ಕೆಎಲ್ ರಾಹುಲ್ಗೆ ತಮ್ಮ ಸ್ಥಾನ ತ್ಯಾಗ ಮಾಡಿದ ರೋಹಿತ್ ಶರ್ಮಾ; ಪಿಂಕ್ ಬಾಲ್ ಟೆಸ್ಟ್ಗೆ ಭಾರತ ಪ್ಲೇಯಿಂಗ್ 11
Indias likely XI: ಪಿಂಕ್ ಬಾಲ್ ಟೆಸ್ಟ್ ಕ್ರಿಕೆಟ್ಗೆ ಭಾರತ ತಂಡದಲ್ಲಿ ಎರಡು ಬದಲಾವಣೆಯಾಗಲಿದೆ. ನಾಯಕ ರೋಹಿತ್ ಶರ್ಮಾ ತಮ್ಮ ಸ್ಥಾನವನ್ನು ಕೆಎಲ್ ರಾಹುಲ್ಗೆ ತ್ಯಾಗ ಮಾಡಿದ್ದು, ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2ನೇ ಅಥವಾ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಪಂದ್ಯ ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯಲಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯ ಆರಂಭಿಕ ಟೆಸ್ಟ್ ಗೆದ್ದು ಬೀಗಿದ್ದ ಟೀಮ್ ಇಂಡಿಯಾ, 2ನೇ ಟೆಸ್ಟ್ನಲ್ಲೂ ಅಂತಹದ್ದೇ ಜಯದ ವಿಶ್ವಾಸದಲ್ಲಿದೆ. ಮತ್ತೊಂದೆಡೆ ಆಸ್ಟ್ರೇಲಿಯಾ ತಿರುಗೇಟು ನೀಡುವ ಲೆಕ್ಕಾಚಾರದಲ್ಲಿದೆ. ಇದರ ನಡುವೆ ಭಾರತ ತಂಡದ ಪ್ಲೇಯಿಂಗ್ 11ನಲ್ಲಿ ಮಹತ್ವ ಬದಲಾವಣೆಯೊಂದು ಆಗಿದೆ. ಈ ಬಗ್ಗೆ ಸ್ವತಃ ನಾಯಕ ರೋಹಿತ್ ಶರ್ಮಾ ಅವರೇ ಹೇಳಿಕೆ ನೀಡಿರುವುದು ವಿಶೇಷ.
ರೋಹಿತ್ ಶರ್ಮಾ ಮೊದಲ ಟೆಸ್ಟ್ಗೆ ಅಲಭ್ಯರಾಗಿದ್ದರು. ಪತ್ನಿ ರಿತಿಕಾ ಸಜ್ದೇಹ್ ಅವರು ಎರಡನೇ ಮಗುವಿಗೆ ಜನ್ಮ ನೀಡಿದ ಹಿನ್ನೆಲೆ ರೋಹಿತ್ ಜೊತೆಗಿದ್ದರು. ಇದೀಗ ಪಿಂಕ್ ಬಾಲ್ ಟೆಸ್ಟ್ನಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಆದರೆ ಆರಂಭಿಕ ಸ್ಥಾನದ ಬದಲಿಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲಿದ್ದಾರೆ. ಅವರು ಪರ್ತ್ ಟೆಸ್ಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕೆಎಲ್ ರಾಹುಲ್ ಅವರಿಗೆ ತಮ್ಮ ಸ್ಥಾನ ತ್ಯಾಗ ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೋಹಿತ್, ಆರಂಭಿಕರಾಗಿ ಕೆಎಲ್ ರಾಹುಲ್ ಮುಂದುವರೆಯಲಿದ್ದಾರೆ. ನಾನು ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದೇನೆ ಎಂದರು.
ಟಾಪ್-5ನಲ್ಲಿ ರೋಹಿತ್ ಶರ್ಮಾ
ಮತ್ತೊಂದೆಡೆ ಪರ್ತ್ನಲ್ಲಿ ಗಾಯದಿಂದ ಚೇತರಿಸಿಕೊಂಡಿರುವ ಶುಭ್ಮನ್ ಗಿಲ್ ಸಹ ತಂಡಕ್ಕೆ ಮರಳಿದ್ದು, ತನ್ನ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಗಾಯದ ಕಾರಣ ಪರ್ತ್ ಟೆಸ್ಟ್ಗೆ ಅಲಭ್ಯರಾಗಿದ್ದ ಗಿಲ್ ಸ್ಥಾನದಲ್ಲಿ ದೇವದತ್ ಪಡಿಕ್ಕಲ್ ಕಣಕ್ಕೆ ಇಳಿದಿದ್ದರು. ಗಿಲ್ ಆಗಮನದ ಕಾರಣ ಪಡಿಕ್ಕಲ್ ಜಾಗ ಬಿಟ್ಟುಕೊಡಬೇಕಾಗಿದೆ. ಯಶಸ್ವಿ ಜೈಸ್ವಾಲ್-ಕೆಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿದರೆ, ಗಿಲ್ ಮತ್ತು ವಿರಾಟ್ ಕೊಹ್ಲಿ ಕ್ರಮವಾಗಿ 3 ಮತ್ತು 4ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ.ವ ನಾಯಕ ರೋಹಿತ್ ಶರ್ಮಾ 5ನೇ ಕ್ರಮಾಂಕದಲ್ಲಿ. ರಿಷಭ್ ಪಂತ್ 6ನೇ ಸ್ಲಾಟ್ನಲ್ಲಿ ಆಡಲಿದ್ದಾರೆ.
ಆ ಮೂಲಕ ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ನಿರ್ಮಿಸಿದೆ ಟೀಮ್ ಮ್ಯಾನೇಜ್ಮೆಂಟ್. ಮೊದಲ ಆರು ಸ್ಥಾನದವರೆಗೂ ಬ್ಯಾಟರ್ಗಳ ದಂಡೇ ಇರುವುದು ಆಸೀಸ್ ಟೀಮ್ಗೆ ಭೀತಿ ಸೃಷ್ಟಿಸಿದೆ. ಮತ್ತೊಂದೆಡೆ ನಿತೀಶ್ ಕುಮಾರ್ ರೆಡ್ಡಿ ವೇಗದ ಆಲ್ರೌಂಡರ್ ಆಗಿ ಸ್ಥಾನ ಪಡೆಯುವುದು ಖಚಿತ. ಆದರೆ ಅಡಿಲೇಡ್ಗೆ ಪಿಚ್ ವೇಗದ ಜೊತೆಗೆ ಸ್ಪಿನ್ಗೂ ನೆರವು ಆಗುವ ಕಾರಣ ವಾಷಿಂಗ್ಟನ್ ಸುಂದರ್ ಬದಲಿಗೆ ಅನುಭವಿ ರವಿಚಂದ್ರನ್ ಅಶ್ವಿನ್ ಅಥವಾ ರವೀಂದ್ರ ಜಡೇಜಾ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಹಾಗಂತ ಖಚಿತವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ.
ಉಳಿದಂತೆ ಪರ್ತ್ ಟೆಸ್ಟ್ನಲ್ಲಿ ಕಣಕ್ಕಿಳಿದ ಮೂವರು ವೇಗಿಗಳೇ ಎರಡನೇ ಟೆಸ್ಟ್ ಭಾಗವಾಗಲಿದ್ದಾರೆ. ಆರಂಭಿಕ ಟೆಸ್ಟ್ನಲ್ಲಿ ಭಾರತೀಯ ವೇಗಿಗಳು ದರ್ಬಾರ್ ನಡೆಸಿದ್ದರು. ಜಸ್ಪ್ರೀತ್ ಬುಮ್ರಾ ಪರಾಕ್ರಮ ಮೆರೆದು 8 ವಿಕೆಟ್ ಕಿತ್ತಿದ್ದರು. ಯುವ ವೇಗಿ ಹರ್ಷಿತ್ ರಾಣಾ ಕೂಡ ಮಿಂಚಿನ ದಾಳಿ ನಡೆಸಿ ಆಸೀಸ್ ಬ್ಯಾಟಿಂಗ್ ಕುಸಿತಕ್ಕೆ ಕಾರಣರಾಗಿದ್ದರು. ಮೊಹಮ್ಮದ್ ಸಿರಾಜ್ ಸಹ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಮೂವರು ಸಹ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ. ನಿತೀಶ್ ರೆಡ್ಡಿ ಸೇರಿ ನಾಲ್ವರು ವೇಗಿಗಳು ಕಣಕ್ಕಿಳಿಯಲಿದ್ದಾರೆ. ಏಕೈಕ ಸ್ಪಿನ್ನರ್ ದಾಳಿ ನಡೆಸಲಿದ್ದಾರೆ. ಆದರೆ ಅಶ್ವಿನ್, ಜಡೇಜಾ ಮರಳುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ.
ಭಾರತ ಸಂಭಾವ್ಯ ತಂಡ
ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್/ಆರ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ.