ಕನ್ನಡ ಸುದ್ದಿ  /  ಕ್ರಿಕೆಟ್  /  ಫಿಲ್ ಸಾಲ್ಟ್, ಶ್ರೇಯಸ್ ಅಯ್ಯರ್ ಶತಕದ ಜೊತೆಯಾಟ; ಐಪಿಎಲ್ ಇತಿಹಾಸದಲ್ಲೇ ಲಕ್ನೋ ವಿರುದ್ಧ ಮೊದಲ ಗೆಲುವು ದಾಖಲಿಸಿದ ಕೆಕೆಆರ್

ಫಿಲ್ ಸಾಲ್ಟ್, ಶ್ರೇಯಸ್ ಅಯ್ಯರ್ ಶತಕದ ಜೊತೆಯಾಟ; ಐಪಿಎಲ್ ಇತಿಹಾಸದಲ್ಲೇ ಲಕ್ನೋ ವಿರುದ್ಧ ಮೊದಲ ಗೆಲುವು ದಾಖಲಿಸಿದ ಕೆಕೆಆರ್

KKR vs LSG: ಕೋಲ್ಕತ್ತಾದಲ್ಲಿ ನಡೆದ ಐಪಿಎಲ್‌ 2024ರ ಪಂದ್ಯದಲ್ಲಿ ಲಕ್ನೋ ವಿರುದ್ಧ ಕೆಕೆಆರ್‌ ತಂಡ ಭರ್ಜರಿ ಜಯ ಸಾಧಿಸಿದೆ. ಟೂರ್ನಿಯಲ್ಲಿ ನಾಲ್ಕನೇ ಗೆಲುವು ಒಲಿಸಿಕೊಂಡ ತಂಡವು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಭದ್ರವಾಗಿದೆ.

ಐಪಿಎಲ್ ಇತಿಹಾಸದಲ್ಲೇ ಲಕ್ನೋ ವಿರುದ್ಧ ಮೊದಲ ಗೆಲುವು ದಾಖಲಿಸಿದ ಕೆಕೆಆರ್
ಐಪಿಎಲ್ ಇತಿಹಾಸದಲ್ಲೇ ಲಕ್ನೋ ವಿರುದ್ಧ ಮೊದಲ ಗೆಲುವು ದಾಖಲಿಸಿದ ಕೆಕೆಆರ್ (PTI)

ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ ಕೋಲ್ಕತ್ತಾ ನೈಟ್‌ ರೈಡರ್ಸ್‌ (LSG vs KKR) ತಂಡವು ಚೊಚ್ಚಲ ಗೆಲುವು ದಾಖಲಿಸಿದೆ. ಈವರೆಗೆ ಕೆಕೆಆರ್‌ ವಿರುದ್ಧ ಅಜೇಯ ಗೆಲುವಿನ ದಾಖಲೆ ಹೊಂದಿದ್ದ ಎಲ್‌ಎಸ್‌ಜಿ, ಐಪಿಎಲ್‌ ಇತಿಹಾಸದಲ್ಲೇ ಮೊದಲ ಸೋಲು ಕಂಡಿದೆ. ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ, ಫಿಲ್ ಸಾಲ್ಟ್‌ ಹಾಗೂ ನಾಯಕ ಶ್ರೇಯಸ್‌ ಅಯ್ಯರ್‌ ಆಕರ್ಷಕ ಶತಕದ ಜೊತೆಯಾಟದ ನೆರವಿಂದ, ಆತಿಥೇಯ ತಂಡ 8 ವಿಕೆಟ್‌ಗಳಿಂದ ಗೆದ್ದು ಬೀಗಿದೆ. ಅಜೇಯ 89 ರನ್ ಸಿಡಿಸಿದ ಆರಂಭಿಕ ಆಟಗಾರ ಫಿಲ್‌ ಸಾಲ್ಟ್‌ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ, 7 ವಿಕೆಟ್ ಕಳೆದುಕೊಂಡು 161 ರನ್‌ ಗಳಿಸಿತು. ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಕೋಲ್ಕತ್ತಾ, ಕೇವಲ 15.4 ಓವರ್‌ಗಳಲ್ಲಿ 2 ವಿಕೆಟ್‌ ಮಾತ್ರವೇ ಕಳೆದುಕೊಂಡು 162 ರನ್‌ ಗಳಿಸಿ ಗುರಿ ತಲುಪಿತು.

ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿದ ಲಕ್ನೋಗೆ ಉತ್ತಮ ಆರಂಭ ಸಿಗಲಿಲ್ಲ. ಭರವಸೆಯ ಬ್ಯಾಟರ್ ಕ್ವಿಂಟನ್ ಡಿಕಾಕ್ ಕೇವಲ 10 ರನ್‌ ಗಳಿಸಿ ವೈಭವ್‌ಗೆ ವಿಕೆಟ್‌ ಒಪ್ಪಿಸಿದರು. ಪಡಿಕ್ಕಲ್‌ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ ದೀಪಕ್‌ ಹೂಡಾ ಮತ್ತೆ ವಿಫಲರಾದರು. ಕೇವಲ 8 ರನ್‌ ಗಳಿಸಿದ ಔಟಾದರು. ನಾಯಕನಾಟವಾಡಿದ ಕನ್ನಡಿಗ ಕೆಎಲ್‌ ರಾಹುಲ್‌ 39 ರನ್‌ ಗಳಿಸಿದ್ದಾಗ ರಸೆಲ್‌ ಎಸೆತದಲ್ಲಿ ಕ್ಯಾಚ್‌ ನೀಡಿ ನಿರ್ಗಮಿಸಿದರು. ಸ್ಟೋಯ್ನಿಸ್‌ ಆಟ ಕೂಡಾ 10 ರನ್‌ಗಳಿಗೆ ಅಂತ್ಯವಾಯ್ತು.

ಇದನ್ನೂ ಓದಿ | ಮಾಂಟೆ ಕಾರ್ಲೊ ಮಾಸ್ಟರ್ಸ್ ಸೆಮಿಫೈನಲ್: 6ನೇ ಪ್ರಯತ್ನದಲ್ಲಿ ವಿಶ್ವದ ನಂಬರ್ 1 ಆಟಗಾರ ಜೊಕೊವಿಕ್ ಸೋಲಿಸಿದ ಕ್ಯಾಸ್ಪರ್ ರುಡ್

ಕಳೆದ ಪಂದ್ಯದಂತೆ ಅಬ್ಬರಿಸುವ ಸೂಚನೆ ನೀಡಿದ ಆಯುಷ್‌ ಬದೋನಿ ಆಟ 29 ರನ್‌ಗಳಿಗೆ ಅಂತ್ಯವಾಯ್ತು. ಅಬ್ಬರದ ಆಟವಾಡಿದ ನಿಕೋಲಸ್‌ ಪೂರನ್‌, 32 ಎಸೆತಗಳಲ್ಲಿ 4 ಸಿಕ್ಸರ್‌ ಸಹಿತ 45 ರನ್‌ ಕಲೆ ಹಾಕಿದರು. ಡೆತ್‌ ಓವರ್‌ಗಳಲ್ಲಿ ತಂಡದಿಂದ ಹೆಚ್ಚಿನ ಅಬ್ಬರ ತೋರಲು ಸಾಧ್ಯವಾಗಲಿಲ್ಲ. ಹೀಗಾಗಿ ಅಂತಿಮವಾಗಿ 161 ರನ್‌ ಒಟ್ಟುಗೂಡಿಸಿತು.

ಅಯ್ಯರ್-ಸಾಲ್ಟ್‌ ಅಜೇಯ ಆಟ

162 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಕೆಕೆಆರ್‌, 6 ರನ್‌ ಗಳಿಸಿದ ಸುನಿಲ್‌ ನರೈನ್‌ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಅವರ ಬೆನ್ನಲ್ಲೇ ರಘುವಂಶಿ ಕೂಡಾ ಕೇವಲ 7 ರನ್‌ಗಳಿಗೆ ಔಟಾದರು. ಇಬ್ಬರೂ ಆಟಗಾರರು ಒಂದಂಕಿ ಮೊತ್ತಕ್ಕೆ ಔಟಾದ ಬಳಿಕ, ನಾಯಕ ಶ್ರೇಯಸ್‌ ಅಯ್ಯರ್‌ ಮತ್ತು ಫಿಲ್‌ ಸಾಲ್ಟ್‌ ಒಂದಾದರು.‌ ಸ್ಫೋಟಕ ಆಟವಾಡಿದ ಈ ಜೋಡಿಯಿಂದ ಶತಕದ ಜೊತೆಯಾಟ ಬಂತು.

47 ಎಸೆತ ಎದುರಿಸಿದ ಸಾಲ್ಟ್‌, 14 ಆಕರ್ಷಕ ಬೌಂಡರಿ ಹಾಗೂ 3 ಸಿಕ್ಸರ್‌ ಸಹಿತ 89 ರನ್‌ ಸಿಡಿಸಿ ಅಜೇಯರಾಗಿ ಉಳಿದರು. ಅಲ್ಲದೆ ಬೌಂಡರಿ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಇವರಿಗೆ ಉತ್ತಮ ಸಾಥ್‌ ನೀಡಿದ ಶ್ರೇಯಸ್‌ ಅಯ್ಯರ್‌ ಎಸೆತಕ್ಕೊಂದರಂತೆ 38 ರನ್‌ ಕಲೆ ಹಾಕಿದರು.

ಟೂರ್ನಿಯಲ್ಲಿ ಈವರೆಗೆ ಆಡಿದ ಐದು ಪಂದ್ಯಗಳಲ್ಲಿ ನಾಲ್ಕನೇ ಗೆಲುವು ಒಲಿಸಿಕೊಂಡ ಕೆಕೆಆರ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಭದ್ರವಾಗಿದೆ.‌ ಅತ್ತ ಕೆಎಲ್‌ ರಾಹುಲ್‌ ಬಳಗವು ಆಡಿದ ಆರು ಪಂದ್ಯಗಳಲ್ಲಿ ಮೂರನೇ ಸೋಲು ಕಂಡಿದೆ. 

IPL_Entry_Point