46 ಎಸೆತ, 219.57 ಸ್ಟ್ರೈಕ್ರೇಟ್; ಬಿರುಗಾಳಿಯ ಇನ್ನಿಂಗ್ಸ್ನೊಂದಿಗೆ 2025ರ ವರ್ಷದ ಮೊದಲ ಶತಕ ಸಿಡಿಸಿ ಕುಸಾಲ್ ಪೆರೆರಾ ದಾಖಲೆ
Kusal Perera: ಶ್ರೀಲಂಕಾದ ಕುಸಾಲ್ ಪೆರೆರಾ ಅವರು 2025ರ ವರ್ಷದ ಮೊದಲ ಅಂತಾರಾಷ್ಟ್ರೀಯ ಶತಕವನ್ನು ಸಿಡಿಸಿದ್ದಾರೆ. ಇದರೊಂದಿಗೆ ಅವರು ಶ್ರೀಲಂಕಾ ಪರ ದಾಖಲೆ ಬರೆದಿದ್ದಾರೆ. ಅಲ್ಲದೆ, ತಂಡದ ಗೆಲುವಿನಲ್ಲೂ ಪ್ರಮುಖ ಪಾತ್ರವಹಿಸಿದ್ದಾರೆ.
2025ರ ವರ್ಷವು ಕುಸಾಲ್ ಪೆರೆರಾ (Kusal Perera) ಅವರ ಅಬ್ಬರದ ಶತಕ ಮತ್ತು ಶ್ರೀಲಂಕಾದ ಗೆಲುವಿನೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರಾರಂಭಗೊಂಡಿದೆ. ಈ ವರ್ಷದ ಮೊದಲ ಅಂತಾರಾಷ್ಟ್ರೀಯ ಪಂದ್ಯವು (ಟಿ20ಐ) ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ನಡುವೆ (New Zealand vs Sri Lanka 3rd T20I) ನೆಲ್ಸನ್ನ ಸ್ಯಾಕ್ಸ್ಟನ್ ಓವಲ್ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಕುಸಾಲ್ ಪೆರೆರಾ ಸಿಡಿಸಿದ ಸಿಡಿಲಬ್ಬರದ ಶತಕದ ನೆರವಿನಿಂದ ಪ್ರವಾಸಿ ತಂಡ ಶ್ರೀಲಂಕಾ 7 ರನ್ಗಳ ಅಂತರದಿಂದ ಗೆದ್ದು ಬೀಗಿದೆ. ಆದಾಗ್ಯೂ, ಆತಿಥೇಯ ನ್ಯೂಜಿಲೆಂಡ್ 3 ಪಂದ್ಯಗಳ ಸರಣಿಯನ್ನು 2-1 ರಿಂದ ಕೈವಶ ಮಾಡಿಕೊಂಡಿತು.
ನ್ಯೂಜಿಲೆಂಡ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ, 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಶ್ರೀಲಂಕಾ ಉತ್ತಮ ಆರಂಭ ಪಡೆಯಿತು. ಪವರ್ ಪ್ಲೇನಲ್ಲಿ ತಂಡವು 49 ರನ್ ಗಳಿಸಿತು. ಆದರೆ 2 ವಿಕೆಟ್ ಕಳೆದುಕೊಂಡಿತು. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ಕುಸಾಲ್ ಪೆರೆರಾ 46 ಎಸೆತಗಳಲ್ಲಿ 13 ಬೌಂಡರಿ, 4 ಸಿಕ್ಸರ್ಗಳ ಸಹಾಯದಿಂದ 101 ರನ್ ಗಳಿಸಿ ತಂಡವನ್ನು 218 ಸ್ಕೋರ್ಗಳ ಬೃಹತ್ ಮೊತಕ್ಕೆ ಕೊಂಡೊಯ್ದರು. ನಾಯಕ ಚರಿತ್ ಅಸಲಂಕಾ 24 ಎಸೆತಗಳಲ್ಲಿ 46 ರನ್ ಸಿಡಿಸಿ ಔಟಾದರು.
ದಾಖಲೆಯ ಶತಕ ಸಿಡಿಸಿದ ಕುಸಾಲ್ ಪೆರೆರಾ
ಚರಿತ್ ಅಸಲಂಕಾ ಜೊತೆಗೆ ಶತಕದ ಜೊತೆಯಾಟವಾಡಿದ ಪೆರೆರಾ ಅವರು ದಾಖಲೆ ನಿರ್ಮಿಸಿದ್ದಾರೆ. 219.57ರ ಬ್ಯಾಟಿಂಗ್ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ ಅವರು, ಶ್ರೀಲಂಕಾ ಪರ ದಾಖಲೆ ನಿರ್ಮಿಸಿದ್ದಾರೆ. ಮಹೇಲಾ ಜಯವರ್ಧನೆ, ತಿಲಕರತ್ನೆ ದಿಲ್ಶಾನ್ ನಂತರ ಶ್ರೀಲಂಕಾ ಪರ ಟಿ20ಐ ಕ್ರಿಕೆಟ್ನಲ್ಲಿ ಶತಕ ಗಳಿಸಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಕುಸಾಲ್ ಪೆರೆರಾ ಪಾತ್ರರಾದರು. 14 ವರ್ಷಗಳ ಬಳಿಕ ಶ್ರೀಲಂಕಾದ ಆಟಗಾರನೊಬ್ಬ ಟಿ20ಐನಲ್ಲಿ ಶತಕ ಬಾರಿಸಿದ್ದಾನೆ.
ಟಿ20ಐನಲ್ಲಿ ಶ್ರೀಲಂಕಾ ಪರ ಶತಕ
100 - ಮಹೇಲಾ ಜಯವರ್ಧನೆ, 2010
104* - ತಿಲಕರತ್ನೆ ದಿಲ್ಶಾನ್, 2011
101 - ಕುಸಾಲ್ ಪೆರೆರಾ, 2025
ದಿಟ್ಟ ಹೋರಾಟದ ನಡುವೆಯೂ ಸೋತ ನ್ಯೂಜಿಲೆಂಡ್
ನ್ಯೂಜಿಲೆಂಡ್ ಪರ ಆರಂಭಿಕ ಬ್ಯಾಟ್ಸಮನ್ ರಚಿನ್ ರವೀಂದ್ರ 39 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್ಗಳ ಸಹಾಯದಿಂದ 69 ರನ್ ಗಳಿಸಿದರು. ಸಹ ಬ್ಯಾಟರ್ ಟಿಮ್ ರಾಬಿನ್ಸನ್ (37) ಅವರೊಂದಿಗೆ ಮೊದಲ ವಿಕೆಟ್ಗೆ 81 ರನ್ಗಳ ಜೊತೆಯಾಟವನ್ನು ಪೇರಿಸಿದರು. ಮಧ್ಯಮ ಕ್ರಮಾಂಕದಲ್ಲಿ ಡಾರೆಲ್ ಮಿಚೆಲ್ 17 ಎಸೆತಗಳಲ್ಲಿ 1 ಬೌಂಡರಿ, 4 ಸಿಕ್ಸರ್ಗಳ ಸಹಾಯದಿಂದ 35 ರನ್ ಗಳಿಸಿದರು. ಆದರೆ, ಅವರು ಕೊನೆಯವರೆಗೂ ಉಳಿಯಲು ಸಾಧ್ಯವಾಗಲಿಲ್ಲ. ದಿಟ್ಟ ಹೋರಾಟದ ನಡುವೆಯೂ ನ್ಯೂಜಿಲೆಂಡ್ 7 ರನ್ಗಳ ಅಂತರದಿಂದ ಸೋಲೊಪ್ಪಿಕೊಂಡಿತು. ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 211 ರನ್ ಗಳಿಸಲಷ್ಟೇ ಶಕ್ತವಾಯಿತು. ಶ್ರೀಲಂಕಾ ಪರ ಚರಿತ್ ಅಸಲಂಕಾ 3 ವಿಕೆಟ್ ಪಡೆದು ಮಿಂಚಿದರು. ಶತಕ ಸಿಡಿಸಿದ ಕುಸಾಲ್ ಪೆರೆರಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. https://kannada.hindustantimes.com/astrology/yearly-horoscope