ಕನ್ನಡ ಸುದ್ದಿ  /  Cricket  /  Kl Rahul Teach Kannada To Hindi Man In Star Sports Ipl Film Shoot Kannad Indian Premier League Lucknow Super Giants Jra

KL Rahul Kannada: ಕನ್ನಡ್ ಅಲ್ಲ, ಕನ್ನಡ; ಹಿಂದಿ ಹುಡುಗನಿಗೆ ಕನ್ನಡ ಪಾಠ ಮಾಡಿದ ಕೆಎಲ್ ರಾಹುಲ್

KL Rahul: ಹಿಂದಿ ಯುವಕನಿಗೆ ಕ್ರಿಕೆಟಿಗ ಕೆಎಲ್‌ ರಾಹುಲ್‌ ಕನ್ನಡ ಪಾಠ ಮಾಡಿದ್ದಾರೆ. ಕನ್ನಡ ಬದಲಿಗೆ ಕನ್ನಡ್‌ ಎಂದು ಉಚ್ಛರಿಸಿದ ಯುವಕನಿಗೆ, ಅದು ಕನ್ನಡ್‌ ಅಲ್ಲ. ಕನ್ನಡ ಎಂದು ಸ್ಪಷ್ಟವಾಗಿ ಹೇಳಿಕೊಡುತ್ತಾರೆ. ಜಾಹೀರಾತು ಶೂಟಿಂಗ್‌ ವೇಳೆ ರಾಹುಲ್‌ ಮಾತನಾಡಿದ ವಿಡಿಯೋ ವೈರಲ್‌ ಆಗಿದೆ.

ಹಿಂದಿ ಹುಡುಗನಿಗೆ ಕನ್ನಡ ಪಾಠ ಮಾಡಿದ ಕೆಎಲ್ ರಾಹುಲ್
ಹಿಂದಿ ಹುಡುಗನಿಗೆ ಕನ್ನಡ ಪಾಠ ಮಾಡಿದ ಕೆಎಲ್ ರಾಹುಲ್

ಕನ್ನಡಿಗ ಕೆಎಲ್‌ ರಾಹುಲ್‌ (KL Rahul), ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಿಂದ ಹೊರಬಿದ್ದಿದ್ದಾರೆ. ಮೊಣಕಾಲು ಗಾಯದಿಂದಾಗಿ ಸರಣಿಯ ಮೊದಲನೇ ಪಂದ್ಯದ ಬಳಿಕ ತಂಡದಿಂದ ಹೊರಗುಳಿದಿರುವ ಅವರು, ನಾಲ್ಕನೇ ಪಂದ್ಯಕ್ಕೂ ತಂಡವನ್ನು ಸೇರಿಲ್ಲ. ಈ ನಡುವೆ ಐಪಿಎಲ್‌ ಜಾಹೀರಾತು ಶೂಟಿಂಗ್‌ ಒಂದರ ವಿಡಿಯೋ ಎಲ್ಲಡೆ ವೈರಲ್‌ ಆಗಿದೆ. ಇದರಲ್ಲಿ ರಾಹುಲ್‌ ಅವರ ಕನ್ನಡ ಪ್ರೇಮ ಅಭಿಮಾನಿಗಳಿಗೆ ಮೆಚ್ಚುಗೆಯಾಗಿದೆ.

ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿಯ ಐಪಿಎಲ್‌ ಜಾಹೀರಾತು ಶೂಟಿಂಗ್‌ ಎನ್ನ ಲಾದ ವಿಡಿಯೋದಲ್ಲಿ, ಹಿಂದಿ ಹುಡುಗನಿಗೆ ಕೆಎಲ್‌ ರಾಹುಲ್‌ ಕನ್ನಡ ಪಾಠ ಮಾಡಿದ್ದಾರೆ. ಶೂಟಿಂಗ್‌ಗೆ ಬೇಕಾದ ಸ್ಲ್ರಿಪ್ಟ್‌ ಅನ್ನು ಸಿಬ್ಬಂದಿ ಯುವಕನೊಬ್ಬ ರಾಹುಲ್‌ ಕೈಗೆ ತಂದುಕೊಡುತ್ತಾನೆ. ಅದನ್ನು ಓದಲು ಕುಳಿತ ರಾಹುಲ್, ಅದರಲ್ಲಿ ಏನೇನಿದೆ ಎಂಬುದನ್ನು ಓದಿ ನೋಡುತ್ತಾರೆ. ಈ ವೇಳೆ ಕನ್ನಡ ಎಂಬ ಪದವನ್ನೂ ಉಚ್ಛರಿಸುತ್ತಾರೆ. ಇದನ್ನು ಪುನರಾವರ್ತಿಸಿದ ಹಿಂದಿ ಯುವಕ, ಕನ್ನಡ ಬದಲಿಗೆ ಕನ್ನಡ್‌ ಎಂದು ಉಚ್ಛರಿಸುತ್ತಾನೆ. ಇದು ರಾಹುಲ್‌ಗೆ ಇಷ್ಟ ಆಗಲ್ಲ.

ಏನ್‌ ಹೇಳಿದ್ರು ರಾಹುಲ್?‌

ಯುವಕ ಕನ್ನಡ್‌ ಎಂದು ಹೇಳುತ್ತಿದ್ದಂತೆಯೇ ರಾಹುಲ್‌ಗೆ ಅದು ಇಷ್ಟವಾಗುವುದಿಲ್ಲ. “ಕನ್ನಡ ಭಾಯ್‌ (ಸಹೋದರ) ಕನ್ನಡ. ನಿಮೆಗಲ್ಲಾ ಎಷ್ಟು ಸಲ ಹೇಳ್ಬೇಕು? ಅದು ಕನ್ನಡ. ಕನ್ನಡ್‌ ಅಲ್ಲ. ಮತ್ತೊಮ್ಮೆ ಹೇಳು, ಕನ್ನಡ”. ಎಂದು ರಾಹುಲ್‌ ಹೇಳಿದ್ದಾರೆ. ಆ ಬಳಿಕ ತನ್ನ ಮಾತನ್ನು ಸರಿಪಡಿಸಿಕೊಂಡ ಯುವಕ, ಕ್ಷಮಿಸಿ ಸರ್‌, ಕನ್ನಡ ಎಂದು ಸ್ಪಷ್ಟವಾಗಿ ಹೇಳುತ್ತಾನೆ.

ಇದನ್ನೂ ಓದಿ | ಕೈಗ್ ಹಾಕೋಲೋ ಎಂದು ಪ್ರಸಿದ್ಧ್​ ಕೃಷ್ಣಗೆ ಕನ್ನಡದಲ್ಲೇ ಬೈದ ಕೆಎಲ್ ರಾಹುಲ್; ವಿಡಿಯೋ ವೈರಲ್

ಮತ್ತೆ ಸ್ಕ್ರಿಪ್ಟ್‌ ಓದುವುದನ್ನು ಮುಂದುವರೆಸಿದ ರಾಹುಲ್‌, ಅದರಲ್ಲಿರುವ ವಾಕ್ಯಗಳನ್ನು ನೋಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಪ್ರಶ್ನೆಗಳನ್ನು ಯಾರು ಬರೆದವರು? ಏನಿದು? ಇದೆಲ್ಲಾ ನೋಡಿದ್ರೆ ಜನರಿಗೆ ಬೋರ್‌ ಆಗುತ್ತೆ. ಇದೇನೂ ಸ್ಟಾರ್‌ ಸ್ಪೋರ್ಟ್ಸ್‌ ಟಾಕ್‌ ಶೋ ಅಲ್ಲ. ಐಪಿಎಲ್‌ ನಡೆಯುತ್ತಿದೆ. ಡೈರೆಕ್ಟರ್ ಯಾರು? ಈ ಸ್ಕಿಪ್ಟ್‌ ಬರೆದವರು ಯಾರು? ಅವರನ್ನು ಬೇಗ ಕರೆಸು ಎಂದು ರಾಹುಲ್‌ ಹೇಳಿದ್ದಾರೆ.‌

ರಾಹುಲ್‌ ಕನ್ನಡ ಮಾತನಾಡಿದ್ದು ಇದೇ ಮೊದಲಲ್ಲ

ಕೆಎಲ್‌ ರಾಹುಲ್‌, ಈ ಹಿಂದೆಯೂ ಕನ್ನಡ ಪದಗಳನ್ನು ಮಾತನಾಡಿ ವೈರಲ್‌ ಆಗಿದ್ದರು. ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧ ಸೆಂಚುರಿಯನ್‌​ಲ್ಲಿ ನಡೆದ ಟೆಸ್ಟ್​​ ಪಂದ್ಯದ ವೇಳೆ ಪ್ರಸಿದ್ಧ್‌ ಕೃಷ್ಣ ಅವರೊಂದಿಗೆ ರಾಹುಲ್‌ ಕನ್ನಡದಲ್ಲಿ ಸಂಭಾಷಣೆ ನಡೆಸಿದ್ದರು. ವಿಕೆಟ್ ಕೀಪಿಂಗ್ ಮಾಡುವಾಗ ಮತ್ತೊಬ್ಬ ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರಿಗೆ ಕನ್ನಡದಲ್ಲೇ ಬೈದಿದ್ದರು. ಆ ಮಾತು ಸ್ಟಂಪ್ಸ್​ ಮೈಕ್‌​ನಲ್ಲಿ ರೆಕಾರ್ಡ್​ ಆಗಿತ್ತು.

ಇದನ್ನೂ ಓದಿ | ಇದೇನಿದು, ಜಿಲೇಬಿ-ಧೋಕ್ಲಾ ತಿಂದ್ರೆ ನನ್ ಫಿಟ್ನೆಸ್ ಏನಾಗ್ಬೇಡ; ಜಾಹೀರಾತು ಶೂಟಿಂಗ್ ವೇಳೆ ರೇಗಾಡಿದ ಹಾರ್ದಿಕ್, ವಿಡಿಯೋ ವೈರಲ್

ಮೊಹಮ್ಮದ್ ಸಿರಾಜ್​ ಎಸೆದ ಓವರ್‌​​ನಲ್ಲಿ ಸೌತ್ ಆಫ್ರಿಕಾದ ಆರಂಭಿಕ ಆಟಗಾರ ಡೀನ್ ಎಲ್ಗರ್, ಡೀಪ್​ ಸ್ಕ್ವೇರ್‌ನತ್ತ ಸಿಂಗಲ್ಸ್ ಪಡೆದು ಅರ್ಧಶತಕ ಪೂರೈಸಿದರು. ಬೌಂಡರಿ ಬಳಿಯಿದ್ದ ಪ್ರಸಿದ್ಧ್ ಕೃಷ್ಣ ವಿಕೆಟ್​ ಕೀಪರ್​ ರಾಹುಲ್​ಗೆ ಬಾಲ್ ಎಸೆಯುತ್ತಾರೆ. ಆದರೆ ಆ ಚೆಂಡು ನೇರವಾಗಿ ಕೈ ಸೇರದೆ ಕೊಂಚ ಆಚೀಚೆ ಹೋಗುತ್ತದೆ. ಆಗ ರಾಹುಲ್ ಕೈಗ್ ಬಾಲ್ ಹಾಕೋಲೋ ಎಂದು ಬೈದಿದ್ದರು.

ಅದಕ್ಕೂ ಹಿಂದೆ 2020ರಲ್ಲಿ ಭಾರತ ತಂಡವು ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿತ್ತು. ಕಿವೀಸ್​ ಎದುರಿನ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಕನ್ನಡಿಗರಾದ ಕೆಎಲ್ ರಾಹುಲ್, ಮನೀಶ್ ಪಾಂಡೆ ಅದ್ಭುತ ಆಟವಾಡಿ ಗಮನ ಸೆಳೆದಿದ್ದರು. ನಾಯಕ ವಿರಾಟ್ ಕೊಹ್ಲಿ ಬೇಗನೆ ಔಟಾದಾಗ ಭಾರತಕ್ಕೆ ಬಲ ತುಂಬಿದ ರಾಹುಲ್ ಮತ್ತು ಮನೀಶ್ ಪಾಂಡೆ, ಆಟದ ಮಧ್ಯೆ ಕನ್ನಡದ ಕಂಪು ಹರಿಸಿದ್ದರು. ಆ ವಿಡಿಯೋ ಕೂಡಾ ವೈರಲ್ ಆಗಿತ್ತು.