Wasim Akram: ಸಣ್ಣ ತಂಡಗಳೆದುರು ಮೈಮರೆಯಬೇಡಿ, ನೀವು ಕಳೆದ ಬಾರಿ ಫೈನಲ್ಗೂ ಅರ್ಹತೆ ಪಡೆದಿರಲಿಲ್ಲ; ಭಾರತಕ್ಕೆ ವಾಸೀಂ ಅಕ್ರಮ್ ಎಚ್ಚರಿಕೆ
Ind vs Pak Asia Cup: ಕಳೆದ ಬಾರಿಯ ಏಷ್ಯಾಕಪ್ನಲ್ಲಿ ನಾವು ಭಾರತ ಮತ್ತು ಪಾಕಿಸ್ತಾನ ಫೈನಲ್‌ನಲ್ಲಿ ಕಾಣಿಸಿಕೊಳ್ಳಲಿವೆ ಎಂದು ಭವಿಷ್ಯ ನುಡಿದಿದ್ದೆವು. ಆದರೆ ಆಗಿದ್ದೇನು ಎಂದು ಪಾಕಿಸ್ತಾನದ ದಿಗ್ಗಜ ಆಟಗಾರ ವಾಸೀಂ ಅಕ್ರಮ ಹೇಳಿದ್ದಾರೆ.
ಏಷ್ಯಾಕಪ್ ಟೂರ್ನಿಯಲ್ಲಿ (Asia Cup 2023) ಟೀಮ್ ಇಂಡಿಯಾ (Team India) ಎಚ್ಚರಿಕೆಯ ಹೆಜ್ಜೆ ಇಡಬೇಕು. ಕಳೆದ ವರ್ಷ ನಡೆದ ಟೂರ್ನಿಯಲ್ಲಿ ಫೈನಲ್ಗೂ ಅರ್ಹತೆ ಪಡೆಯಲು ವಿಫಲವಾಗಿತ್ತು ಎಂದು ಹೇಳಿರುವ ಪಾಕಿಸ್ತಾನ ತಂಡದ ದಿಗ್ಗಜ ಆಟಗಾರ ವಾಸೀಂ ಅಕ್ರಮ್ (Wasim Akram), ಗೆಲ್ಲುವ ಫೇವರಿಟ್ ತಂಡದ ಯಾವುದು ಎಂದು ಹೇಳುವುದು ಕಷ್ಟ ಎಂದು ತಿಳಿಸಿದ್ದಾರೆ.
ಆಗಸ್ಟ್ 30ರಿಂದ ಏಷ್ಯಾಕಪ್ ಟೂರ್ನಿಗೆ ಭರ್ಜರಿ ಚಾಲನೆ ಸಿಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನೇಪಾಳ ತಂಡಗಳು ಪಾಕ್ನ ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೆಣಸಾಟ ನಡೆಸಲಿವೆ. 6 ತಂಡಗಳು ಸಿದ್ಧತೆ ನಡೆಸಿದ್ದು, ಅದರಂತೆ ಭಾರತವು ಬೆಂಗಳೂರಿನ ಎನ್ಸಿಎನಲ್ಲಿ ಪೂರ್ವ ಸಿದ್ಧತಾ ತರಬೇತಿ ಶಿಬಿರ ನಡೆಸುತ್ತಿದೆ. ಆಗಸ್ಟ್ 29ರಂದು ಶ್ರೀಲಂಕಾಗೆ ಪ್ರಯಾಣ ಬೆಳೆಸಲಿದೆ.
ಆಯ್ಕೆ ಮಾಡುವುದು ಕಷ್ಟ
ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿರುವ ಟೀಮ್ ಇಂಡಿಯಾ, ಏಷ್ಯಾಕಪ್ ಇತಿಹಾಸದಲ್ಲಿ 8ನೇ ಟ್ರೋಫಿಗೆ ಮುತ್ತಿಕ್ಕಲು ಸಜ್ಜಾಗಿದೆ. ಇದು ಸುದೀರ್ಘ ಟೂರ್ನಿ. ಒಂದು ಪಂದ್ಯವನ್ನು ಗೆದ್ದು ಸೆಮೀಸ್ ಪ್ರವೇಶಿಸೋಕೆ ಸಾಧ್ಯವಿಲ್ಲ ಎಂದು ಯಾವ ತಂಡ ಸೆಮೀಸ್ಗೆ ಅರ್ಹತೆ ಪಡೆಯಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದರು.
ಪಾಕಿಸ್ತಾನ ತಂಡವು ಏಕದಿನ ಕ್ರಿಕೆಟ್ನಲ್ಲಿ ನಂಬರ್ 1 ಪಟ್ಟ ಅಲಂಕರಿಸಿದೆ. ಭಾರತ ತಂಡವು ಏಕದಿನ ಶ್ರೇಯಾಂಕದಲ್ಲಿ 3 ಸ್ಥಾನದಲ್ಲಿದೆ. ಉಭಯ ತಂಡಗಳು ಬಲಿಷ್ಠವಾಗಿದ್ದು, ಸ್ಟಾರ್ ಆಟಗಾರರ ದಂಡನ್ನೇ ಹೊಂದಿವೆ. ಇದರ ನಡುವೆಯೂ ಯಾವುದನ್ನೂ ನೆಚ್ಚಿನ ತಂಡವೆಂದು ಟ್ಯಾಗ್ ಮಾಡಲು ಅಕ್ರಮ್ ಇಚ್ಚಿಸಲಿಲ್ಲ.
ಭಾರತ-ಪಾಕಿಸ್ತಾನ ಪ್ರಶಸ್ತಿಯೇ ಗೆಲ್ಲಲಿಲ್ಲ!
ಕಳೆದ ಬಾರಿಯ ಏಷ್ಯಾಕಪ್ನಲ್ಲಿ ನಾವು ಭಾರತ-ಪಾಕಿಸ್ತಾನ ಫೈನಲ್‌ನಲ್ಲಿ ಕಾಣಿಸಿಕೊಳ್ಳಲಿವೆ ಎಂದು ಭವಿಷ್ಯ ನುಡಿದಿದ್ದೆವು. ಆದರೆ ಆಗಿದ್ದೇನು? ಎರಡೂ ತಂಡಗಳು ಹೊರತುಪಡಿಸಿ ಶ್ರೀಲಂಕಾ ಪ್ರಶಸ್ತಿ ಗೆದ್ದಿತ್ತು. 3 ತಂಡಗಳು ಅಪಾಯಕಾರಿಯೇ. ಯಾರಾದರೂ ಗೆಲ್ಲಬಹುದು. ಇಂತಹವರೇ ಎಂದು ಹೇಳಲು ಅಸಾಧ್ಯ ಎಂದರು.
‘ಚಿಕ್ಕ ತಂಡಗಳೆಂದು ಮೈಮರೆಯಬೇಡಿ’
ಏಷ್ಯಾಕಪ್ನಲ್ಲಿ ಎಲ್ಲರೂ ಫೋಕಸ್ ಮಾಡುವುದು ಭಾರತ-ಪಾಕಿಸ್ತಾನ ತಂಡಗಳ ಮೇಲೆ. ಆದರೆ ಇತರ ತಂಡಗಳು, ಅಷ್ಟೇ ಪ್ರಬಲ ಪೈಪೋಟಿ ನೀಡುತ್ತವೆ ಎಂಬುದನ್ನು ಮರೆಯಬಾರದು. ಭಾರಿ ನಿರೀಕ್ಷೆ ಹುಟ್ಟಿಸಿದ್ದ ಭಾರತ ಕಳೆದ ಬಾರಿ ಫೈನಲ್ಗೆ ಅರ್ಹತೆ ಪಡೆಯೋಕೆ ಸಾಧ್ಯವಾಗಿಲ್ಲ. ಪಾಕಿಸ್ತಾನವು ಪ್ರಶಸ್ತಿ ಗೆಲ್ಲಲು ವಿಫಲವಾಯಿತು ಎಂದರು.
ಭಾರತ-ಪಾಕಿಸ್ತಾನ ತಂಡಗಳಿಗೆ ಹೆಚ್ಚಿನ ಬೆಂಬಲ ಸಿಗುತ್ತದೆ. ಹಾಗಂತ ಮೈಮರೆಯಬಾರದು. ಇತರ ತಂಡಗಳು ಸಹ ಸ್ಪರ್ಧಿಸುತ್ತಿವೆ. ಅನಿರೀಕ್ಷಿತ ಎಂಬಂತೆ ಕಳೆದ ಬಾರಿ ಶ್ರೀಲಂಕಾ ಪ್ರಶಸ್ತಿ ಗೆದ್ದುಕೊಂಡಿತು. ಶ್ರೀಲಂಕಾ ಅಥವಾ ಬಾಂಗ್ಲಾದೇಶ ತಂಡವನ್ನು ಎಂದೂ ಕಡೆಗಣಿಸಬೇಡಿ ಎಂದು ಉಭಯ ದೇಶಗಳಿಗೂ ಎಚ್ಚರಿಕೆ ನೀಡಿದ್ದಾರೆ.
ಕಳೆದ ಬಾರಿ ನಡೆದ ಟಿ20 ಮಾದರಿಯ ಏಷ್ಯಾಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೂಪರ್-4 ಹಂತದಲ್ಲಿ ಹೊರಬಿದ್ದಿತ್ತು. ಶ್ರೀಲಂಕಾ ಮತ್ತು ಪಾಕಿಸ್ತಾನದ ಎದುರು ಹೀನಾಯವಾಗಿ ಸೋತು ಫೈನಲ್ಗೆ ಪ್ರವೇಶಿಸಲು ವಿಫಲವಾಗಿತ್ತು. ಹಾಗಾಗಿ ವಾಸೀಂ ಅಕ್ರಮ್ ಅವರು ಭಾರತೀಯ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ.