ಅಯ್ಯರ್ ಜೋಡಿ ಆರ್ಭಟ; ಸನ್‌ರೈಸರ್ಸ್ ಸದೆಬಡೆದು ನಾಲ್ಕನೇ ಬಾರಿ ಐಪಿಎಲ್ ಫೈನಲ್ ಪ್ರವೇಶಿಸಿದ ಕೆಕೆಆರ್
ಕನ್ನಡ ಸುದ್ದಿ  /  ಕ್ರಿಕೆಟ್  /  ಅಯ್ಯರ್ ಜೋಡಿ ಆರ್ಭಟ; ಸನ್‌ರೈಸರ್ಸ್ ಸದೆಬಡೆದು ನಾಲ್ಕನೇ ಬಾರಿ ಐಪಿಎಲ್ ಫೈನಲ್ ಪ್ರವೇಶಿಸಿದ ಕೆಕೆಆರ್

ಅಯ್ಯರ್ ಜೋಡಿ ಆರ್ಭಟ; ಸನ್‌ರೈಸರ್ಸ್ ಸದೆಬಡೆದು ನಾಲ್ಕನೇ ಬಾರಿ ಐಪಿಎಲ್ ಫೈನಲ್ ಪ್ರವೇಶಿಸಿದ ಕೆಕೆಆರ್

ಕೋಲ್ಕತ್ತಾ ನೈಟ್‌ ರೈಡರ್ಸ್‌ ಮೊದಲ ತಂಡವಾಗಿ ಐಪಿಎಲ್‌ 2024ರ ಫೈನಲ್‌ ಪ್ರವೇಶಿಸಿದೆ. ಎಸ್‌ಆರ್‌ಎಚ್‌ ವಿರುದ್ಧ ಅಬ್ಬರಿಸಿದ ಶಾರುಖ್‌ ಖಾನ್‌ ಹುಡುಗರು, ಐಪಿಎಲ್‌ ಇತಿಹಾಸದಲ್ಲೇ ನಾಲ್ಕನೇ ಬಾರಿ ಫೈನಲ್‌ ತಲುಪಿದ ಸಾಧನೆ ಮಾಡಿದ್ದಾರೆ.

ಸನ್‌ರೈಸರ್ಸ್ ಸದೆಬಡೆದು ನಾಲ್ಕನೇ ಬಾರಿ ಐಪಿಎಲ್ ಫೈನಲ್ ಪ್ರವೇಶಿಸಿದ ಕೆಕೆಆರ್
ಸನ್‌ರೈಸರ್ಸ್ ಸದೆಬಡೆದು ನಾಲ್ಕನೇ ಬಾರಿ ಐಪಿಎಲ್ ಫೈನಲ್ ಪ್ರವೇಶಿಸಿದ ಕೆಕೆಆರ್ (PTI)

ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಭರ್ಜರಿ 8 ವಿಕೆಟ್‌ಗಳಿಂದ ಮಣಿಸಿದ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡವು ಐಪಿಎಲ್‌ 2024ರ ಫೈನಲ್‌ಗೆ ಲಗ್ಗೆ ಹಾಕಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡರಲ್ಲೂ ಅಬ್ಬರಿಸಿದ ಎರಡು ಬಾರಿಯ ಚಾಂಪಿಯನ್‌ಗಳು, ನಾಲ್ಕನೇ ಬಾರಿಗೆ ಐಪಿಎಲ್‌ ಫೈನಲ್‌ ತಲುಪಿದ ಸಾಧನೆ ಮಾಡಿದೆ. ಪ್ಲೇಆಫ್‌ ಹಂತಕ್ಕೆ ಮೊದಲ ತಂಡವಾಗಿ ಲಗ್ಗೆ ಇಟ್ಟಿದ್ದ ಶ್ರೇಯಸ್‌ ಅಯ್ಯರ್‌ ಪಡೆ, ಇದೀಗ ಚೆನ್ನೈನಲ್ಲಿ ನಡೆಯಲಿರುವ ಫೈನಲ್‌ ಪಂದ್ಯಕ್ಕೂ ಮೊದಲ ತಂಡವಾಗಿ ಟಿಕೆಟ್‌ ಗಿಟ್ಟಿಸಿಕೊಂಡಿದೆ. ಅತ್ತ ಸೋತ ಎಸ್‌ಆರ್‌ಎಚ್‌ ತಂಡಕ್ಕೆ ಫೈನಲ್‌ ತಲುಪಲು ಇನ್ನೂ ಒಂದು ಅವಕಾಶವಿದ್ದು, ಎರಡನೇ ಕ್ವಾಲಿಫೈಯರ್‌ ಪಂದ್ಯ ಆಡಿ ಗೆಲ್ಲಬೇಕಿದೆ.

ಮೊದಲು ಬ್ಯಾಟಿಂಗ್‌ ನಡೆಸಿದ ಎಸ್‌ಆರ್‌ಎಚ್‌, 19.3 ಓವರ್‌ಗಳಲ್ಲಿ 159 ರನ್‌ ಗಳಿಸಿತು. ಸಾಧಾರಣ ಗುರಿ ಬೆನ್ನಟ್ಟಿದ ಕೆಕೆಆರ್‌, ಕೇವಲ 13.4 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 164 ರನ್‌ ಗಳಿಸಿ ಗೆದ್ದು ಬೀಗಿತು.  

ಪಂದ್ಯದಲ್ಲಿ ಟಾಸ್‌ ಗೆದ್ದ ಸನ್‌ರೈಸರ್ಸ್‌ ಹೈದರಾಬಾದ್‌ ನಾಯಕ ಪ್ಯಾಟ್‌ ಕಮಿನ್ಸ್‌, ಬೃಹತ್‌ ಮೊತ್ತ ಕಲೆಹಾಕುವ ನಿರೀಕ್ಷೆಯೊಂದಿಗೆ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡರು. ಆದರೆ, ತಂಡದ ಲೆಕ್ಕಾಚಾರವನ್ನು ಮಿಚೆಲ್‌ ಸ್ಟಾರ್ಕ್‌ ಹಾಗೂ ವರುಣ್‌ ಚಕ್ರವರ್ತಿ ತಲೆಕೆಳಗಾಗಿಸಿದರು.

ಇದನ್ನೂ ಓದಿ | ಈ ಮೂವರನ್ನು ಕಟ್ಟಿಹಾಕಿದ್ರೆ ಆರ್‌ಸಿಬಿ ಗೆಲುವು ಸಲೀಸು; ರಾಜಸ್ಥಾನ್ ರಾಯಲ್ಸ್ ಸಾಮರ್ಥ್ಯ-ದೌರ್ಬಲ್ಯ ಹಾಗೂ ಎಕ್ಸ್ ಫ್ಯಾಕ್ಟರ್

ಪಂಜಾಬ್‌ ವಿರುದ್ಧದ ಕೊನೆಯ ಪಂದ್ಯದಲ್ಲಿ ಗೋಲ್ಡನ್‌ ಡಕ್‌ ಆಗಿದ್ದ ಆಸೀಸ್‌ ದೈತ್ಯ ಟ್ರಾವಿಸ್‌ ಹೆಡ್‌, ಇಂದು ಪಂದ್ಯದ ಎರಡನೇ ಎಸೆತದಲ್ಲೇ ಸ್ಟಾರ್ಕ್‌ ಎಸೆತದಲ್ಲಿ ಕ್ಲೀನ್‌ ಬೋಲ್ಡ್‌ ಆದರು. ಅವರ ಬೆನ್ನಲ್ಲೇ ಸಿಕ್ಸರ್‌ ಸರದದಾರ ಅಭಿಷೇಕ್‌ ಶರ್ಮಾ ಕೂಡಾ 3 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಪ್ರಸಕ್ತ ಆವೃತ್ತಿಯಲ್ಲಿ ಈ ಇಬ್ಬರೂ ಆರಂಭಿಕರು ಒಂದಂಕಿಗೆ ಔಟಾಗಿದ್ದು ಇದೇ ಮೊದಲು. ಆದರೆ, ಮೂರನೇ ಕ್ರಮಾಂಕದಲ್ಲಿ ಬಂದ ರಾಹುಲ್‌ ತ್ರಿಪಾಠಿ ಮಾತ್ರ ನಿರ್ಭೀತಿಯಿಂದ ಬ್ಯಾಟ್‌ ಬೀಸಿದರು. ಜಾವಾಬ್ದಾರಿಯುತ ಹೊಡೆತಗಳೊಂದಿಗೆ ಇನ್ನಿಂಗ್ಸ್‌ ಮುನ್ನಡೆಸಿದರು. ಆದರೆ, ಇವರಿಗೆ ಸಾಥ್‌ ಸಿಗಲಿಲ್ಲ. ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ನಿತೀಶ್‌ ರೆಡ್ಡಿ 9 ರನ್‌ ಗಳಿಸಿ ನಿರ್ಗಮಿಸಿದರೆ, ಶಹಬಾಜ್‌ ಅಹ್ಮದ್‌ ಮೊದಲ ಎಸೆತದಲ್ಲೇ ಕ್ಲೀನ್‌ ಬೋಲ್ಡ್‌ ಆದರು.

ತ್ರಿಪಾಠಿ ರನೌಟ್‌

ಒಂದು ಹಂತದಲ್ಲಿ ಕ್ಲಾಸೆನ್‌ ಹಾಗೂ ತ್ರಿಪಾಠಿ ಆಕರ್ಷಕ ಅರ್ಧಶತಕದ ಜೊತೆಯಾಟವಾಡಿದರು. ಈ ವೇಳೆ ದೊಡ್ಡ ಹೊಡೆತಗಳಿಗೆ ಕೈಹಾಕಿದ ಕ್ಲಾಸೆನ್, ರಿಂಕು ಸಿಂಗ್‌ಗೆ ಕ್ಯಾಚ್‌ ನೀಡಿ ಔಟಾದರು. ಈ ವೇಳೆ ಅಬ್ದುಲ್‌ ಸಮದ್‌ ಜೊತೆಗೂಡಿದ ತ್ರಿಪಾಠಿ ಅಬ್ಬರಿಸುವ ಇರಾದೆಯಲ್ಲಿದ್ದರು. ಆದರೆ ಸಮದ್‌ ಮಾಡಿದ ಎಡವಟ್ಟಿನಿಂದ ಅವರು ರನೌಟ್‌ ಆಗಿ ವಿಕೆಟ್‌ ಕೈಚೆಲ್ಲಬೇಕಾಯ್ತು. ಅಲ್ಲಿಗೆ ತಂಡದ ಪ್ರಮುಖ ವಿಕೆಟ್‌ ಪತನವಾಯ್ತು. ಸಮದ್‌ 16 ರನ್‌ ಗಳಿಸಿದರೆ, ಇಂಪ್ಯಾಕ್ಟ್‌ ಆಟಗಾರನಾಗಿ ಬಂದ ಸನ್ವಿರ್‌ ಸಿಂಗ್‌ ಮೊದಲ ಎಸೆತಕ್ಕೆ ಔಟಾದರು. ಕೊನೆಯಲ್ಲಿ ನಾಯಕ ಪ್ಯಾಟ್‌ ಕಮಿನ್ಸ್‌ 30 ರನ್‌ ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಅಂತಿಮವಾಗಿ ತಂಡ 159 ರನ್‌ ಗಳಿಸಿ ಆಲೌಟ್‌ ಆಯ್ತು.

ಕೆಕೆಆರ್ ಪರ ಸ್ಟಾರ್ಕ್ ಪ್ರಮುಖ 3 ವಿಕೆಟ್‌ ಕಬಳಿಸಿದರೆ, ಚಕ್ರವರ್ತಿ 2 ವಿಕೆಟ್‌ ಕಬಳಿಸಿದರು.

ಕೆಕೆಆರ್‌ ಭರ್ಜರಿ ಚೇಸಿಂಗ್

160 ರನ್‌ಗಳ ಸಾಧಾರಣ ಮೊತ್ತ ಚೇಸಿಂಗ್‌ ಆರಂಭಿಸಿದ ಕೆಕೆಆರ್, ಆರಂಭದಿಂದಲೇ ಅಬ್ಬರಿಸಿತು. ರಹಮಾನುಲ್ಲಾ ಗುರ್ಬಾಜ್‌ ಹಾಗೂ ಸುನಿಲ್‌ ನರೈನ್‌ ಸ್ಫೋಟಕ ಆರಂಭ ಕೊಟ್ಟರು. ಈ ಜೋಡಿ ಮೊದಲ ವಿಕೆಟ್‌ಗೆ 3.2 ಓವರ್‌ಗಳಲ್ಲಿ 44 ರನ್‌ ಜೊತೆಯಾಟವಾಡಿತು. ಈ ವೇಳೆ ಒಂದಾದ ವೆಂಕಟೇಶ್ ಅಯ್ಯರ್‌ ಹಾಗೂ‌ ನರೈನ್‌‌ ಭರ್ಜರ ಆಟ ಮುಂದುವರೆಸಿದರು. 21 ರನ್‌ ಗಳಿಸಿದ್ದ ನರೈನ್‌, ಕಮಿನ್ಸ್‌ ಎಸೆತದಲ್ಲಿ ಔಟಾದರು. ಈ ವೇಳೆ ಒಂದಾದ ನಾಯಕ ಶ್ರೇಯಸ್‌ ಅಯ್ಯರ್‌ ಹಾಗೂ ವೆಂಕಟೇಶ್‌ ಅರ್ಧಶತಕದ ಜೊತೆಯಾಟವಾಡಿದರು.

ಅಬ್ಬರಿಸಿದ ವೆಂಕಟೇಶ್‌, 28 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್‌ ಸಿಡಿಸಿ ಅಜೇಯ 51 ರನ್‌ ಗಳಿಸಿದರು. ನಾಯಕನಾಟವಾಡಿದ ಶ್ರೇಯಸ್‌, 24 ಎಸೆತಗಳಲ್ಲಿ 5 ಫೋರ್‌ ಹಾಗೂ 4 ಸಿಕ್ಸರ್‌ ಸಹಿತ 58 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದನ್ನೂ ಓದಿ | ಬಟ್ಲರ್ ಅಲಭ್ಯ, ಶಿಮ್ರಾನ್ ಹೆಟ್ಮೆಯರ್ ಇನ್; ಆರ್‌ಸಿಬಿ ವಿರುದ್ಧದ ಎಲಿಮನೇಟರ್‌ ಕದನಕ್ಕೆ ರಾಜಸ್ಥಾನ್ ರಾಯಲ್ಸ್ ತಂಡ

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner