ಕನ್ನಡ ಸುದ್ದಿ  /  Cricket  /  Kolkata Knight Riders Crush Delhi Capitals By 106 Runs For Third Successive Win In The Season Sunil Narine Russell Prs

ಬೃಹತ್ ಅಂತರದ ಗೆಲುವು ದಾಖಲಿಸಿದ ಕೆಕೆಆರ್​; ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮೂರನೇ ಸೋಲು, ಕೊಲ್ಕತ್ತಾಗೆ ಹ್ಯಾಟ್ರಿಕ್ ಜಯ

Delhi Capitals vs Kolkata Knight Riders : ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಬೃಹತ್ ಅಂತರದ ಗೆಲುವು ಸಾಧಿಸಿದ ಕೋಲ್ಕತ್ತಾ ನೈಟ್​ ರೈಡರ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಬೃಹತ್ ಅಂತರದ ಗೆಲುವು ದಾಖಲಿಸಿದ ಕೆಕೆಆರ್
ಬೃಹತ್ ಅಂತರದ ಗೆಲುವು ದಾಖಲಿಸಿದ ಕೆಕೆಆರ್ (PTI)

17ನೇ ಆವೃತ್ತಿಯ ಐಪಿಎಲ್​ನಲ್ಲಿ ಅಬ್ಬರ ಮುಂದುವರೆಸಿದ ಕೋಲ್ಕತ್ತಾ ನೈಟ್​ ರೈಡರ್ಸ್ ಹ್ಯಾಟ್ರಿಕ್ ಗೆಲುವು ದಾಖಲಿಸಿತು. ಮತ್ತೊಂದೆಡೆ ಕಳೆದ ಪಂದ್ಯದಲ್ಲಿ ಜಯದೊಂದಿಗೆ ಲಯಕ್ಕೆ ಮರಳಿದ ಡೆಲ್ಲಿ ಕ್ಯಾಪಿಟಲ್ಸ್​, ಈಗ ಮತ್ತೆ ಹಳಿ ತಪ್ಪಿತು. ಇದರೊಂದಿಗೆ ಟೂರ್ನಿಯಲ್ಲಿ 3ನೇ ಸೋಲಿಗೆ ಶರಣಾಯಿತು. ತನ್ನ ತವರಿನ ಮೈದಾನವಾದ ವಿಶಾಖಪಟ್ಟಣದ ಡಾ. ವೈಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಜರುಗಿದ ಈ ಪಂದ್ಯದಲ್ಲಿ ರಿಷಭ್ ಪಂತ್ ನೇತೃತ್ವದ ತಂಡ 106 ರನ್​​ಗಳಿಂದ ಮುಗ್ಗರಿಸಿತು.

ಆಲ್​ರೌಂಡ್ ಆಟ ಪ್ರದರ್ಶಿಸಿದ ಕೆಕೆಆರ್​ ಬೃಹತ್ ಅಂತರದ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. 3 ಸೋಲು ಅನುಭವಿಸಿದ ಡೆಲ್ಲಿ, 9 ಸ್ಥಾನಕ್ಕೆ ಕುಸಿದಿದೆ. ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್​, ಸುನಿಲ್ ನರೇನ್ (85), ಆಂಗ್​ಕ್ರಿಶ್ ರಘುವಂಶಿ (54), ಆಂಡ್ರೆ ರಸೆಲ್ (41) ಸಿಡಿಲಾರ್ಭಟದ ಬ್ಯಾಟಿಂಗ್​​ನಿಂದ ಕೆಕೆಆರ್​ 20 ಓವರ್​​ಗಳಲ್ಲಿ 7 ವಿಕೆಟ್​ಗೆ 272 ರನ್ ಗಳಿಸಿತು. ಈ ಮಹಾ ಪರ್ವತವನ್ನು ಪುಡಿಗಟ್ಟಲು ಪ್ರಯತ್ನಿಸಿದ ರಿಷಭ್ ಪಂತ್, ಟ್ರಿಸ್ಟಾನ್ ಸ್ಟಬ್ಸ್ ಅವರ ಅರ್ಧಶತಕಗಳ ಹೊರತಾಗಿಯೂ ಡೆಲ್ಲಿ 166 ರನ್​ಗಳಿಗೆ ಸುಸ್ತಾಯಿತು.

ಪಂತ್-ಸ್ಟಬ್ಸ್ ಹೋರಾಟ

272 ರನ್​ಗಳ ಕೋಟೆಯನ್ನು ಬೆನ್ನಟ್ಟಿದ ಡೆಲ್ಲಿ ಆರಂಭದಲ್ಲೇ ತೀವ್ರ ಆಘಾತಕ್ಕೆ ಒಳಗಾಯಿತು. 27 ರನ್​ಗಳ ಅಂತರದಲ್ಲೇ 4 ವಿಕೆಟ್​​ಗಳನ್ನು ಕಳೆದುಕೊಂಡು ಇಕ್ಕಟ್ಟಿಗೆ ಸಿಲುಕಿತು. ಪೃಥ್ವಿ ಶಾ (18), ಡೇವಿಡ್ ವಾರ್ನರ್ (10), ಮಿಚೆಲ್ ಮಾರ್ಷ್ (0), ಅಭಿಷೇಕ್ ಪೊರೆಲ್ (0) ಬೇಗನೇ ಔಟಾದರು. ವೈಭವ್ ಆರೋರಾ ಮತ್ತು 24.75 ಕೋಟಿ ರೂಪಾಯಿ ಒಡೆಯ ಮಿಚೆಲ್ ಸ್ಟಾರ್ಕ್ ತಲಾ ಎರಡು ವಿಕೆಟ್ ಕಿತ್ತರು. ಆ ವೇಳೆ ಜೊತೆಯಾದ ರಿಷಭ್ ಮತ್ತು ಸ್ಟಬ್ಸ್ 99 ರನ್​ಗಳ ಪಾಲುದಾರಿಕೆ ನೀಡಿದರು. ಆದರೆ ಗೆಲುವು ಸಾಧ್ಯವಾಗಲಿಲ್ಲ.

ರಿಷಭ್ 55 ಮತ್ತು ಸ್ಟಬ್ಸ್ 54 ರನ್ ಗಳಿಸಿ ಗಮನ ಸೆಳೆದರು. ಉಳಿದರೆ ಅಕ್ಷರ್​ ಪಟೇಲ್ (0), ಸಮಿತ್ ಕುಮಾರ್​ (7), ರಸಿಕ್ ದಾರ್ (1), ಆನ್ರಿಚ್ ನೋಕಿಯಾ (4) ಎಲ್ಲರೂ ಒಂದಂಕಿಗೆ ಔಟಾದರು. ಮಧ್ಯಮ ಓವರ್​​ಗಳಲ್ಲಿ ವರುಣ್ ಚಕ್ರವರ್ತಿ 3 ವಿಕೆಟ್ ಪಡೆದು ಡೆಲ್ಲಿ ಕುಸಿತಕ್ಕೆ ಕಾರಣರಾದರು. ಮಿಚೆಲ್ ಸ್ಟಾರ್ಕ್ 2, ಆರೋರಾ 3, ಆ್ಯಂಡ್ರೆ ರಸೆಲ್ ಮತ್ತು ಸುನಿಲ್ ನರೇನ್ ತಲಾ 1 ವಿಕೆಟ್ ಪಡೆದರು. ಡೆಲ್ಲಿ 17.2 ಓವರ್​​ಗಳಲ್ಲಿ 166 ರನ್​ಗಳಿಗೆ ಸರ್ವಪತನ ಕಂಡಿತು.

ಆರ್ಭಟಿಸಿದ ಕೆಕೆಆರ್

ಮೊದಲು ಬ್ಯಾಟಿಂಗ್​ ನಡೆಸಿದ ಕೆಕೆಆರ್​, ಅಬ್ಬರಿಸಿ ಬೊಬ್ಬಿರಿಯಿತು. ಆರಂಭಿಕರಾಗಿ ಕಣಕ್ಕಿಳಿದ ಫಿಲ್ ಸಾಲ್ಟ್ 18 ರನ್ ಗಳಿಗೆ ಆಟ ಮುಗಿಸಿದರೆ, ಸುನಿಲ್ ನರೇನ್ ಮತ್ತು ಆಂಗ್ಕ್ರಿಶ್ ರಘುವಂಶಿ ಎರಡನೇ ವಿಕೆಟ್​ಗೆ 104 ರನ್​ಗಳ ಜೊತೆಯಾಟವಾಡಿದರು. ಮೊದಲ ವಿಕೆಟ್​ಗೂ 60 ರನ್​ಗಳು ಹರಿದು ಬಂದಿದ್ದವು. ಈ ಜೋಡಿ ಸಿಕ್ಸರ್​ ಸುರಿಮಳೆಗೈದಿತು. ನರೇನ್ 39 ಎಸೆತಗಳಲ್ಲಿ 7 ಸಿಕ್ಸರ್, 7 ಬೌಂಡರಿ ಸಹಿತ 85 ರನ್ ಗಳಿಸಿದರು.

 ರಘುವಂಶಿ 27 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್​ ಸಹಿತ 54 ರನ್ ಗಳಿಸಿದರು. ಕೊನೆಯಲ್ಲಿ ಆಂಡ್ರೆ ರಸೆಲ್ (41) ಮತ್ತು ರಿಂಕು ಸಿಂಗ್ (26) ತಂಡದ ಮೊತ್ತವನ್ನು 250+ ರ ಗಡಿ ದಾಟಿಸಲು ನೆರವಾದರು. ಶ್ರೇಯಸ್ ಅಯ್ಯರ್ 18, ವೆಂಕಟೇಶ್ ಅಯ್ಯರ್ 5*, ರಮಣ್​ದೀಪ್ ಸಿಂಗ್ 2 ರನ್ ಗಳಿಸಿದರು. ಇದರೊಂದಿಗೆ ತಂಡದ ಮೊತ್ತ 20 ಓವರ್​​ಗಳಲ್ಲಿ 272 ರನ್ ಗಳಿಸಲು ನೆರವಾಯಿತು. 

IPL_Entry_Point