ಶಾರ್ದುಲ್ ಠಾಕೂರ್ ಬೌಲಿಂಗ್ ಶೋ, ಪೂರನ್ ಬ್ಯಾಟಿಂಗ್ ಪವರ್; ಎಸ್‌ಆರ್‌ಎಚ್ ಕಟ್ಟಿಹಾಕಿ ದಿಟ್ಟ ಜಯ ಸಾಧಿಸಿದ ಲಕ್ನೋ
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಐಪಿಎಲ್ 2025ರ ಆವೃತ್ತಿಯ ಅಂಕಪಟ್ಟಿಯಲ್ಲಿ ಖಾತೆ ತೆರೆದಿದೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಕೊನೆಯ ಹಂತದಲ್ಲಿ ಅನಿರೀಕ್ಷಿತ ಸೋಲು ಕಂಡಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡವು, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಐಪಿಎಲ್ 2025ರ ಆವೃತ್ತಿಯಲ್ಲಿ ಗೆಲುವಿನ ಹಳಿಗೆ ಮರಳಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಶಾರ್ದುಲ್ ಠಾಕೂರ್ ಮಾರಕ ಬೌಲಿಂಗ್ ಹಾಗೂ ನಿಕೋಲಸ್ ಪೂರನ್ ಬೊಂಬಾಟ್ ಬ್ಯಾಟಿಂಗ್ ನೆರವಿಂದ ರಿಷಬ್ ಪಂತ್ ಬಳಗಕ್ಕೆ ಮೊದಲ ಗೆಲುವು ಒಲಿದಿದೆ. ಇದರೊಂದಿಗೆ ಅಂಕಪಟ್ಟಿಯಲ್ಲೂ ಖಾತೆ ತೆರೆದಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಸನ್‌ರೈಸರ್ಸ್ ಹೈದರಾಬಾದ್ 9 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಚೇಸಿಂಗ್ ನಡೆಸಿದ ಲಕ್ನೋ, ಕೇವಲ 16.1 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪುವ ಮೂಲಕ 5 ವಿಕೆಟ್‌ಗಳಿಂದ ಗೆಲುವಿನ ನಗೆ ಬೀರಿತು.
ಎಸ್‌ಆರ್‌ಎಚ್ ತಂಡವು ಆರಂಭದಲ್ಲೇ ವೇಗದ ಆಟಕ್ಕೆ ಮುಂದಾಯಿತು. ಆದರೆ, ಲಕ್ನೋ ಬೌಲರ್‌ಗಳು ಅದಕ್ಕೆ ಸುಲಭವಾಗಿ ಅವಕಾಶ ನೀಡಲಿಲ್ಲ. ಅಭಿಷೇಕ್ ಶರ್ಮಾ ಮತ್ತೆ ಅಲ್ಪ ಮೊತ್ತಕ್ಕೆ ಔಟಾದರೂ, ಟ್ರಾವಿಸ್ ಹೆಡ್ ಅಬ್ಬರ ಮುಂದುವರೆಸಿದರು. 28 ಎಸೆತಗಳಲ್ಲಿ 47 ರನ್ ಸಿಡಿಸಿ, ಪ್ರಿನ್ಸ್ ಯಾದವ್ ಎಸೆತದಲ್ಲಿ ಕ್ಲೀನ್ ಬೋಲ್ಡ್ ಆದರು. ಇಶಾನ್ ಕಿಶನ್ ಗೋಲ್ಡನ್ ಡಕ್ ಆದರು. ನಿತೀಶ್ ರೆಡ್ಡಿ ಅಮೂಲ್ಯ 32 ರನ್‌ಗಳ ಕೊಡುಗೆ ನೀಡದರೆ, ಕ್ಲಾಸೆನ್ 26 ರನ್ ಗಳಿಸಿ ಔಟಾದರು.
ಶಾರ್ದುಲ್ 4 ವಿಕೆಟ್
ಈ ನಡುವೆ ಅನಿಕೇತ್ ವರ್ಮಾ ಆಟ ಗಮನ ಸೆಳೆಯಿತು. 13 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್ ಸಹಿತ 36 ರನ್ ಗಳಿಸಿದರು. ನಾಯಕ ಕಮಿನ್ಸ್ ಸತತ ಮೂರು ಸಿಕ್ಸರ್ ಸಿಡಿಸಿ 4ನೇ ಎಸೆತಕ್ಕೆ ಔಟಾದರು. ಲಕ್ನೋ ಪರ ಶಾರ್ದುಲ್ ಠಾಕೂರ್ 4 ಪ್ರಮುಖ ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡರು.
ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್ ಶತಕದ ಜೊತೆಯಾಟ
ಲಕ್ನೋ ಚೇಸಿಂಗ್ ಅಮೋಘವಾಗಿತ್ತು. ಐಡೆನ್ ಮರ್ಕ್ರಾಮ್ 1 ರನ್ ಗಳಿಸಿ ಔಟಾದರೂ, ಮಿಚೆಲ್ ಮಾರ್ಷ್ ಮತ್ತು ನಿಕೋಲಸ್ ಪೂರನ್ ಶತಕದ ಜೊತೆಯಾಟವಾಡಿದರು. ಸತತ ಎರಡನೇ ಪಂದ್ಯದಲ್ಲೂ ಅಬ್ಬರಿಸಿ ಅರ್ಧಶತಕ ಸಿಡಿಸಿದ ಪೂರನ್, 6 ಸ್ಫೋಟಕ ಸಿಕ್ಸರ್ ಸಹಿತ 70 ರನ್ ಸಿಡಿಸಿ ಆರೆಂಜ್ ಕ್ಯಾಪ್ ಗೆದ್ದರು. ಮಾರ್ಷ್ ಕೂಡಾ ಮತ್ತೊಂದು ಅರ್ಧಶತಕ (52) ಸಿಡಿಸಿದರು. ನಾಯಕ ಪಂತ್ 15 ರನ್ ಗಳಿಸಿದರೆ, ಕೊನೆಯಲ್ಲಿ ಅಬ್ದುಲ್ ಸಮದ್ ಅಜೇಯ 22 ಹಾಗೂ ಮಿಲ್ಲರ್ ಅಜೇಯ 13 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಟೂರ್ನಿಯ ಮೊದಲ ಪಂದ್ಯದಲ್ಲಿ ಸೋತಿದ್ದ ಲಕ್ನೋ, ಎರಡನೇ ಪಂದ್ಯದಲ್ಲಿ ಗೆಲುವಿನ ಲಯಕ್ಕೆ ಮರಳಿದೆ. ಪಂದ್ಯದಲ್ಲಿ ದೆಹಲಿ ಮೂಲದ 23 ವರ್ಷದ ಬೌಲರ್ ಪ್ರಿನ್ಸ್ ಯಾದವ್ ಗಮನ ಸೆಳೆದರು. ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಟಿ20ಯ ನಂಬರ್ ವನ್ ಬ್ಯಾಟರ್ ಟ್ರಾವಿಸ್ ಹೆಡ್ ಅವರನ್ನು ಔಟ್ ಮಾಡುವ ಮೂಲಕ ಮಿಂಚಿದರು.
