ಮತ್ತೆ ಹಳಿ ತಪ್ಪಿದ ಡೆಲ್ಲಿ ಕ್ಯಾಪಿಟಲ್ಸ್; ಗೆಲುವಿನ ಲಯಕ್ಕೆ ಮರಳಿದ ಕೆಕೆಆರ್​​ಗೆ ಪ್ಲೇಆಫ್ ಆಸೆ ಜೀವಂತ!
ಕನ್ನಡ ಸುದ್ದಿ  /  ಕ್ರಿಕೆಟ್  /  ಮತ್ತೆ ಹಳಿ ತಪ್ಪಿದ ಡೆಲ್ಲಿ ಕ್ಯಾಪಿಟಲ್ಸ್; ಗೆಲುವಿನ ಲಯಕ್ಕೆ ಮರಳಿದ ಕೆಕೆಆರ್​​ಗೆ ಪ್ಲೇಆಫ್ ಆಸೆ ಜೀವಂತ!

ಮತ್ತೆ ಹಳಿ ತಪ್ಪಿದ ಡೆಲ್ಲಿ ಕ್ಯಾಪಿಟಲ್ಸ್; ಗೆಲುವಿನ ಲಯಕ್ಕೆ ಮರಳಿದ ಕೆಕೆಆರ್​​ಗೆ ಪ್ಲೇಆಫ್ ಆಸೆ ಜೀವಂತ!

ಇಂಡಿಯನ್ ಪ್ರೀಮಿಯರ್ ಲೀಗ್​ 48ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 14 ರನ್​ಗಳ ಅಮೋಘ ಗೆಲುವು ಸಾಧಿಸಿ ಪ್ಲೇಆಫ್ ಆಸೆಯನ್ನು ಜೀವಂತವಾಗಿಟ್ಟುಕೊಂಡಿದೆ.

ಮತ್ತೆ ಹಳಿ ತಪ್ಪಿದ ಡೆಲ್ಲಿ ಕ್ಯಾಪಿಟಲ್ಸ್; ಗೆಲುವಿನ ಲಯಕ್ಕೆ ಮರಳಿದ ಕೆಕೆಆರ್​​ಗೆ ಪ್ಲೇಆಫ್ ಆಸೆ ಜೀವಂತ!
ಮತ್ತೆ ಹಳಿ ತಪ್ಪಿದ ಡೆಲ್ಲಿ ಕ್ಯಾಪಿಟಲ್ಸ್; ಗೆಲುವಿನ ಲಯಕ್ಕೆ ಮರಳಿದ ಕೆಕೆಆರ್​​ಗೆ ಪ್ಲೇಆಫ್ ಆಸೆ ಜೀವಂತ! (PTI)

ರೋಚಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಭರ್ಜರಿ ಗೆಲುವು ದಾಖಲಿಸಿದೆ. 14ನೇ ಓವರ್​​ ತನಕ ಗೆಲ್ಲುವ ಭರವಸೆ ಮೂಡಿಸಿದ್ದ ಡೆಲ್ಲಿ ಬಳಿಕ ಹಳಿ ತಪ್ಪಿತು. ಇದು ಅಕ್ಷರ್ ಪಟೇಲ್ ನೇತೃತ್ವದ ತಂಡವು ಸತತ ಎರಡನೇ ಹಾಗೂ ಒಟ್ಟಾರೆ ನಾಲ್ಕನೇ ಸೋಲು. ತವರಿನಲ್ಲಿ ಆಡಿದ 4 ಪಂದ್ಯಗಳಲ್ಲಿ ಮೂರನೇ ಸೋಲು ಇದು. ಪ್ಲೇಆಫ್​ ಸನಿಹಕ್ಕೆ ಪ್ರವೇಶಿಸಲು ಉಳಿದ 4ರಲ್ಲಿ ಇನ್ನೂ ಎರಡು ಗೆಲುವು ಸಾಧಿಸುವುದು ಅನಿವಾರ್ಯ. 14 ರನ್ನಿಂದ ಜಯಿಸಿದ ಕೆಕೆಆರ್​ ಪ್ಲೇಆಫ್ ಆಸೆ ಜೀವಂತವಾಗಿದೆ. ಹಾಲಿ ಚಾಂಪಿಯನ್​ಗೆ ಇದು ನಾಲ್ಕನೇ ಗೆಲುವು. ಹಾಲಿ ಚಾಂಪಿಯನ್ ಮುಂದಿರುವ ಗುರಿ ನಾಲ್ಕರಲ್ಲಿ ನಾಲ್ಕನ್ನೂ ಗೆಲ್ಲಬೇಕು.

205 ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ ತಂಡವು ನರೈನ್ (3/29) ಮತ್ತು ಚಕ್ರವರ್ತಿ (2/39) ಅವರ ಸ್ವಿಂಗ್ ಬೌಲಿಂಗ್​ಗೆ ತತ್ತರಿಸಿ 9 ವಿಕೆಟ್‌ಗಳಿಗೆ 190 ರನ್ ಗಳಿಸಲಷ್ಟೇ ಶಕ್ತವಾಯಿತು. ಫಾಫ್ ಡು ಪ್ಲೆಸಿಸ್ (62 ರನ್, 45 ಎಸೆತ, 7 ಬೌಂಡರಿ, 2 ಸಿಕ್ಸರ್‌) ಅರ್ಧಶತಕ ಮತ್ತು ನಾಯಕ ಅಕ್ಷರ್ ಪಟೇಲ್ (43 ರನ್, 23 ಎಸೆತ, 4 ಬೌಂಡರಿ, 3 ಸಿಕ್ಸರ್‌) ಅವರ 4ನೇ ವಿಕೆಟ್‌ಗೆ 76 ರನ್‌ಗಳ ಪಾಲುದಾರಿಕೆಯ ಹೊರತಾಗಿಯೂ ಜಯದ ಗೆರೆ ಮುಟ್ಟುವಲ್ಲಿ ವಿಫಲವಾಯಿತು. ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಕೆಕೆಆರ್, 20 ಓವರ್​​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿತು. ಯಾರೂ​ ಫಿಫ್ಟಿ ಬಾರಿಸದಿದ್ದರೂ ಐವರು 25 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದರು.

ಫಾಫ್, ಅಕ್ಷರ್ ಅದ್ಭುತ ಹೋರಾಟ ವ್ಯರ್ಥ

ಬೃಹತ್ ಗುರಿ ಬೆನ್ನಟ್ಟುವಾಗ ಮೊದಲ ಓವರ್​​ನ 2ನೇ ಎಸೆತದಲ್ಲೇ ಅಭಿಷೇಕ್ ಪೊರೆಲ್ (4) ಔಟಾದರು. ಬಳಿಕ ಕರುಣ್ ನಾಯರ್ (15) ಮತ್ತು ಕೆಎಲ್ ರಾಹುಲ್ (7) ಮತ್ತೆ ನಿರಾಸೆ ಮೂಡಿಸಿದರು. ಈ ಹಂತದಲ್ಲಿ ಜೊತೆಯಾದ ಫಾಫ್ ಡು ಪ್ಲೆಸಿಸ್ ಮತ್ತು ನಾಯಕ ಅಕ್ಷರ್ ಪಟೇಲ್ 4ನೇ ವಿಕೆಟ್​ಗೆ 76 ರನ್​​ ಸೇರಿಸಿದರು. ಇದು ಗೆಲುವಿನ ಭರವಸೆ ಹೆಚ್ಚಿಸಿತ್ತು. ಅಕ್ಷರ್​ ಕೂಡ ಗುಡ್​ ಟಚ್​​ನಲ್ಲಿದ್ದರು. ಕೆಕೆಆರ್ ಬೌಲರ್​ಗಳಿಗೆ ಬೆಂಡೆತ್ತುತ್ತಿದ್ದರು. ಆದರೆ ಸುನಿಲ್ ನರೈನ್ ಈ ಉತ್ತಮ ಜೊತೆಯಾಟವನ್ನು ಬೇರ್ಪಡಿಸಿದರು. ಅಕ್ಷರ್​ 43 ರನ್​ಗೆ ವಿಕೆಟ್ ಒಪ್ಪಿಸಿದರೆ, ಫಾಫ್ 62 ರನ್ ಗಳಿಸಿದ್ದಾಗ ಹೊರ ನಡೆದರು.

ಬಳಿಕ ಟ್ರಿಸ್ಟಾನ್ ಸ್ಟಬ್ಸ್ 1, ಅಶುತೋಶ್ ಶರ್ಮಾ 7 ರನ್ ಗಳಿಸಿ ನಿರ್ಗಮಿಸಿದರೆ, ವಿಪ್ರಜ್ ನಿಗಮ್ ಕೊನೆಯಲ್ಲಿ ಏಕಾಂಗಿ ಹೋರಾಟಕ್ಕೆ ಕೈ ಹಾಕಿದರು. ಆದರೆ ಅದು ಸಾಧ್ಯವಾಗಲಿಲ್ಲ. 19 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಸಹಿತ 38 ರನ್ ಗಳಿಸಿದರು. ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ. ಸುನಿಲ್ ನರೈನ್ 3, ವರುಣ್ ಚಕ್ರವರ್ತಿ 2, ಅನುಕೂಲ್ ರಾಯ್, ಆಂಡ್ರೆ ರಸೆಲ್, ವೈಭವ್ ಅರೋರಾ ತಲಾ 1 ವಿಕೆಟ್ ಪಡೆದರು.

ಕೆಕೆಆರ್ ಪರ ಐವರು 25+ ಸ್ಕೋರ್

ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್​ ಉತ್ತಮ ಆರಂಭ ಪಡೆಯಿತು. ಮೊದಲ 3 ಓವರ್​​ಗಳಲ್ಲೇ 1 ವಿಕೆಟ್ ನಷ್ಟಕ್ಕೆ 48 ರನ್ ಗಳಿಸಿತು. ರೆಹಮಾನುಲ್ಲಾ ಗುರ್ಬಾಜ್ 26 ರನ್ ಸಿಡಿಸಿ ನಿರ್ಗಮಿಸಿದರು. ಒಟ್ಟಾರೆ ಪವರ್​​ಪ್ಲೇನಲ್ಲಿ 79 ರನ್ ಹರಿದುಬಂತು. ಇದರ ನಂತರ ಸುನಿಲ್ ನರೈನ್ (27) ಮತ್ತು ಅಜಿಂಕ್ಯ ರಹಾನೆ (26) ಅವರು ವಿಪ್ರಜ್ ನಿಗಮ್ ಮತ್ತು ಅಕ್ಷರ್ ಪಟೇಲ್ ಬೌಲಿಂಗ್​​ನಲ್ಲಿ ನಿರ್ಗಮಿಸಿದರು. ಆಂಗ್​ಕ್ರಿಷ್ ರಘುವಂಶಿ (44) ಮತ್ತು ರಿಂಕು ಸಿಂಗ್ (36) ತಂಡಕ್ಕೆ ಮತ್ತೆ ಆಸರೆಯಾದರು. 5ನೇ ವಿಕೆಟ್​ಗೆ 61 ರನ್ ಸೇರಿಸಿದರು. ಇದರ ಮಧ್ಯೆ ವೆಂಕಟೇಶ್ ಅಯ್ಯರ್ ಮತ್ತೆ ನಿರಾಸೆ ಮೂಡಿಸಿದರು. ಕೊನೆಯಲ್ಲಿ ಆಂಡ್ರೆ ರಸೆಲ್ 17 ರನ್ ಗಳಿಸಿದರೆ, ಪೊವೆಲ್ 5 ರನ್ ಗಳಿಸಿದರು. ಡೆಲ್ಲಿ ಪರ ಮಿಚೆಲ್ ಸ್ಟಾರ್ಕ್ 3, ವಿಪ್ರಜ್ ನಿಗಮ್, ಅಕ್ಷರ್ ತಲಾ 2 ವಿಕೆಟ್ ಕಿತ್ತರು.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.