ಕೆಳ ಕ್ರಮಾಂಕದ ಆಸೀಸ್ ಬ್ಯಾಟರ್‌ಗಳ ದಿಟ್ಟ ಹೋರಾಟ; ಭಾರತಕ್ಕೆ ಸವಾಲಿನ ಗುರಿ ಖಚಿತ, ರೋಚಕ ಅಂತ್ಯದತ್ತ ಬಾಕ್ಸಿಂಗ್ ಡೇ ಟೆಸ್ಟ್
ಬಾಕ್ಸಿಂಗ್ ಡೇ ಟೆಸ್ಟ್ ಅಂತಿಮ ದಿನದಾಟದಲ್ಲಿ ಭಾರತ ತಂಡಕ್ಕೆ ಕನಿಷ್ಠ 333 ರನ್ ಗುರಿ ಸಿಗುವುದು ಖಚಿತವಾಗಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾದ ಕೊನೆಯ ವಿಕೆಟ್ ಪಡೆಯಲು ಭಾರತ ಬೌಲರ್‌ಗಳು ಎಲ್ಲಾ ರೀತಿಯ ಶ್ರಮ ಹಾಕಿಯೂ ವಿಫಲರಾದರು. ಹೀಗಾಗಿ ನಾಲ್ಕನೇ ಟೆಸ್ಟ್ ಪಂದ್ಯವು ರೋಚಕ ಅಂತ್ಯದತ್ತ ಸಾಗಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯವು ರೋಚಕ ಅಂತ್ಯದತ್ತ ಸಾಗುತ್ತಿದೆ. ನಾಲ್ಕನೇ ದಿನದಾಟ ಪೂರ್ಣಗೊಂಡಿದ್ದು, ಇನ್ನೊಂದು ದಿನದ ಆಟವಷ್ಟೇ ಬಾಕಿ ಉಳಿದಿದೆ. ಆದರೆ, ಫಲಿತಾಂಶ ಏನಾಗಬಹುದು ಎಂದು ಊಹಿಸುವುದು ತುಸು ಕಷ್ಟ. ಏಕೆಂದರೆ, ಭಾರತ ಮತ್ತು ಆಸ್ಟ್ರೇಲಿಯಾ ಎರಡೂ ತಂಡಗಳಿಗೂ ಸಮಾನ ಗೆಲುವಿನ ಅವಕಾಶ ಒಂದೆಡೆಯಾದರೆ, ಪಂದ್ಯ ಡ್ರಾಗೊಳ್ಳುವ ಸಂಭವವೂ ಇದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಆಸೀಸ್ ಆಲೌಟ್ ಆಗಲು ಭಾರತ ಇನ್ನೊಂದು ವಿಕೆಟ್ ಪಡೆಯಬೇಕಿದ್ದು, ಐದನೇ ದಿನದಾಟದಲ್ಲಿ 333ಕ್ಕಿಂತ ಹೆಚ್ಚು ರನ್ ಟಾರ್ಗೆಟ್ ಸಿಗಲಿದೆ.
ನಾಲ್ಕನೇ ದಿನದಾಟದ ಆರಂಭವೂ ಸಂಪೂರ್ಣ ಭಾರತದ ಪರವಿತ್ತು. ಭಾರತೀಯ ವೇಗಿಗಳು ಅಬ್ಬರಿಸಿದ, ಆಸ್ಟ್ರೇಲಿಯಾದ ಘಟಾನುಘಟಿ ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಅಟ್ಟಿದರು. ಒಂದು ಹಂತದಲ್ಲಿ ಕೇವಲ 91 ರನ್ ವೇಳೆಗೆ 6 ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯಾ, ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತು. ಆದರೆ, ಕೆಳ ಕ್ರಮಾಂಕದ ಬೌಲರ್‌ಗಳ ಬ್ಯಾಟಿಂಗ್‌ನಿಂದ ತಂಡವು 200 ರನ್ ಗಟಿ ದಾಟಿತು. ದಿನದ ಅಂತ್ಯದೊಳಗೆ ಆಸೀಸ್ ಆಲೌಟ್ ಆಗುತ್ತೆ ಎಂದೇ ಲೆಕ್ಕಾಚಾರ ಹಾಕಿದ್ದ ರೋಹಿತ್ ಶರ್ಮಾ ಪಡೆ, ಕೊನೆಯ ಒಂದು ವಿಕೆಟ್ ಪಡೆಯವಲ್ಲಿ ವಿಫಲವಾಯ್ತು. ಸ್ಕಾಟ್ ಬೋಲ್ಯಾಂಡ್ ಹಾಗೂ ನಥನ್ ಲಿಯಾನ್ 10ನೇ ವಿಕೆಟ್‌ಗೆ ಅಜೇಯ 55 ರನ್‌ಗಳ ಜೊತೆಯಾಟವಾಡಿ, ಐದನೇ ದಿನಕ್ಕೆ ಬ್ಯಾಟಿಂಗ್ ಉಳಿಸಿಕೊಂಡಿದ್ದಾರೆ.
ಭಾರತ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 369 ರನ್ ಗಳಿಸಿತು. 105 ರನ್‌ಗಳ ಮುನ್ನಡೆ ಗಳಿಸಿದ್ದ ಆಸೀಸ್, ಎರಡನೇ ಇನ್ನಿಂಗ್ಸ್‌ನಲ್ಲಿ ಬೇಗನೆ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಜಸ್ಪ್ರೀತ್ ಬುಮ್ರಾ ಮೇಲಿಂದ ಮೇಲೆ ವಿಕೆಟ್ ಕಬಳಿಸುತ್ತಾ ಸಾಗಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಬುಮ್ರಾರನ್ನು ಕಾಡಿದ್ದ ಕಾನ್ಸ್ಟಾಸ್, ಬೇಗನೆ ವಿಕೆಟ್ ಒಪ್ಪಿಸಿದರು. ಬುಮ್ರಾಗೆ ಕೈಜೋಡಿಸಿದ ಸಿರಾಜ್ ಕೂಡಾ ಖವಾಜಾ ವಿಕೆಟ್ ಪಡೆದರು.
ಆಸೀಸ್ ಪರ ಕೆಲಕಾಲ ಭಾರತವನ್ನು ಕಾಡಿದವರು ಲಬುಶೇನ್. 70 ರನ್ ಸಿಡಿಸಿದ ಅವರು ತಂಡದ ಮೊತ್ತ ಹಿಗ್ಗಿಸುವಲ್ಲಿ ನೆರವಾದರು. ಆಸೀಸ್ ಬೇಗನೆ ಆಲೌಟ್ ಆಗುವುದರಲ್ಲಿತ್ತು. ಯಶಸ್ವಿ ಜೈಸ್ವಾಲ್ ಕೈಬಿಟ್ಟ ಕೆಲವು ಕ್ಯಾಚ್‌ಗಳು ತಂಡಕ್ಕೆ ದುಬಾರಿಯಾಯ್ತು.
ಟ್ರಾವಿಡ್ ಹೆಡ್, ಮಾರ್ಷ್ ಮತ್ತೆ ವಿಫಲ
ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾಗಿದ್ದ ಟ್ರಾವಿಸ್ ಹೆಡ್, ಎರಡನೇ ಇನ್ನಿಂಗ್ಸ್‌ನಲ್ಲಿಯೂ 1 ರನ್ ಗಳಿಸಿ ಔಟಾದರು. ಮಿಚೆಲ್ ಮಾರ್ಷ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಪ್ಯಾಟ್ ಕಮಿನ್ಸ್ 41 ರನ್‌ಗಳ ಅಮೂಲ್ಯ ಕೊಡುಗೆ ನೀಡಿದರು. ಆದರೆ, ತಂಡಕ್ಕೆ ದುಬಾರಿಯಾಗಿದ್ದು ಲಿಯಾನ್ ಆಟ. ಅಜೇಯ 41 ರನ್ ಗಳಿಸಿದ ಅವರು, ನಾಲ್ಕನೇ ದಿನದಾಟದಲ್ಲಿ ತಂಡ ಆಲೌಟ್ ಆಗದಂತೆ ನೋಡಿಕೊಂಡರು. ಹೀಗಾಗಿ ಭಾರತ ತಂಡ ಕೊನೆಯ ವಿಕೆಟ್ ಪಡೆಯಲು ಅಂತಿಮ ದಿನದಾಟದ ಆರಂಭಕ್ಕೆ ಕಾಯಬೇಕಿದೆ. ಬುಮ್ರಾ 4 ವಿಕೆಟ್ ಪಡೆದಿದ್ದು, ಸಿರಾಜ್ 3 ವಿಕೆಟ್ ಕಬಳಿಸಿದ್ದಾರೆ.
ಸದ್ಯ ಆಸೀಸ್ ಗಳಿಕೆ 9 ವಿಕೆಟ್‌ಗೆ 228 ರನ್. ಕಾಂಗರೂಗಳು ಅದಾಗಲೇ 333 ರನ್ ಮುನ್ನಡೆ ಸಾಧಿಸಿದ್ದಾರೆ. ಭಾರತಕ್ಕೆ ಒಂದೇ ದಿನದೊಳಗೆ ಗುರಿ ತಲುಪಬೇಕಾದ ಒತ್ತಡವಿದೆ. ಈ ಸವಾಲು ಭಾರತಕ್ಕೆ ಅಷ್ಟೇನೂ ಸುಲಭವಲ್ಲ. ಆದರೆ, ಸಂಘಟಿತ ಹೋರಾಟದಿಂದ ಎಂಸಿಜಿ ಟೆಸ್ಟ್ ಗೆಲ್ಲುವ ಎಲ್ಲಾ ಅವಕಾಶಗಳು ತಂಡಕ್ಕಿವೆ.
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.