ಜಯದ ಹಳಿಗೆ ಮರಳಲು ಲಕ್ನೋ-ಪಂಜಾಬ್ ತವಕ; ಪಿಬಿಕೆಎಸ್-ಎಲ್ಎಸ್ಜಿ ತಂಡಗಳ ಬಲಿಷ್ಠ ಸಂಭಾವ್ಯ ಪ್ಲೇಯಿಂಗ್ XI
LSG vs PBKS Playing XI : ಐಪಿಎಲ್ನ 11ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಉಭಯ ತಂಡಗಳ ಸಂಭಾವ್ಯ ತಂಡ, ಪಿಚ್ ರಿಪೋರ್ಟ್ ಹೇಗಿದೆ ಎಂಬುದನ್ನು ನೋಡೋಣ.
17ನೇ ಆವೃತ್ತಿಯ ಐಪಿಎಲ್ನಲ್ಲಿ 10 ಪಂದ್ಯಗಳು ಪೂರ್ಣಗೊಂಡಿವೆ. ಈಗ ಮಾರ್ಚ್ 30ರಂದು ನಡೆಯುವ 11ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು (Lucknow Super Giants vs Punjab Kings) ಕಾದಾಟಕ್ಕೆ ಸಿದ್ಧಗೊಂಡಿವೆ. ಲಕ್ನೋದ ಏಕನಾ ಕ್ರಿಕೆಟ್ ಮೈದಾನದಲ್ಲಿ ಜರುಗುವ ಈ ಕದನದಲ್ಲಿ ಎಲ್ಎಸ್ಜಿ ತನ್ನ ತವರಿನಲ್ಲಿ ಮೊದಲ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಅತ್ತ ತನ್ನ ಮೊದಲ ಪಂದ್ಯದಲ್ಲಿ ಜಯಸಿ ಎರಡನೇ ಪಂದ್ಯದಲ್ಲಿ ಮಕಾಡೆ ಮಲಗಿದ್ದ ಪಂಜಾಬ್, ಈಗ ಲಯಕ್ಕೆ ಮರಳಲು ಸಜ್ಜಾಗಿದೆ.
ಉಭಯ ತಂಡಗಳಲ್ಲೂ ಬ್ಯಾಟಿಂಗ್ ಸಮಸ್ಯೆಗಳ ಬಗ್ಗೆ ಕಳವಳ ಮುಂದುವರೆದಿದೆ. ಪಂಜಾಬ್ ಬ್ಯಾಟಿಂಗ್ನಲ್ಲಿ ಘಟಾನುಘಟಿ ಆಟಗಾರರಿದ್ದರೂ ಪರಿಣಾಮಕಾರಿ ಇನ್ನಿಂಗ್ಸ್ ಬರುತ್ತಿಲ್ಲ. ಅದರಲ್ಲೂ ಜಾನಿ ಬೈರ್‌ಸ್ಟೋ, ಕೆಟ್ಟ ಫಾರ್ಮ್ ಮುಂದುವರೆಸಿದ್ದಾರೆ. ಆದರೂ ಮತ್ತೊಂದು ಅವಕಾಶ ಕೊಟ್ಟು ನೋಡುವ ನಿರ್ಧಾರಕ್ಕೆ ಬಂದಿದೆ. ಬೌಲಿಂಗ್ನಲ್ಲಿ ಹರ್ಷಲ್ ಪಟೇಲ್ ಮತ್ತು ಅರ್ಷ್ದೀಪ್ ಸಿಂಗ್ ದುಬಾರಿಯಾಗುತ್ತಿರುವುದು ತಂಡದ ಹಿನ್ನಡೆಗೆ ಕಾರಣವಾಗಿದೆ.
ಮತ್ತೊಂದೆಡೆ ಪಂಜಾಬ್ಗಿಂತಲೂ ಎಲ್ಎಸ್ಜಿ ಬ್ಯಾಟಿಂಗ್ ಘಟಕ ಬಲಿಷ್ಠವಾಗಿದ್ದರೂ ಸಾಮರ್ಥ್ಯಕ್ಕೆ ತಕ್ಕಂತೆ ತಮ್ಮ ಮೊದಲ ಪಂದ್ಯದಲ್ಲಿ ಪ್ರದರ್ಶನ ಹೊರಬರಲಿಲ್ಲ. ದೇವದತ್ ಪಡಿಕ್ಕಲ್ ಮತ್ತು ಆಯುಷ್ ಬದೋನಿ ಸಿಕ್ಕ ಅವಕಾಶ ಕೈಚೆಲ್ಲಬಾರದು. ಬೌಲಿಂಗ್ನಲ್ಲೂ ನಿರೀಕ್ಷಿತ ಪ್ರದರ್ಶನ ಹೊರ ಬರುತ್ತಿಲ್ಲ. ಸದ್ಯ ಆಡಿರುವ ಮೊದಲ ಪಂದ್ಯದಲ್ಲೇ ಆಟಗಾರರ ಸಾಮರ್ಥ್ಯವನ್ನು ಅಳೆಯಲು ಸಾಧ್ಯವಿಲ್ಲ. ಮತ್ತದೇ ತಂಡವನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.
ಉಭಯ ತಂಡಗಳ ಮುಖಾಮುಖಿ ಸಾಧನೆ
ಲಕ್ನೋ ಮತ್ತು ಪಂಜಾಬ್ ತಂಡಗಳು ಕೇವಲ 3 ಪಂದ್ಯಗಳಲ್ಲಿ ಮಾತ್ರ ಪರಸ್ಪರ ಮುಖಾಮುಖಿಯಾಗಿವೆ. ಈ ಪೈಕಿ ಎಲ್ಎಸ್ಜಿ ತಂಡವೇ ಮೇಲುಗೈ ಸಾಧಿಸಿದ್ದು, ಎರಡಲ್ಲಿ ಜಯಿಸಿದೆ. ಪಿಬಿಕೆಎಸ್ 1ರಲ್ಲಿ ಗೆಲುವು ದಾಖಲಿಸಿದೆ.
LSG vs PBKS ಪಿಚ್ ವರದಿ
ಲಕ್ನೋದ ಏಕಾನಾ ಮೈದಾನದ ಪಿಚ್ ವಿಶಿಷ್ಟವಾದ ಐಪಿಎಲ್ ಪಿಚ್ ಆಗಿದೆ. ಬ್ಯಾಟರ್‌ಗಳಿಗೆ ಅನುಕೂಲಕರವಾಗಿರುವ ಕಾರಣ ಬೌಲರ್ಗಳು ವಿಕೆಟ್ ಪಡೆಯಲು ಶ್ರಮ ಹಾಕಬೇಕಾಗುತ್ತದೆ. ಆದಾಗ್ಯೂ, ಇದು ನಿಧಾನಗತಿಯ ಬೌಲರ್‌ಗಳಿಗೆ ಸ್ವಲ್ಪ ಸಹಾಯ ನೀಡುವ ಸಾಧ್ಯತೆ ಇದೆ. ಇದೇ ಮೊದಲ ಬಾರಿಗೆ ಐಪಿಎಲ್ 2024 ಪಂದ್ಯ ಈ ಸ್ಥಳದಲ್ಲಿ ನಡೆಯಲಿದ್ದು, ಹೇಗೆ ವರ್ತಿಸುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ.
LSG vs PBKS ಹವಾಮಾನ
ಪಂದ್ಯ ಆರಂಭವಾದಾಗ ಲಕ್ನೋದಲ್ಲಿ ತಾಪಮಾನ ಸುಮಾರು 32 ಡಿಗ್ರಿ ಇರುತ್ತದೆ. ಪಂದ್ಯದ ನಂತರ ಅದು ಸ್ವಲ್ಪಮಟ್ಟಿಗೆ 27 ಡಿಗ್ರಿಗೆ ಇಳಿಯುತ್ತದೆ. ಆರ್ದ್ರತೆಯು 40% ಕ್ಕಿಂತ ಹೆಚ್ಚಿಲ್ಲದಿದ್ದರೂ ಮಳೆಯಾಗುವ ಸಾಧ್ಯತೆಯಿಲ್ಲ.
ಪಂಜಾಬ್ ಕಿಂಗ್ಸ್ ಸಂಭಾವ್ಯ XI
ಶಿಖರ್ ಧವನ್ (ನಾಯಕ), ಜಾನಿ ಬೈರ್‌ಸ್ಟೋ, ಪ್ರಭುಸಿಮ್ರಾನ್ ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಸ್ಯಾಮ್ ಕರನ್, ಲಿಯಾಮ್ ಲಿವಿಂಗ್‌ಸ್ಟನ್, ಹರ್‌ಪ್ರೀತ್ ಬ್ರಾರ್, ಕಗಿಸೊ ರಬಾಡ, ರಾಹುಲ್ ಚಹರ್, ಅರ್ಷದೀಪ್ ಸಿಂಗ್. [ಇಂಪ್ಯಾಕ್ಟ್ ಪ್ಲೇಯರ್ - ಶಶಾಂಕ್ ಸಿಂಗ್]
ಲಕ್ನೋ ಸೂಪರ್ ಜೈಂಟ್ಸ್ ಸಂಭಾವ್ಯ XI
ಕೆಎಲ್ ರಾಹುಲ್ (ವಿಕೆಟ್ ಕೀಪರ್/ನಾಯಕ), ಕ್ವಿಂಟನ್ ಡಿ ಕಾಕ್, ಆಯುಷ್ ಬದೋನಿ, ನಿಕೋಲಸ್ ಪೂರನ್, ಮಾರ್ಕಸ್ ಸ್ಟೊಯ್ನಿಸ್, ಕೃನಾಲ್ ಪಾಂಡ್ಯ, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್, ಯಶ್ ಠಾಕೂರ್, ನವೀನ್-ಉಲ್-ಹಕ್. [ಇಂಪ್ಯಾಕ್ಟ್ ಪ್ಲೇಯರ್ - ದೀಪಕ್ ಹೂಡಾ]
ಸರಣಿ | ಇಂಡಿಯನ್ ಪ್ರೀಮಿಯರ್ ಲೀಗ್ 2024 |
ಪಂದ್ಯ | ಎಲ್ಎಸ್ಜಿ vs ಪಿಬಿಕೆ, 11 ನೇ ಪಂದ್ಯ |
ಸ್ಥಳ | ಏಕನಾ ಕ್ರಿಕೆಟ್ ಸ್ಟೇಡಿಯಂ, ಲಕ್ನೋ |
ಪಂದ್ಯ ಆರಂಭ | ರಾತ್ರಿ 7:30ಕ್ಕೆ - 30 ಮಾರ್ಚ್ 2024 |
ಟಿವಿ ಚಾನೆಲ್ | ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ |
ನೇರ ಪ್ರಸಾರ | ಜಿಯೋ ಸಿನಿಮಾ ಅಪ್ಲಿಕೇಶನ್ |