kannada: ಕನ್ನಡಿಗ ಕೆಎಲ್ ರಾಹುಲ್, ಸೌತ್ ಆಫ್ರಿಕಾ ವಿರುದ್ಧ ವಿಕೆಟ್ ಕೀಪಿಂಗ್ ಮಾಡುವಾಗ ಮತ್ತೊಬ್ಬ ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ಕನ್ನಡದಲ್ಲೇ ಬೈದಿರುವ ಮಾತು ಇದೀಗ ವೈರಲ್ ಆಗುತ್ತಿದೆ.

ಕೈಗ್ ಹಾಕೋಲೋ ಎಂದು ಪ್ರಸಿದ್ಧ್​ ಕೃಷ್ಣಗೆ ಕನ್ನಡದಲ್ಲೇ ಬೈದ ಕೆಎಲ್ ರಾಹುಲ್,
ಕೈಗ್ ಹಾಕೋಲೋ ಎಂದು ಪ್ರಸಿದ್ಧ್​ ಕೃಷ್ಣಗೆ ಕನ್ನಡದಲ್ಲೇ ಬೈದ ಕೆಎಲ್ ರಾಹುಲ್,

ಸೆಂಚುರಿಯನ್​ನ ಸೂಪರ್​ಸ್ಪೋರ್ಟ್ಸ್​ ಪಾರ್ಕ್​ನಲ್ಲಿ ಸೌತ್​ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​​ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಭರ್ಜರಿ ಶತಕ ಸಿಡಿಸಿ ತಂಡವನ್ನು ರಕ್ಷಿಸಿ ಭಾರತೀಯರ ಹೃದಯ ಗೆದ್ದ ಕರ್ನಾಟಕದ ಆಟಗಾರ ಕೆಎಲ್ ರಾಹುಲ್, ಇದೀಗ ಮತ್ತೊಂದು ವಿಚಾರದಲ್ಲಿ ಕನ್ನಡಿಗರ ಮನ ಗೆಲ್ಲುವಲ್ಲಿ ಯಶಸ್ಸು ಕಂಡಿದ್ದಾರೆ. ಈ ಬ್ಯಾಟಿಂಗ್ ಅಲ್ಲದೆ ಮೈದಾನದಲ್ಲಿ ಎಂಬುದು ವಿಶೇಷ.

ಮೊದಲ ಇನ್ನಿಂಗ್ಸ್​​ನಲ್ಲಿ ಭಾರತ, ತೀವ್ರ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. 121 ರನ್​ಗಳಿಗೆ 6 ವಿಕೆಟ್​ ಕಳೆದುಕೊಂಡಿತ್ತು. ಈ ಹಂತದಲ್ಲಿ ಅದ್ಭುತ ಬ್ಯಾಟಿಂಗ್ ನಡೆಸಿದ ರಾಹುಲ್, ಸೌತ್ ಆಫ್ರಿಕಾ ಬೌಲರ್​​ಗಳ ಮೇಲೆ ಸವಾರಿ ಮಾಡಿದರು. ಮೊದಲ ದಿನದಾಟದಲ್ಲಿ ಅಜೇಯ 70 ರನ್​ ಗಳಿಸಿದ್ದ ಕೆಎಲ್, 2ನೇ ದಿನದಲ್ಲಿ 137 ಎಸೆತಗಳಲ್ಲಿ 101 ರನ್ ಸಿಡಿಸಿ ಬರ್ಗರ್ ಬೌಲಿಂಗ್ ಕ್ಲೀನ್ ಬೋಲ್ಡ್ ಆದರು.

ಪ್ರಸಿದ್ಧ್​ ಕೃಷ್ಣಗೆ ಕನ್ನಡದಲ್ಲೇ ಬೈದ ರಾಹುಲ್

ಸೆಲೆಬ್ರೆಟಿಗಳು ಸ್ಟಾರ್​ ಮಟ್ಟಕ್ಕೆ ಮೆಳೆಯುತ್ತಿದ್ದಂತೆ ತಮ್ಮ ಮಾತೃ ಭಾಷೆ, ತಾವು ಬೆಳೆದು ಬಂದ ಹಿನ್ನೆಲೆ ಮರೆಯುವುದನ್ನು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಆದರೆ ಕನ್ನಡಿಗ ಕೆಎಲ್ ರಾಹುಲ್, ಸೌತ್ ಆಫ್ರಿಕಾ ವಿರುದ್ಧ ವಿಕೆಟ್ ಕೀಪಿಂಗ್ ಮಾಡುವಾಗ ಮತ್ತೊಬ್ಬ ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ಕನ್ನಡದಲ್ಲೇ ಬೈದಿರುವ ಮಾತು ಇದೀಗ ವೈರಲ್ ಆಗುತ್ತಿದೆ. ಈ ಮಾತು ವಿಕೆಟ್ಸ್​ ಮೈಕ್​ನಲ್ಲಿ ರೆಕಾರ್ಡ್​ ಆಗಿದ್ದು, ಸ್ಪಷ್ಟವಾಗಿ ಕೇಳುತ್ತದೆ.

ಕೈಗ್​ ಬಾಲ್ ಹಾಕೋಲೋ

ಮೊಹಮ್ಮದ್ ಸಿರಾಜ್​ ಎಸೆದ ಓವರ್​​ನಲ್ಲಿ ಸೌತ್ ಆಫ್ರಿಕಾದ ಆರಂಭಿಕ ಆಟಗಾರ ಡೀನ್ ಎಲ್ಗರ್, ಡೀಪ್​ ಸ್ಕ್ವೇರ್​ನತ್ತ ಸಿಂಗಲ್ಸ್ ಪಡೆದು ಅರ್ಧಶತಕ ಪೂರೈಸಿದರು. ಬೌಂಡರಿ ಬಳಿಯಿದ್ದ ಪ್ರಸಿದ್ಧ್ ಕೃಷ್ಣ ವಿಕೆಟ್​ ಕೀಪರ್​ ರಾಹುಲ್​ಗೆ ಬಾಲ್ ಎಸೆಯುತ್ತಾರೆ. ಆದರೆ ಆ ಚೆಂಡು ನೇರವಾಗಿ ಕೈ ಸೇರದೆ ಕೊಂಚ ಆಚೀಚೆ ಹೋಗುತ್ತದೆ. ಆಗ ರಾಹುಲ್ ಕೈಗ್ ಬಾಲ್ ಹಾಕೋಲೋ ಎಂದು ಬೈದಿದ್ದಾರೆ.

ವಿಡಿಯೋ ವೈರಲ್

ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿರುವ ಪ್ರಸಿದ್ಧ್​ ಕೃಷ್ಣ ಅವರನ್ನು ಬೈದಿದ್ದರೂ ಕನ್ನಡದಲ್ಲಿ ಮಾತಾನಾಡಿದರು ಎಂಬ ಕಾರಣಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಸ್ಟಾರ್​ಸ್ಪೋರ್ಟ್ಸ್​ ಕನ್ನಡ ಈ ವಿಡಿಯೋವನ್ನು ಹಂಚಿಕೊಂಡಿದೆ. ಇನ್ನು ಈ ಮ್ಯಾಚ್​​ಗೆ ಕನ್ನಡ ಕಾಮೆಂಟರಿ ಮಾಡುತ್ತಿದ್ದ ವಿಜಯ್ ಭಾರದ್ವಾಜ್, ಈ ಕನ್ನಡದ ಪದ ಐಕಾನಿಕ್ ಆಗುತ್ತದೆ ಎಂದು ಹೇಳಿದ್ದಾರೆ.

ಅಭಿಮಾನಿಗಳು ಫುಲ್ ಖುಷ್

ಕನ್ನಡದಲ್ಲಿ ಮಾತನಾಡಿದ್ದನ್ನು ಕೇಳಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಎಲ್ಲಾ ಕಡೆ ಕನ್ನಡ ಕೇಳೋದೇ ಖುಷಿ ಎನ್ನುತ್ತಿದ್ದಾರೆ. ಜೈ ಕನ್ನಡ, ಮಾತೃಭಾಷೆ ಕನ್ನಡ, ಜೈ ಕರ್ನಾಟಕ, ನಮ್ಮ ಕನ್ನಡ, ಸೌತ್ ಆಫ್ರಿಕಾದಲ್ಲೂ ಕನ್ನಡ ಎಂದು ಪ್ರತಿಕ್ರಿಯಿಸಿರುವ ಕನ್ನಡಿಗರು, ಲವ್ ಎಮೋಜಿ ಹಾಕಿದ್ದಾರೆ. ರಾಹುಲ್​-ಪ್ರಸಿದ್ಧ್ ಒಟ್ಟಿಗೆ ಬ್ಯಾಟಿಂಗ್ ಮಾಡುವಾಗ ಕನ್ನಡದ ವಿಡಿಯೋ ಹಾಕಿ ಎಂದು ಒತ್ತಾಯಿಸಿದ್ದಾರೆ.

ಈ ಹಿಂದೆಯೂ ರಾಹುಲ್ ಕನ್ನಡದಲ್ಲಿ ಮಾತಾಡಿದ್ರು!

2020ರಲ್ಲಿ ಟೀಮ್ ಇಂಡಿಯಾ, ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿತ್ತು. ಕಿವೀಸ್​ ಎದುರಿನ ಮೂರನೇ ಹಾಗೂ ಅಂತಿಮ ಏಕದಿನದಲ್ಲಿ ಕನ್ನಡಿಗರಾದ ಕೆಎಲ್ ರಾಹುಲ್, ಮನೀಶ್ ಪಾಂಡೆ ಅದ್ಭುತ ಆಟವಾಡಿ ಗಮನ ಸೆಳೆದಿದ್ದರು. ನಾಯಕ ವಿರಾಟ್ ಕೊಹ್ಲಿ ಬೇಗನೆ ಔಟಾದಾಗ ಭಾರತಕ್ಕೆ ಬಲ ತುಂಬಿದ ರಾಹುಲ್ ಮತ್ತು ಮನೀಶ್ ಪಾಂಡೆ, ಆಟದ ಮಧ್ಯೆ ಕನ್ನಡದ ಕಂಪು ಹರಿಸಿದ್ದರು. ಈ ವಿಡಿಯೋ ವೈರಲ್ ಆಗಿತ್ತು.

ಪ್ರಸಿದ್ಧ್ ಬೌಲಿಂಗ್​ನಲ್ಲಿ ರಾಹುಲ್ ಕ್ಯಾಚ್

ಪಂದ್ಯದಲ್ಲಿ ಕೆಎಲ್ ರಾಹುಲ್ 133 ಎಸೆತಗಳಲ್ಲಿ 14 ಬೌಂಡರಿ, 4 ಸಿಕ್ಸರ್​ ಸಹಿತ 101 ರನ್ ಗಳಿಸಿ ಮಿಂಚಿದ್ದರೆ, ಪದಾರ್ಪಣೆ ಮಾಡಿರುವ ಪ್ರಸಿದ್ಧ್ ಕೃಷ್ಣ ಒಂದು ವಿಕೆಟ್ ಪಡೆದಿದ್ದಾರೆ. 15 ಓವರ್​​ ಬೌಲಿಂಗ್ ಮಾಡಿದ್ದು 61 ರನ್ ಬಿಟ್ಟುಕೊಟ್ಟಿದ್ದಾರೆ. ವಿಕೆಟ್ ಕೀಪರ್ ಕೈಲ್ ವೆರಿನ್ನೆ ಅವರನ್ನು ಔಟ್ ಮಾಡಿದರು. ಈ ಕ್ಯಾಚ್​ ಅನ್ನು ವಿಕೆಟ್ ಕೀಪರ್ ಕೆಎಲ್ ರಾಹುಲ್ ಪಡೆದಿದ್ದು ವಿಶೇಷ.

Whats_app_banner