ಕನ್ನಡ ಸುದ್ದಿ  /  ಕ್ರಿಕೆಟ್  /  ವಿಶೇಷ ಔತಣಕೂಟದಲ್ಲಿ ಕೆಎಲ್ ರಾಹುಲ್‌ ತಬ್ಬಿಕೊಂಡ ಎಲ್ಎಸ್‌ಜಿ ಮಾಲೀಕ ಸಂಜೀವ್ ಗೋಯೆಂಕಾ; ಫೋಟೋ ವೈರಲ್

ವಿಶೇಷ ಔತಣಕೂಟದಲ್ಲಿ ಕೆಎಲ್ ರಾಹುಲ್‌ ತಬ್ಬಿಕೊಂಡ ಎಲ್ಎಸ್‌ಜಿ ಮಾಲೀಕ ಸಂಜೀವ್ ಗೋಯೆಂಕಾ; ಫೋಟೋ ವೈರಲ್

ಎಸ್ಆರ್‌ಎಚ್ ವಿರುದ್ಧದ ಪಂದ್ಯದ ಬಳಿಕ ಎಲ್ಎಸ್‌ಜಿ ನಾಯಕ ಕೆಎಲ್ ರಾಹುಲ್ ಅವರೊಂದಿಗೆ ಮಾಲೀಕ ಸಂಜೀವ್ ಗೋಯೆಂಕಾ ಅವರು ಆಕ್ರೋಶದಿಂದ ಮಾತನಾಡುವ ವಿಡಿಯೋ ವೈರಲ್‌ ಆಗಿತ್ತು. ಅದಾದ ಕೆಲವೇ ದಿನಗಳಲ್ಲಿ ವಿಶೇಷ ಔತಣ ಕೂಟ ನಡೆಸಿದ ಗೋಯೆಂಕಾ, ರಾಹುಲ್‌ ಕರೆಸಿ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಕೆಎಲ್ ರಾಹುಲ್‌ ತಬ್ಬಿಕೊಂಡ ಎಲ್ಎಸ್‌ಜಿ ಮಾಲೀಕ ಸಂಜೀವ್ ಗೋಯೆಂಕಾ
ಕೆಎಲ್ ರಾಹುಲ್‌ ತಬ್ಬಿಕೊಂಡ ಎಲ್ಎಸ್‌ಜಿ ಮಾಲೀಕ ಸಂಜೀವ್ ಗೋಯೆಂಕಾ (X)

ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ಶಿಬಿರದಲ್ಲಿ ಮತ್ತೆ ಎಲ್ಲವೂ ಸಹಜ ಹಂತಕ್ಕೆ ಬಂದಂತೆ ತೋರುತ್ತಿದೆ. ಎಲ್‌ಎಸ್‌ಜಿ ನಾಯಕ ಕೆಎಲ್ ರಾಹುಲ್ (KL Rahul) ಹಾಗೂ ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯೆಂಕಾ ನಡುವೆ, ಕೆಲವು ದಿನಗಳ ಹಿಂದಷ್ಟೇ ಬಿರುಸಿನ ಮಾತುಕತೆ ನಡೆದ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಮಾಡಿತ್ತು. ಫ್ರಾಂಚೈಸ್‌ ಹಾಗೂ ನಾಯಕ ಕೆಎಲ್‌ ರಾಹುಲ್‌ ನಡುವೆ ಎಲ್ಲವೂ ಸರಿಯಿಲ್ಲ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದರು. ಇದೀಗ, ಡೆಲ್ಲಿ ಹಾಗೂ ಲಕ್ನೋ ನಡುವಣ ಐಪಿಎಲ್‌ ಪಂದ್ಯಕ್ಕೂ ಮುನ್ನ ಎಲ್‌ಎಸ್‌ಜಿ ಶಿಬಿರದಲ್ಲಿ ಎಲ್ಲವೂ ಸಹಜ ಹಂತಕ್ಕೆ ಬಂದಿರುವಂತೆ ತೋರುತ್ತಿದೆ. ಮುಖ್ಯವಾಗಿ ನಾಯಕ ರಾಹುಲ್‌ ಹಾಗೂ ಮಾಲೀಕ ಗೋಯೆಂಕಾ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ ಎಂಬುದು ಸ್ಪಷ್ಟವಾಗಿದೆ.

ಟ್ರೆಂಡಿಂಗ್​ ಸುದ್ದಿ

ತಂಡದ ನಾಯಕ ಕೆಎಲ್‌ ರಾಹುಲ್‌ ಅವರನ್ನು ಮಾಲೀಕ ಸಂಜೀವ್‌ ಗೋಯೆಂಕಾ ಸೋಮವಾರ ವಿಶೇಷ ಔತಣಕೂಟಕ್ಕೆ ಆಹ್ವಾನಿಸಿದ್ದರು. ಈ ಫೋಟೋಗಳು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಸದ್ಯ ಎಲ್ಎಸ್‌ಜಿ ತಂಡವು ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿ ಉಳಿದ ಎರಡು ಪಂದ್ಯಗಳಲ್ಲಿ ಗೆದ್ದು ಪ್ಲೇಆಫ್ ಹಂತಕ್ಕೆ ಲಗ್ಗೆ ಇಡುವ ಉತ್ಸಾಹದಲ್ಲಿದೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮಂಗಳವಾರ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರಾಹುಲ್‌ ಪಡೆ ಎದುರಿಸುತ್ತಿದೆ.

ಕೆಲವು ದಿನಗಳ ಹಿಂದಷ್ಟೇ ಸಂಜೀವ್‌ ಹಾಗೂ ರಾಹುಲ್‌ ನಡುವೆ ಬಿಸಿಬಿಸಿ ಚರ್ಚೆ ನಡೆದಿತ್ತು. ಹೈದರಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ನೀಡಿದ್ದ 167 ರನ್‌ ಗುರಿಯನ್ನು ಎಸ್ಆರ್‌ಎಚ್ ತಂಡವು ಕೇವಲ 9.4 ಓವರ್‌ಗಳಲ್ಲಿ ತಲುಪಿತ್ತು. ಲಕ್ನೋ ಒಂದೊಂದು ರನ್‌ ಗಳಿಸಲು ಕೂಡಾ ಪರದಾಡಿದರೆ, ಹೈದರಾಬಾದ್‌ ಆ ಕೆಲಸವನ್ನು ಸಲೀಸಾಗಿ ಮಾಡಿ ಮುಗಿಸಿತ್ತು.

ಇದನ್ನೂ ಓದಿ | Explainer: ಪ್ಲೇಆಫ್‌ ಪ್ರವೇಶಿಸಲು ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಎಷ್ಟು ಅಂತರದಿಂದ ಗೆಲ್ಲಬೇಕು? ಹೀಗಿದೆ ಲೆಕ್ಕಾಚಾರ

ಪಂದ್ಯದ ಬಳಿಕ ನಾಯಕ ರಾಹುಲ್ ಅವರೊಂದಿಗೆ ಗೋಯೆಂಕಾ ಅವರ ಗಂಭೀರವಾಗಿ ಮಾತನಾಡಿರುವುದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಯಿತು. ಅನುಭವಿ ಆಟಗಾರನೊಂದಿಗೆ ದರ್ಪದಿಂದ ಮಾತನಾಡಿದ್ದಾಗಿ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು. ಗೋಯೆಂಕಾ ನಡೆಯನ್ನು ಖಂಡಿಸಿದ ಫ್ಯಾನ್ಸ್‌, ಫ್ರಾಂಚೈಸ್‌ ತೊರೆಯುವಂತೆ ಮನವಿ ಮಾಡಿದ್ದರು. ಘಟನೆ ನಡೆದ ಕೆಲವು ದಿನಗಳ ನಂತರ, ಮಾಲೀಕ ಮತ್ತು ನಾಯಕ ರಾಹುಲ್ ನಡುವಿನ ಭಿನ್ನಾಭಿಪ್ರಾಯದ ವದಂತಿಗಳಿಗೆ ತೆರೆ ಬಿದ್ದಿದೆ.

ಫೋಟೋ ವೈರಲ್

ಡೆಲ್ಲಿ ಹಾಗೂ ಲಕ್ನೋ ತಂಡಗಳ ನಡುವಿನ ಪಂದ್ಯದ ಹಿಂದಿನ ದಿನ, ಎಲ್ಎಸ್‌ಜಿ ಮಾಲೀಕ ಗೋಯೆಂಕಾ ಅವರು ರಾಹುಲ್‌ಗಾಗಿ ವಿಶೇಷ ಭೋಜನಕೂಟವನ್ನು ಆಯೋಜಿಸಿದ್ದರು. ಈ ವೇಳೆ ರಾಹುಲ್ ಹಾಗೂ ಗೋಯೆಂಕಾ ಪರಸ್ಪರ ಆತ್ಮೀಯವಾಗಿ ಅಪ್ಪಿಕೊಂಡಿರುವ ಫೋಟೋಗಳು ಇಂಟರ್ನೆಟ್‌ನಲ್ಲಿ ಟ್ರೆಂಡಿಂಗ್‌ ಆಗುತ್ತಿದೆ. ಎಲ್ಲವೂ ಸರಿಯಾದಂತೆ ಕಾಣುತ್ತಿದೆ ಎಂದು ಫ್ಯಾನ್ಸ್‌ ಹೇಳಿಕೊಂಡಿದ್ದಾರೆ.

ಈ ದೃಶ್ಯವು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. “ಆಘಾತಕಾರಿ ನಡೆಯ ಬಳಿಕ ಎಲ್ಲರೂ ಅಸಮಾಧಾನಗೊಂಡಿದ್ದರು. ಇದೀಗ ಮಾಲೀಕರು ಸಹಜವಾಗಿ ಮಾಡಬೇಕಾದ ಕೆಲಸ ಮಾಡಿದ್ದಾರೆ” ಎಂದು ಅಭಿಮಾನಿಯೊಬ್ಬರು‌ ಕಾಮೆಂಟ್ ಮಾಡಿದ್ದಾರೆ.

IPL_Entry_Point