ವಿಧಿಯ ಕೈವಾಡ 2 ಘಟನೆ ನಡೀತು, ಅವನು ಹುಟ್ದ, ಆ ಜಾಗನೂ ಹುಟ್ತು; ಆರ್ಸಿಬಿ ಜತೆಗೆ ವಿರಾಟ್ ಕೊಹ್ಲಿ 16ನೇ ವಾರ್ಷಿಕೋತ್ಸವ
Virat Kohli 16 Years for RCB : 2024ರ ಮಾರ್ಚ್ 11ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೊತೆಗೆ ವಿರಾಟ್ ಕೊಹ್ಲಿ ಅವರು 16ನೇ ವಾರ್ಷಿಕೋತ್ಸವದ ಆಚರಿಸಿಕೊಳ್ಳುತ್ತಿದ್ದಾರೆ.

ಭಾರತೀಯ ಕ್ರಿಕೆಟ್ನ ಸೂಪರ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು (Virat Kohli) ಇಂಡಿಯನ್ ಪ್ರೀಮಿಯರ್ ಲೀಗ್‌ನ (Indian Premier League) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ (Royal Challengers Bangalore) ಸೇರಿ 16 ವರ್ಷ ಪೂರೈಸಿದ್ದಾರೆ. ವಿರಾಟ್ ಇಂದು (ಮಾರ್ಚ್ 11) ಆರ್ಸಿಬಿ ಜೊತೆಗೆ 16ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಉದ್ಘಾಟನಾ ಟೂರ್ನಿಯಿಂದ ಈವರೆಗೂ ಒಂದೇ ಫ್ರಾಂಚೈಸಿಯ ಪರ ಆಡಿದ ಏಕೈಕ ಆಟಗಾರ ಅಂದರೆ ಅದು ವಿರಾಟ್ ಕೊಹ್ಲಿ ಮಾತ್ರ. 2008ರ ಮಾರ್ಚ್ 11ರಂದು 'ರಾಯಲ್' ತಂಡವನ್ನು ಸೇರಿದ್ದ ಕಿಂಗ್ಗೆ ಆರ್ಸಿಬಿ ವಿಶೇಷ ಗೌರವ ಸಲ್ಲಿಸಿದೆ. ಮಾರ್ಚ್ 11, 2008 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಆ ವರ್ಷದ ಅಂಡರ್-19 ವಿಶ್ವಕಪ್ ಆಟಗಾರರನ್ನು ಆಯ್ಕೆ ಮಾಡಲು ಫ್ರಾಂಚೈಸಿಗಳಿಗೆ ಅನುಮತಿಸುವ ಕರಡು ವ್ಯವಸ್ಥೆಯ ಸಮಯದಲ್ಲಿ ವಿರಾಟ್ರನ್ನು 12 ಲಕ್ಷಕ್ಕೆ ಖರೀದಿಸಿತ್ತು.
ವಿರಾಟ್ ಕೊಹ್ಲಿಯ 16 ವರ್ಷಗಳ ಪ್ರಯಾಣದ ವಿಡಿಯೋವನ್ನು ಆರ್ಸಿಬಿ ಹಂಚಿಕೊಂಡಿದೆ. ಕನ್ನಡದ ಬ್ಲಾಕ್‌ಬಸ್ಟರ್ ಕೆಜಿಎಫ್‌ನ ಥೀಮ್ ಸಾಂಗ್‌ನೊಂದಿಗೆ ಕಿಂಗ್ಗೆ ಗೌರವ ಸಲ್ಲಿಸಿದೆ. ‘ವಿಧಿಯ ಕೈವಾಡ ಎರಡು ಘಟನೆ ನಡೆಯಿತು. ಅವನು ಹುಟ್ಟಿದ, ಆ ಜಾಗನೂ ಹುಟ್ಟಿತು‘ ಡೈಲಾಗ್ನೊಂದಿಗೆ ಈ ವಿಡಿಯೋ ಆರಂಭವಾಗುತ್ತದೆ. ಫ್ರಾಂಚೈಸಿಗೆ ಅತ್ಯಂತ ನಿಷ್ಠೆ ತೋರಿರುವ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಮತ್ತು ಜಾಕ್ ಕಾಲಿಸ್ ಅವರಂತಹ ಸ್ಟಾರ್ಗಳ ತಂಡದಲ್ಲಿ ಕಾಣಿಸಿಕೊಂಡರೂ ಕೊಹ್ಲಿ ಆರ್ಸಿಬಿ ತಂಡಕ್ಕಾಗಿ ವಿಶೇಷ ಚಾಪು ಮೂಡಿಸಿದ್ದರು. 2013ರಲ್ಲಿ ನಾಯಕತ್ವ ವಹಿಸಿಕೊಂಡ ಕಿಂಗ್, 2016ರಲ್ಲಿ ತಂಡವನ್ನು ಫೈನಲ್‌ಗೇರಿಸಿದ್ದರು. ಆ ಆವೃತ್ತಿಯಲ್ಲಿ 4 ಶತಕ ಸೇರಿ 973 ರನ್‌ಗಳ ದಾಖಲೆಯ ಮೊತ್ತವನ್ನು ಗಳಿಸಿದ್ದರು. ಆದರೆ, ಕೊಹ್ಲಿ ಪಡೆ ಫೈನಲ್‌ನಲ್ಲಿ ಡೇವಿಡ್ ವಾರ್ನರ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋತಿತ್ತು.
ನಾಯಕನಾಗಿ ವಿರಾಟ್ ಕೊಹ್ಲಿ 143 ಪಂದ್ಯಗಳಲ್ಲಿ ಆರ್ಸಿಬಿ ತಂಡವನ್ನು ಮುನ್ನಡೆಸಿದ್ದಾರೆ. 66ರಲ್ಲಿ ಗೆಲುವು, 70ರಲ್ಲಿ ಸೋಲು ಕಂಡಿದ್ದಾರೆ. 7 ಪಂದ್ಯಗಳು ಫಲಿತಾಂಶ ಪಡೆದಿಲ್ಲ. ಗೆಲುವಿನ ಪ್ರಮಾಣ ಶೇ 46.15ರಷ್ಟಿದೆ.
ಆರ್ಸಿಬಿ ಪರ 237 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಕೊಹ್ಲಿ, 7 ಶತಕ, 50 ಅರ್ಧಶತಕ ಸೇರಿದಂತೆ 7263 ರನ್ ಗಳಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ ಎಂಬ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. ಐಪಿಎಲ್ 2021ರ ಆವೃತ್ತಿಯಲ್ಲಿ ತನ್ನ ನಾಯಕತ್ವದಿಂದ ಕೆಳಗಿಳಿಯುವ ಮುನ್ನ ಕೊಹ್ಲಿ, 8 ವರ್ಷಗಳ ಕಾಲ ಆರ್‌ಸಿಬಿಯನ್ನು ಮುನ್ನಡೆಸಿದ್ದರು. ಕಳೆದ 2 ಋತುಗಳಲ್ಲಿ ಫಾಫ್ ಡು ಪ್ಲೆಸಿಸ್ ನಾಯಕತ್ವದಲ್ಲಿ ಕೊಹ್ಲಿ ಆಡುತ್ತಿದ್ದಾರೆ.
ಫ್ರಾಂಚೈಸಿಗಳಿಂದ ಬಂದಿತ್ತು ಆಫರ್
16 ವರ್ಷಗಳಿಂದ ಆರ್ಸಿಬಿ ಪರ ಆಡುತ್ತಿರುವ ಕೊಹ್ಲಿಗೆ ಬೇರೆ ಫ್ರಾಂಚೈಸಿಗಳಿಂದಲೂ ಆಫರ್ ಬಂದಿತ್ತು. ಹರಾಜಿಗೆ ಬರುವಂತೆ ಸಾಕಷ್ಟು ಫ್ರಾಂಚೈಸಿಗಳು ಕೇಳಿದ್ದವು. ಆದರೂ ಆರ್ಸಿಬಿ ಜೊತೆಗೆ ಉಳಿಯಲು ನಿರ್ಧರಿಸಿದ್ದೇಕೆ ಎಂಬುದರ ಕುರಿತು ಕೊಹ್ಲಿ ಈ ಹಿಂದೆ ಹೇಳಿದ್ದರು. ನನ್ನನ್ನು ಹೇಗಾದರೂ ಹರಾಜಿಗೆ ಬರಲು ಸಾಕಷ್ಟು ಫ್ರಾಂಚೈಸಿಗಳು ಪ್ರಯತ್ನಿಸಿದವು. ಹಲವರು ನನ್ನನ್ನು ಸಂಪರ್ಕಿಸಿದ್ದವು. ಆದರೆ ಆರ್ಸಿಬಿ ಜೊತೆಗಿನ ನಿಷ್ಠೆ ನನ್ನನ್ನು ಇಲ್ಲೇ ಉಳಿಸಿಕೊಂಡಿದೆ. ಹಾಗಾಗಿ ಆರ್ಸಿಬಿ ಹೊರತುಪಡಿಸಿ ಬೇರೊಂದು ತಂಡಕ್ಕೆ ಹೋಗಲ್ಲ. ಆರ್ಸಿಬಿಯೊಂದಿಗೆ ನನ್ನ ಕೊನೆಯ ಐಪಿಎಲ್ ಆಗಿರಲಿದೆ ಎಂದು 2022ರಲ್ಲಿ ಹೇಳಿದ್ದರು.