ಲಕ್ನೋ ತಂಡದ 156.7kmph ವೇಗದ ಬೌಲರ್‌ಗೆ ಗಾಯವೇ ಶತ್ರು; ಐಪಿಎಲ್ 2025ರ ಆರಂಭಿಕ ಪಂದ್ಯಗಳಿಗೆ ಅಲಭ್ಯ
ಐಪಿಎಲ್ ಪದಾರ್ಪಣೆ ಆವೃತ್ತಿಯಲ್ಲೇ 156.7 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿ ಸೆನ್ಸೇಷನ್ ಸೃಷ್ಟಿಸಿದ್ದ ವೇಗಿ ಮಯಾಂಕ್ ಯಾದವ್, ಲಕ್ನೋ ಸೂಪರ್ ಜೈಂಟ್ಸ್ ತಂಡದ ಐಪಿಎಲ್ 2025ರ ಆವೃತ್ತಿಯ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.

ಐಪಿಎಲ್ 2025ರ ಆರಂಭದಲ್ಲೇ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಚುಟುಕು ಸ್ವರೂಪದಲ್ಲಿ ವೇಗದ ಬೌಲಿಂಗ್ ಪ್ರತಿಭೆಗಳಲ್ಲಿ ಒಬ್ಬರಾದ ಮಯಾಂಕ್ ಯಾದವ್ (Mayank Yadav), ಈ ಬಾರಿಯೂ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಆಡುತ್ತಿಲ್ಲ. ಆಗಾಗ ಗಾಯದ ಸಮಸ್ಯೆ ಎದುರಿಸುವ ವೇಗಿಗೆ ಜಾಗತಿಕ ಮಟ್ಟದಲ್ಲಿ ಬೆಳೆಯಲು ಮತ್ತೆ ಗಾಯದ ಸಮಸ್ಯೆ ಅಡ್ಡಿಪಡಿಸುತ್ತಿದೆ. ಇಂಡಿಯನ್ ಪ್ರೀಮಿಯರ್ ಲೀಗ್ 2025ರಲ್ಲಿ ಅಭಿಮಾನಿಗಳು ಕೂಡಾ ಈ ಎಕ್ಸ್‌ಪ್ರೆಸ್ ವೇಗಿಯನ್ನು ಕಣ್ತುಂಬಿಕೊಳ್ಳುವ ನಿರೀಕ್ಷೆಯಲ್ಲಿದ್ದರು. ಮಾಯಾಂಕ್ ಕೂಡಾ ತಮ್ಮ ವೃತ್ತಿಜೀವನದಲ್ಲಿ ದೈತ್ಯ ಹೆಜ್ಜೆಗಳನ್ನು ಇಡುವ ಇರಾದೆಯಲ್ಲಿದ್ದರು. ಆದರೆ ಅದಕ್ಕೆ ಮತ್ತೆ ಮತ್ತೆ ಹಿನ್ನಡೆಯಾಗುತ್ತಿದೆ.
ಐಪಿಎಲ್ ಪದಾರ್ಪಣೆ ಆವೃತ್ತಿಯಲ್ಲೇ 156.7 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿ ಮಿಂಚಿದ್ದ ವೇಗಿ ಕುರಿತು, ಲಕ್ನೋ ಸೂಪರ್ ಜೈಂಟ್ಸ್ ತರಬೇತುದಾರ ಜಸ್ಟಿನ್ ಲ್ಯಾಂಗರ್ ಮಾಹಿತಿ ನೀಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಮಾತನಾಡಿರುವ ಲ್ಯಾಂಗರ್, ವೇಗಿಯ ಗಾಯದ ಬಗ್ಗೆ ಹೇಳಿಕೊಂಡಿದ್ದಾರೆ. ಮಯಾಂಕ್ ಮೈದಾನಕ್ಕಿಳಿಯಯಲು ಇನ್ನೂ ಎರಡು ವಾರಗಳ ಕಾಲ ಬೇಕಾಗುತ್ತೆ ಎಂದಿದ್ದಾರೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವಿನ ಟಿ20 ಸರಣಿಯಲ್ಲಿ ಮಯಾಂಕ್ ಆಡಿದ್ದರು. ಬೆನ್ನು ನೋವು ಕಾಣಿಸಿಕೊಂಡ ಕಾರಣದಿಂದಾಗಿ ಆ ನಂತರ ವೇಗಿ ಆಡಿಲ್ಲ. ಆ ಬಳಿಕ ಚೇತರಿಸಿಕೊಂಡಿದ್ದ ವೇಗಿ, ಇದೀಗ ಐಪಿಎಲ್‌ಗೂ ಮುನ್ನ ಮತ್ತೆ ಗಾಯಾಳಾಗಿದ್ದಾರೆ.
“ಕಳೆದ ವರ್ಷದ ಪ್ರದರ್ಶನ ನೋಡಿ ಎಲ್ಲರೂ ತುಂಬಾ ಉತ್ಸುಕರಾಗಿದ್ದ ಮಾಯಾಂಕ್, ಗಾಯದಿಂದ ಚೇತರಿಸಿಕೊಳ್ಳುತ್ತಿದ್ದರು. ಇದೀಗ ಮತ್ತೆ ಗಾಯದಿಂದ ಮಲಗಿದ್ದಾರೆ” ಎಂದು ಲ್ಯಾಂಗರ್ ಅವರು ಡೆಲ್ಲಿ ವಿರುದ್ಧದ ಎಲ್‌ಎಸ್‌ಜಿಯ ಐಪಿಎಲ್ 2025ರ ಆರಂಭಿಕ ಪಂದ್ಯಕ್ಕೂ ಮುನ್ನ ಹೇಳಿದ್ದಾರೆ.
ಕಾಲಿನ ಬೆರಳಿಗೆ ಗಾಯ, ಚೇತರಿಕೆಗೆ ಎರಡು ವಾರ
"ಅವರ ಕಾಲಿನ ಬೆರಳಿಗೆ ಸೋಂಕು ತಗುಲಿದೆ. ಇದು ಅವರ ಚೇತರಿಕೆಗೆ ಇನ್ನೂ ಒಂದು ಅಥವಾ ಎರಡು ವಾರಗಳು ಬೇಕಾಗಬಹುದು. ಅವರು ಬೌಲಿಂಗ್ ಮಾಡುತ್ತಿರುವ ವಿಡಿಯೊಗಳನ್ನು ನಾವು ನಿಯಮಿತವಾಗಿ ನೋಡುತ್ತಿದ್ದೇವೆ. ನಿನ್ನೆ ನಾನು ಅವರ ವಿಡಿಯೊವನ್ನು ನೋಡಿದೆ. ಆದ್ದರಿಂದ, ಪಂದ್ಯಾವಳಿಯ ಕೊನೆಯ ವೇಳೆಗೆ, ಮಾಯಾಂಕ್ ತಂಡದ ಪರ ಆಡಲು ಸಿದ್ಧರಾಗುತ್ತಾರೆ ಎಂದು ಆಶಿಸುತ್ತೇವೆ," ಎಂದು ಅವರು ಹೇಳಿದ್ದಾರೆ.
ದೆಹಲಿ ವಿರುದ್ಧದ ಲಕ್ನೋ ಪಂದ್ಯಕ್ಕೆ ತಂಡದಲ್ಲಿ ಹಲವು ಪ್ರಮುಖ ಬೌಲರ್‌ಗಳು ಅಲಭ್ಯರಾಗಿದ್ದಾರೆ. ಮೊಹ್ಸಿನ್ ಖಾನ್, ಆವೇಶ್ ಖಾನ್ ಮತ್ತು ಆಕಾಶ್ ದೀಪ್ ಕೂಡಾ ಗಾಯಗಳಿಂದ ಬಳಲುತ್ತಿದ್ದಾರೆ. ಮೊಹ್ಸಿನ್ ಈಗಾಗಲೇ ಈ ಋತುವಿಗೆ ಹೊರಬಿದ್ದಿದ್ದು, ಶಾರ್ದುಲ್ ಠಾಕೂರ್ ತಂಡ ಸೇರಿಕೊಂಡಿದ್ದಾರೆ.
ಡೆಲ್ಲಿ ವಿರುದ್ಧದ ಪಂದ್ಯಕ್ಕೆ ಲಕ್ನೋ ಸೂಪರ್ ಜೈಂಟ್ಸ್ ಆಡುವ ಬಳಗ
ಐಡೆನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್, ಆಯುಷ್ ಬದೋನಿ, ರಿಷಭ್ ಪಂತ್ (ನಾಯಕ ಮತ್ತು ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ಪ್ರಿನ್ಸ್ ಯಾದವ್, ದಿಗ್ವೇಶ್ ರಾಠಿ, ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್.
