ಕನ್ನಡ ಸುದ್ದಿ  /  Cricket  /  Lsg Star Mayank Yadav Bowling With 155 Kmph Speed Here Is Full List Of Fastest Deliveries In Ipl History Umran Malik Jra

155.8 ಕಿಮೀ ವೇಗದಲ್ಲಿ ಮಯಾಂಕ್ ಯಾದವ್ ಬೌಲಿಂಗ್; ಬ್ರೇಕ್ ಆಯ್ತಾ ಉಮ್ರಾನ್ ಮಲಿಕ್ ರೆಕಾರ್ಡ್? ಐಪಿಎಲ್ ವೇಗದ ಎಸೆತಗಳ ಪಟ್ಟಿ ಹೀಗಿದೆ

Mayank Yadav: ಪಂಜಾಬ್‌ ಕಿಂಗ್ಸ್‌ ವಿರುದ್ಧದ ಐಪಿಎಲ್‌ ಪಂದ್ಯದಲ್ಲಿ ಹೊಸ ಪ್ರತಿಭೆ ಮಯಾಂಕ್ ಯಾದವ್ ಹುಟ್ಟಿಕೊಂಡಿದ್ದಾರೆ. 150ಕ್ಕೂ ಅಧಿಕ ವೇಗದ ಎಸೆತಗಳನ್ನು ಎಸೆದು, ಲಕ್ನೋ ಪರ ಮೂರು ವಿಕೆಟ್‌ ಕಬಳಿಸಿದರು.‌ ಇದರೊಂದಿಗೆ ಐಪಿಎಲ್‌ 2024ರಲ್ಲಿ ಅತ್ಯಂತ ವೇಗದ ಬೌಲಿಂಗ್‌ ಮಾಡಿದ ದಾಖಲೆ ನಿರ್ಮಿಸಿದ್ದಾರೆ.

155.8 ಕಿಮೀ ವೇಗದಲ್ಲಿ ಮಯಾಂಕ್ ಯಾದವ್ ಬೌಲಿಂಗ್
155.8 ಕಿಮೀ ವೇಗದಲ್ಲಿ ಮಯಾಂಕ್ ಯಾದವ್ ಬೌಲಿಂಗ್

ಐಪಿಎಲ್ ಪಂದ್ಯಾವಳಿಯು ಹತ್ತಾರು, ನೂರಾರು ಪ್ರತಿಭೆಗಳನ್ನು ಸೃಷ್ಟಿಸುವ ಟೂರ್ನಿ ಎಂಬುದು ವರ್ಷಗಳ ಹಿಂದೆಯೇ ಸಾಬೀತಾಗಿದೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗುರುತಿಸಿಕೊಂಡ ಆಟಗಾರರ ಸಂಖ್ಯೆ ಒಂದೆರಡಲ್ಲ. ಭಾರತೀಯ ಕ್ರಿಕೆಟ್‌ನಲ್ಲಿ ಪ್ರತಿಭೆಗಳನ್ನು ಹುಟ್ಟುಹಾಕುವ ಯಂತ್ರ ಐಪಿಎಲ್‌ ಎಂಬುದಕ್ಕೆ ಮತ್ತೊಮ್ಮೆ ಪುಷ್ಠಿ ಸಿಕ್ಕಿದೆ. ಮಾರ್ಚ್‌ 30ರ ಶನಿವಾರ ನಡೆದ ಲಕ್ನೋ ಸೂಪರ್‌ ಜೈಂಟ್ಸ್‌ ಮತ್ತು ಪಂಜಾಬ್‌ ಕಿಂಗ್ಸ್‌ ತಂಡಗಳ ನಡುವಿನ ಪಂದ್ಯದಲ್ಲಿ ಮತ್ತೋರ್ವ ಯುವ ಪ್ರತಿಭೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗುರುತುಸಿಕೊಂಡಿದ್ದಾರೆ. ಅವರೇ ಮಯಾಂಕ್ ಯಾದವ್.

ಲಕ್ನೋ ಪರ ಐಪಿಎಲ್‌ಗೆ ಪದಾರ್ಪಣೆ ಮಾಡಿ ಚೊಚ್ಚಿಲ ಪಂದ್ಯ ಆಡಿದ ಮಯಾಂಕ್ ಯಾದವ್, ದಾಖಲೆಯ 155.8 ಕಿ.ಮೀ ವೇಗದಲ್ಲಿ ಬೌಲಿಂಗ್‌ ಮಾಡಿ ಮಿಂಚಿದ್ದಾರೆ. ಪ್ರಸಕ್ತ ಐಪಿಎಲ್‌ ಆವೃತ್ತಿಯಲ್ಲಿ ಇದು ಈವರೆಗಿನ ಅತ್ಯಂತ ವೇಗದ ಎಸೆತ ಎಂಬುದು ವಿಶೇಷ. ಯುವ ವೇಗಿಯ ಬೌಲಿಂಗ್‌ ನೋಡಿ ಖುದ್ದು ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ ಕೂಡಾ ಅಚ್ಚರಿಗೊಂಡಿದ್ದಾರೆ.

21 ವರ್ಷದ ಯುವ ಆಟಗಾರ, ಪದಾರ್ಪಣೆ ಪಂದ್ಯದಲ್ಲೇ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಅದರೊಂದಿಗೆ ಚೊಚ್ಚಿಲ ಐಪಿಎಲ್‌ ಪಂದ್ಯದಲ್ಲೇ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು.

ಇದನ್ನೂ ಓದಿ | ಪಾಕಿಸ್ತಾನ ಕ್ರಿಕೆಟ್‌ನಲ್ಲಿ ನಾಯಕತ್ವ ಹೈಡ್ರಾಮಾ; ಶಾಹೀನ್ ಅಫ್ರಿದಿಗೆ ಗೇಟ್‌ ಪಾಸ್, ಮತ್ತೆ ಬಾಬರ್ ಅಜಮ್ ಮರು ನೇಮಕ

ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ, ಒಂದು ಹಂತದಲ್ಲಿ ಲಕ್ನೋ ಸೋಲುವ ಸಾಧ್ಯತೆ ಇತ್ತು. ಈ ವೇಳೆ ಮ್ಯಾಜಿಕ್‌ ಮಾಡಿದವರು ಮಯಾಂಕ್. ಗಾಯದಿಂದಾಗಿ ಈ ವರ್ಷದ ಆರಂಭದಲ್ಲಿ ರಣಜಿ ಟ್ರೋಫಿ ಪಂದ್ಯಾವಳಿಯನ್ನು ಕಳೆದುಕೊಂಡಿದ್ದ 21 ವರ್ಷದ ವೇಗಿ, ಪಂಜಾಬ್‌ ವಿರುದ್ಧ 150ಕ್ಕೂ ಹೆಚ್ಚು ವೇಗಿದ ಬೆಂಕಿ ಚೆಂಡುಗಳನ್ನು ಎಸೆದರು. 27 ರನ್‌ ಬಿಟ್ಟುಕೊಟ್ಟು ಪ್ರಮುಖ ಮೂರು ವಿಕೆಟ್‌ಗಳನ್ನು ಪಡೆದರು.

ಪಂಜಾಬ್‌ ಇನ್ನಿಂಗ್ಸ್‌ನ 12ನೇ ಓವರ್‌ನಲ್ಲಿ ಮಯಾಂಕ್ ಅವರ 155.8 ಕಿ.ಮೀ ವೇಗದ ಎಸೆತವು, ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿ ಈವರೆಗೆ ಬೌಲ್ ಮಾಡಿದ ಅತ್ಯಂತ ವೇಗದ ಎಸೆತವಾಗಿದೆ. ಪಂಜಾಬ್ ವಿರುದ್ಧ ಮಯಾಂಕ್ ಎಸೆದ ಮೂರು ಎಸೆತಗಳು ಐಪಿಎಲ್ 2024ರ ವೇಗದ ಎಸೆತಗಳ ಪಟ್ಟಿಯಲ್ಲಿ ಅಗ್ರ ಮೂರರಲ್ಲಿ ಸ್ಥಾನ ಪಡೆದಿವೆ. ಇದೇ ವೇಳೆ ರಾಜಸ್ಥಾನ್ ರಾಯಲ್ಸ್‌ ತಂಡದಲ್ಲಿರುವ ದಕ್ಷಿಣ ಆಫ್ರಿಕಾ ವೇಗಿ ನಾಂಡ್ರೆ ಬರ್ಗರ್ ನಂತರದ ಸ್ಥಾನದಲ್ಲಿದ್ದಾರೆ.

ಐಪಿಎಲ್ 2024ರ ಅತಿ ವೇಗದ ಎಸೆತಗಳು

 • 155.8 kmph - ಮಯಾಂಕ್ ಯಾದವ್ (LSG vs PBKS)
 • 153.9 kmph - ಮಯಾಂಕ್ ಯಾದವ್ - (LSG vs PBKS)
 • 153.4 kmph - ಮಯಾಂಕ್ ಯಾದವ್ - (LSG vs PBKS)
 • 153 kmph - ನಂದ್ರೆ ಬರ್ಗರ್ - (RR vs DC)
 • 152.3 kmph - ಗೆರಾಲ್ಡ್ ಕೊಯೆಟ್ಜಿ - (MI vs SRH)
 • 151.2 kmph - ಅಲ್ಜಾರಿ ಜೋಸೆಫ್ - (RCB vs KKR)
 • 150.9 kmph - ಮಥೀಶ ಪತಿರಣ - (CSK vs GT)

ಮಯಾಂಕ್‌ ಯಾದವ್‌ ಇದೀಗ ಸನ್‌ರೈಸರ್ಸ್ ಹೈದರಾಬಾದ್ ಸ್ಟಾರ್ ಉಮ್ರಾನ್ ಮಲಿಕ್ ಅವರನ್ನು ತಮ್ಮ ವೇಗದಲ್ಲಿ ಸೋಲಿಸಿದ್ದಾರೆಯೇ ಎಂಬ ಪ್ರಶ್ನೆಗಳಿವೆ. ಈ ಆವೃತ್ತಿಯಲ್ಲಿ ಉಮ್ರಾನ್‌ ಇನ್ನೂ ಆಡಿಲ್ಲ. ಆದರೆ, ಈ ಹಿಂದೆ ಆಡಿದಾಗ ವೇಗದ ಎಸೆತಗಳನ್ನು ಮಲಿಕ್‌ ಎಸೆದಿದ್ದರು. ಐಪಿಎಲ್ ಇತಿಹಾಸದಲ್ಲಿ ಅತಿ ವೇಗದ ಎಸೆತಗಳ ಪಟ್ಟಿಯಲ್ಲಿ ಇದೀಗ ಎಲ್ಎಸ್‌ಜಿ ವೇಗಿ ಮಯಾಂಕ್‌ ಸ್ಥಾನ ಪಡೆದಿದ್ದಾರೆ. 155.8 ಕಿ.ಮೀ ಬೌಲಿಂಗ್‌ ಈ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ಉಮ್ರಾನ್ ಮಲ್ಲಿಕ್‌ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 17 ಋತುಗಳಲ್ಲಿ 155 ಕಿ.ಮೀ.ಗಿಂತ ಹೆಚ್ಚು ವೇಗದ ಎಸೆತಗಳನ್ನು ಎಸೆದ ಭಾರತೀಯರು ಇವರು ಇಬ್ಬರು ಮಾತ್ರ.

ಐಪಿಎಲ್ ಇತಿಹಾಸದಲ್ಲಿ ಅತಿ ವೇಗದ ಎಸೆತಗಳು

 • ಶಾನ್ ಟೈಟ್ -157.71 ಕಿ.ಮೀ (2011)
 • ಲಾಕಿ ಫರ್ಗುಸನ್ -157.3 ಕಿ.ಮೀ (2022)
 • ಉಮ್ರಾನ್ ಮಲಿಕ್ -157 ಕಿ.ಮೀ (2022)
 • ಅನ್ರಿಚ್ ನಾರ್ಟ್ಜೆ 156.22 ಕಿ.ಮೀ (2020)
 • ಉಮ್ರಾನ್ ಮಲಿಕ್ -156 ಕಿ.ಮೀ (2022
 • ಮಯಾಂಕ್ ಯಾದವ್ -155.8 ಕಿ.ಮೀ (2024)

ಇದನ್ನೂ ಓದಿ | ಆರಂಭಿಕರ ಶತಕದ ಜೊತೆಯಾಟದ ಹೊರತಾಗಿಯೂ ಸೋತ ಪಂಜಾಬ್ ಕಿಂಗ್ಸ್; ಲಕ್ನೋ ಸೂಪರ್ ಜೈಂಟ್ಸ್​ಗೆ ಸೂಪರ್ ಗೆಲುವು

ಐಪಿಎಲ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ