ಕನ್ನಡ ಸುದ್ದಿ / ಕ್ರಿಕೆಟ್ /
ಗೆದ್ದರೆ ಕ್ವಾಲಿಫೈಯರ್ ಆಡೋದು ಪಕ್ಕಾ; ಆರ್‌ಸಿಬಿ vs ಎಲ್‌ಎಸ್‌ಜಿ ಐಪಿಎಲ್ ಪಂದ್ಯದ ಪ್ರಮುಖ 10 ಅಂಶಗಳು
ಎಲ್‌ಎಸ್‌ಜಿ ವಿರುದ್ಧ ಆರ್‌ಸಿಬಿ ಗೆದ್ದರೆ, ನೇರವಾಗಿ ಕ್ವಾಲಿಫೈಯರ್ ಪ್ರವೇಶಿಸಲಿದೆ. ಒಂದು ವೇಳೆ ಸೋತರೆ, ಗುಜರಾತ್ ಟೈಟನ್ಸ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಕ್ವಾಲಿಫೈಯರ್ 1ರಲ್ಲಿ ಆಡುತ್ತದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಒಂದು ಗೆಲುವು ಬೇಕು ಅಷ್ಟೇ.

ಗೆದ್ದರೆ ಕ್ವಾಲಿಫೈಯರ್ ಪಕ್ಕಾ; ಆರ್‌ಸಿಬಿ vs ಎಲ್‌ಎಸ್‌ಜಿ ಪಂದ್ಯದ ಪ್ರಮುಖ 10 ಅಂಶಗಳು (PTI)
ಐಪಿಎಲ್ 2025ರ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡಗಳು ಟೂರ್ನಿಯಲ್ಲಿ ಇದೇ ಮೊದಲ ಹಾಗೂ ಕೊನೆಯ ಬಾರಿಗೆ ಎದುರಿಸಲಿದೆ. ಲಕ್ನೋದಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಸೋತಿದ್ದರೂ, ಆರ್‌ಸಿಬಿ ತಂಡಕ್ಕೆ ಅಗ್ರ 2 ಸ್ಥಾನಗಳಲ್ಲಿ ಸ್ಥಾನ ಪಡೆದು ಕ್ವಾಲಿಫೈಯರ್ ಪಂದ್ಯದಲ್ಲಿ ಆಡುವ ಆಸೆ ಜೀವಂತವಾಗಿದೆ. ಇದಕ್ಕೆ ಬೇರೆ ಪಂದ್ಯಗಳ ಫಲಿತಾಂಶಗಳನ್ನು ಅವಲಂಬಿಸಬೇಕಾಗಿಲ್ಲ. ಈಗಾಗಲೇ ಪಂಜಾಬ್ ಕಿಂಗ್ಸ್ (PBKS) ತಂಡವು ಮುಂಬೈ ಇಂಡಿಯನ್ಸ್ (MI) ಮಣಿಸಿ ಮೊದಲ ತಂಡವಾಗಿ ಕ್ವಾಲಿಫೈಯರ್ ಪ್ರವೇಶ ಪಡೆದಿದ್ದು, ಇದೀಗ ಲಕ್ನೋ ವಿರುದ್ಧ ಗೆದ್ದರೆ ಆರ್‌ಸಿಬಿ ತಂಡ ಅದರ ಎದುರಾಳಿಯಾಗಲಿದೆ.
ಮಹತ್ವದ ಪಂದ್ಯಕ್ಕೆ ಸಂಬಂಧಿಸಿದ 10 ಅಂಶಗಳು
- ಆರ್‌ಸಿಬಿ ಗೆದ್ದರೆ, ನೇರವಾಗಿ ಕ್ವಾಲಿಫೈಯರ್ ಪ್ರವೇಶಿಸಲಿದೆ. ಒಂದು ವೇಳೆ ಸೋತರೆ, ಗುಜರಾತ್ ಟೈಟನ್ಸ್ ತಂಡವು ಪಂಜಾಬ್ ವಿರುದ್ಧ ಕ್ವಾಲಿಫೈಯರ್ 1 ಅನ್ನು ಆಡುತ್ತದೆ. ಐಪಿಎಲ್ ಪ್ಲೇಆಫ್ ವ್ಯವಸ್ಥೆಯನ್ನು ಪರಿಚಯಿಸಿದಾಗಿನಿಂದ, ಅಗ್ರ 2ರಲ್ಲಿ ಸ್ಥಾನ ಪಡೆದ ತಂಡಗಳು 14 ಟ್ರೋಫಿಗಳಲ್ಲಿ 13 ಪ್ರಶಸ್ತಿಗಳನ್ನು ಗೆದ್ದಿವೆ. 2016ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಮಾತ್ರ ಇದಕ್ಕೆ ಹೊರತಾಗಿದೆ. ಕ್ವಾಲಿಫೈಯರ್ 1ರಲ್ಲಿ ಸೋತ ತಂಡವು ಫೈನಲ್‌ಗೆ ಅರ್ಹತೆ ಪಡೆಯಲು ಮತ್ತೊಂದು ಅವಕಾಶವನ್ನು ಪಡೆಯುತ್ತದೆ. ಆದರೆ ಎಲಿಮಿನೇಟರ್ ಆಡುವ ತಂಡಗಳು ಒಮ್ಮೆ ಸೋತರೆ ಟೂರ್ನಿಯಿಂದ ಹೊರಬೀಳುತ್ತವೆ.
- ಎರಡು ತಂಡಗಳ ನಡುವೆ ಈವರೆಗೆ ಐದು ಮುಖಾಮುಖಿ ಪಂದ್ಯಗಳು ನಡೆದಿದ್ದು, ಆರ್‌ಸಿಬಿ ತಂಡವು 3-2 ಅಂತರದಲ್ಲಿ ಮುನ್ನಡೆ ಸಾಧಿಸಿದೆ. 2023ರಲ್ಲಿ ಇದೇ ಮೈದಾನದಲ್ಲಿ ನಡೆದ ಏಕೈಕ ಪಂದ್ಯವನ್ನು ಕೂಡಾ ಆರ್‌ಸಿಬಿ ಗೆದ್ದಿದೆ.
- ಲಕ್ನೋ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವುದರಿಂದ ಈ ಪಂದ್ಯದಲ್ಲಿ ಎಲ್‌ಎಸ್‌ಜಿ ತಂಡವು ಕೆಲವು ಬದಲಾವಣೆಗಳನ್ನು ಮಾಡಬಹುದು. ಅಮಾನತುಗೊಂಡಿದ್ದ ಕಾರಣ ಕಳೆದ ಪಂದ್ಯದಲ್ಲಿ ಸ್ಪಿನ್ನರ್ ದಿಗ್ವೇಶ್ ರಥಿ ಆಡಲು ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿ ಅವರು ಮತ್ತೆ ಆಡಬಹುದು. ಅತ್ತ ಐಡೆನ್ ಮರ್ಕ್ರಾಮ್ ತವರಿಗೆ ಮರಳುವುದರಿಂದ ಈ ಪಂದ್ಯ ಆಡುತ್ತಿಲ್ಲ. ಡೇವಿಡ್ ಮಿಲ್ಲರ್ ಬದಲಿಗೆ ಹಿಮ್ಮತ್ ಸಿಂಗ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು.
- ಮಹತ್ವದ ಪಂದ್ಯಕ್ಕೂ ಮುನ್ನ ಆರ್‌ಸಿಬಿಗೆ ದೊಡ್ಡ ಹಿನ್ನಡೆ ಎದುರಾಗಬಹುದು. ಕಳೆದ ಪಂದ್ಯದಲ್ಲಿ, ಈ ಋತುವಿನ ತಂಡದ ಪ್ರಬಲ ಫಿನಿಷರ್ ಟಿಮ್ ಡೇವಿಡ್ ಕಾಲಿನ ಗಾಯದಿಂದ ಬಳಲುತ್ತಿದ್ದರು. ಅವರು ಈ ಪಂದ್ಯಕ್ಕೆ ಫಿಟ್ ಆಗಿಲ್ಲದಿದ್ದರೆ, ಟಿಮ್ ಸೀಫರ್ಟ್ ಅಥವಾ ಲಿಯಾಮ್ ಲಿವಿಂಗ್‌ಸ್ಟನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು.
- ಜೋಶ್ ಹೇಜಲ್‌ವುಡ್ ತಂಡ ಸೇರಿಕೊಂಡರೂ ಪಂದ್ಯದಲ್ಲಿ ಆಡುವ ಬಗ್ಗೆ ಸ್ಪಷ್ಟತೆ ಇಲ್ಲ. ಒಂದು ವೇಳೆ ಅವರು ಆಡದಿದ್ದರೆ, ಜಿಂಬಾಬ್ವೆಯ ಸ್ಟಾರ್ ವೇಗಿ ಬ್ಲೆಸ್ಸಿಂಗ್ ಮುಜರಬಾನಿ ಐಪಿಎಲ್ ಆಡುವ ಅವಕಾಶ ಪಡೆಯಬಹುದು.
- ಐಪಿಎಲ್‌ನಲ್ಲಿ ಲಕ್ನೋ ತಂಡದ ಇಬ್ಬರು ವೇಗದ ಬೌಲರ್‌ಗಳಾದ ಶಾರ್ದೂಲ್ ಠಾಕೂರ್ ಮತ್ತು ಆವೇಶ್ ಖಾನ್ ವಿರುದ್ಧ ವಿರಾಟ್ ಕೊಹ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಇವರಿಬ್ಬರ ವಿರುದ್ಧ ಕ್ರಮವಾಗಿ 163.63 ಮತ್ತು 170.73ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದಾರೆ.
- ಪ್ರಸಕ್ತ ಋತುವಿನಲ್ಲಿ ಆರ್‌ಸಿಬಿ ತಂಡವು ತವರಿನ ಹೊರಗೆ ಆಡಿದ ಎಲ್ಲಾ ಆರು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಐಪಿಎಲ್ ಇತಿಹಾಸದಲ್ಲಿ ಯಾವುದೇ ತಂಡವು ಒಂದೇ ಋತುವಿನಲ್ಲಿ ಹೊರಗಿನ ಎಲ್ಲಾ ಪಂದ್ಯಗಳನ್ನು ಗೆದ್ದಿಲ್ಲ. ಕೊನೆಯ ಪಂದ್ಯದಲ್ಲಿ ಲಕ್ನೋದಲ್ಲಿ ಆಡಿದರೂ, ಅದು ಆರ್‌ಸಿಬಿಗೆ ತವರು ಮೈದಾನವೆಂದು ನಿಗದಿಯಾಗಿತ್ತು.
- ಈ ಬಾರಿ ಆಡಿದ ಮೊದಲ ನಾಲ್ಕು ಪಂದ್ಯಗಳಲ್ಲಿ 161 ರನ್ ಗಳಿಸಿದ್ದ ರಜತ್ ಪಾಟೀದಾರ್, ಕೊನೆಯ ಏಳು ಪಂದ್ಯಗಳಲ್ಲಿ ಕೇವಲ 96 ರನ್ ಗಳಿಸಿದ್ದಾರೆ. ಅವರು ಫಾರ್ಮ್ ಕಂಡುಕೊಳ್ಳಬೇಕಿದೆ.
- ಈ ಪಂದ್ಯವು 70 ಶೇ. ಕೆಂಪು ಮಣ್ಣು ಮತ್ತು 30 ಶೇ. ಕಪ್ಪು ಮಣ್ಣಿನ ಮಿಶ್ರಣದಿಂದ ತಯಾರಿಸಲಾದ ಪಿಚ್‌ನಲ್ಲಿ ನಡೆಯಲಿದೆ. ಸಾಮಾನ್ಯವಾಗಿ, ಕೆಂಪು ಮಣ್ಣಿನ ಪಿಚ್‌ನಲ್ಲಿ ಚೆಂಡು ಬ್ಯಾಟ್‌ಗೆ ಉತ್ತಮವಾಗಿ ಬರುತ್ತದೆ. ಆದರೆ, ಕಪ್ಪು ಮಣ್ಣಿನ ಭಾಗವು ಬೌಲರ್‌ಗಳಿಗೆ ಚೆಂಡಿಗೆ ಸ್ವಲ್ಪ ಹಿಡಿತ ಕೊಡುತ್ತದೆ. ಮುಖ್ಯವಾಗಿ ಸ್ಪಿನ್ನರ್‌ಗಳು ಮತ್ತು ನಿಧಾನಗತಿಯ ಬೌಲರ್‌ಗಳಿಗೆ ಸ್ವಲ್ಪ ನೆರವಾಗುತ್ತದೆ.
- ಮಂಗಳವಾರ ಲಕ್ನೋದಲ್ಲಿ ನಡೆಯುವ ಪಂದ್ಯದ ಸಮಯದಲ್ಲಿ ಮಳೆಯಾಗುವ ಸಾಧ್ಯತೆ ಇಲ್ಲ. ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 29 ಡಿಗ್ರಿ ಇರುವ ಮುನ್ಸೂಚನೆ ಇದೆ.
ಇದನ್ನೂ ಓದಿ | ಆರ್‌ಸಿಬಿ ಚೊಚ್ಚಲ ಐಪಿಎಲ್ ಟ್ರೋಫಿ ಕನಸಿಗೆ ಆನೆಬಲ; ಪ್ಲೇಆಫ್‌ಗೂ ಮುನ್ನ ತಂಡ ಸೇರಿಕೊಂಡ ಜೋಶ್ ಹೇಜಲ್‌ವುಡ್