ತವರಿನಲ್ಲಿ ಅಬ್ಬರಿಸಿ ಗೆದ್ದ ಲಕ್ನೋ ಸೂಪರ್ ಜೈಂಟ್ಸ್; ಸತತ 4 ಗೆಲುವಿನ ಬಳಿಕ ಟೈಟನ್ಸ್‌ಗೆ ಮೊದಲ ಸೋಲು
ಕನ್ನಡ ಸುದ್ದಿ  /  ಕ್ರಿಕೆಟ್  /  ತವರಿನಲ್ಲಿ ಅಬ್ಬರಿಸಿ ಗೆದ್ದ ಲಕ್ನೋ ಸೂಪರ್ ಜೈಂಟ್ಸ್; ಸತತ 4 ಗೆಲುವಿನ ಬಳಿಕ ಟೈಟನ್ಸ್‌ಗೆ ಮೊದಲ ಸೋಲು

ತವರಿನಲ್ಲಿ ಅಬ್ಬರಿಸಿ ಗೆದ್ದ ಲಕ್ನೋ ಸೂಪರ್ ಜೈಂಟ್ಸ್; ಸತತ 4 ಗೆಲುವಿನ ಬಳಿಕ ಟೈಟನ್ಸ್‌ಗೆ ಮೊದಲ ಸೋಲು

LSG vs GT: ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ಟೈಟನ್ಸ್‌ 6 ವಿಕೆಟ್‌ ನಷ್ಟಕ್ಕೆ 180 ರನ್‌ ಗಳಿಸಿತು. ಇದಕ್ಕೆ ಪ್ರತಿಯಾಗಿ ಚೇಸಿಂಗ್‌ ನಡೆಸಿದ ಲಕ್ನೋ ಸೂಪರ್‌ ಜೈಂಟ್ಸ್‌ 19.3 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 186 ರನ್‌ ಗಳಿಸಿ ಗೆದ್ದು ಬೀಗಿತು.

ತವರಿನಲ್ಲಿ ಗೆದ್ದ ಲಕ್ನೋ ಸೂಪರ್ ಜೈಂಟ್ಸ್; ಸತತ 4 ಗೆಲುವಿನ ಬಳಿಕ ಟೈಟನ್ಸ್‌ಗೆ ಮೊದಲ ಸೋಲು
ತವರಿನಲ್ಲಿ ಗೆದ್ದ ಲಕ್ನೋ ಸೂಪರ್ ಜೈಂಟ್ಸ್; ಸತತ 4 ಗೆಲುವಿನ ಬಳಿಕ ಟೈಟನ್ಸ್‌ಗೆ ಮೊದಲ ಸೋಲು (Surjeet Yadav)

ಗುಜರಾತ್‌ ಟೈಟನ್ಸ್‌ ವಿರುದ್ಧದ ಐಪಿಎಲ್‌ ಪಂದ್ಯದಲ್ಲಿ ಆತಿಥೇಯ ಲಕ್ನೋ ಸೂಪರ್ ಜೈಂಟ್ಸ್‌ ತಂಡ ಗೆದ್ದು ಬೀಗಿದೆ. ತವರಿನ ಅಭಿಮಾನಿಗಳ ಬಲದೊಂದಿಗೆ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡವು 6 ವಿಕೆಟ್‌ಗಳಿಂದ ಗೆದ್ದಿದೆ. ಇದರೊಂದಿಗೆ ಟೂರ್ನಿಯಲ್ಲಿ ನಾಲ್ಕನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿಯೂ ಬಡ್ತಿ ಪಡೆದಿದೆ. ಅತ್ತ ಜಿಟಿ ತಂಡವು ಸತತ ನಾಲ್ಕು ಗೆಲುವಿನ ಬಳಿಕ ಟೂರ್ನಿಯಲ್ಲಿ ಎರಡನೇ ಸೋಲು ಕಂಡಿದೆ. ಐಡೆನ್‌ ಮರ್ಕ್ರಾಮ್‌ ಮತ್ತು ನಿಕೋಲಸ್‌ ಪೂರನ್‌ ಆಕರ್ಷಕ ಶತಕಗಳು ಎಲ್‌ಎಸ್‌ಜಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದವು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ಟೈಟನ್ಸ್‌ 6 ವಿಕೆಟ್‌ ನಷ್ಟಕ್ಕೆ 180 ರನ್‌ ಗಳಿಸಿತು. ಇದಕ್ಕೆ ಪ್ರತಿಯಾಗಿ ಚೇಸಿಂಗ್‌ ನಡೆಸಿದ ಲಕ್ನೋ 19.3 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 186 ರನ್‌ ಗಳಿಸಿ ಗೆದ್ದು ಬೀಗಿತು. ಆಯುಷ್‌ ಬದೋನಿ ಗೆಲುವಿನ ಸಿಕ್ಸರ್‌ ಬಾರಿಸಿದರು.

ಟೈಟನ್ಸ್‌ ಆರಂಭ ಉತ್ತಮವಾಗಿತ್ತು. ಟೂರ್ನಿಯಲ್ಲಿ ಅಮೋಘ ಫಾರ್ಮ್‌ನಲ್ಲಿರುವ ಸಾಯಿ ಸುದರ್ಶನ್‌ ಮತ್ತೊಂದು ಆಕರ್ಷಕ ಅರ್ಧಶತಕ ಸಿಡಿಸಿದರು. ನಾಯಕ ಶುಭ್ಮನ್‌ ಗಿಲ್‌ ಜೊತೆಗೂಡಿ ಮೊದಲ ವಿಕೆಟ್‌ಗೆ 120 ರನ್‌ಗಳ ಆಕರ್ಷಕ ಜೊತೆಯಾಟವಾಡಿದರು. 38 ಎಸೆತಗಳಲ್ಲಿ 60 ರನ್‌ ಗಳಿಸಿ ಗಿಲ್‌ ಔಟಾದ ಬೆನ್ನಲ್ಲೇ ಸುದರ್ಶನ್‌ ಕೂಡಾ 56 ರನ್‌ಗಳಿಗೆ ವಿಕೆಟ್‌ ಒಪ್ಪಿಸಿದರು. ಆ ನಂತರ ಜಿಟಿ ಚೇತರಿಸಿಕೊಳ್ಳಲೇ ಇಲ್ಲ. ನಂತರ ರನ್‌ ಹರಿವು ನಿಂತು ವಿಕೆಟ್‌ಗಳು ಬೇಗನೆ ಉರುಳಿದವು.

ವಾಷಿಂಗ್ಟನ್‌ ಸುಂದರ್‌ 2 ರನ್‌ ಮಾತ್ರ ಗಳಿಸಿದರೆ, ಅನುಭವಿ ಜೋಸ್‌ ಬಟ್ಲರ್‌ 16 ರನ್‌ ಗಳಿಸಿದರು.ರುದರ್‌ಫೋರ್ಡ್‌ 22 ಹಾಗೂ ಶಾರುಖ್‌ ಖಾನ್‌ ಅಜೇಯ 11 ರನ್‌ ಬಾರಿಸಿದರು. ಕೊನೆಯ ಓವರ್‌ನಲ್ಲಿ ಶಾರ್ದುಲ್‌ ಠಾಕೂರ್‌ ಸತತ 2 ವಿಕೆಟ್‌ ಕಬಳಿಸಿ ಜಿಟಿಯ ಬೃಹತ್‌ ಮೊತ್ತಕ್ಕೆ ತಣ್ಣೀರೆರಚಿದರು.

ಲಕ್ನೋ ಸುಲಭ ಚೇಸಿಂಗ್

ಚೇಸಿಂಗ್‌ ಆರಂಭಿಸಿದ ಲಕ್ನೋ ಪರ ಆರಂಭಿಕರಾಗಿ ಮರ್ಕ್ರಾಮ್‌ ಜೊತೆಗೆ ನಾಯಕ ರಿಷಭ್‌ ಪಂತ್‌ ಕಣಕ್ಕಿಳಿದರು. ಮೊದಲ ವಿಕೆಟ್‌ಗೆ ಇಬ್ಬರ ನಡುವೆ 65 ರನ್‌ಗಳ ಜೊತೆಯಾಟ ಬಂತು. 21 ರನ್‌ ಗಳಿಸಿದ್ದ ಪಂತ್‌ ಮೊದಲನೆಯವರಾಗಿ ಔಟಾದರು. ಪೂರನ್‌ ಜೊತೆಗೂಡಿದ ಮರ್ಕ್ರಾಮ್‌ ಮತ್ತೆ ಜೊತೆಯಾಟ ಮುಂದುವರೆಸಿದರು. 31 ಎಸೆತಗಳಲ್ಲಿ 58 ರನ್‌ ಗಳಿಸಿ ಮರ್ಕ್ರಾಮ್‌ ಔಟಾದರು. ಆದರೆ ಟೂರ್ನಿಯಲ್ಲಿ ಅಮೋಘ ಫಾರ್ಮ್‌ನಲ್ಲಿರುವ ಪೂರನ್‌, 34 ಎಸೆತಗಳಲ್ಲಿ 7 ಸ್ಫೋಟಕ ಸಿಕ್ಸರ್‌ ಸಹಿತ 61 ರನ್‌ ಸಿಡಿಸಿದರು. ಮಿಲ್ಲರ್‌ 7 ರನ್‌ ಮಾತ್ರ ಗಳಿಸಿದರು.‌ ಅಂತಿಮ ಓವರ್‌ವರೆಗೆ ಸಾಗಿದ ಪಂದ್ಯದಲ್ಲಿ ಕೊನೆಗೆ ಅಬ್ದುಲ್‌ ಸಮದ್‌ ಮತ್ತು ಬದೋನಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಪಂದ್ಯದಲ್ಲಿ ಪೂರನ್‌ ಆಟ ನಿರ್ಣಾಯಕವಾಯ್ತು. ಇಲ್ಲವಾದಲ್ಲಿ ಲಕ್ನೋ ಚೇಸಿಂಗ್‌ ತುಸು ಕಠಿಣವಾಗುತ್ತಿತ್ತು.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
Whats_app_banner