ಲಕ್ನೋ ಸೂಪರ್ ಜೈಂಟ್ಸ್ vs ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್ ಪಂದ್ಯ; ಪಿಚ್-ಹವಾಮಾನ ವರದಿ, ಸಂಭಾವ್ಯ ಆಡುವ ಬಳಗ
ಲಕ್ನೋ ಸೂಪರ್ ಜೈಂಟ್ಸ್ (LSG) ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಐಪಿಎಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇಲ್ಲ. ಲಕ್ನೋದಲ್ಲಿ ಪಂದ್ಯ ನಡೆಯುತ್ತಿದ್ದು, ಸ್ಪರ್ಧಾತ್ಮಕ ಪೈಪೋಟಿ ನಡೆಯುವ ನಿರೀಕ್ಷೆ ಇದೆ.

ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ 2025ರ ಆವೃತ್ತಿಯ 61ನೇ ಪಂದ್ಯದಲ್ಲಿ ಆತಿಥೇಯ ಲಕ್ನೋ ಸೂಪರ್ ಜೈಂಟ್ಸ್ (LSG) ಹಾಗೂ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡಗಳು ಸೆಣಸಲಿದೆ. ಎಲ್‌ಎಸ್‌ಜಿ ತಂಡವು ಗೆಲ್ಲಲೇಬೇಕಾದ ಅನಿವಾರ್ಯ ಸ್ಥಿತಿಯಲ್ಲಿದೆ. ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರುವ ತಂಡದ ಪ್ಲೇಆಫ್ ನಿರೀಕ್ಷೆಗಳು ಕಠಿಣವಾಗಿದ್ದು, ಒಂದು ಸೋಲು ಕೂಡಾ ತಂಡವನ್ನು ಅಧಿಕೃತವಾಗಿ ಪ್ಲೇಆಫ್ ಸ್ಪರ್ಧೆಯಿಂದ ಹೊರದೂಡುತ್ತದೆ. ರಿಷಭ್ ಪಂತ್ ನೇತೃತ್ವದ ತಂಡವು ಆಡಿದ ಕೊನೆಯ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಸೋತಿದ್ದು, ಗೆಲುವಿನ ಹಳಿಗೆ ಹಿಂತಿರುಗಲು ಪರದಾಡುತ್ತಿದೆ.
ಅತ್ತ ಎಸ್‌ಆರ್‌ಎಚ್ ತಂಡವು ಈಗಾಗಲೇ ಟೂರ್ನಿಯಲ್ಲಿ ಹೊರಬಿದ್ದಿದೆ. ಇನ್ನೇನೇ ಇದ್ದರೂ ಪ್ರತಿಷ್ಠೆಗಾಗಿ ತಂಡ ಆಡಬೇಕಷ್ಟೇ.
ಲಕ್ನೋ ತಂಡದ ಸ್ಟಾರ್ ವೇಗಿ ಮಯಾಂಕ್ ಯಾದವ್ ಮತ್ತೆ ಗಾಯಗೊಂಡು ತಂಡದಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ ನ್ಯೂಜಿಲೆಂಡ್‌ನ ವಿಲ್ ಒ'ರೂರ್ಕ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ತಂಡವು ಹೈದರಾಬಾದ್, ಗುಜರಾತ್ ಮತ್ತು ಆರ್‌ಸಿಬಿ ವಿರುದ್ಧ ಮುಂದಿನ ಮೂರು ಪಂದ್ಯಗಳನ್ನು ಗೆದ್ದರೆ 16 ಅಂಕಗಳನ್ನು ಗಳಿಸಲಿದೆ. ಆದರೂ, ಪ್ಲೇಆಫ್ ದೂರದ ಮಾತು.
ಏಕಾನಾ ಕ್ರೀಡಾಂಗಣದ ಪಿಚ್ ವರದಿ
ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣವು ಈ ಋತುವಿನಲ್ಲಿ ಕಷ್ಟಕರವಾದ ಪಿಚ್ ಆಗಿದೆ. ಮೈದಾನ ದೊಡ್ಡದಾಗಿದ್ದು, ದೊಡ್ಡ ಹೊಡೆತಗಳನ್ನು ಹೊಡೆಯುವುದು ಸವಾಲಾಗಿಸುತ್ತವೆ. ಇಲ್ಲಿ ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ ಕೇವಲ 167 ಆಗಿದ್ದರೂ, ಎರಡನೇ ಇನ್ನಿಂಗ್ಸ್‌ನಲ್ಲಿ ಇಬ್ಬನಿ ಕಾರಣದಿಂದ ತಂಡಗಳು ತುಸು ಲಾಭ ಪಡೆಯುತ್ತವೆ. ಹೀಗಾಗಿ 180ರಿಂದ 190 ರನ್‌ಗಳ ಗುರಿ ಸ್ಪರ್ಧಾತ್ಮಕವಾಗಲಿದೆ. ಇಲ್ಲಿ ಆಡಿರುವ 19 ಐಪಿಎಲ್ ಪಂದ್ಯಗಳಲ್ಲಿ ಚೇಸಿಂಗ್ ಮಾಡಿದ ತಂಡಗಳು 10 ಬಾರಿ ಗೆದ್ದಿವೆ. ಹೀಗಾಗಿ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು.
ಲಕ್ನೋ ಹವಾಮಾನ ವರದಿ
ಲಕ್ನೋದಲ್ಲಿ ನಡೆಯುವ ಎಲ್‌ಎಸ್‌ಜಿ vs ಎಸ್‌ಆರ್‌ಹೆಚ್ ಪಂದ್ಯದ ಸಮಯದಲ್ಲಿ ಮಳೆ ಬರುವ ಸಾಧ್ಯತೆ ಇಲ್ಲ. ಇಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಮತ್ತು ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂಬ ಹವಾಮಾನ ಮುನ್ಸೂಚನೆ ಇದೆ.
ಎಲ್‌ಎಸ್‌ಜಿ ಸಂಭಾವ್ಯ ತಂಡ
ಮಿಚೆಲ್ ಮಾರ್ಷ್, ಐಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್, ರಿಷಭ್ ಪಂತ್ (ನಾಯಕ ಮತ್ತು ವಿಕೆಟ್ ಕೀಪರ್), ಅಬ್ದುಲ್ ಸಮದ್, ಆಯುಷ್ ಬದೋನಿ, ಡೇವಿಡ್ ಮಿಲ್ಲರ್, ರವಿ ಬಿಷ್ಣೋಯ್, ದಿಗ್ವೇಶ್ ಸಿಂಗ್ ರಾಠಿ, ಅವೇಶ್ ಖಾನ್, ಆಕಾಶ್ ದೀಪ್ / ಶಾರ್ದೂಲ್ ಠಾಕೂರ್, ಪ್ರಿನ್ಸ್ ಯಾದವ್.
ಎಸ್‌ಆರ್‌ಎಚ್ ಸಂಭಾವ್ಯ ತಂಡ
ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಕಮಿಂದು ಮೆಂಡಿಸ್, ಹೆನ್ರಿಚ್ ಕ್ಲಾಸೆನ್, ಅನಿಕೇತ್ ವರ್ಮಾ, ಸಚಿನ್ ಬೇಬಿ, ಅಭಿನವ್ ಮನೋಹರ್, ಪ್ಯಾಟ್ ಕಮಿನ್ಸ್ (ನಾಯಕ), ಹರ್ಷಲ್ ಪಟೇಲ್, ಜಯದೇವ್ ಉನದ್ಕತ್, ಜೀಶನ್ ಅನ್ಸಾರಿ, ಎಶಾನ್ ಮಾಲಿಂಗ.