ಕೃನಾಲ್ ಪಾಂಡ್ಯ ಇನ್, ದೇವದತ್ ಪಡಿಕ್ಕಲ್ ಇಂಪ್ಯಾಕ್ಟ್ ಪ್ಲೇಯರ್; ಐಪಿಎಲ್ 2025ಕ್ಕೆ ಆರ್​​ಸಿಬಿ ಬಲಿಷ್ಠ ಸಂಭಾವ್ಯ XI
ಕನ್ನಡ ಸುದ್ದಿ  /  ಕ್ರಿಕೆಟ್  /  ಕೃನಾಲ್ ಪಾಂಡ್ಯ ಇನ್, ದೇವದತ್ ಪಡಿಕ್ಕಲ್ ಇಂಪ್ಯಾಕ್ಟ್ ಪ್ಲೇಯರ್; ಐಪಿಎಲ್ 2025ಕ್ಕೆ ಆರ್​​ಸಿಬಿ ಬಲಿಷ್ಠ ಸಂಭಾವ್ಯ Xi

ಕೃನಾಲ್ ಪಾಂಡ್ಯ ಇನ್, ದೇವದತ್ ಪಡಿಕ್ಕಲ್ ಇಂಪ್ಯಾಕ್ಟ್ ಪ್ಲೇಯರ್; ಐಪಿಎಲ್ 2025ಕ್ಕೆ ಆರ್​​ಸಿಬಿ ಬಲಿಷ್ಠ ಸಂಭಾವ್ಯ XI

RCBs Likely XI: ಇಂಡಿಯನ್ ಪ್ರೀಮಿಯರ್​​ ಲೀಗ್-2025ರಲ್ಲಿ ಮೊದಲ ಪ್ರಶಸ್ತಿಯನ್ನು ಗೆಲ್ಲುವ ಗುರಿ ಹೊಂದಿರುವ ಆರ್‌ಸಿಬಿ, ಆಡುವ 11ರ ಬಳಗದಲ್ಲಿ ಯಾರಿಗೆಲ್ಲಾ ಅವಕಾಶ ನೀಡಬೇಕು ಎನ್ನುವ ಗೊಂದಲಕ್ಕೆ ಸಿಲುಕಿದೆ.

ಕೃನಾಲ್ ಪಾಂಡ್ಯ ಇನ್, ದೇವದತ್ ಪಡಿಕ್ಕಲ್ ಇಂಪ್ಯಾಕ್ಟ್ ಪ್ಲೇಯರ್; ಐಪಿಎಲ್ 2025ಕ್ಕೆ ಆರ್​​ಸಿಬಿ ಬಲಿಷ್ಠ ಸಂಭಾವ್ಯ XI
ಕೃನಾಲ್ ಪಾಂಡ್ಯ ಇನ್, ದೇವದತ್ ಪಡಿಕ್ಕಲ್ ಇಂಪ್ಯಾಕ್ಟ್ ಪ್ಲೇಯರ್; ಐಪಿಎಲ್ 2025ಕ್ಕೆ ಆರ್​​ಸಿಬಿ ಬಲಿಷ್ಠ ಸಂಭಾವ್ಯ XI

RCB Playing XI: ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ​ ಪ್ರಶಸ್ತಿಯನ್ನೇ ಗೆಲ್ಲದೆ ಪ್ರತಿ ಸಲ ಈ ಸಲ ಕಪ್​ ನಮ್ದೇ ಎನ್ನುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ, 2025ರ 18ನೇ ಆವೃತ್ತಿಯಲ್ಲಿ ಚೊಚ್ಚಲ ಟ್ರೋಫಿಗೆ ಮುತ್ತಿಕ್ಕುವ ಗುರಿಯೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ಮೆಗಾ ಹರಾಜಿನಲ್ಲಿ ಸಮತೋಲಿತ ತಂಡ ಕಟ್ಟುವಲ್ಲಿ ಯಶಸ್ವಿಯಾಗಿರುವ ಆರ್​ಸಿಬಿ, ಈ ಸಲ ಚಾಂಪಿಯನ್ ಪಟ್ಟ ಅಲಂಕರಿಸಲಬೇಕು ಎನ್ನುವ ಹುಮ್ಮಸ್ಸು ಹೊಂದಿದೆ. ಆ ಮೂಲಕ ಕೋಟ್ಯಾಂತರ ಅಭಿಮಾನಿಗಳ ಕನಸು ನನಸು ಮಾಡಲು ಮಹತ್ವ ಹೆಜ್ಜೆ ಇಟ್ಟಿದೆ. ಪ್ರಸ್ತುತ ಬೌಲಿಂಗ್ ವಿಭಾಗ ಹಿಂದೆಂದಿಗಿಂತಲೂ ಬಲಿಷ್ಠವಾಗಿದೆ. ಜೊತೆಗೆ ಗುಣಮಟ್ಟದ ಬ್ಯಾಟರ್​ಗಳೂ ಇರುವುದು ವಿಶೇಷ. ಆದರೆ, ಆಡುವ 11ರ ಬಳಗದಲ್ಲಿ ಯಾರಿಗೆಲ್ಲಾ ಅವಕಾಶ ನೀಡಬೇಕು ಎನ್ನುವುದೇ ಟೀಮ್ ಮ್ಯಾನೇಜ್​ಮೆಂಟ್ ಮುಂದಿರುವ ದೊಡ್ಡ ಸವಾಲು.

ಗುಣಮಟ್ಟದ ಬ್ಯಾಟರ್ಸ್ ಮತ್ತು ಪ್ರಬಲ ಬೌಲಿಂಗ್‌ನೊಂದಿಗೆ ತಂಡ ಬಲಿಷ್ಠವಾಗೇನೋ ಕಾಣುತ್ತಿದೆ. ಆದರೆ ಆರ್​ಸಿಬಿ ತಂಡದಲ್ಲಿ ಮ್ಯಾಚ್ ವಿನ್ನರ್ ಸ್ಪಿನ್ನರ್ ಇಲ್ಲ ಎನ್ನುವುದು ಬಲವಾಗಿ ಕಾಡುತ್ತಿದೆ. ಹರಾಜಿನಲ್ಲಿ ಒಬ್ಬರನ್ನು ಖರೀದಿಸಲು ಯತ್ನಿಸಿದರಾದರೂ ವಿಫಲರಾದರು. ಈಗ ಕೃನಾಲ್ ಪಾಂಡ್ಯ - ಸುಯಾಶ್ ಶರ್ಮಾ ಅವರನ್ನೇ ನೆಚ್ಚಿಕೊಂಡಿದೆ. ಇವರಿಬ್ಬರೇ ಸ್ಪಿನ್ ವಿಭಾಗವನ್ನು ಮುನ್ನಡೆಸಬೇಕಾಗಿದ್ದು, ಅತ್ಯುತ್ತಮ ಪ್ರದರ್ಶನ ನೀಡಿದರೆ ಆರ್​ಸಿಬಿ ಬಲಿಷ್ಠವಾಗಲಿದೆ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಇನ್ನು ವೇಗದ ದಾಳಿಯಲ್ಲಿ ಜೋಶ್ ಹೇಜಲ್​ವುಡ್, ಭುವನೇಶ್ವರ್ ಕುಮಾರ್, ಯಶ್ ದಯಾಳ್ ಆಧಾರ ಸ್ಥಂಭಗಳಾಗಿದ್ದಾರೆ. ಪವರ್​​ ಪ್ಲೇ ಮತ್ತು ಡೆತ್​ ಓವರ್​ಗಳಲ್ಲಿ ಇವರು ಮೂವರು ವಿಕೆಟ್ ಬೇಟೆಯಾಡಿದ್ದೇ ಆದರೆ ಎದುರಾಳಿ ತಂಡಗಳು ಆರ್​ಸಿಬಿ ಮುಂದೆ ಥಂಡಾ ಹೊಡೆಯುವುದು ಪಕ್ಕಾ.

ಅಗ್ರ 3 ಸ್ಥಾನದಲ್ಲಿ ಯಾರಿಗೆಲ್ಲಾ ಅವಕಾಶ?

2008 ರಿಂದಲೂ ಆರ್​ಸಿಬಿ ಪರವೇ ಆಡುತ್ತಿರುವ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಆರಂಭಿಸುವುದು ಖಚಿತ. ಓಪನಿಂಗ್ ಸ್ಥಾನದಲ್ಲಿ ಅವರ ಅಂಕಿ-ಅಂಶಗಳು ಅದ್ಭುತವಾಗಿದೆ. ಕೊಹ್ಲಿಯೇ ನಾಯಕನಾಗಬಹುದು ಎಂದು ವರದಿಯಾಗಿದೆ. ಇನ್ನು ಅವರೊಂದಿಗೆ ಇಂಗ್ಲೆಂಡ್​ನ ವಿಕೆಟ್ ಕೀಪರ್​ ಬ್ಯಾಟರ್ ಫಿಲ್​ ಸಾಲ್ಟ್ ಇನ್ನಿಂಗ್ಸ್ ತೆರೆಯಲಿದ್ದಾರೆ. ಸಾಲ್ಟ್ ಅವರು ಈ ಹಿಂದೆ ಕೆಕೆಆರ್​ ಪರ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇನ್ನು ಮೂರನೇ ಸ್ಥಾನದಲ್ಲಿ ರಜತ್ ಪಾಟೀದಾರ್ ಕಣಕ್ಕಿಳಿಯುವುದು ಬಹುತೇಕ ಖಚಿತ.

ಮಧ್ಯಮ ಕ್ರಮಾಂಕದಲ್ಲಿ ಯಾರೆಲ್ಲಾ ಆಡ್ತಾರೆ?

ಅಗ್ರ ಕ್ರಮಾಂಕದ ಮೂವರು ಕೈ ಕೊಟ್ಟರೆ, ಮಧ್ಯಮ ಕ್ರಮಾಂಕದ ಆಟಗಾರರು ತಂಡಕ್ಕೆ ಆಸರೆಯಾಗಬೇಕಿದೆ. ಲಿಯಾಮ್ ಲಿವಿಂಗ್​ಸ್ಟೋನ್, ಜಿತೇಶ್ ಶರ್ಮಾ, ಟಿಮ್ ಡೇವಿಡ್ ಕ್ರಮವಾಗಿ 4, 5, 6ನೇ ಸ್ಥಾನದಲ್ಲೇ ಬ್ಯಾಟಿಂಗ್ ನಡೆಸಲಿದ್ದಾರೆ. ಇವರು ರಕ್ಷಣಾತ್ಮಕ ಆಟ, ಹೊಡಿಬಡಿ ಆಟದ ಜತೆಗೆ ಫಿನಿಷಿಂಗ್ ಕೆಲಸವನ್ನೂ ನಿಭಾಯಿಸಬೇಕಿದೆ. ಈ ಮೂವರು ಆಟಗಾರರ ಆಟ ಪ್ರಮುಖ ಪಾತ್ರವಹಿಸಲಿದೆ. ಇನ್ನು ಲಿಯಾಮ್​ ಲಿವಿಂಗ್​ಸ್ಟೋನ್ ಸ್ಪಿನ್ ಬೌಲಿಂಗ್ ಕೂಡ ಮಾಡಲಿದ್ದಾರೆ.

ಆಲ್​ರೌಂಡರ್ಸ್ ಮತ್ತು ಬೌಲರ್ಸ್

ಕೃನಾಲ್ ಪಾಂಡ್ಯ ಅವರು ಲ್​ರೌಂಡರ್​ ಆಗಿ ಸೇವೆ ಸಲ್ಲಿಸಲಿದ್ದಾರೆ. ಸುಯಾಶ್ ಶರ್ಮಾ ಅವರು ಸ್ಪೆಷಲಿಸ್ಟ್ ಬೌಲರ್​​ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ವೇಗಿಗಳಾಗಿ ಜೋಶ್ ಹೇಜಲ್​ವುಡ್, ಭುವನೇಶ್ವರ್ ಕುಮಾರ್, ಯಶ್ ದಯಾಳ್ ಅವರು ಮಿಂಚಿನ ದಾಳಿ ನಡೆಸಲಿದ್ದಾರೆ. ಮೂವರು ಸಹ ಮ್ಯಾಚ್ ವಿನ್ನಿಂಗ್ ಬೌಲರ್​​ಗಳಾಗಿದ್ದಾರೆ. ಘಟಾನುಘಟಿ ಬ್ಯಾಟರ್​ಗಳನ್ನೇ ಪೆವಿಲಿಯನ್​ಗಟ್ಟುವ ಸಾಮರ್ಥ್ಯ ಈ ಮೂವರಿಗೂ ಇದೆ. ಪಂದ್ಯದ ಗತಿಯನ್ನೇ ಬದಲಿಸುವ ಶಕ್ತಿ ಇವರಿಗಿದೆ. ದೇವದತ್​ ಪಡಿಕ್ಕಲ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ಐಪಿಎಲ್ 2025ಕ್ಕೆ ಆರ್​​ಸಿಬಿ ಸಂಭಾವ್ಯ XI

ವಿರಾಟ್ ಕೊಹ್ಲಿ (ನಾಯಕ), ಫಿಲ್ ಸಾಲ್ಟ್, ರಜತ್ ಪಾಟಿದಾರ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಜೋಶ್ ಹೇಜಲ್‌ವುಡ್, ಯಶ್ ದಯಾಳ್, ಭುವನೇಶ್ವರ್ ಕುಮಾರ್, ಸುಯಾಶ್ ಶರ್ಮಾ.

ಇಂಪ್ಯಾಕ್ಟ್ ಪ್ಲೇಯರ್​ - ದೇವದತ್ ಪಡಿಕ್ಕಲ್.

Whats_app_banner