ರಾಜಸ್ಥಾನಕ್ಕೆ ಮತ್ತೊಮ್ಮೆ ಆಘಾತ, ತವರಿನಲ್ಲಿ ಕೇವಲ 1 ರನ್ ಅಂತರದಿಂದ ಗೆದ್ದ ಕೆಕೆಆರ್; ಪ್ಲೇಆಫ್ ಆಸೆ ಜೀವಂತ
ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಕೇವಲ 45 ಎಸೆತಗಳಲ್ಲಿ 95 ರನ್ ಸಿಡಿಸಿದರು. ತಂಡವನ್ನು ಇನ್ನೇನು ಗೆಲುವಿನ ದಡ ಸೇರಿಸುತ್ತಾರೆ ಎಂಬಷ್ಟರಲ್ಲಿ ಔಟಾದರು. ತಂಡವು ಹಲವು ಬಾರಿ ಗುರಿಯ ಸಮೀಪ ಬಂದು ಎಡವಿದ್ದು, ಈ ಬಾರಿ ಮತ್ತದೇ ರಾಗ ಮುಂದುವರೆದಿದೆ.
ಐಪಿಎಲ್ 2025ರ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಸೋಲಿನ ಸರಪಳಿ ಮುಂದುವರೆದಿದ್ದು, ಕೆಕೆಆರ್ ತಂಡ ಮತ್ತೆ ಗೆಲುವಿನ ಹಳಿಗೆ ಮರಳಿದೆ. ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ತವರಿನ ಅಭಿಮಾನಿಗಳ ಮುಂದೆ ಉತ್ತಮ ಪ್ರದರ್ಶನ ನೀಡಿದ ಕೆಕೆಆರ್, ಪ್ರಸಕ್ತ ಆವೃತ್ತಿಯ ಟೂರ್ನಿಯಲ್ಲಿ ಆಡಿದ 11ನೇ ಪಂದ್ಯದಲ್ಲಿ 5ನೇ ಗೆಲುವು ಒಲಿಸಿಕೊಂಡಿದೆ. ಇದರೊಂದಿಗೆ ಪ್ಲೇಆಫ್ ಪ್ರವೇಶಿಸುವ ಆಸೆ ಜೀವಂತವಾಗಿ ಇರಿಸಿಕೊಂಡಿದೆ. ಅತ್ತ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಆರ್ಆರ್, ಶತಾಯ ಗತಾಯ ಪ್ರಯತ್ನದ ಹೊರತಾಗಿಯೂ ಮತ್ತೊಮ್ಮೆ ಚೇಸಿಂಗ್ನಲ್ಲಿ ಕೂದಲೆಳೆ ಅಂತರದಿಂದ ವಿಫಲವಾಗಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್ 4 ವಿಕೆಟ್ ಕಳೆದುಕೊಂಡು 206 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಚೇಸಿಂಗ್ ನಡೆಸಿದ ರಾಜಸ್ಥಾನ, ಗುರಿಯ ಸಮೀಪ ಬಂದಿತು. ಆದರೆ, 205 ರನ್ ಗಳಿಸಲಷ್ಟೇ ಶಕ್ತವಾಯ್ತು. ಹೀಗಾಗಿ ಕೇವಲ 1 ರನ್ ಕೊರತೆಯಿಂದ ಪಂದ್ಯ ಸೋತಿತು.
ಚೇಸಿಂಗ್ ವೇಳೆ ನಾಯಕ ರಿಯಾನ್ ಪರಾಗ್ ಪ್ರಬಲ ಪೈಪೋಟಿ ನೀಡಿ ಕೇವಲ 45 ಎಸೆತಗಳಲ್ಲಿ 95 ರನ್ ಸಿಡಿಸಿದರು. ತಂಡವನ್ನು ಇನ್ನೇನು ಗೆಲುವಿನ ದಡ ಸೇರಿಸುತ್ತಾರೆ ಎಂಬಷ್ಟರಲ್ಲಿ ಔಟಾದರು. ಅದಕ್ಕೂ ಮುನ್ನ ಶಿಮ್ರಾನ್ ಹೆಟ್ಮಾಯರ್ ಜೊತೆಗೂಡಿ ಆಕರ್ಷಕ ಜೊತೆಯಾಟಕ್ಕೆ ಸಾಥ್ ನೀಡಿದರು. ಕೊನೆಯ ಓವರ್ನಲ್ಲಿ ರಾಯಲ್ಸ್ ಗೆಲುವಿಗೆ 22 ರನ್ಗಳ ಅಗತ್ಯವಿತ್ತು. ಈ ವೇಳೆ ಜೋಫ್ರಾ ಆರ್ಚರ್ ಹಾಗೂ ಶುಭಂ ದುಬೆ ತಮ್ಮೆಲ್ಲಾ ಪ್ರಯತ್ನಗಳೊಂದಿಗೆ 20 ರನ್ ಕಲೆ ಹಾಕಿದರು. ಕೊನೆಯ ಎಸೆತದಲ್ಲಿ 3 ರನ್ಗಳ ಅಗತ್ಯವಿದ್ದಾಗ, ಶುಭಂ 1 ರನ್ ಮಾತ್ರ ಪೂರ್ಣಗೊಳಿಸುವಲ್ಲಿ ಯಶಸ್ವಿಯಾದರು. ಹೀಗಾಗಿ ಕೇವಲ 1 ರನ್ನಿಂದ ಕೆಕೆಆರ್ ಗೆದ್ದಿತ್ತು.
ತಂಡದ ಪರ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 34 ರನ್ ಗಳಿಸಿದರೆ, ವೈಭವ್ ಸೂರ್ಯವಂಶಿ 4 ರನ್ ಮಾತ್ರ ಗಳಿಸಿದರು. ಕುನಾಲ್ ಸಿಂಗ್, ಧ್ರುವ್ ಜುರೆಲ್ ಹಾಗೂ ವನಿಂದು ಹಸರಂಗ ಒಬ್ಬರ ನಂತರ ಮತ್ತೊಬ್ಬರಂತೆ ಸೊನ್ನೆ ಸುತ್ತಿ ನಿರಾಶೆ ಮೂಡಿಸಿದರು.
ರಸೆಲ್ ಅಬ್ಬರದಾಟ
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡದ ಪರ, ಸುನಿಲ್ ನರೈನ್ 11 ರನ್ ಗಳಿಸಿದರೆ, ಗುರ್ಬಾಜ್ 35 ರನ್ ಕಲೆ ಹಾಕಿದರು. ನಾಯಕ ಅಜಿಂಕ್ಯಾ ರಹಾನೆ 30 ರನ್ ಹಾಗೂ ತಂಡದ ಇನ್ಫಾರ್ಮ್ ಬ್ಯಾಟರ್ ಅಂಗ್ಕ್ರಿಷ್ ರಘುವಂಶಿ 44 ರನ್ ಸಿಡಿಸಿದರು. ತಂಡದ ಮೊತ್ತವನ್ನು 200ರ ಗಡಿ ದಾಟಿಸಿದವರು ಆಂಡ್ರೆ ರಸೆಲ್. 25 ಎಸೆತಗಳಲ್ಲಿ 6 ಸ್ಫೋಟಕ ಸಿಕ್ಸರ್ಗ ಸಹಾಯದಿಂದ 57 ರನ್ ಸಿಡಿಸಿದರು. ಇವರಿಗೆ ಸಾಥ್ ನೀಡಿದ ರಿಂಕು ಸಿಂಗ್ 19 ರನ್ ಗಳಿಸಿ ಅಜೇಯರಾಗಿ ಉಳಿದರು.