ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್ ಇತಿಹಾಸದ ಪುಸ್ತಕದಲ್ಲಿ ತಮ್ಮದೇ ಪುಟ ತೆರೆಯಲು ಕೆಕೆಆರ್​-ಎಸ್​ಆರ್​ಹೆಚ್ ಸಿದ್ಧ; 2 ತಿಂಗಳ ನಿರಂತರ ಮನರಂಜನೆಗೆ ಇವತ್ತೇ ತೆರೆ!

ಐಪಿಎಲ್ ಇತಿಹಾಸದ ಪುಸ್ತಕದಲ್ಲಿ ತಮ್ಮದೇ ಪುಟ ತೆರೆಯಲು ಕೆಕೆಆರ್​-ಎಸ್​ಆರ್​ಹೆಚ್ ಸಿದ್ಧ; 2 ತಿಂಗಳ ನಿರಂತರ ಮನರಂಜನೆಗೆ ಇವತ್ತೇ ತೆರೆ!

KKR vs SRH IPL 2024 Final : 17ನೇ ಆವೃತ್ತಿಯ ಐಪಿಎಲ್​ನ ಕೊನೆಯ ದಿನಕ್ಕೆ ನಾವು ಕಾಲಿಟ್ಟಿದ್ದೇವೆ. ಪ್ರಶಸ್ತಿ ಸುತ್ತಿನ ಸಮರದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ vs ಸನ್​ರೈಸರ್ಸ್​ ಹೈದರಾಬಾದ್ ತಂಡಗಳು ಕಾದಾಟ ನಡೆಸಲಿವೆ.

ಐಪಿಎಲ್ ಇತಿಹಾಸದ ಪುಸ್ತಕದಲ್ಲಿ ತಮ್ಮದೇ ಪುಟ ತೆರೆಯಲು ಕೆಕೆಆರ್​-ಎಸ್​ಆರ್​ಹೆಚ್ ಸಿದ್ಧ; 2 ತಿಂಗಳ ನಿರಂತರ ಮನರಂಜನೆಗೆ ಇವತ್ತೇ ತೆರೆ!
ಐಪಿಎಲ್ ಇತಿಹಾಸದ ಪುಸ್ತಕದಲ್ಲಿ ತಮ್ಮದೇ ಪುಟ ತೆರೆಯಲು ಕೆಕೆಆರ್​-ಎಸ್​ಆರ್​ಹೆಚ್ ಸಿದ್ಧ; 2 ತಿಂಗಳ ನಿರಂತರ ಮನರಂಜನೆಗೆ ಇವತ್ತೇ ತೆರೆ!

KKR vs SRH IPL 2024 Final: ಕ್ವಾಲಿಫೈಯರ್ 1ರಲ್ಲಿ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ಗೆದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸೋತರೂ ಮತ್ತೊಂದು ಅವಕಾಶ ಪಡೆದಿದ್ದ ಎಸ್​ಆರ್​​ಹೆಚ್, ಎರಡನೇ ಕ್ವಾಲಿಫೈಯರ್​​​ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಪರಾಭವಗೊಳಿಸಿ 17ನೇ ಆವೃತ್ತಿಯ ಐಪಿಎಲ್ ಫೈನಲ್​ಗೇರಿದ್ದು, ಮತ್ತೊಂದು ಟ್ರೋಫಿ ಕನಸಿನಲ್ಲಿವೆ. ಈ ಬಾರಿಯೂ ಹಿಂದೆ ಟ್ರೋಫಿ ಗೆದ್ದ ತಂಡಗಳ ನಡುವೆಯೇ ಪೈಪೋಟಿ ಏರ್ಪಟ್ಟಿದೆ. ಕೆಕೆಆರ್​ ಮೂರನೇ ಟ್ರೋಫಿ ಕಣ್ಣಿಟ್ಟಿದ್ದರೆ, ಎಸ್​ಆರ್​ಹೆಚ್ ಎರಡನೇ ಚಾಂಪಿಯನ್​ ಆಗುವ ಭರವಸೆ ಇಟ್ಟುಕೊಂಡಿದೆ. 2 ತಿಂಗಳ ಕಾಲ ನಿರಂತರ ಮನರಂಜನೆಯ ರಸದೌತಣ ಉಣಬಡಿಸಿದ್ದ ಮಿಲಿಯನ್ ಡಾಲರ್ ಟೂರ್ನಿಗೆ ಇವತ್ತೇ ತೆರೆ ಬೀಳಲಿದೆ.

ಟ್ರೆಂಡಿಂಗ್​ ಸುದ್ದಿ

2024ರ ಐಪಿಎಲ್​​ ಗುಂಪು ಹಂತದಲ್ಲಿ ಅಬ್ಬರಿಸಿದ್ದ ಉಭಯ ತಂಡಗಳೇ ಹಸಿರು ಅಖಾಡದಲ್ಲಿ ಟ್ರೋಫಿ ಗೆಲ್ಲುವ ಮಹಾಯುದ್ಧಕ್ಕೆ ರಣಕಹಳೆ ಮೊಳಗಿಸಿವೆ. ಐಪಿಎಲ್ ಇತಿಹಾಸದಲ್ಲಿ ಎರಡೂ ತಂಡಗಳು ಇದೇ ಮೊದಲ ಬಾರಿಗೆ ಫೈನಲ್​ನಲ್ಲಿ ಮುಖಾಮುಖಿಯಾಗುತ್ತಿವೆ. ಚೆನ್ನೈನ ಎಂಎ ಚಿದಂಬರಂ ಕ್ರಿಕೆಟ್​ ಮೈದಾನವು ಈ ಹೈವೋಲ್ಟೇಜ್ ಕದನಕ್ಕೆ ಸಾಕ್ಷಿಯಾಗಲಿದೆ. ಐಪಿಎಲ್​ನಲ್ಲಿ 2 ತಂಡಗಳನ್ನು ಫೈನಲ್​ಗೇರಿಸಿದ ಮೊದಲ ನಾಯಕ ಎನಿಸಿಕೊಂಡ ಶ್ರೇಯಸ್ ಅಯ್ಯರ್ ಮತ್ತು ಡಬ್ಲ್ಯುಟಿಸಿ-ಏಕದಿನ ವಿಶ್ವಕಪ್ ಗೆದ್ದಿರುವ ಪ್ಯಾಟ್ ಕಮಿನ್ಸ್​​ ನಡುವಿನ ಕಾದಾಟ ಜಿದ್ದಾಜಿದ್ದಿನ ಪೈಪೋಟಿಯನ್ನು ನಿರೀಕ್ಷಿಸುವಂತೆ ಮಾಡಿದೆ.

ಅಂಕಪಟ್ಟಿಯಲ್ಲಿ ಅಗ್ರಸ್ಥಾನಿ ಕೆಕೆಆರ್​, 14 ಪಂದ್ಯಗಳಲ್ಲಿ 9 ಗೆಲುವು, 3 ಸೋಲಿನೊಂದಿಗೆ 20 ಅಂಕ (2 ಪಂದ್ಯ ರದ್ದು) ಪಡೆದಿತ್ತು. ಮತ್ತೊಂದೆಡೆ ಎಸ್​ಆರ್​ಹೆಚ್​ 14ರಲ್ಲಿ 8 ಗೆಲುವು, ಐದು ಸೋಲಿನೊಂದಿಗೆ 17 ಅಂಕ (ಒಂದು ಪಂದ್ಯ ರದ್ದು) ಪಡೆದು 2ನೇ ಸ್ಥಾನದಲ್ಲಿತ್ತು. ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಆರ್​ಆರ್​ ಎದುರು ಸೋತು ನಾಲ್ಕನೇ ತೃಪ್ತಿಪಟ್ಟುಕೊಂಡರೆ, ಎಸ್​ಆರ್​ಹೆಚ್​ ವಿರುದ್ಧ ರಾಜಸ್ಥಾನ್ ಸೋತು ಮೂರನೇ ಸ್ಥಾನಕ್ಕೆ ಅಭಿಯಾನ ಮುಗಿಸಿತು. ಈಗ ಚಾಂಪಿಯನ್ ಮತ್ತು ರನ್ನರ್​ಸ್ಥಾನಗಳು ಮಾತ್ರ ಬಾಕಿ ಉಳಿದಿವೆ. ಯಾವುದೇ ತಂಡ ಗೆದ್ದರೂ ಐಪಿಎಲ್ ಇತಿಹಾಸದ ಪುಸ್ತಕದಲ್ಲಿ ಹೊಸ ಪುಟ ತೆರೆಯಲಿದೆ. ಉಭಯ ತಂಡಗಳ ಬಲಾಬಲ ಹೇಗಿದೆ ಎಂಬುದನ್ನು ಈ ಮುಂದೆ ನೋಡೋಣ.

ಕೆಕೆಆರ್​ ಆಲ್​ರೌಂಡ್ ಆಟ

ಐಪಿಎಲ್​ ಆರಂಭದಿಂದ ಫೈನಲ್​ವರೆಗೆ ಕೋಲ್ಕತ್ತಾ, ಅತ್ಯುತ್ತಮ ಪ್ರದರ್ಶನ ತೋರಿದೆ. ಆಟಗಾರರ ಸಾಂಘಿಕ ಪ್ರದರ್ಶನ, ಕೋಚ್​ಗಳ ಗೇಮ್​​ ಪ್ಲಾನ್ಸ್, ತಂತ್ರಗಳನ್ನು ಮೈದಾನದಲ್ಲಿ ಅಚ್ಚುಕಟ್ಟಾಗಿ ಕಾರ್ಯಗತಗೊಳಿಸಿದ ಪರಿಣಾಮ ತಂಡವು ಯಶಸ್ಸು ಸಾಧಿಸಲು ಸಾಧ್ಯವಾಯಿತು. ಆರಂಭಿಕನಾಗಿ ಬಿರುಗಾಳಿ ಎಬ್ಬಿಸುತ್ತಿದ್ದ ಫಿಲ್ ಸಾಲ್ಟ್ ಅಲಭ್ಯತೆ ತಂಡಕ್ಕೆ ಕಾಡುತ್ತಿದೆ. ಹೀಗಾಗಿ ತನ್ನ ಜೋಡಿ ಹೊರ ಹೋದ ನಂತರ ಸುನಿಲ್ ನರೇನ್​ ಕೂಡ ಡಲ್ ಆಗಿದ್ದಾರೆ. ಸ್ಪೆಷಲಿಸ್ಟ್ ಸ್ಪಿನ್ನರ್​ಗಳೇ ತಂಡದ ಮ್ಯಾಚ್ ವಿನ್ನರ್​ಗಳಾಗಬಹುದು. ಮಿಚೆಲ್ ಸ್ಟಾರ್ಕ್​ ಈ ಪಂದ್ಯದಲ್ಲೂ ಹೀರೋ ಆದರೂ ಅಚ್ಚರಿ ಇಲ್ಲ.

ಎಸ್​ಆರ್​​ಹೆಚ್​ಗೆ ಕೈಕೊಡ್ತಿದ್ದಾರೆ ಬ್ಯಾಟರ್ಸ್​

ಎಸ್​ಆರ್​​ಹೆಚ್​ ಬ್ಯಾಟರ್​ಗಳಿಗೆ ಬೌಲಿಂಗ್​ ಮಾಡಲು ಎದುರಾಳಿ ಬೌಲರ್​​ಗಳು ನಡುಗುತ್ತಿದ್ದರು. ಈಗ ಸುಲಭಕ್ಕೆ ಶರಣಾಗುತ್ತಿರುವುದು ಅಚ್ಚರಿ ಮೂಡಿಸಿದೆ. ಟ್ರಾವಿಸ್ ಹೆಡ್​, ಅಭಿಷೇಕ್​ ಶರ್ಮಾ, ಏಡನ್ ಮಾರ್ಕ್ರಮ್, ನಿತೀಶ್ ರೆಡ್ಡಿ, ಶಹಬಾಜ್ ಅಹ್ಮದ್ ಅವರ ವೈಫಲ್ಯದ ನಡುವೆ ರಾಹುಲ್ ತ್ರಿಪಾಠಿ ಮತ್ತು ಹೆನ್ರಿಚ್ ಕ್ಲಾಸೆನ್ ತಕ್ಕಮಟ್ಟಿಗೆ ಲಯದಲ್ಲಿರುವುದು ನಿಟ್ಟುಸಿರು ಬಿಡುವಂತೆ ಮಾಡಿದೆ. ಮತ್ತೊಂದೆಡೆ ಶಹಬಾಜ್ ಮತ್ತೆ ಇದೇ ಪಿಚ್​ನಲ್ಲಿ ಮಿಂಚುವ ನಿರೀಕ್ಷೆಯಲ್ಲಿದ್ದಾರೆ. ಟಿ ನಟರಾಜನ್ ತನ್ನ ಹೋಮ್​ ಪಿಚ್​​ನಲ್ಲಿ ಕೆಕೆಆರ್​​ ಬ್ಯಾಟರ್​ಗಳಿಗೆ ಸವಾಲಾಗಬಹುದು. ಭುವನೇಶ್ವರ್ ಕೂಡ ಮಾರಕ ದಾಳಿ ನಡೆಸಬೇಕಿದೆ.

ಬಹುಮಾನದ ಮೊತ್ತ

ವಿಜೇತರು - 20 ಕೋಟಿ (ಬಾಕಿ)

ರನ್ನರ್​ಅಪ್​ - 13 ಕೋಟಿ (ಬಾಕಿ)

3ನೇ ಸ್ಥಾನ - 7 ಕೋಟಿ (ರಾಜಸ್ಥಾನ್ ರಾಯಲ್ಸ್)

4ನೇ ಸ್ಥಾನ - 6.5 ಕೋಟಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು)

ಪಿಚ್ ರಿಪೋರ್ಟ್

ಎಂಎ ಚಿದಂಬರಂ ಸ್ಟೇಡಿಯಂನ ಪಿಚ್ ಸ್ಪಿನ್ನರ್​ಗಳಿಗೆ ಹೆಚ್ಚು ನೆರವಾಗಲಿದೆ. ಕಳೆದ ಪಂದ್ಯದಲ್ಲೂ ಸ್ಪಿನ್ ಬೌಲರ್​​ಗಳೇ ಹೆಚ್ಚು ಪ್ರಾಬಲ್ಯ ಸಾಧಿಸಿದ್ದರು. ಬ್ಯಾಟ್ಸ್​​ಮನ್​​ಗಳು ಎಚ್ಚರಿಕೆಯಿಂದ ಆಡಿದರೆ ರನ್ ಗಳಿಸಲು ಸಾಕಷ್ಟು ಅವಕಾಶ ಇದೆ. ಆದರೆ ಸ್ಪಿನ್ನರ್​ಗಳಿಂದ ದೂರ ಉಳಿಯುವುದು ಉತ್ತಮ. ಇಲ್ಲಿ ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 164 ರನ್ ಆಗಿದ್ದರೆ, ಎರಡನೇ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 151 ರನ್ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಟಾಸ್ ಗೆದ್ದ ನಾಯಕ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಬಹುದು. ಈ ಮೈದಾನದಲ್ಲಿ ನಡೆದ 8 ಪ್ಲೇಆಫ್ ಪಂದ್ಯಗಳಲ್ಲಿ 6 ಬಾರಿ ಮೊದಲು ಬ್ಯಾಟಿಂಗ್ ನಡೆಸಿದವರೇ ಗೆದ್ದಿದ್ದಾರೆ.

ಹವಾಮಾನ ವರದಿ

ಆಕ್ಯುವೆದರ್ ಪ್ರಕಾರ, ಮೇ 25ರ ಶನಿವಾರವು ಚೆನ್ನೈನಲ್ಲಿ ಶೇ 10 ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಇದೇ ವೇಳೆ ಐಪಿಎಲ್‌ ಫೈನಲ್‌ ಪಂದ್ಯ ನಡೆಯುವ ಭಾನುವಾರ ಶೇಕಡಾ 4ರಷ್ಟು ಮಾತ್ರ ಮಳೆಯಾಗುವ ಸಾಧ್ಯತೆ ಇದೆ. ಶೇಕಡಾ 1ರಷ್ಟು ಗುಡುಗು ಸಹಿತ ಮಳೆಯಾಗುವ ನಿರೀಕ್ಷೆ ಇದೆ. ಮಳೆ ಇಲ್ಲದಿದ್ದರೂ, ಫೈನಲ್‌ ಪಂದ್ಯದಲ್ಲಿ ಕಡಲ ತೀರದ ಚೆನ್ನೈ ನಗರದಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಎಂದು ನಿರೀಕ್ಷಿಸಲಾಗಿದೆ.

ಮೀಸಲು ದಿನ ಇದೆ

ಒಂದು ವೇಳೆ ಮಳೆಯಾದರೆ, ಕನಿಷ್ಠ ಐದು ಓವರ್‌ಗಳ ಪಂದ್ಯವನ್ನು ನಡೆಸಲು ರಾತ್ರಿ 12:26ರವರೆಗೆ ಸಮಯವಿರುತ್ತದೆ. ಮಳೆಯಿಂದಾಗಿ ಮೇ 26ರ ಭಾನುವಾರ ಪಂದ್ಯ ಪೂರ್ಣಗೊಳಿಸಲು ಆಗದಿದ್ದರೆ, ಆಗ ಮೀಸಲು ದಿನವಾದ ಸೋಮವಾರ (ಮೇ 27) ಪಂದ್ಯ ಮುಂದುವರೆಸಲಾಗುತ್ತದೆ. ಭಾನುವಾರ ಐದು ಓವರ್‌ಗಳ ಪಂದ್ಯ ಸಾಧ್ಯವಾಗದಿದ್ದರೆ, ಮೀಸಲು ದಿನವಾದ ಮೇ 27ರಂದು ಹೊಸದಾಗಿ ಟಾಸ್ ನಡೆಸಿ ಪಂದ್ಯ ಆರಂಭಿಸಲಾಗುತ್ತದೆ.

ಸನ್‌ರೈಸರ್ಸ್ ಹೈದರಾಬಾದ್ ಸಂಭಾವ್ಯ ತಂಡ

ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ನಿತೀಶ್ ರೆಡ್ಡಿ, ಏಡನ್ ಮಾರ್ಕ್ರಮ್, ಹೆನ್ರಿಚ್ ಕ್ಲಾಸೆನ್ (ವಿಕೆಟ್‌ ಕೀಪರ್), ಅಬ್ದುಲ್ ಸಮದ್, ಪ್ಯಾಟ್ ಕಮಿನ್ಸ್‌ (ನಾಯಕ), ಭುವನೇಶ್ವರ್ ಕುಮಾರ್, ಜಯದೇವ್ ಉನಾದ್ಕತ್, ಟಿ ನಟರಾಜನ್, ಶಹಬಾಜ್ ಅಹ್ಮದ್ (ಇಂಪ್ಯಾಕ್ಟ್‌ ಆಟಗಾರ).

ಕೋಲ್ಕತ್ತಾ ನೈಟ್ ರೈಡರ್ಸ್ ಸಂಭಾವ್ಯ ತಂಡ

ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್​), ಸುನಿಲ್ ನರೈನ್, ಶ್ರೇಯಸ್ ಅಯ್ಯರ್ (ನಾಯಕ), ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ರಿಂಕು ಸಿಂಗ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ವೈಭವ್ ಅರೋರಾ, ವರುಣ್ ಚಕ್ರವರ್ತಿ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ