ಐಪಿಎಲ್ ಸೀಸನ್ 18, ಬದಲಾದ ನಿಯಮಗಳು ಒಂದಷ್ಟು; ಲಾಲಾರಸ ಬಳಕೆ, ಹೊಸ ಚೆಂಡು ಹಾಗೂ DRS ನಿಯಮಗಳ ವಿವರ
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್ ಸೀಸನ್ 18, ಬದಲಾದ ನಿಯಮಗಳು ಒಂದಷ್ಟು; ಲಾಲಾರಸ ಬಳಕೆ, ಹೊಸ ಚೆಂಡು ಹಾಗೂ Drs ನಿಯಮಗಳ ವಿವರ

ಐಪಿಎಲ್ ಸೀಸನ್ 18, ಬದಲಾದ ನಿಯಮಗಳು ಒಂದಷ್ಟು; ಲಾಲಾರಸ ಬಳಕೆ, ಹೊಸ ಚೆಂಡು ಹಾಗೂ DRS ನಿಯಮಗಳ ವಿವರ

ಎಲ್ಲಾ 10 ಐಪಿಎಲ್ ತಂಡಗಳು ಐಪಿಎಲ್‌ 18ನೇ ಆವೃತ್ತಿಯಲ್ಲಿ ಹೊಸ ನಿಯಮಗಳಿಗೆ ಒಗ್ಗಿಕೊಳ್ಳಲಿವೆ. ಈ ಹಿಂದೆ ನಿಷೇಧಿಸಲಾಗಿದ್ದ ನಿಯಮ ಈ ಬಾರಿ ಮತ್ತೆ ಜಾರಿಗೆ ಬಂದಿದೆ. ಇದೇ ವೇಳೆ ಡಿಆರ್‌ಎಸ್‌, ಹೊಸ ಚೆಂಡು, ಕ್ಯಾಪ್‌ ಧರಿಸುವ ಸಂಬಂಧ ಬಿಸಿಸಿಐ ಕೆಲವೊಂದು ನಿಬಂಧನೆಗಳನ್ನು ಪರಿಚಯಿಸಿದೆ.

ಐಪಿಎಲ್ ಸೀಸನ್ 18, ಬದಲಾದ ನಿಯಮಗಳು ಒಂದಷ್ಟು; ಲಾಲಾರಸ ಬಳಕೆ, ಹೊಸ ಚೆಂಡು ನಿಯಮಗಳ ವಿವರ
ಐಪಿಎಲ್ ಸೀಸನ್ 18, ಬದಲಾದ ನಿಯಮಗಳು ಒಂದಷ್ಟು; ಲಾಲಾರಸ ಬಳಕೆ, ಹೊಸ ಚೆಂಡು ನಿಯಮಗಳ ವಿವರ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 18ನೇ ಆವೃತ್ತಿ ಇಂದು (ಮಾ.22) ಆರಂಭವಾಗುತ್ತಿದೆ. ಮೊದಲ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಕೆಕೆಆರ್‌ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಬಾರಿಯ ಟೂರ್ನಿಯಲ್ಲಿ ಕೆಲವೊಂದು ಬದಲಾದ ನಿಯಮಗಳು ಜಾರಿಯಲ್ಲಿರಲಿವೆ. ಅಂದರೆ, ಕಳೆದ ಬಾರಿಗಿಂತ ಹೊಸ ನಿಯಮಗಳು ಈ ಬಾರಿ ಐಪಿಎಲ್‌ಗೆ ಅನ್ವಯಿಸಲಿವೆ. ಬಿಸಿಸಿಐ, ಟೂರ್ನಿಯ ಆರಂಭಕ್ಕೂ ಮುನ್ನ ಬದಲಾದ ನಿಯಮಗಳನ್ನು ಪರಿಚಯಿಸಿದೆ. ಮಾರ್ಚ್ 20ರಂದು ಮುಂಬೈನಲ್ಲಿ ನಡೆದ ಬಿಸಿಸಿಐ ಸಭೆಯ ಬಳಿಕ ನಾಲ್ಕು ಹೊಸ ನಿಯಮಗಳನ್ನು ಕ್ರಿಕೆಟ್‌ ಮಂಡಳಿ ಘೋಷಿಸಿದೆ. ಅವುಗಳ ವಿವರ ಇಲ್ಲಿದೆ.

  1. ಚೆಂಡನ್ನು ಹೊಳೆಯಿಸಲು ಎಂಜಲು ಬಳಕೆಗೆ ಅನುಮತಿ

ಕೋವಿಡ್ 19 ಸಮಯದಲ್ಲಿ ಚೆಂಡಿಗೆ ಲಾಲಾರಸ ಬಳಕೆ (ಎಂಜಲು ಸವರುವುದು) ಮಾಡುವುದನ್ನು ನಿಷೇಧಿಸಲಾಗಿತ್ತು. ಆದರೆ, ಇದೀಗ ಐಪಿಎಲ್ 2025ಕ್ಕೆ ಈ ನಿಷೇಧವನ್ನು ತೆಗೆದುಹಾಕಲಾಗಿದೆ. ಅಂದರೆ, ಬೌಲರ್‌ಗಳು ಚೆಂಡನ್ನು ಹೊಳೆಯಿಸಲು ಲಾಲಾರಸವನ್ನು ಬಳಸಲು ಅನುಮತಿ ನೀಡಲಾಗಿದೆ. ಇದು ಚೆಂಡು‌ ಸ್ವಿಂಗ್‌ ಆಗಲು ನೆರವಾಗುತ್ತದೆ. ಈ ನಿರ್ಧಾರವು ಎಲ್ಲಾ 10 ತಂಡಗಳ ನಾಯಕರೊಂದಿಗೆ ಮಾಡಿದ ಸಮಾಲೋಚನೆ ಬಳಿಕ ಜಾರಿಗೆ ತರಲಾಗುತ್ತಿದೆ.

2. ಇಬ್ಬನಿ ಸಮಯದಲ್ಲಿ ಚೆಂಡು ಬದಲಾವಣೆ

ರಾತ್ರಿ ನಡೆಯುವ ಪಂದ್ಯ (7:30) ಪಂದ್ಯಗಳ ಸಮಯದಲ್ಲಿ ಮೈದಾನದಲ್ಲಿ ಇಬ್ಬನಿ ಬೀಳುತ್ತದೆ. ಇಬ್ಬನಿಯಿಂದ ಉಂಟಾಗುವ ಸವಾಲುಗಳನ್ನು ಎದುರಿಸಲು, ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡುವ ತಂಡವು ಈಗ 10ನೇ ಓವರ್ ನಂತರ ಒಮ್ಮೆ ಚೆಂಡನ್ನು ಬದಲಾಯಿಸಲು ವಿನಂತಿಸುವ ಅವಕಾಶ ಪಡೆಯುತ್ತವೆ. ಇಬ್ಬನಿ ಇದೆಯೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ ಬೌಲಿಂಗ್ ಮಾಡುತ್ತಿರುವ ತಂಡದ ನಾಯಕ ಚೆಂಡು ಬದಲಾವಣೆಗೆ ವಿನಂತಿ ಮಾಡಬಹುದು. ಒಮ್ಮೆ ವಿನಂತಿ ಮಾಡಿದ ನಂತರ, ಅಂಪೈರ್‌ಗಳು ಕಡ್ಡಾಯವಾಗಿ ಅದೇ ರೀತಿಯ ಮತ್ತೊಂದು ಚೆಂಡನ್ನು ಬದಲಾಯಿಸುತ್ತಾರೆ. ಬದಲಿ ಚೆಂಡು ಯಾವುದು ಎಂಬುದನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಬೌಲಿಂಗ್ ತಂಡಕ್ಕೆ ಇರುವುದಿಲ್ಲ. ಇದನ್ನು ಅಂಪೈರ್‌ಗಳೇ ಮಾಡುತ್ತಾರೆ.

ಇದಕ್ಕೆ ಹೆಚ್ಚುವರಿಯಾಗಿ, 10ನೇ ಓವರ್‌ಗಿಂತ ಮುಂಚಿತವಾಗಿ ಯಾವುದೇ ಸಮಯದಲ್ಲಿ ಚೆಂಡು ತುಂಬಾ ಒದ್ದೆಯಾಗಿದ್ದರೆ, ಕಳೆದುಹೋದರೆ ಅಥವಾ ಯಾವುದೇ ರೀತಿ ಹಾನಿಗೊಳಗಾದರೆ ಅದನ್ನು ಬದಲಾಯಿಸುವ ಅಧಿಕಾರ ಅಂಪೈರ್‌ಗಳಿಗೆ ಇರುತ್ತದೆ.

3. ಹೊಸ ನೀತಿ ಸಂಹಿತೆ

ಈ ಋತುವಿನಿಂದ ಜಾರಿಗೆ ಬರುವಂತೆ, ಟಾಟಾ ಐಪಿಎಲ್ 2025ರಿಂದ ಹೊಸ ನೀತಿ ಸಂಹಿತೆ ಜಾರಿಗೆ ತರಲಾಗುತ್ತದೆ. ಇದರ ಪ್ರಕಾರ ಡಿಮೆರಿಟ್ ಪಾಯಿಂಟ್ಸ್ ವ್ಯವಸ್ಥೆ ಮತ್ತು ಅಮಾನತು ಅಂಕಗಳನ್ನು ಪರಿಚಯಿಸಲಾಗುತ್ತದೆ. ಇದು 36 ತಿಂಗಳವರೆಗೆ ಮಾನ್ಯವಾಗಿರುತ್ತದೆ. ಈ ನಿಯಮದ ಪ್ರಕಾರ ಆಟಗಾರ ಅಥವಾ ತಂಡದ ಅಧಿಕಾರಿ ಅಪರಾಧ ಮಾಡಿದ್ದರೆ, ಅವರಿಗೆ ಡಿಮೆರಿಟ್ ಪಾಯಿಂಟ್‌ಗಳನ್ನು ನೀಡಲಾಗುತ್ತದೆ.

4. ಡಿಆರ್‌ಎಸ್ ವ್ಯಾಪ್ತಿಯ ವಿಸ್ತರಣೆ

ಆಫ್-ಸ್ಟಂಪ್‌ನ ಹೊರಗೆ ಎತ್ತರ ಆಧಾರಿತ ನೋ-ಬಾಲ್ ರಿವ್ಯೂ ಮತ್ತು ವೈಡ್-ಬಾಲ್ ರಿವ್ಯೂಗೆ ಡಿಸಿಷನ್‌ ರಿವ್ಯೂ ಸಿಸ್ಟಮ್‌ (DRS) ವಿಸ್ತರಿಸಲಾಗಿದೆ. ನವೀಕರಿಸಿದ ವ್ಯವಸ್ಥೆಯು ಅಂಪೈರ್‌ಗಳು ನಿಖರ ಮತ್ತು ಸ್ಥಿರ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗುತ್ತದೆ. ಇಲ್ಲಿ ಹಾಕ್-ಐ ತಂತ್ರಜ್ಞಾನ ಮತ್ತು ಬಾಲ್-ಟ್ರ್ಯಾಕಿಂಗ್ ಅನ್ನು ಬಳಸಲಾಗುತ್ತದೆ.

ಇತರ ನಿಯಮಗಳು ಹೀಗಿವೆ

  • ಪಂದ್ಯದ ದಿನ ಯಾವುದೇ ತಂಡಕ್ಕೆ ಅಭ್ಯಾಸಕ್ಕೆ ಅನುಮತಿ ಇರುವುದಿಲ್ಲ.
  • ಪಂದ್ಯದ ದಿನದಂದು ಮುಖ್ಯ ಸ್ಕ್ವೇರ್‌ನಲ್ಲಿ ಯಾವುದೇ ಫಿಟ್‌ನೆಸ್ ಪರೀಕ್ಷೆ ನಡೆಯುವುದಿಲ್ಲ.
  • ಆಟಗಾರರು ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಧರಿಸಬೇಕು. ಆಟಗಾರರು ಕ್ಯಾಪ್ ಧರಿಸುವುದಿಲ್ಲವಾದರೆ, ಪ್ರಸಾರಕರು ಅದನ್ನು ಸೆರೆಹಿಡಿಯುವವರೆಗಾದರೂ (ಅಂದರೆ ಕ್ಯಾಪ್‌ ಧರಿಸಿರುವುದು ಪ್ರಸಾರ ಆಗುವವರೆಗೂ), ಮೊದಲ ಎರಡು ಓವರ್‌ಗಳವರೆಗೆ ಧರಿಸಬೇಕೆಂದು ಬಿಸಿಸಿಐ ವಿನಂತಿಸಿದೆ.
  • ಪಂದ್ಯದ ನಂತರದ ಪ್ರಸ್ತುತಿ ಸಮಯದಲ್ಲಿ (ಪ್ರೆಸೆಂಟೇಶನ್) ತೋಳಿಲ್ಲದ ಜೆರ್ಸಿಯನ್ನು (ಸ್ಲೀವ್‌ಲೆಸ್‌) ಧರಿಸುವಂತಿಲ್ಲ. ಮೊದಲ ಬಾರಿಗೆ ವಿಫಲವಾದರೆ ಎಚ್ಚರಿಕೆ ನೀಡಲಾಗುತ್ತದೆ. ಎರಡನೇ ಬಾರಿಗೆ ದಂಡ ವಿಧಿಸಲಾಗುತ್ತದೆ.
  • ಐಪಿಎಲ್ 2024ರಂತೆಯೇ, ಪಂದ್ಯದ ದಿನಗಳಲ್ಲಿ ತಂಡದ ವೈದ್ಯರು ಸೇರಿದಂತೆ 12 ಮಾನ್ಯತೆ ಪಡೆದ ಸಹಾಯಕ ಸಿಬ್ಬಂದಿಗೆ ಮಾತ್ರ ಅವಕಾಶವಿರುತ್ತದೆ.

ಇದನ್ನೂ ಓದಿ | ಐಪಿಎಲ್ 2025 ಆರಂಭಕ್ಕೂ ಮುನ್ನ ಹೊಸ ನಿಯಮಗಳು ಜಾರಿ; ಸ್ಲೀವ್‌ಲೆಸ್ ಜೆರ್ಸಿ ಹಾಕಂಗಿಲ್ಲ, ಕುಟುಂಬ ಸದಸ್ಯರಿಗೆ ಅನುಮತಿ ಇಲ್ಲ

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
Whats_app_banner