ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು ಹಿನ್ನೆಲೆ; ಜಲಮಂಡಳಿ ಜೊತೆ ಕೆಎಸ್‌ಸಿಎ ಸಭೆ, ಐಪಿಎಲ್ ಪಂದ್ಯಗಳ ಭವಿಷ್ಯ ನಿರ್ಧಾರ
ಕನ್ನಡ ಸುದ್ದಿ  /  ಕ್ರಿಕೆಟ್  /  ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು ಹಿನ್ನೆಲೆ; ಜಲಮಂಡಳಿ ಜೊತೆ ಕೆಎಸ್‌ಸಿಎ ಸಭೆ, ಐಪಿಎಲ್ ಪಂದ್ಯಗಳ ಭವಿಷ್ಯ ನಿರ್ಧಾರ

ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು ಹಿನ್ನೆಲೆ; ಜಲಮಂಡಳಿ ಜೊತೆ ಕೆಎಸ್‌ಸಿಎ ಸಭೆ, ಐಪಿಎಲ್ ಪಂದ್ಯಗಳ ಭವಿಷ್ಯ ನಿರ್ಧಾರ

IPL 2024: ಐಪಿಎಲ್ ಪಂದ್ಯಗಳ ವೇಳೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ನೀರಿನ ಅಗತ್ಯತೆಗಳ ಕುರಿತು ಚರ್ಚಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಜೊತೆಗೆ ಸಭೆ ನಡೆಸುತ್ತಿದೆ. ಬೆಂಗಳೂರಿನಲ್ಲಿ ಐಪಿಎಲ್‌ ಪಂದ್ಯ ನಡೆಸುವ ಕುರಿತು ಸ್ಪಷ್ಟನೆ ಸಿಗಲಿದೆ.

ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು ಹಿನ್ನೆಲೆ; ಜಲಮಂಡಳಿ ಜೊತೆ ಕೆಎಸ್‌ಸಿಎ ಸಭೆ
ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು ಹಿನ್ನೆಲೆ; ಜಲಮಂಡಳಿ ಜೊತೆ ಕೆಎಸ್‌ಸಿಎ ಸಭೆ

ಬೆಂಗಳೂರು: ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಜನಸಾಮಾನ್ಯರು ಹನಿ ನೀರಿಗಾಗಿ ಪರದಾಡುತ್ತಿದ್ದಾರೆ. ಕಳೆದ ವರ್ಷ ಮುಂಗಾರು ಕೊರತೆ ಉಂಟಾಗಿದ್ದರಿಂದ ಬೇಸಿಗೆ ಆರಂಭಕ್ಕೂ ಮುನ್ನವೇ ಬರಗಾಲ ಎದುರಾಗಿದೆ. ಬೆಂಗಳೂರಿನಲ್ಲಂತೂ ತೀವ್ರ ನೀರಿನ ಬಿಕ್ಕಟ್ಟು ಎದುರಾಗಿದ್ದು, ಟೆಕ್ಕಿಗಳು ನಗರ ಬಿಟ್ಟು ತವರಿನತ್ತ ಹೊರಟಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ತೀವ್ರ ನೀರಿನ ಬಿಕ್ಕಟ್ಟು ಇರುವುದರಿಂದ ಐಪಿಎಲ್ ಪಂದ್ಯಾವಳಿಗಳನ್ನು ನಡೆಸುವುದು ಸರಿಯಲ್ಲ. ಇದಕ್ಕಾಗಿ ಅಪಾರ ನೀರು ವ್ಯರ್ಥವಾಗುತ್ತದೆ ಎಂಬುದು ಜನಸಾಮಾನ್ಯರ ಮಾತಾಗಿದೆ. ಮೊದಲೇ ಸಾರ್ವಜನಿಕರು ನೀರಿಲ್ಲದೆ ಪರದಾಡುತ್ತಿದ್ದಾರೆ. ಹಲವು ಶಾಲೆಗಳು ನೀರಿಲ್ಲದೆ ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿದೆ. ಅಪಾರ್ಟ್‌ಮೆಟ್ ನಿವಾಸಿಗಳು ತಮ್ಮ ಫ್ಲಾಟ್ ಬಿಟ್ಟು ಊರುಗಳತ್ತ ವಲಸೆ ಹೋಗುತ್ತಿದ್ದಾರೆ. ಇಷ್ಟೆಲ್ಲಾ ನೀರಿನ ಸಮಸ್ಯೆ ಇರುವಾಗ ಐಪಿಎಲ್ ಪಂದ್ಯವನ್ನು ಬೆಂಗಳೂರಿನಲ್ಲಿ ನಡೆಸಬೇಕೇ ಎಂದು ಜನಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ.

ಸೋಮವಾರ ಸಭೆ

ಮುಂಬರುವ ಐಪಿಎಲ್ ಪಂದ್ಯಗಳ ವೇಳೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ನೀರಿನ ಅಗತ್ಯತೆಗಳ ಕುರಿತು ಚರ್ಚಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಜೊತೆಗೆ ಸೋಮವಾರ (ಮಾರ್ಚ್‌ 18) ಸಭೆ ನಡೆಸುತ್ತಿದೆ.

ಇದನ್ನೂ ಓದಿ | ಚಿನ್ನಸ್ವಾಮಿ ಮೈದಾನಕ್ಕೆ ನೀರಿನ ಸಮಸ್ಯೆ ಇಲ್ಲ; ಬೆಂಗಳೂರಿನಲ್ಲಿ ಆರ್‌ಸಿಬಿ ಪಂದ್ಯ ನಡೆಸಲು ಸಮಸ್ಯೆ ಇಲ್ಲ ಎಂದ ಕೆಎಸ್‌ಸಿಎ

ಕ್ರೀಡಾಂಗಣಕ್ಕೆ ಹೆಚ್ಚಾಗಿ ಸಂಸ್ಕರಿಸಿದ ನೀರನ್ನೇ ಬಳಸಲಾಗುತ್ತದೆ ಎಂದು ಜಲಮಂಡಳಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ತಿಳಿಸಿದೆ. ಕುಡಿಯುವ ನೀರಿನ ಅವಶ್ಯಕತೆಗಳ ಬಗ್ಗೆ ಅರ್ಥ ಮಾಡಿಕೊಳ್ಳುವುದಕ್ಕಾಗಿ ನಾವು ಸಭೆ ನಡೆಸಲಿದ್ದೇವೆ ಎಂದು ಬಿಡಬ್ಲ್ಯುಎಸ್‌ಎಸ್‌ಬಿ ಅಧ್ಯಕ್ಷ ರಾಮ್ ಪ್ರಸಾದ್ ಮನೋಹರ್ ಅವರು ತಿಳಿಸಿದ್ದಾಗಿ ಡೆಕ್ಕನ್ ಹೆರಾಲ್ಡ್ ವರದಿ ತಿಳಿಸಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣವು 32,000 ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿದೆ. ಮಾರ್ಚ್ 25ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವೆ ಈ ಮೈದಾನದಲಿ ಮೊದಲ ಐಪಿಎಲ್ ಪಂದ್ಯ ನಡೆಯುತ್ತಿದೆ. ಐಪಿಎಲ್‌ ಮೊದಲ ಹಂತದಲ್ಲಿ ಮುಂದಿನ ಪಂದ್ಯಗಳು ಮಾರ್ಚ್ 29 ಮತ್ತು ಏಪ್ರಿಲ್ 2 ರಂದು ನಡೆಯಲಿದೆ.

ಇನ್ನು ಬಿಡಬ್ಲ್ಯುಎಸ್‌ಎಸ್‌ಬಿ ನಗರಕ್ಕೆ ಕಾವೇರಿ ನೀರು ಸರಬರಾಜನ್ನು ಕಡಿತಗೊಳಿಸಿಲ್ಲ. ಆದರೆ, ಅಂತರ್ಜಲವನ್ನು ಅವಲಂಬಿಸಿರುವ ಹೊರವಲಯಗಳಲ್ಲಿ ಅನೇಕ ಬೋರ್‌ವೆಲ್‌ಗಳು ಬತ್ತಿ ಹೋಗಿರುವುದರಿಂದ ನೀರಿನ ತೀವ್ರ ಬಿಕ್ಕಟ್ಟು ಎದುರಾಗಿದೆ. ಕೆಲವು ಪ್ರದೇಶಗಳಲ್ಲಿ ನೀರಿನ ಅಭಾವವು ಎಷ್ಟು ತೀವ್ರವಾಗಿದೆ ಎಂದರೆ, ನಿವಾಸಿಗಳು ಕೇವಲ ಒಂದು ಕೊಡ ನೀರಿಗಾಗಿ ಸುಮಾರು ಒಂದು ಗಂಟೆ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿಯಿದೆ.

ಕುಡಿಯುವ ನೀರು ವ್ಯರ್ಥ ಮಾಡುವಂತಿಲ್ಲ

ದಿನನಿತ್ಯದ ಬಳಕೆಕೂ ನೀರಿಲ್ಲದೆ ಜನರು ಕಂಗೆಟ್ಟು ಹೋಗಿದ್ದಾರೆ. ಊಟ ಮಾಡಿ ಕೈ ತೊಳೆಯಲೂ ನೀರಿಲ್ಲ, ಶೌಚಾಲಯಕ್ಕೆ ತೆರಳಲೂ ನೀರಿಲ್ಲದಂಥ ಪರಿಸ್ಥಿತಿ ಇದೆ. ಯಾರೂ ನೀರನ್ನು ವ್ಯರ್ಥ ಮಾಡಬಾರದು ಎಂದು ರಾಜ್ಯ ಸರ್ಕಾರ ಈಗಾಗಲೇ ಆದೇಶಿಸಿದೆ. ಕುಡಿಯುವ ನೀರಿನಲ್ಲಿ ವಾಹನಗಳನ್ನು ತೊಳೆಯುವುದು, ಮನರಂಜನೆ, ಕಾರಂಜಿ ಮುಂತಾದವುಗಳಿಗೆ ಬಳಸುವುದನ್ನು ನಿಷೇಧಿಸಿ ಈಗಾಗಲೇ ಆದೇಶ ಹೊರಡಿಸಿದೆ. ಒಂದು ವೇಳೆ ಈ ಆದೇಶವನ್ನು ಧಿಕ್ಕರಿಸಿದರೆ ಅಂಥವರು ಭಾರಿ ದಂಡ ತೆರಬೇಕಾಗುತ್ತದೆ.

ಇದನ್ನೂ ಓದಿ | ಖುಷಿ-ಅಚ್ಚರಿ-ನಿರಾಳ, 16 ವರ್ಷಗಳ ಕಾಯುವಿಕೆ ಕೊನೆಗೂ ಅಂತ್ಯ; ಚೊಚ್ಚಲ ಕಿರೀಟ ತೊಟ್ಟ ಆರ್​​ಸಿಬಿ, ‘ಈ ಸಲ ಕಪ್ ನಮ್ದೇ’

ಒಂದು ಕಾಲದಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಬೆಂಗಳೂರು, ಮಹಾನಗರಿಯಾಗಿ ಬೆಳೆದು ನಿಂತಿದೆ. ಉದ್ಯಾನನಗರಿ ಅಂತಲೂ ಪ್ರಸಿದ್ಧಿ ಪಡೆದಿರುವ ಬೆಂಗಳೂರು, ಇದೀಗ ದಶಕಗಳಲ್ಲಿ ಕಂಡೂ ಕೇಳರಿಯದ ಬರಗಾಲಕ್ಕೆ ತುತ್ತಾಗಿದೆ. ಈ ಹಿಂದೆ ರಾಜ್ಯಕ್ಕೆ ಬರಗಾಲ ವಕ್ಕರಿಸಿದ್ದರೂ ಬೆಂಗಳೂರು ಇಷ್ಟೊಂದು ನೀರಿನ ಅಭಾವ ಎದುರಿಸಿರಲಿಲ್ಲ. ಬೇಸಿಗೆ ಆರಂಭದಲ್ಲೇ ಈ ರೀತಿ ಪರಿಸ್ಥಿತಿಯಿದ್ದು, ಏಪ್ರಿಲ್, ಮೇ ತಿಂಗಳ ಪರಿಸ್ಥಿತಿ ಹೇಗೆ ಎಂಬ ಚಿಂತೆ ಜನರನ್ನು ಕಾಡುತ್ತಿದೆ. ಹೀಗಾಗಿ ಐಪಿಎಲ್ ಪಂದ್ಯಗಳನ್ನು ನಡೆಸಬಾರದು ಎಂದು ಜನರು ಹೇಳುತ್ತಿದ್ದಾರೆ.

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Whats_app_banner