ODI World Cup: ನೆದರ್ಲೆಂಡ್ಸ್ ತಂಡಕ್ಕೆ ನೆಟ್ ಬೌಲರ್​ ಆಗಿ ಆಯ್ಕೆಯಾದ ಸ್ವಿಗ್ಗಿ ಡೆಲಿವರಿ ಬಾಯ್
ಕನ್ನಡ ಸುದ್ದಿ  /  ಕ್ರಿಕೆಟ್  /  Odi World Cup: ನೆದರ್ಲೆಂಡ್ಸ್ ತಂಡಕ್ಕೆ ನೆಟ್ ಬೌಲರ್​ ಆಗಿ ಆಯ್ಕೆಯಾದ ಸ್ವಿಗ್ಗಿ ಡೆಲಿವರಿ ಬಾಯ್

ODI World Cup: ನೆದರ್ಲೆಂಡ್ಸ್ ತಂಡಕ್ಕೆ ನೆಟ್ ಬೌಲರ್​ ಆಗಿ ಆಯ್ಕೆಯಾದ ಸ್ವಿಗ್ಗಿ ಡೆಲಿವರಿ ಬಾಯ್

Lokesh Kumar: ಬೆಂಗಳೂರಿನ ಆಲೂರಿನಲ್ಲಿ ಅಭ್ಯಾಸ ಆರಂಭಿಸಿರುವ ನೆದರ್ಲೆಂಡ್ಸ್, ಸ್ವಿಗ್ಗಿ ಡೆಲಿವರಿ ಬಾಯ್​ ಒಬ್ಬರನ್ನು ನೆಟ್​ ಬೌಲಿಂಗ್​ಗಾಗಿ ನೇಮಕ ಮಾಡಿಕೊಂಡಿದೆ. ಹಾಗಾದರೆ ಆತ ಯಾರು ಎಂಬುದನ್ನು ಈ ವರದಿಯಲ್ಲಿ ನೋಡೋಣ.

ಸ್ವಿಗ್ಗಿ ಡೆಲಿವರಿ ಬಾಯ್ ಲೋಕೇಶ್​ ಕುಮಾರ್​.
ಸ್ವಿಗ್ಗಿ ಡೆಲಿವರಿ ಬಾಯ್ ಲೋಕೇಶ್​ ಕುಮಾರ್​.

ಕ್ರಿಕೆಟ್ ಲೋಕದ ಅತಿದೊಡ್ಡ ಜಾತ್ರೆಗೆ ಇಡೀ ಜಗತ್ತೇ ಕಾತರದಿಂದ ಕಾಯುತ್ತಿದೆ. ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ (ICC ODI World Cup 2023) ಪಾಲ್ಗೊಳ್ಳುವ 10 ತಂಡಗಳೂ ಭರ್ಜರಿ ಸಿದ್ಧತೆಯಲ್ಲಿ ತೊಡಗಿವೆ. ಆಸ್ಟ್ರೇಲಿಯಾ-ನೆದರ್ಲೆಂಡ್ಸ್ ತಂಡಗಳು (Australia and Netherlands) ಒಂದು ಹೆಜ್ಜೆ ಮುಂದೆ ಎಂಬಂತೆ ಈಗಾಗಲೇ ಭಾರತಕ್ಕೆ ಬಂದಿಳಿದಿವೆ. ಆತಿಥೇಯ ಭಾರತದ ವಿರುದ್ಧ ಏಕದಿನ ಸರಣಿಯನ್ನಾಡಲು ಆಸೀಸ್ ಸಜ್ಜಾಗಿದ್ದು (India vs Australia), ಇದೇ ಕಾಂಗರೂ ಪಡೆಗೆ ದೊಡ್ಡ ಅಭ್ಯಾಸವಾಗಲಿದೆ.

ಅತ್ತ ನೆದರ್ಲೆಂಡ್ಸ್​ ಬೆಂಗಳೂರಿನ ಆಲೂರಿನ ಮೈದಾನದಲ್ಲಿ ಅಭ್ಯಾಸ ಆರಂಭಿಸಿದೆ. ಆದರೆ, ಆಲೂರಿನಲ್ಲಿ ಅಭ್ಯಾಸ ಆರಂಭಿಸಿರುವ ನೆದರ್ಲೆಂಡ್ಸ್ ತಂಡವು, ಸ್ವಿಗ್ಗಿ ಡೆಲಿವರಿ ಬಾಯ್​ ಒಬ್ಬರನ್ನು ನೆಟ್​ ಬೌಲಿಂಗ್​ಗಾಗಿ ನೇಮಕ ಮಾಡಿಕೊಂಡಿದೆ. ನೆದರ್ಲೆಂಡ್ಸ್, ಭಾರತಕ್ಕೆ ತೆರಳುವ ಮುನ್ನ ನೆಟ್ಸ್​​ನಲ್ಲಿ ಬೌಲಿಂಗ್​​ನಲ್ಲಿ ಮಾಡಲು ಉತ್ತಮ ಸ್ಪಿನ್ನರ್​ಗಳು ಬೇಕಿದ್ದಾರೆ ಎಂದು ಜಾಹೀರಾತೊಂದನ್ನು ಪ್ರಕಟಿಸಿತ್ತು. ನಮಗೆ ಭಾರತದ​ ಬೌಲರ್​ಗಳೇ ಬೇಕೆಂದು ಬೇಡಿಕೆಯಿಟ್ಟಿತ್ತು.

ಯಾರು ಈ ಲೋಕೇಶ್?

ಸ್ವಿಗ್ಗಿ ಡೆಲಿವರಿ ಬಾಯ್​ 29 ವರ್ಷದ ಲೋಕೇಶ್ ಕುಮಾರ್ ಎಡಗೈ ವೇಗಿ ಮತ್ತು ಮಣಿಕಟ್ಟು ಸ್ಪಿನ್ನರ್. ಲೋಕೇಶ್ ಚೆನ್ನೈ ಮೂಲದವರು. ಸ್ವಿಗ್ಗಿಯಲ್ಲಿ ಫುಡ್ ಡೆಲಿವರಿ ಎಕ್ಸಿಕ್ಯೂಟಿವ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ನೆದರ್ಲೆಂಡ್ಸ್​ ನೆಟ್ ಬೌಲರ್ ಆಗಿ ಆಯ್ಕೆಯಾದ ಲೋಕೇಶ್ ಜೀವನಕ್ಕೆ ಅನಿರೀಕ್ಷಿತ ತಿರುವು ಸಿಕ್ಕಿದ್ದು, ನೆಟ್ ಬೌಲರ್ ಆಗಿ ತನ್ನ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸಲು ಹೊರಟಿದ್ದಾರೆ. ನೆದರ್ಲೆಂಡ್ಸ್​ ಆಯ್ಕೆ ಮಾಡಿದ ನಾಲ್ವರು ನೆಟ್ ಬೌಲರ್​​ಗಳಲ್ಲಿ ಈತ ಕೂಡ ಒಬ್ಬ ಎಂಬುದು ವಿಶೇಷ.

ನೆಟ್​ ಬೌಲರ್​ ಆಗಿ ಸೇರಲು ನೆದರ್ಲೆಂಡ್ಸ್ ತಂಡ ಸೂಚಿಸಿದ್ದ ವೆಬ್​ಸೈಟ್​ನಲ್ಲಿ 2018 ರಿಂದ ಫುಡ್ ಡೆಲಿವರಿಯಾಗಿ ಕೆಲಸ ಮಾಡುತ್ತಿರುವ ಲೋಕೇಶ್, ತನ್ನ ವಿಡಿಯೋ ಅಪ್‌ಲೋಡ್ ಮಾಡಿದ್ದರು. ಒಟ್ಟು 10,000 ಬೌಲರ್​​ಗಳು ವಿಡಿಯೋಗಳನ್ನು ಅಪ್​ಲೋಡ್ ಮಾಡಿದ್ದರು. ಇಷ್ಟು ಮಂದಿಯನ್ನೂ ಮೌಲ್ಯಮಾಪನ ಮಾಡಿದ್ದ ಡಚ್ಚರು, ಎಡಗೈ ವೇಗಿ ಚೈನಾಮನ್ ಆಗಿರುವ ಲೋಕೇಶ್​ರನ್ನು ಆಯ್ಕೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಸಂತಸ ವ್ಯಕ್ತಪಡಿಸಿದ ಲೋಕೇಶ್

ಔಟ್‌ಫಿಟ್ ಇಂಡಿಯನ್ ಆಯಿಲ್ RO (S&RC)ನಲ್ಲಿ 4 ವರ್ಷಗಳ ಕಾಲ 5ನೇ ವಿಭಾಗದಲ್ಲಿ ಆಡಿದ್ದೇನೆ. ಅಲ್ಲಿಂದ ನೋಂದಣಿ ಮಾಡಿಕೊಂಡಿದ್ದೆ. ನಾನು ಆಯ್ಕೆಯಾಗಿದ್ದು ಅದೃಷ್ಟ ಎಂದು ಭಾವಿಸುತ್ತೇನೆ. ನೆದರ್ಲೆಂಡ್ಸ್ ತಂಡದ ಆಟಗಾರರು ನಮ್ಮನ್ನು ಅದ್ಭುತವಾಗಿ ಸ್ವಾಗತ ಮಾಡಿಕೊಂಡರು. ನೆಟ್​​ ಬೌಲರ್​​ಗಳಿಗೆ ಪ್ರವೇಶ ಸಮಾರಂಭ ಏರ್ಪಡಿಸಿದ್ದರು. ಮುಕ್ತವಾಗಿರಿ, ಇದು ನಿಮ್ಮ ತಂಡ ಎಂದೇ ಭಾವಿಸಿ ಎಂದು ಹೇಳಿದರು ಎಂದು ಲೋಕೇಶ್​ ಹೇಳಿದ್ದಾರೆ.

ಫುಡ್ ಡೆಲಿವರಿ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿರುವುದು ಪರೋಕ್ಷವಾಗಿ ಕ್ರಿಕೆಟಿಗನಾಗಿ ಬೆಳೆಯಲು ಸಹಕಾರಿಯಾಗಿದೆ. ನನ್ನ ಕಾಲೇಜು ದಿನಗಳ ನಂತರ, ನನ್ನ ಗಮನವು ಕ್ರಿಕೆಟ್‌ ಮೇಲಿತ್ತು. ನಾನು ನಾಲ್ಕು ವರ್ಷಗಳ ಕಾಲ ಕ್ರಿಕೆಟ್‌ನಲ್ಲಿ ಕಳೆದಿದ್ದೇನೆ. 2018ರಲ್ಲಿ ಉದ್ಯೋಗಕ್ಕೆ ಸೇರಿದೆ. ಅಂದಿನಿಂದಲೂ ಸ್ವಿಗ್ಗಿಯೊಂದಿಗೆ ಕೆಲಸ ಮಾಡುತ್ತಿದ್ದೇನೆ. ಆಹಾರ ತಲುಪಿಸುವ ಮೂಲಕ ಮಾತ್ರ ಹಣವನ್ನು ಗಳಿಸುತ್ತೇನೆಯೇ ಹೊರತು ಬೇರೆ ಯಾವುದೇ ಆದಾಯದ ಮೂಲವನ್ನು ಹೊಂದಿಲ್ಲ. ಈಗ ಒಂದೊಳ್ಳೆ ಅವಕಾಶ ಸಿಕ್ಕಿರುವುದು ಖುಷಿಯಾಗಿದೆ ಎಂದು ಹೇಳಿದ್ದಾರೆ ಲೋಕೇಶ್.

Whats_app_banner