ಮಾಜಿಗಳ ವಿರುದ್ಧ ತೊಡೆ ತಟ್ಟಲು ಪಂತ್, ರಾಹುಲ್ ರೆಡಿ; ಲಕ್ನೋ vs ಡೆಲ್ಲಿ ಪಂದ್ಯದ ಪ್ರಮುಖ ಅಂಶಗಳು ತಿಳಿಯಿರಿ!
ಇಂಡಿಯನ್ ಪ್ರೀಮಿಯರ್ ಲೀಗ್ 40ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಈ ಪಂದ್ಯವು ಲಕ್ನೋದ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.

18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ದಿನದಿಂದ ದಿನಕ್ಕೆ ರೋಚಕತೆ ಹೆಚ್ಚಿಸುತ್ತಿದೆ. ಬ್ಯಾಟರ್ಗಳ ಜತೆಗೆ ಬೌಲರ್ಗಳು ಮಿಂಚಿನ ಪ್ರದರ್ಶನದೊಂದಿಗೆ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಯುವಕರನ್ನೂ ನಾಚಿಸುವಂತೆ ಹಿರಿಯರು ಪ್ರದರ್ಶನ ನೀಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಈಗ ಮತ್ತೊಂದು ಹೈವೋಲ್ಟೇಜ್ ಕದನಕ್ಕೆ ಶ್ರೀಮಂತ ಲೀಗ್ ಸಜ್ಜಾಗಿದೆ. ಏಪ್ರಿಲ್ 22ರ ಮಂಗಳವಾರ ಸಂಜೆ 7.30ಕ್ಕೆ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಇದು ಲಕ್ನೋ, ಡೆಲ್ಲಿ ಕಾದಾಟವಲ್ಲ, ರಾಹುಲ್ ಮತ್ತು ಲಕ್ನೋ ಕಾದಾಟವಾಗಿ ಪರಿವರ್ತನೆಯಾಗಿದೆ.
ಉಭಯ ತಂಡಗಳು ಪ್ರಸಕ್ತ ಆವೃತ್ತಿಯಲ್ಲಿ 2ನೇ ಬಾರಿಗೆ ಮುಖಾಮುಖಿಯಾಗುತ್ತಿವೆ. ಮೊದಲ ಮುಖಾಮುಖಿಯಲ್ಲಿ ಲಕ್ನೋ ಮತ್ತು ಡೆಲ್ಲಿ ತಂಡಗಳು ತಮ್ಮ ಅಭಿಯಾನ ಆರಂಭಿಸಿದ್ದವು. ಆದರೆ ಆ ಪಂದ್ಯದಲ್ಲಿ ಡೆಲ್ಲಿ 1 ವಿಕೆಟ್ ರೋಚಕ ಗೆಲುವು ಸಾಧಿಸಿತ್ತು. ಅಶುತೋಷ್ ಶರ್ಮಾ ಆರ್ಭಟಿಸಿ ಸೋಲುವ ಪಂದ್ಯವನ್ನು ಗೆಲುವಿನತ್ತ ತಿರುಗಿಸಿದ್ದರು. ಈ ಸೋಲಿಗೆ ಸೇಡು ತೀರಿಸಿಕೊಳ್ಳಲು ರಿಷಭ್ ಪಡೆ ಸಜ್ಜಾಗಿದೆ. ಆದರೆ ತಂದೆಯಾಗುವ ನಿರೀಕ್ಷೆಯಲ್ಲಿದ್ದ ಕಾರಣ ಈ ಪಂದ್ಯವನ್ನು ರಾಹುಲ್ ತಪ್ಪಿಸಿಕೊಂಡಿದ್ದರು. ಡಿಸಿ ಪಂತ್ಗೆ, ಲಕ್ನೋ ಕೆಎಲ್ಗೆ ಮಾಜಿ ತಂಡಗಳಾಗಿದ್ದು, ಹೇಗೆ ಪ್ರದರ್ಶನ ನೀಡುತ್ತಾರೆ ಎನ್ನುವುದು ಕುತೂಹಲ ಕೆರಳಿಸಿದೆ. ಈ ಪಂದ್ಯಕ್ಕೆ ಲಕ್ನೋದ ಏಕನಾ ಕ್ರಿಕೆಟ್ ಮೈದಾನ ಆತಿಥ್ಯ ವಹಿಸಲಿದೆ.
ಪಂತ್ ಕಳಪೆ, ರಾಹುಲ್ ಮಿಂಚು
ಎಲ್ಎಸ್ಜಿ ಸೇರಿದಾಗಿನಿಂದ ರಿಷಭ್ ಪಂತ್ (106 ರನ್) ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ. ಒಂದೇ ಒಂದು ಅರ್ಧಶತಕ ಸಿಡಿಸಿದ್ದು ಬಿಟ್ಟರೆ, ಒಂದಂಕಿಗೆ ಔಟಾಗಿದ್ದೇ ಹೆಚ್ಚು. ಆದರೆ ರಾಹುಲ್ (266 ರನ್) ಉತ್ತಮ ಲಯದಲ್ಲಿದ್ದು, ಆರೆಂಜ್ ಕ್ಯಾಪ್ ಪಟ್ಟಿಯಲ್ಲೂ ಅಗ್ರ 10ನೇ ಸ್ಥಾನ ಪಡೆದಿದ್ದಾರೆ. ಇದೀಗ ತಮ್ಮ ಮಾಜಿ ತಂಡದ ವಿರುದ್ಧ ಅಬ್ಬರಿಸಿ ಲಕ್ನೋ ಮಾಲೀಕ ಸಂಜೀವ್ ಗೋಯೆಂಕಾ ವಿರುದ್ಧ ತೊಡೆ ತಟ್ಟಲು ತಯಾರಿ ನಡೆಸಿದ್ದಾರೆ.
ಪೂರನ್, ಮಾರ್ಕ್ರಮ್, ಮಾರ್ಷ್ ಮಾತ್ರ ಅಬ್ಬರ
ಲಕ್ನೋ ಪರ ಮೂವರು ಬ್ಯಾಟರ್ಸ್ ಮಾತ್ರ ಅಬ್ಬರಿಸುತ್ತಿದ್ದಾರೆ. ಆರಂಭಿಕರಾಗಿ ಮಿಚೆಲ್ ಮಾರ್ಷ್ (299) ಮತ್ತು ಏಡನ್ ಮಾರ್ಕ್ರಮ್ (274) ಬೌಲರ್ಗಳ ಮೇಲೆ ದಂಡಯಾತ್ರೆ ನಡೆಸುತ್ತಿದ್ದಾರೆ. ಇವರ ನಂತರ ನಿಕೋಲಸ್ ಪೂರನ್ (368) ಸ್ಫೋಟಕ ಆಟದೊಂದಿಗೆ ತಂಡದ ಮೊತ್ತ ಏರಿಸುತ್ತಿದ್ದಾರೆ. ಆದರೆ ಉಳಿದ ಬ್ಯಾಟರ್ಸ್ ಹೀನಾಯ ಪ್ರದರ್ಶನ ನೀಡುತ್ತಿದ್ದಾರೆ. ಇದು ತಂಡದ ಹಿನ್ನಡೆಗೆ ಕಾರಣವಾಗಿದೆ.
ಡಿಸಿ ಮತ್ತು ಎಲ್ಎಸ್ಜಿ ತಲಾ ಐದು ಗೆಲುವು
ಅಂಕಪಟ್ಟಿಯಲ್ಲಿ ಡೆಲ್ಲಿ ಮತ್ತು ಎಲ್ಎಸ್ಜಿ ತಂಡಗಳು ತಲಾ 5 ಗೆಲುವು ದಾಖಲಿಸಿವೆ. ಅಕ್ಷರ್ ಪಟೇಲ್ ನಾಯಕತ್ವದ ತಂಡ ಆಡಿರುವ 7 ಪಂದ್ಯಗಳಲ್ಲಿ 5 ಗೆಲುವು, 2 ಸೋಲುಗಳೊಂದಿಗೆ 10 ಅಂಕ ಸಂಪಾದಿಸಿ 2ನೇ ಸ್ಥಾನ ಪಡೆದಿದೆ. ನೆಟ್ರನ್ರೇಟ್ +0.589. ಪಂತ್ ನೇತೃತ್ವದ ತಂಡ ಆಡಿರುವ 8 ಪಂದ್ಯಗಳಲ್ಲಿ 5 ಗೆಲುವು, 3 ಸೋಲಿನೊಂದಿಗೆ 10 ಅಂಕ ಪಡೆದು 5ನೇ ಸ್ಥಾನದಲ್ಲಿದೆ. ನೆಟ್ರನ್ರೇಟ್ 0.088.
ಕೊನೆಯ 5 ಪಂದ್ಯಗಳಲ್ಲಿ ಉಭಯ ತಂಡಗಳ ಫಲಿತಾಂಶ
ಲಕ್ನೋ ಕೊನೆಯ ಐದು ಪಂದ್ಯಗಳಲ್ಲಿ 4 ಗೆಲುವು ಸಾಧಿಸಿದೆ. ಆದರೆ ಡೆಲ್ಲಿ 3 ಗೆಲುವು, 2 ಸೋಲು ಕಂಡಿದೆ.
ಮಿಚೆಲ್ ಸ್ಟಾರ್ಕ್ ಮೇಲೆ ಕಣ್ಣು
10.68ರ ಎಕಾನಮಿ ರೇಟ್ ಹೊಂದಿರುವ ಮಿಚೆಲ್ ಸ್ಟಾರ್ಕ್ , ಈ ಋತುವಿನಲ್ಲಿ ಕನಿಷ್ಠ 25 ಓವರ್ ಬೌಲಿಂಗ್ ಮಾಡಿದವರಲ್ಲಿ 2ನೇ ಅತ್ಯಂತ ದುಬಾರಿ ಬೌಲರ್ ಆಗಿದ್ದಾರೆ. ಅವರು ಒಟ್ಟಾರೆ ಎರಡು ಪಂದ್ಯಗಳಲ್ಲಿ 8 ವಿಕೆಟ್ ಪಡೆದಿದ್ದರೆ, 5 ಪಂದ್ಯಗಳಲ್ಲಿ ಪಡೆದಿರುವ ವಿಕೆಟ್ ಸಂಖ್ಯೆ ಎರಡು. ಆದರೆ ಕಳೆದ ವಾರ, ಸ್ಟಾರ್ಕ್ ಅವರ ರಿವರ್ಸ್-ಸ್ವಿಂಗ್ ಯಾರ್ಕರ್ಗಳಿಂದಾಗಿ ಡಿಸಿ ಸೂಪರ್ ಓವರ್ ಗೆಲ್ಲಿಸಿಕೊಟ್ಟರು. ಅಲ್ಲದೆ, 20ನೇ ಓವರ್ನಲ್ಲಿ 9 ರನ್ ಡಿಫೆಂಡ್ ಮಾಡಿಕೊಳ್ಳುವ ಮೂಲಕ ರಾಜಸ್ಥಾನ್ ತಂಡವನ್ನು ಟೈ ಮಾಡಲು ನೆರವಾದರು.
ಅಬ್ದುಲ್ ಸಮದ್ ಫಿನಿಷರ್
ಎಲ್ಎಸ್ಜಿ ಪರ ಫಿನಿಷರ್ ಆಗಿ ಆಡುತ್ತಿರುವ ಅಬ್ದುಲ್ ಸಮದ್ 222 ಸ್ಟ್ರೈಕ್ ರೇಟ್ನಲ್ಲಿ 111 ರನ್ ಗಳಿಸಿದ್ದಾರೆ. ಕೊನೆಯ ಪಂದ್ಯದಲ್ಲಿ ಸಮದ್ ಅಂತಿಮ ಓವರ್ನಲ್ಲಿ ಸಂದೀಪ್ ಶರ್ಮಾಗೆ ಸತತ ನಾಲ್ಕು ಸಿಕ್ಸರ್ ಸಿಡಿಸುವ ಮೂಲಕ ಕೇವಲ 10 ಎಸೆತಗಳಲ್ಲಿ 30 ರನ್ ಗಳಿಸಿದ್ದರು.
ಮಯಾಂಕ್ ಯಾದವ್ ಆಡುತ್ತಾರಾ?
150 ಪ್ಲಸ್ ವೇಗದಲ್ಲಿ ಆಡುತ್ತಿರುವ ಬೌಲಿಂಗ್ ಮಾಡುವ ಮಯಾಂಕ್ ಯಾದವ್, ಫಿಟ್ ಆಗಿದ್ದು ತಂಡವನ್ನು ಕೂಡಿಕೊಂಡಿದ್ದಾರೆ. ಅವರು ಕಳೆದ ಪಂದ್ಯದಲ್ಲೇ ಕಣಕ್ಕಿಳಿಯುವ ನಿರೀಕ್ಷೆಯಿತ್ತು. ಆದರೆ ಟೀಮ್ ಮ್ಯಾನೇಜ್ಮೆಂಟ್ ಒಪ್ಪಿಗೆ ಸೂಚಿಸಿರಲಿಲ್ಲ. ಇದೀಗ ಮಹತ್ವದ ಪಂದ್ಯಕ್ಕೆ ಕಣಕ್ಕಿಳಿಸುವ ಸಾಧ್ಯತೆ ಇದೆ.
ಲಕ್ನೋ ಸೂಪರ್ ಜೈಂಟ್ಸ್ ಸಂಭಾವ್ಯ ತಂಡ: ಏಡನ್ ಮಾರ್ಕ್ರಮ್, ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್, ಆಯುಷ್ ಬದೋನಿ, ರಿಷಭ್ ಪಂತ್ (ಕ್ಯಾಪ್ಟನ್ & ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ಅಬ್ದುಲ್ ಸಮದ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್, ಪ್ರಿನ್ಸ್ ಯಾದವ್, ಮಯಾಂಕ್ ಯಾದವ್, ದಿಗ್ವೇಶ್ ರಾಠಿ, ಅವೇಶ್ ಖಾನ್.
ಫಾಫ್ ಆಡುತ್ತಾರಾ?
ಗಾಯಗೊಂಡಿರುವ ಫಾಫ್ ಡು ಪ್ಲೆಸಿಸ್ ಚೇತರಿಸಿಕೊಳ್ಳುತ್ತಿದ್ದಾರೆ. ಈಗ ನೆಟ್ನಲ್ಲೂ ಅಭ್ಯಾಸ ಆರಂಭಿಸಿದ್ದಾರೆ. ಆದರೆ ಅವರ ಸೇರ್ಪಡೆಯ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಜೇಕ್ ಫ್ರೇಸರ್ ಮೆಕ್ಗುರ್ಕ್ ಅವರಿಗೆ ಮತ್ತೆ ಅವಕಾಶ ಸಿಗೋದಿಲ್ಲ. ಹಾಗಾಗಿ ಕರುಣ್ ನಾಯರ್ ಮತ್ತು ಅಭಿಷೇಕ್ ಪೊರೆಲ್ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.
ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ತಂಡ: ಅಭಿಷೇಕ್ ಪೊರೆಲ್, ಫಾಫ್ ಡುಪ್ಲೆಸಿಸ್/ಡೊನೊವನ್ ಫೆರೀರಾ, ಕರುಣ್ ನಾಯರ್, ಕೆಎಲ್ ರಾಹುಲ್, ಅಕ್ಷರ್ ಪಟೇಲ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಅಶುತೋಷ್ ಶರ್ಮಾ, ವಿಪ್ರಜ್ ನಿಗಮ್, ಮಿಚೆಲ್ ಸ್ಟಾರ್ಕ್, ಕುಲ್ದೀಪ್ ಯಾದವ್, ಮೋಹಿತ್ ಶರ್ಮಾ, ಮುಕೇಶ್ ಶರ್ಮಾ.
ಪಿಚ್ ಮತ್ತು ಹವಾಮಾನ
ಏಕಾನಾ ಕ್ರೀಡಾಂಗಣದಲ್ಲಿ ಕೆಂಪು ಮಣ್ಣಿನ ಪಿಚ್ ಇರುತ್ತದೆ. ಈ ಆವೃತ್ತಿಯ ಆರಂಭದಲ್ಲಿ ಎಲ್ಎಸ್ಜಿ ತಂಡ ಪಂಜಾಬ್ ಕಿಂಗ್ಸ್ (PBKS) ವಿರುದ್ಧ ಇದೇ ರೀತಿಯ ಪಿಚ್ನಲ್ಲಿ ಆಡಿತ್ತು. ಆದರೆ ಎಂಟು ವಿಕೆಟ್ಗಳಿಂದ ಸೋತಿತ್ತು . ಆ ಪಂದ್ಯದ ನಂತರ ಎಲ್ಎಸ್ಜಿ ಮೆಂಟರ್ ಜಹೀರ್ ಖಾನ್ ತುಂಬಾ ನಿರಾಶೆಗೊಂಡಿದ್ದರು. ತವರಿನ ಲಾಭದ ಪಿಚ್ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ಪಂದ್ಯಕ್ಕೆ ಮಳೆ ಅಡ್ಡಿಪಡಿಸುವುದಿಲ್ಲ.
ಅಂಕಿ-ಅಂಶಗಳು
ಈ ಋತುವಿನಲ್ಲಿ 40 ಬ್ಯಾಟ್ಸ್ಮನ್ಗಳು ಕನಿಷ್ಠ 100 ಎಸೆತಗಳನ್ನು ಎದುರಿಸಿದ್ದಾರೆ. ಈ ಪೈಕಿ ಪಂತ್ ಕೂಡ ಒಬ್ಬರು. ಅವರ 98.14ರ ಸ್ಟ್ರೈಕ್ ರೇಟ್ ಆಗಿದ್ದು, ಎಲ್ಲರಿಗಿಂತ ಕಡಿಮೆಯಾಗಿದೆ. ಆದಾಗ್ಯೂ, ನಿಕೋಲಸ್ ಪೂರನ್ 205.58ರ ಸ್ಟ್ರೈಕ್ರೇಟ್ನೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಈ ಐಪಿಎಲ್ನಲ್ಲಿ ಪೂರನ್ ಡಿಸಿ ವಿರುದ್ಧ ಕೇವಲ 30 ಎಸೆತಗಳಲ್ಲಿ 75 ರನ್ ಗಳಿಸಿದ್ದರು. ಆದರೆ ಕುಲ್ದೀಪ್ ವಿರುದ್ಧ 6 ಎಸೆತಗಳಲ್ಲಿ ಕೇವಲ 10 ರನ್ ಗಳಿಸಿದ್ದರಿ. ಒಟ್ಟಾರೆ ಟಿ20 ಕ್ರಿಕೆಟ್ನಲ್ಲಿ 70 ಎಸೆತಗಳನ್ನು ಎದುರಿಸಿದ ಪೂರನ್ ಕೇವಲ 74 ರನ್ ಮಾತ್ರ ಗಳಿಸಿದ್ದಾರೆ. ಆದರೆ ಕುಲ್ದೀಪ್ಗೆ 5 ಸಲ ಔಟಾಗಿದ್ದಾರೆ.
ಜಿಟಿ ವಿರುದ್ಧ ಡಿಸಿಯ ಟಾಪ್ ಸೆವೆನ್ ಆಟಗಾರರಾದ ಅಭಿಷೇಕ್ ಪೊರೆಲ್, ಕರುಣ್ ನಾಯರ್, ರಾಹುಲ್, ಅಕ್ಷರ್ ಪಟೇಲ್, ಟ್ರಿಸ್ಟಾನ್ ಸ್ಟಬ್ಸ್, ಅಶುತೋಷ್ ಶರ್ಮಾ ಮತ್ತು ನಿಗಮ್ ಈ ಋತುವಿನಲ್ಲಿ ಕನಿಷ್ಠ 147 ಸ್ಟ್ರೈಕ್ ರೇಟ್ ಹೊಂದಿದ್ದಾರೆ.
ಈ ಋತುವಿನಲ್ಲಿ ಡಿಸಿ ತಂಡವು ಇಲ್ಲಿಯವರೆಗೆ ನಾಲ್ಕು ಆರಂಭಿಕ ಜೋಡಿಗಳನ್ನು ಬಳಸಿಕೊಂಡಿದ್ದು, ಇದು ಯಾವುದೇ ತಂಡದಿಂದ ಅತಿ ಹೆಚ್ಚು. ಮೊದಲ ವಿಕೆಟ್ಗೆ ಅವರ ಸರಾಸರಿ 21.28 ರನ್ಗಳ ಪಾಲುದಾರಿಕೆಯು 10 ತಂಡಗಳಲ್ಲಿ ಅತ್ಯಂತ ಕಡಿಮೆಯಾಗಿದೆ.