ಕನ್ನಡ ಸುದ್ದಿ  /  ಕ್ರಿಕೆಟ್  /  ಗಾಯದಿಂದ ಚೇತರಿಸುತ್ತಿರುವ ಮಯಾಂಕ್ ಯಾದವ್ ಕಂಬ್ಯಾಕ್ ಯಾವಾಗ? ವೇಗಿ ಫಿಟ್ನೆಸ್ ವಿಚಾರದಲ್ಲಿ ರಿಸ್ಕ್ ತಗೊಳಲ್ಲ ಎಂದ ಕೆಎಲ್ ರಾಹುಲ್

ಗಾಯದಿಂದ ಚೇತರಿಸುತ್ತಿರುವ ಮಯಾಂಕ್ ಯಾದವ್ ಕಂಬ್ಯಾಕ್ ಯಾವಾಗ? ವೇಗಿ ಫಿಟ್ನೆಸ್ ವಿಚಾರದಲ್ಲಿ ರಿಸ್ಕ್ ತಗೊಳಲ್ಲ ಎಂದ ಕೆಎಲ್ ರಾಹುಲ್

Mayank Yadav: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ವೇಗಿ ಮಯಾಂಕ್ ಯಾದವ್ ಆಡಿರಲಿಲ್ಲ. ಗಾಯದಿಂದಾಗಿ ಅವರು ತಂಡದಿಂದ ಹೊರಗುಳಿದ್ದಾರೆ. ಪ್ರಮುಖ ಬೌಲರ್‌ ತಂಡಕ್ಕೆ ಮರಳುವ ಕುರಿತು ಎಲ್‌ಎಸ್‌ಜಿ ನಾಯಕ ಕೆಎಲ್‌ ರಾಹುಲ್‌ ಸುಳಿವು ನೀಡಿದ್ದಾರೆ.

ಗಾಯದಿಂದ ಚೇತರಿಸುತ್ತಿರುವ ಮಯಾಂಕ್ ಯಾದವ್ ಕಂಬ್ಯಾಕ್ ಯಾವಾಗ
ಗಾಯದಿಂದ ಚೇತರಿಸುತ್ತಿರುವ ಮಯಾಂಕ್ ಯಾದವ್ ಕಂಬ್ಯಾಕ್ ಯಾವಾಗ (PTI)

ಐಪಿಎಲ್ 2024ರ ನಡೆದ ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ತಂಡವು ಆರು ವಿಕೆಟ್‌ಗಳ ಸೋಲು ಕಂಡಿತು. ಸತತ ಮೂರು ಪಂದ್ಯಗಳಲ್ಲಿ ಗೆದ್ದು ಅಜೇಯ ಓಟದಲ್ಲಿದ್ದ ಕೆಎಲ್ ರಾಹುಲ್ ನೇತೃತ್ವದ ಲಕ್ನೋ, ಸತತ ನಾಲ್ಕನೇ ಗೆಲುವಿನ ನಿರೀಕ್ಷೆಯಲ್ಲಿತ್ತು. ಆದರೆ, ಡಿಸಿ ತಂಡದ ಖರಾರುವಕ್‌ ಬೌಲಿಂಗ್‌ ದಾಳಿ ಹಾಗೂ ಬ್ಯಾಟಿಂಗ್‌ ಅಬ್ಬರದ ಮುಂದೆ ತವರಿನಲ್ಲಿ ಲಕ್ನೋ ಆಟ ನಡೆಯಲಿಲ್ಲ. ಲಕ್ನೋ ತಂಡದ ಸೋಲಿನಲ್ಲಿ, ಪ್ರಮುಖ ವೇಗಿ ಮಯಾಂಕ್ ಯಾದವ್ (Mayank Yadav) ಅನುಪಸ್ಥಿತಿ ಎದ್ದು ಕಾಣುತ್ತಿತ್ತು. 21 ವರ್ಷದ ವೇಗದ ಬೌಲರ್ 150ಕ್ಕೂ ಅಧಿಕ ಕಿ.ಮೀ ವೇಗದಲ್ಲಿ ಬೌಲಿಂಗ್‌ ಮಾಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು. ಆದರೆ, ಕೊನೆಯ ಪಂದ್ಯದಲ್ಲಿ ಅವರು ಆಡಿರಲಿಲ್ಲ.

ಟ್ರೆಂಡಿಂಗ್​ ಸುದ್ದಿ

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸೂಪರ್ ಜೈಂಟ್ಸ್ ಪರ ಪದಾರ್ಪಣೆ ಮಾಡಿದ ಮಯಾಂಕ್, ಸತತ ಎರಡು ಪಂದ್ಯಗಳಲ್ಲಿಯೂ ನಿರ್ಣಾಯಕ ವಿಕೆಟ್‌ಗಳನ್ನು ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಆದರೆ, ಕಳೆದ ವಾರ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡು ತಂಡದಿಂದ ಹೊರಬಿದ್ದರು. ಇದೀಗ ಡೆಲ್ಲಿ ವಿರುದ್ಧದ ಪಂದ್ಯದ ನಂತರ ಮಯಾಂಕ್ ಅವರ ಗಾಯ ಹಾಗೂ ತಂಡಕ್ಕೆ ಮರುಳುವ ಕುರಿತು ನಾಯಕ ಕೆಎಲ್‌ ರಾಹುಲ್ ಮಾಹಿತಿ ನೀಡಿದ್ದಾರೆ.

“ಮಯಾಂಕ್ ಯಾದವ್ ಆರೋಗ್ಯವಾಗಿದ್ದಾರೆ. ಅವರು ಚೇತರಿಸಿಕೊಂಡಂತೆ ಕಾಣುತ್ತಿದ್ದಾರೆ. ಆದರೆ ನಾವು ಅವರನ್ನು ಆತುರದಿಂದ ಆಡುವ ಬಳಗಕ್ಕೆ ಸೇರಿಸಿಕೊಳ್ಳುವುದಿಲ್ಲ. ನಾವು ಆತನ ದೇಹದ ಆರೋಗ್ಯವನ್ನು ಕಾಪಾಡಬೇಕಾಗಿದೆ. ಆತ ಮೈದಾನಕ್ಕಿಳಿಯಲು ತುದಿಗಾಲಲ್ಲಿ ನಿಂತಿದ್ದಾನೆ. ಆದರೆ, ಆತ ತಂಡಕ್ಕೆ ಮರಳುವುದಕ್ಕೂ ಮೊದಲು ನೂರಕ್ಕೆ ನೂರರಷ್ಟು ಫಿಟ್ ಆಗಿರುವುದನ್ನು ಎಂದು ಖಚಿತಪಡಿಸಿಕೊಳ್ಳುವು ನಮಗೆ ಮುಖ್ಯ,” ಎಂದು ನಾಯಕ ರಾಹುಲ್ ಹೇಳಿದ್ದಾರೆ.

ಇದನ್ನೂ ಓದಿ | RCB Playoff Scenario: ಆರ್​​ಸಿಬಿ 6ರಲ್ಲಿ 5 ಸೋತರೂ ಪ್ಲೇಆಫ್ ಪ್ರವೇಶಿಸಲು ಇನ್ನೂ ಇದೆ ಅವಕಾಶ; ಹೀಗಿದೆ ​ಲೆಕ್ಕಾಚಾರ

ಯುವ ವೇಗಿಯ ವಿಚಾರದಲ್ಲಿ ನಾಯಕ ಹಾಗೂ ತಂಡದ ಮ್ಯಾನೇಜ್‌ಮೆಂಟ್‌ಗೆ ಭಾರಿ ನಿರೀಕ್ಷೆಯಿದೆ. ವೇಗಿಯ ಭವಿಷ್ಯದ ದೃಷ್ಟಿಯಿಂದ ಫಿಟ್‌ನೆಸ್‌ ವಿಚಾರದಲ್ಲಿ ಹೆಚ್ಚುವರಿ ಕಾಳಜಿ ವಹಿಸಲಾಗುತ್ತಿದೆ. ಮುಂದೆ ಟೀಮ್‌ ಇಂಡಿಯಾ ಪರ ಟಿ20 ವಿಶ್ವಕಪ್‌ನಲ್ಲಿಯೂ ಮಯಾಂಕ್‌ ಆಡಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ. ಸದ್ಯ ಸಣ್ಣ ಗಾಯವಾದರೂ ಆಟಗಾರನ ಫಿಟ್‌ನೆಸ್‌ ವಿಚಾರವಾಗಿ ಫ್ರಾಂಚೈಸ್‌ ಹೆಚ್ಚು ಗಮನ ಹರಿಸುತ್ತಿದೆ.

ಸಿಎಸ್‌ಕೆ ವಿರುದ್ಧದ ಪಂದ್ಯಕ್ಕೂ ಮಯಾಂಕ್‌ ಅಲಭ್ಯ

ಇದಕ್ಕೂ ಮುನ್ನ, ತಂಡದ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಅವರು ಏಪ್ರಿಲ್ 19ರಂದು ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೂ ಮಯಾಂಕ್ ಮರಳುವ ನಿರೀಕ್ಷೆಯಿಲ್ಲ ಎಂದು ಹೇಳಿದ್ದರು.

“ಮಯಾಂಕ್ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಮುಂದಿನ ಎರಡು ಪಂದ್ಯಗಳನ್ನು ಆಡುವ ಸಾಧ್ಯತೆಯಿಲ್ಲ. ಏಪ್ರಿಲ್ 19ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ತವರು ಪಂದ್ಯಕ್ಕೆ ಮೊದಲು ಅವರು ಸಂಪೂರ್ಣ ಫಿಟ್‌ ಆಗುತ್ತಾರೆ ಎಂಬ ನಿರೀಕ್ಷೆ ಇದೆ,” ಎಂದು ಡೆಲ್ಲಿ ವಿರುದ್ಧದ ಪಂದ್ಯಕ್ಕೆ ಮುಂಚಿತವಾಗಿ ಲ್ಯಾಂಗರ್ ಹೇಳಿದ್ದರು.

IPL_Entry_Point