ಆರ್‌ಸಿಬಿ vs ಕೆಕೆಆರ್ ಪಂದ್ಯಕ್ಕೆ ಬಿಳಿ ಬಣ್ಣಕ್ಕೆ ತಿರುಗಲಿದೆ ಚಿನ್ನಸ್ವಾಮಿ ಸ್ಟೇಡಿಯಂ; ಇದು ವಿರಾಟ್ ಕೊಹ್ಲಿಗೆ ಅಭಿಮಾನಿಗಳ ಗೌರವ
ವಿರಾಟ್ ಕೊಹ್ಲಿ ಟೆಸ್ಟ್ ನಿವೃತ್ತಿಗೆ ಗೌರವಾರ್ಥವಾಗಿ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ ಹಾಗೂ ಕೆಕೆಆರ್ ತಂಡಗಳ ನಡುವಿನ ಪಂದ್ಯಕ್ಕೆ ಅಭಿಮಾನಿಗಳು ಬಿಳಿ ಜೆರ್ಸಿ ತೊಟ್ಟು ಸ್ಟೇಡಿಯಂಗೆ ಹಾಜರಾಗುವ ಯೋಜನೆ ಹಾಕಿದ್ದಾರೆ.

ಕಳೆದ ವಾರ ಟೆಸ್ಟ್ ಕ್ರಿಕೆಟ್‌ನಿಂದ ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಿದರು. ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ವಿದಾಯ ಘೋಷಿಸಿದ ಅವರು, ಅಭಿಮಾನಿಗಳಿಗೆ ನಿರಾಶೆ ಮೂಡಿಸಿದರು. ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ ಎಂಬುದನ್ನು ಅಭಿಮಾನಿಗಳಿಂದ ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ. ಕೊಹ್ಲಿ ಇದೀಗ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಟೆಸ್ಟ್ ನಿವೃತ್ತಿ ಆದ ನಂತರ ಇದೇ ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿರುವ ವಿರಾಟ್, ಅಭಿಮಾನಿಗಳ ಪ್ರೀತಿ-ಗೌರವವನ್ನು ಆಲಂಗಿಸಲು ಸಜ್ಜಾಗಿದ್ದಾರೆ. ಇದಕ್ಕೆ ಕಾರಣವೂ ಇದೆ. ಕೊಹ್ಲಿಯ ಟೆಸ್ಟ್ ವೃತ್ತಿಜೀವನಕ್ಕೆ ಗೌರವ ಸಲ್ಲಿಸುವ ಸಲುವಾಗಿ ಅಭಿಮಾನಿಗಳು ವಿಶೇಷ ಯೋಜನೆ ರೂಪಿಸಿದ್ದಾರೆ. ಇದಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನ ನಡೆದಿದೆ.
ಇಂದು (ಮೇ 17) ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಹಾಗೂ ಕೆಕೆಆರ್ ನಡುವೆ ಐಪಿಎಲ್ ಪಂದ್ಯ ನಡೆಯುತ್ತಿದೆ. ಈ ಪಂದ್ಯಕ್ಕೆ ಹಾಜರಾಗುತ್ತಿರುವ ಅಭಿಮಾನಿಗಳು ಸಾಮಾನ್ಯ ಕೆಂಪು ಬಣ್ಣದ ಬದಲಿಗೆ ವೈಟ್ ಜೆರ್ಸಿ ಧರಿಸಲು ನಿರ್ಧರಿಸಿದ್ದಾರೆ.
ಒಂಬತ್ತು ದಿನಗಳ ಕಾಲ ಮುಂದೂಡಲಾಗಿದ್ದ ಐಪಿಎಲ್ ಪಂದ್ಯಾವಳಿಯು, ಮತ್ತೆ ಪುನರಾರಂಭವಾಗುತ್ತಿದೆ. ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಕೆಆರ್ ವಿರುದ್ಧ ಆರ್‌ಸಿಬಿ ಕಣಕ್ಕಿಳಿಯುತ್ತಿದೆ. ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿ ಟೆಸ್ಟ್ ನಿವೃತ್ತಿ ಘೋಷಿಸಿದ್ದರಿಂದ, ಅಭಿಮಾನಿಗಳು ವಿಶೇಷವಾಗಿ ಕೊಹ್ಲಿಗೆ ಗೌರವ ಸಲ್ಲಿಸಲು ಮುಂದಾಗಿದ್ದಾರೆ. ಇಂದಿನ ಪಂದ್ಯಕ್ಕೆ ಬಿಳಿ ಬಟ್ಟೆ ಧರಿಸಿ ಕ್ರೀಡಾಂಗಣದಲ್ಲಿ ಹಾಜರಾಗಲು ನಿರ್ಧರಿಸಿದ್ದಾರೆ. ಈ ಸಂಬಂಧವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ಅಭಿಯಾನ ನಡೆದಿದೆ. ಜನರು ವಿವಿಧ ಸಾಮಾಜಿಕ ಮಾಧ್ಯಮ ತಾಣಗಳಲ್ಲಿ ಕುರಿತು ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಕಳೆದ 13 ವರ್ಷಗಳಲ್ಲಿ ರೆಡ್ ಬಾಲ್ ಕ್ರಿಕೆಟ್ ತಂಡಕ್ಕೆ ವಿರಾಟ್ ನೀಡಿರುವ ಗಮನಾರ್ಹ ಕೊಡುಗೆಯನ್ನು ಗೌರವಿಸಲು ಇದು ಅಭಿಮಾನಿಗಳಿಗೆ ಒಂದು ಅವಕಾಶವಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಬೀದಿ ಬದಿ ವ್ಯಾಪಾರಿಗಳು ಕೂಡಾ ಇದಕ್ಕೆ ಸಜ್ಜಾಗಿದ್ದಾರೆ. ಸಾಮಾನ್ಯವಾಗಿ ಆರ್‌ಸಿಬಿ ತಂಡದ ಕೆಂಪು ಜೆರ್ಸಿ ಬದಲಿಗೆ ಬಿಳಿ ಜೆರ್ಸಿಗಳ ಮಾರಾಟಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಹೊಹ್ಲಿಯ ಟೆಸ್ಟ್ ಜೆರ್ಸಿಗಳನ್ನು ಹೋಲುವ ಜೆರ್ಸಿಗಳ ಮಾರಾಟ ನಡೆಯುತ್ತಿದೆ. ಇಂಥಾ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಐಪಿಎಲ್‌ನಲ್ಲಿ ಈ ಪಂದ್ಯವನ್ನು ಸ್ಮರಣೀಯ ಸಂದರ್ಭವನ್ನಾಗಿ ಮಾಡಲು ಅಭಿಮಾನಿಗಳು ಕಾತರರಾಗಿದ್ದಾರೆ.
ಈ ಯೋಜನೆಗಳ ಬಗ್ಗೆ ಆರ್‌ಸಿಬಿ ಶಿಬಿರಕ್ಕೂ ಸುದ್ದಿ ತಲುಪಿದೆ. ತಂಡ ಕ್ರಿಕೆಟ್ ನಿರ್ದೇಶಕ ಮೋ ಬಾಬತ್ ಅವರು ಈ ಕುರಿತು ಮಾತನಾಡಿದ್ದಾರೆ. “ಅಭಿಮಾನಿಗಳು ವೈಟ್ ಜೆರ್ಸಿ ಧರಿಸುವುದು ನಾವು ಹೆಚ್ಚು ಯೋಚಿಸಿದ ಅಥವಾ ಮಾತನಾಡಿದ ವಿಷಯವಲ್ಲ. ಅಭಿಮಾನಿಗಳು ಅದರ ಬಗ್ಗೆ ಮಾತನಾಡುತ್ತಿರುವುದನ್ನು ನಾನು ಗಮನಿಸಿದ್ದೇನೆ. ಆದರೆ ಇದು ನಮ್ಮ ಆಟದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ನಾನು ಭಾವಿಸುವುದಿಲ್ಲ” ಎಂದು ಬಾಬಟ್ ಇಎಸ್‌ಪಿಎನ್ ಕ್ರಿಕ್ಇನ್ಫೋಗೆ ವಿವರಿಸಿದ್ದಾರೆ. ಸ್ಟ್ಯಾಂಡ್‌ಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಬಿಳಿ ಬಣ್ಣದ ಜೆರ್ಸಿ ಧರಿಸಿದ ಅಭಿಮಾನಿಗಳಿರುವುದು ಚೆಂಡಿನ ಗೋಚರತೆಯ ಮೇಲೆ ಪರಿಣಾಮ ಬೀರುತ್ತದೆ ಎಂಬ ವದಂತಿಗಳನ್ನು ಅವರು ತಳ್ಳಿಹಾಕಿದರು.