ಭಾರತ ತಂಡಕ್ಕೆ ವಿರಾಟ್ ಕೊಹ್ಲಿ ಅವರೇ ದೊಡ್ಡ ಸಮಸ್ಯೆ; ಅಚ್ಚರಿ ಹೇಳಿಕೆ ನೀಡಿದ ಸಂಜಯ್ ಮಾಂಜ್ರೇಕರ್
Sanjay Manjrekar on Virat Kohli: ನ್ಯೂಯಾರ್ಕ್ ಪಿಚ್ಗಳನ್ನು ಗಮನಿಸಿದರೆ, ಭಾರತಕ್ಕೆ ವಿರಾಟ್ ಕೊಹ್ಲಿ ಅವರ ಆಕ್ರಮಣಕಾರಿ ಆಟ ಅಗತ್ಯ ಇಲ್ಲ. ಬದಲಿಗೆ ಹಳೆಯ ಆಟ ಅಗತ್ಯ ಇದೆ ಎಂದು ಸಂಜಯ್ ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.

ವಿರಾಟ್ ಕೊಹ್ಲಿ (Virat Kohli) ಅವರು 2024ರ ಟಿ20 ವಿಶ್ವಕಪ್ನಲ್ಲಿ (T20 World Cup 2024) ನೀರಸ ಆರಂಭ ಹೊಂದಿದ್ದಾರೆ. ಬ್ಲಾಕ್ಬಸ್ಟರ್ ಐಪಿಎಲ್ (IPL 2024) ನಂತರ ವಿಶ್ವಕಪ್ನಲ್ಲೂ ಅಂತಹದ್ದೇ ಪ್ರದರ್ಶನವನ್ನೂ ನಿರೀಕ್ಷಿಸಲಾಗಿತ್ತು. ಶ್ರೀಮಂತ ಲೀಗ್ನಲ್ಲಿ ಆಡಿದ 15 ಪಂದ್ಯಗಳಲ್ಲಿ 741 ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದ ಕೊಹ್ಲಿ, 6ನೇ ಟಿ20 ವಿಶ್ವಕಪ್ ಆಡುತ್ತಿದ್ದಾರೆ. ಆದರೆ, ಐರ್ಲೆಂಡ್ ಮತ್ತು ಪಾಕಿಸ್ತಾನ ವಿರುದ್ಧ ಕ್ರಮವಾಗಿ 1 ಮತ್ತು 4 ರನ್ ಗಳಿಸಿ ಔಟಾಗಿದ್ದಾರೆ.
ನ್ಯೂಯಾರ್ಕ್ ಪಿಚ್ಗಳನ್ನು ಗಮನಿಸಿದರೆ ಭಾರತ ತಂಡಕ್ಕೆ ಪ್ರಸ್ತುತ ವಿರಾಟ್ ಕೊಹ್ಲಿ ಅವರು ಇಲ್ಲಿ ಆಕ್ರಮಣಕಾರಿ ಆಟವಾಡುವ ಅಗತ್ಯವಿಲ್ಲ. ಬದಲಿಗೆ ಹಳೆಯ ಆಟವೇ ಅಗತ್ಯ ಇದೆ ಎಂದು ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ. ಟಿ20 ವಿಶ್ವಕಪ್ನಲ್ಲಿ ಅಮೆರಿಕ ವಿರುದ್ಧದ ಪಂದ್ಯಕ್ಕೂ ಮುನ್ನ ಇಎಸ್ಪಿಎನ್ ಕ್ರಿಕ್ಇನ್ಫೋದೊಂದಿಗೆ ಮಾತನಾಡಿ, ಭಾರತ ತಂಡಕ್ಕೆ ಕೊಹ್ಲಿಯೇ ಸಮಸ್ಯೆ ಎಂದಿದ್ದಾರೆ.
ಕಳೆದ ತಿಂಗಳು ಐಪಿಎಲ್ನಲ್ಲಿ ಆಕ್ರಮಣಕಾರಿ ಆಟವಾಡುತ್ತಿದ್ದ ಕೊಹ್ಲಿ ನ್ಯೂಯಾರ್ಕ್ನಲ್ಲಿ ಕಠಿಣ ಪಿಚ್ ಪರಿಸ್ಥಿತಿಗಳನ್ನು ನಿಭಾಯಿಸುವ ಪ್ರಯತ್ನದಲ್ಲಿ ವಿಫಲರಾಗುತ್ತಿದ್ದಾರೆ. ಆಧುನಿಕ ಕ್ರಿಕೆಟ್ನ ಲೆಜೆಂಡರಿ ಆಟಗಾರ ಹಳೆಯ ಆಟಕ್ಕೆ ಮರಳುವುದು ಅಗತ್ಯ ಇದೆ ಎಂದು ಮಂಜ್ರೇಕರ್ ಹೇಳಿದ್ದಾರೆ. ಟೀಮ್ ಇಂಡಿಯಾ ಮಾಜಿ ನಾಯಕ 150ರ ಸ್ಟ್ರೈಕ್ರೇಟ್ನಲ್ಲಿ ರನ್ ಗಳಿಸುವ ಮೂಲಕ ಟೀಕೆಗಳಿಗೆ ಉತ್ತರಿಸಿದ್ದರು. ಆದರೀಗ ಅವರ ಕಳಪೆ ಬ್ಯಾಟಿಂಗೇ ತಂಡಕ್ಕೆ ಸಮಸ್ಯೆಯಾಗುತ್ತಿದೆ ಎಂದು ಮಂಜ್ರೇಕರ್ ಹೇಳಿದ್ದಾರೆ.
ನಮಗೆ ಹಳೆಯ ಕೊಹ್ಲಿ ಬೇಕಿದೆ ಎಂದ ಸಂಜಯ್ ಮಾಂಜ್ರೇಕರ್
ಕೊಹ್ಲಿ ಸಮಸ್ಯೆ ಏನೆಂದರೆೆ ಅವರ ಕುರಿತು ಕಳೆದ 2 ವರ್ಷಗಳಲ್ಲಿ ಸ್ಟ್ರೈಕ್ ರೇಟ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು. ಆದರೆ ಐಪಿಎಲ್ನಲ್ಲಿ ಸಂಪೂರ್ಣವಾಗಿ ಬದಲಾಯಿಸಿ ಟೀಕೆಗಳಿಗೆ ಉತ್ತರಿಸಿದ್ದರು. ಅವರ ಸ್ಟ್ರೈಕ್ ರೇಟ್ 150 ಕ್ಕೆ ತಲುಪಿತ್ತು. ಹೀಗಾಗಿ ಅವರು ಟಿ20 ವಿಶ್ವಕಪ್ನಲ್ಲೂ ಅದೆ ಸ್ಟ್ರೈಕ್ರೇಟ್ನಲ್ಲೇ ಸ್ಕೋರ್ ಮಾಡುವ ಮನಸ್ಥಿತಿಯೊಂದಿಗೆ ಟಿ20 ವಿಶ್ವಕಪ್ ಆಡುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಆದರೆ, ಪಿಚ್ಗಳನ್ನು ಗಮನಿಸಿದರೆ, ಹಳೆಯ ವಿರಾಟ್ ಕೊಹ್ಲಿ ಆಗಿಯೇ ಆಗಿದ್ದರೆ ಇನ್ನೂ ಉತ್ತಮವಾಗಿರುತ್ತಿದ್ದರು. ಆದ್ದರಿಂದ, ಯಾರಾದರೂ ತಮ್ಮ ಹಿಂದಿನ ಆವೃತ್ತಿಯನ್ನು ಮರಳಿ ತರಲು ಅವರಿಗೆ ಹೇಳಬೇಕು. ನಂತರ ಪಿಚ್ಗಳು ಸಮತಟ್ಟಾದಾಗ ಮತ್ತೆ ಆಟ ಬದಲಾಯಿಸಬೇಕು ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಆ ಮೂಲಕ ಕೊಹ್ಲಿ ಹಿಂದೆ ಆಡುತ್ತಿದ್ದ ರಕ್ಷಣಾತ್ಮಕ ಆಟವನ್ನೇ ಆಡುವಂತೆ ಸೂಚಿಸಿದ್ದಾರೆ.
ಮಾಧ್ಯಮಗಳಿಗೆ ತಿವಿದ ಮಾಂಜ್ರೇಕರ್
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಅವರ ವೀರೋಚಿತ ಪ್ರದರ್ಶನ ಶ್ಲಾಘಿಸಿದ ಮಂಜ್ರೇಕರ್, 35 ವರ್ಷದ ವಿರಾಟ್ ಕೊಹ್ಲಿಯನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಭಾನುವಾರ ನ್ಯೂಯಾರ್ಕ್ನಲ್ಲಿ ನಡೆದ ಪಂದ್ಯದಲ್ಲಿ ಪಾಕ್ ಎದುರಿನ ಪಂದ್ಯದಲ್ಲಿ ವೇಗದ ಬೌಲರ್ 11 ಡಾಟ್ ಬಾಲ್ಗಳನ್ನು ಒಳಗೊಂಡು 14 ರನ್ಗಳಿಗೆ 3 ವಿಕೆಟ್ ಪಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಭಾರತೀಯ ಮಾಧ್ಯಮಗಳು ವಿರಾಟ್ ಕೊಹ್ಲಿ ಗುಂಗಿನಲ್ಲಿದ್ದವು. ಆದರೆ ಜಸ್ಪ್ರೀತ್ ಬುಮ್ರಾ ಸದ್ದಿಲ್ಲದೆ ಏಕಾಂಗಿಯಾಗಿ ಪಂದ್ಯಗಳನ್ನು ಗೆಲ್ಲಿಸಿಕೊಡುತ್ತಿದ್ದಾರೆ. ಭಾರತೀಯ ತಂಡದ ಅತ್ಯುತ್ತಮ ಆಟಗಾರ. #JaspritBumrah #ICCT20WC ಎಂದು ಹ್ಯಾಶ್ಟ್ಯಾಗ್ ಮೂಲಕ ಮಂಜ್ರೇಕರ್ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ಐರ್ಲೆಂಡ್-ಪಾಕಿಸ್ತಾನ ತಂಡವನ್ನು ಸೋಲಿಸಿದ ನಂತರ ಭಾರತ ತಂಡವು ವಿಶ್ವಕಪ್ ಸೂಪರ್ 8ರ ಹಂತದಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಒಂದು ಗೆಲುವಿನ ದೂರದಲ್ಲಿದೆ.
ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
