ಐಪಿಎಲ್‌ ಆರಂಭಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮತ್ತೆ ಹಿನ್ನಡೆ; ಬ್ರೂಕ್‌ ಬಳಿಕ ಲುಂಗಿ ಎನ್‌ಗಿಡಿ ಔಟ್, ಬದಲಿ ಘೋಷಣೆ-lungi ngidi ruled out of ipl 2024 after harry brook from delhi capitals jake fraser mcgurk announced as replacement jra ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್‌ ಆರಂಭಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮತ್ತೆ ಹಿನ್ನಡೆ; ಬ್ರೂಕ್‌ ಬಳಿಕ ಲುಂಗಿ ಎನ್‌ಗಿಡಿ ಔಟ್, ಬದಲಿ ಘೋಷಣೆ

ಐಪಿಎಲ್‌ ಆರಂಭಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮತ್ತೆ ಹಿನ್ನಡೆ; ಬ್ರೂಕ್‌ ಬಳಿಕ ಲುಂಗಿ ಎನ್‌ಗಿಡಿ ಔಟ್, ಬದಲಿ ಘೋಷಣೆ

Lungi Ngidi: ಐಪಿಎಲ್ 2024ರ ಆವೃತ್ತಿಯಿಂದ ಹ್ಯಾರಿ ಬ್ರೂಕ್ ಹಿಂದೆ ಸರಿದ ಒಂದು ದಿನದಲ್ಲೇ, ದಕ್ಷಿಣ ಆಫ್ರಿಕಾ ವೇಗಿ ಲುಂಗಿ ಎನ್‌ಗಿಡಿ ಕೂಡಾ ಗಾಯದಿಂದಾಗಿ ಸಂಪೂರ್ಣ ಟೂರ್ನಿಯಿಂದ ಹೊರಗುಳಿಯಲಿದ್ದಾರೆ. ಇದು ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಹಿನ್ನಡೆಯಾಗುವಂತೆ ಮಾಡಿದೆ.

ಹ್ಯಾರಿ ಬ್ರೂಕ್‌ ಬಳಿಕ ಲುಂಗಿ ಎನ್‌ಗಿಡಿ ಐಪಿಎಲ್‌ನಿಂದ ಔಟ್, ಬದಲಿ ಆಟಗಾರನ ಘೋಷಣೆ
ಹ್ಯಾರಿ ಬ್ರೂಕ್‌ ಬಳಿಕ ಲುಂಗಿ ಎನ್‌ಗಿಡಿ ಐಪಿಎಲ್‌ನಿಂದ ಔಟ್, ಬದಲಿ ಆಟಗಾರನ ಘೋಷಣೆ (AP)

ವಿಶ್ವದ ಶ್ರೀಮಂತ ಕ್ರಿಕೆಟ್‌ ಲೀಗ್‌ ಐಪಿಎಲ್‌ (IPL 2024) ಆರಂಭಕ್ಕೂ ಮುನ್ನ, ಬಹುತೇಕ ಪ್ರತಿಯೊಂದು ತಂಡಗಳು ಗಾಯದ ಸಮಸ್ಯೆ ಎದುರಿಸುತ್ತಿದೆ. ಅದರಲ್ಲೂ ರಿಷಬ್‌ ಪಂತ್‌ ಸಾರಥ್ಯದ ಡೆಲ್ಲಿ ಕ್ಯಾಪಿಟಲ್ಸ್‌‌ (Delhi Capitals) ಒಂದು ಕಡೆ ಸಂಭ್ರಮದಲ್ಲಿದ್ದರೆ, ಮತ್ತೊಂದೆಡೆ ಮೇಲಿಂದ ಮೇಲೆ ಇಬ್ಬರು ಬಲಿಷ್ಠ ಆಟಗಾರರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಪ್ರಸಕ್ತ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಹಿಂದೆ ಸರಿಯುವುದಾಗಿ ಹ್ಯಾರಿ ಬ್ರೂಕ್ ಖಚಿತಪಡಿಸಿದ ಒಂದು ದಿನದೊಳಗೆ, ದಕ್ಷಿಣ ಆಫ್ರಿಕಾದ ಮಾರಕ ವೇಗಿ ಲುಂಗಿ ಎನ್‌ಗಿಡಿ ಕೂಡಾ ಗಾಯದಿಂದಾಗಿ ಸಂಪೂರ್ಣ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ.

ಒಂದೆಡೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ರಿಷಭ್‌ ಪಂತ್‌ ಆಗಮನದಿಂದ ಖುಷಿಯಲ್ಲಿದೆ. ಮತ್ತೊಂದೆಡೆ ಇಬ್ಬರು ಬಲಿಷ್ಠ ವಿದೇಶಿ ಆಟಗಾರರ ಅನುಪಸ್ಥಿತಿಯು ತಂಡವನ್ನು ಸಂಕಷ್ಟಕ್ಕೆ ದೂಡಿದೆ. ಮುಂಬರುವ ಆವೃತ್ತಿಯಲ್ಲಿ ಎನ್‌ಗಿಡಿ ಆಡುವುದಿಲ್ಲ ಎಂದು ಐಪಿಎಲ್ ಮಾರ್ಚ್‌ 15ರ ಶುಕ್ರವಾರ ದೃಢಪಡಿಸಿದೆ. ಅವರ ಬದಲಿಗೆ ಜೇಕ್ ಫ್ರೇಸರ್-ಮೆಕ್ಗುರ್ಕ್ ಅವರನ್ನು ಬದಲಿಯಾಗಿ ಘೋಷಿಸಲಾಗಿದೆ.

"14 ಐಪಿಎಲ್ ಪಂದ್ಯಗಳಲ್ಲಿ ಆಡಿ 25 ವಿಕೆಟ್‌ಗಳನ್ನು ಪಡೆದಿರುವ ಲುಂಗಿ ಎನ್‌ಗಿಡಿ ಗಾಯದಿಂದಾಗಿ ಐಪಿಎಲ್ 2024ರ ಆವೃತ್ತಿಯಿಂದ ಹೊರಗುಳಿದಿದ್ದಾರೆ" ಎಂದು ಐಪಿಎಲ್‌ ಪ್ರಕಟಣೆ ತಿಳಿಸಿದೆ. ಫ್ರೇಸರ್ ಮೆಕ್ಗುರ್ಕ್ ಆಸ್ಟ್ರೇಲಿಯಾ ಪರ ಎರಡು ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಅವರು ಮೀಸಲು ಬೆಲೆ 50 ಲಕ್ಷ ರೂಪಾಯಿಗೆ ಡಿಸಿ ತಂಡ ಸೇರಿಕೊಂಡಿದ್ದಾರೆ.

ಇದನ್ನೂ ಓದಿ | ವಾರ್ಷಿಕ ಗುತ್ತಿಗೆಗೆ ಶ್ರೇಯಸ್ ಅಯ್ಯರ್ ಹೆಸರು ಸೇರಿಸಲು ಬಿಸಿಸಿಐ ಚಿಂತನೆ; ಇಶಾನ್​ ಕಿಶನ್​​ ಕುರಿತು ನಡೆದಿಲ್ಲ ಚರ್ಚೆ

ಅತ್ತ ಇಂಗ್ಲೆಂಡ್‌ ತಂಡದ ಸ್ಫೋಟಕ ಬ್ಯಾಟರ್‌, ವೈಯಕ್ತಿಕ ಕಾರಣಗಳನ್ನು ನೀಡಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಇದೀಗ ಎನ್‌ಗಿಡಿ ಅನುಪಸ್ಥಿತಿಯಿಂದಾಗಿ ಕ್ಯಾಪಿಟಲ್ಸ್ ಗೆ ದೊಡ್ಡ ಹೊಡೆತ ಬಿದ್ದಿದೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅಜ್ಜಿಯ ನಿಧನದಿಂಧಾಗಿ, ಬ್ರೂಕ್‌ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಅಜ್ಜಿಯ ಅನಾರೋಗ್ಯದಿಂದಾಗಿ ಆಂಗ್ಲ ಕ್ರಿಕೆಟಿಗ ಈ ವರ್ಷದ ಆರಂಭದಲ್ಲಿ ಭಾರತ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದರು.

ಡೆಲ್ಲಿ ಬತ್ತಳಿಕೆಯಲ್ಲಿದ್ದಾರೆ ಸ್ಫೋಟಕ ವಿದೇಶಿ ಆಟಗಾರರು

ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಇಬ್ಬರು ವಿದೇಶಿ ಬೌಲರ್‌ಗಳಿದ್ದಾರೆ. ಅನ್ರಿಚ್ ನಾರ್ಟ್ಜೆ ಮತ್ತು ಜೇ ರಿಚರ್ಡ್ಸನ್ ತಂಡದ ಪರ ಕಣಕ್ಕಿಳಿಯಲಿದ್ದಾರೆ. ನಾರ್ಟ್ಜೆ ಮತ್ತು ರಿಚರ್ಡ್ಸನ್ ಜೊತೆಗೆ; ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಟ್ರಿಸ್ಟಾನ್ ಸ್ಟಬ್ಸ್ ತಂಡದಲ್ಲಿರುವ ಬಲಿಷ್ಠ ವಿದೇಶಿಗರು. ಇದೀಗ ಫ್ರೇಸರ್-ಮೆಕ್ಗುರ್ಕ್ ಕೂಡಾ ತಂಡ ಸೇರಿಕೊಂಡಿದ್ದು, ಬಲಿಷ್ಠ ಆಟಗಾರರ ದೊಡ್ಡ ಬಳಗ ತಂಡದಲ್ಲಿದೆ.

ಇದನ್ನೂ ಓದಿ | ರಿಷಭ್​ ಪಂತ್​​ರನ್ನು ನೆನಪಿಸಿದ ಶ್ರೀಲಂಕಾ ಕ್ರಿಕೆಟಿಗನ ಭೀಕರ ಅಪಘಾತ; ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಚಿಂದಿ

ಈ ಬಾರಿ ಡೆಲ್ಲಿ ತಂಡವು ಹೊಸ ಹುರುಪಿನೊಂದಿಗೆ ಕಣಕ್ಕಿಳಿಯಲಿದೆ. ಸ್ಟಾರ್ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ರಿಷಭ್ ಪಂತ್ ತಂಡಕ್ಕೆ ಮರಳಿದ್ದಾರೆ. 2022ರ ಡಿಸೆಂಬರ್‌ನಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲಿ ಗಂಭೀರ ಗಾಯಗೊಂಡಿದ್ದ ಆಟಗಾರ, ವರ್ಷದ ಬಳಿಕ ಇದೇ ಮೊದಲ ಮೊದಲ ಬಾರಿಗೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದಾರೆ. ಈ ತಿಂಗಳ ಆರಂಭದಲ್ಲಿ ಎನ್‌ಸಿಎ ಅವರಿಗೆ ಫಿಟ್ನೆಸ್ ಕ್ಲಿಯರೆನ್ಸ್ ನೀಡಿದೆ. ಅದರ ಬೆನ್ನಲ್ಲೇ ಬಿಸಿಸಿಐ ಕೂಡಾ ಪಂತ್‌ ಅವರನ್ನು ಸಂಪೂರ್ಣ ಫಿಟ್‌ ಎಂದು ಘೋಷಿಸಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)

mysore-dasara_Entry_Point