ಚಿನ್ನಸ್ವಾಮಿ ಮೈದಾನಕ್ಕೆ ನೀರಿನ ಸಮಸ್ಯೆ ಇಲ್ಲ; ಬೆಂಗಳೂರಿನಲ್ಲಿ ಆರ್‌ಸಿಬಿ ಪಂದ್ಯ ನಡೆಸಲು ಸಮಸ್ಯೆ ಇಲ್ಲ ಎಂದ ಕೆಎಸ್‌ಸಿಎ
IPL 2024 matches in Bengaluru: ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಬಿಗಡಾಯಿಸಿದೆ. ನೀರಿನ ಬರವು ಈ ಬಾರಿಯ ಐಪಿಎಲ್ ಪಂದ್ಯಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಕೆಎಸ್‌ಸಿಎ ಅಲ್ಲಗಳೆದಿದೆ. ಚಿನ್ನಸ್ವಾಮಿ ಮೈದಾನಕ್ಕೆ ನೀರಿನ ಸಮಸ್ಯೆ ಇಲ್ಲ ಎಂದು ಕೆಎಸ್‌ಸಿಎ ಸಿಇಒ ಶುಭೇಂದು ಘೋಷ್ ತಿಳಿಸಿದ್ದಾರೆ.

ಉದ್ಯಾನ ನಗರಿ ಬೆಂಗಳೂರಿನಲ್ಲಿ ನೀರಿನ ಬವಣೆ ಆರಂಭವಾಗಿದೆ. ಕಳೆದ ನಾಲ್ಕು ದಶಕಗಳಲ್ಲಿ ಇದೇ ಮೊದಲ ಬಾರಿಗೆ ತೀವ್ರ ಪ್ರಮಾಣದಲ್ಲಿ ನೀರಿನ ಬಿಕ್ಕಟ್ಟು ಶುರುವಾಗಿದೆ. ಈ ನಡುವೆ ನೀರನ್ನು ಮಿತವಾಗಿ ಬಳಸಲು ನಾಗರಿಕರಿಗೆ ಮನವಿ ಮಾಡಲಾಗಿದೆ. ನೀರಿನ ಬರಗಾಲವು ಜನಸಾಮಾನ್ಯರನ್ನು ಮಾತ್ರ ತಟ್ಟಿದ್ದಲ್ಲದೆ, ಐಪಿಎಲ್ ಪಂದ್ಯಗಳಿಗೂ ತಟ್ಟುವ ಬಿಸಿ ಶುರುವಾಗಿದೆ. ಈ ನಡುವೆ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಬೇಕಿರುವ ಐಪಿಎಲ್ ಪಂದ್ಯಗಳು ಸ್ಥಳಾಂತರಗೊಳ್ಳುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಆದರೆ, ಕೆಎಸ್‌ಸಿಎ ಮಾತ್ರ ಈ ಕುರಿತ ವದಂತಿಗಳನ್ನು ಅಲ್ಲಗಳೆದಿದೆ.
ಐಪಿಎಲ್ ಪಂದ್ಯಾವಳಿಯು ಮಾರ್ಚ್ 22ರಂದು ಆರಂಭವಾಗಲಿದೆ. ಬೆಂಗಳೂರಿನಲ್ಲಿ ಮಾರ್ಚ್ 25ರಂದು ಮೊದಲ ಪಂದ್ಯ ನಡೆಯಲಿದೆ. ಆದರೆ, ಚಿನ್ನಸ್ವಾಮಿ ಮೈದಾನಕ್ಕೆ ಹನಿಸಲು ಕೂಡಾ ನೀರಿಲ್ಲ ಎಂಬ ಆತಂಕ ಸೃಷ್ಟಿಯಾಗಿತ್ತು. ಹೀಗಾಗಿ ಸಿಲಿಕಾನ್ ಸಿಟಿಯಲ್ಲಿ ನಡೆಯಬೇಕಿರುವ ಐಪಿಎಲ್ ಪಂದ್ಯಗಳನ್ನು ನಗರದಿಂದ ಬೇರೆಡೆಗೆ ಸ್ಥಳಾಂತರಿಸುವಂತೆ ಒತ್ತಾಯ ಕೇಳಿಬಂದಿತ್ತು. ಆದರೆ, ನಮಲ್ಲಿ ನೀರಿನ ಸಮಸ್ಯೆ ಇಲ್ಲ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸ್ಪಷ್ಟನೆ ನೀಡಿದೆ. ಹೀಗಾಗಿ ಆರ್‌ಸಿಬಿ ಪಂದ್ಯಗಳು ಬೆಂಗಳೂರಿನಲ್ಲಿಯೇ ನಡೆಯುವ ಸಾಧ್ಯತೆ ಹೆಚ್ಚಿದೆ.
“ನಾವು ನೀರಿನ ಯಾವುದೇ ರೀತಿಯ ಬಿಕ್ಕಟ್ಟನ್ನು ಈ ಸಮಯದಲ್ಲಿ ಎದುರಿಸುತ್ತಿಲ್ಲ. ನೀರಿನ ಬಳಕೆಗೆ ಸಂಬಂಧಿಸಿದಂತೆ ನಾವು ರಾಜ್ಯ ಸರ್ಕಾರದ ಮಾರ್ಗಸೂಚಿಯನ್ನು ಸ್ವೀಕರಿಸಿದ್ದೇವೆ. ಮಾರ್ಗಸೂಚಿಗಳನ್ನು ಅನುಸರಿಸುವ ಬಗ್ಗೆ ನಾವು ನಿರಂತರ ಸಭೆಗಳನ್ನು ನಡೆಸುತ್ತಿದ್ದೇವೆ” ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಸಿಇಒ ಶುಭೇಂದು ಘೋಷ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಇದನ್ನೂ ಓದಿ | ಹನಿಸಲೂ ಇಲ್ಲ ನೀರು, ಐಪಿಎಲ್ಗೂ ತಟ್ಟಿದ ಜಲಕಂಟಕ, ಬೆಂಗಳೂರಿನಲ್ಲಿ ಆರ್‌ಸಿಬಿ ಪಂದ್ಯಗಳು ನಡೆಯೋದೇ ಡೌಟ್
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು, ಬೆಂಗಳೂರಿನ ಜನತೆಗೆ ನೀರಿನ ಬಳಕೆ ಕುರಿತು ಸೂಚನೆ ನೀಡಿದೆ. ತೋಟಗಾರಿಕೆ ಅಥವಾ ವಾಹನಗಳನ್ನು ತೊಳೆಯುವುದು ಸೇರಿದಂತೆ ಇತರ ಯಾವುದೇ ಉದ್ದೇಶಗಳಿಗಾಗಿ ಕುಡಿಯುವ ನೀರನ್ನು ಬಳಸುವುದನ್ನು ನಿಷೇಧಿಸಿ ನೋಟಿಸ್ ನೀಡಿದೆ.
ಮೈದಾನದಲ್ಲೇ ಇದೆ ನೀರಿನ ವ್ಯವಸ್ಥೆ
ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಅತ್ಯಾಧುನಿಕ ವ್ಯವಸ್ಥೆಗಳಿವೆ. ಕ್ರೀಡಾಂಗಣದೊಳಗಿನ ಒಳಚರಂಡಿ ಸಂಸ್ಕರಣಾ ಘಟಕದಿಂದ ಬರುವ ನೀರು, ಮೈದಾನದ ಔಟ್ ಫೀಲ್ಡ್ ಮತ್ತು ಪಿಚ್‌ಗೆ ನೀರುಣಿಸಲು ಸಾಕಾಗುತ್ತದೆ ಎಂದು ಘೋಷ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮೈದಾನದಲ್ಲಿ ನಡೆಯುವ ಐಪಿಎಲ್ ಪಂದ್ಯಗಳಿಗೆ ನೀರಿನ ಸಮಸ್ಯೆ ಇಲ್ಲ ಎಂಬುದು ಖಚಿತವಾಗಿದೆ.
“ನಾವು ಈಗಾಗಲೇ ಒಳಚರಂಡಿ ಸಂಸ್ಕರಣಾ ಘಟಕದ ನೀರನ್ನು ಔಟ್‌ಫೀಲ್ಡ್ ಮತ್ತು ಪಿಚ್ ಮತ್ತು ಕ್ರೀಡಾಂಗಣದ ಇತರ ಉದ್ದೇಶಗಳಿಗಾಗಿ ಬಳಸುತ್ತಿದ್ದೇವೆ. ಪಂದ್ಯದ ಉದ್ದೇಶಗಳಿಗಾಗಿ ನಮಗೆ 10ರಿಂದ 15000 ಲೀಟರ್ ನೀರು ಬೇಕಾಗಬಹುದು. ಅದನ್ನು ಎಸ್‌ಟಿಪಿ ಸ್ಥಾವರದಿಂದ ಉತ್ಪಾದಿಸಬಹುದು ಎಂಬ ಖಾತ್ರಿ ನಮಗಿದೆ.”
“ನೀರಿನ ಬಳಕೆಯ ಬಗ್ಗೆ ಸರ್ಕಾರದ ಹೊಸ ನೀತಿಯನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಸರ್ಕಾರ ಆದೇಶದಲ್ಲಿನ ಎಲ್ಲಾ ಅಂಶಗಳನ್ನು ಪಾಲಿಸುವ ವಿಶ್ವಾಸವಿದೆ” ಎಂದು ಘೋಷ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸತತ ಮೂರು ಪಂದ್ಯಗಳು
ಬೆಂಗಳೂರಿನಲ್ಲಿ ಮಾರ್ಚ್ 25ರಂದು ಪ್ರಸಕ್ತ ಋತುವಿನ ಮೊದಲ ಐಪಿಎಲ್ ಪಂದ್ಯ ನಡೆಯುತ್ತಿದೆ. ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪಂಜಾಬ್ ಕಿಂಗ್ಸ್ ಸವಾಲೊಡ್ಡಲಿದೆ. ಅದಾದ ನಾಲ್ಕು ದಿನಗಳ ನಂತರ ಆರ್‌ಸಿಬಿ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ. ತವರಿನಲ್ಲಿ ನಡೆಯಲಿರುವ ಮೂರನೇ ಪಂದ್ಯದಲ್ಲಿ ಆರ್‌ಸಿಬಿಯು ಏಪ್ರಿಲ್ 2ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೆಣಸಲಿದೆ. ಉದ್ಘಾಟನಾ ಪಂದ್ಯದ ಬಳಿಕ ಸತತ ಮೂರು ಪಂದ್ಯಗಳನ್ನು ಫಾಫ್ ಡುಪ್ಲೆಸಿಸ್ ಪಡೆ ಬೆಂಗಳೂರಿನಲ್ಲಿ ಆಡಲಿದೆ.
ನಗರದ ನೀರಿನ ನಮಗೆ ಪರಿಸ್ಥಿತಿಯ ಬಗ್ಗೆ ನಮಗೆ ತಿಳಿದಿದೆ. ಕೆಎಸ್‌ಸಿಎ ಪದಾಧಿಕಾರಿಗಳೊಂದಿಗೆ ನಾವು ನಿರಂತರ ಸಂಪರ್ಕದಲ್ಲಿದ್ದೇವೆ. ಆದರೆ ಇಲ್ಲಿ ಮೊದಲ ಪಂದ್ಯಕ್ಕೆ ಇನ್ನೂ ಎರಡು ವಾರಗಳಿವೆ. ಆದ್ದರಿಂದ, ಪಂದ್ಯಗಳನ್ನು ಸುಗಮವಾಗಿ ನಡೆಸುವ ವಿಶ್ವಾಸ ನಮಗಿದೆ ಎಂದು ಆರ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ | ಯುಪಿ ವಾರಿಯರ್ಸ್ ವಿರುದ್ಧ ಗುಜರಾತ್ ಜೈಂಟ್ಸ್ಗೆ ಭರ್ಜರಿ ಗೆಲುವು; ಆರ್ಸಿಬಿಗೆ ಚಿಗುರಿತು ಪ್ಲೇಆಫ್ ಕನಸು
ಕ್ರಿಕೆಟ್ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
(This copy first appeared in Hindustan Times Kannada website. To read more like this please logon to kannada.hindustantimes.com)
