ಐಪಿಎಲ್ 2025ರ ಮೆಗಾ ಹರಾಜಿಗೆ ಹಲವು ಫ್ರಾಂಚೈಸಿಗಳ ವಿರೋಧ; ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮ ಬೇಕು-ಬೇಡ ಎಂಬ ಚರ್ಚೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್ 2025ರ ಮೆಗಾ ಹರಾಜಿಗೆ ಹಲವು ಫ್ರಾಂಚೈಸಿಗಳ ವಿರೋಧ; ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮ ಬೇಕು-ಬೇಡ ಎಂಬ ಚರ್ಚೆ

ಐಪಿಎಲ್ 2025ರ ಮೆಗಾ ಹರಾಜಿಗೆ ಹಲವು ಫ್ರಾಂಚೈಸಿಗಳ ವಿರೋಧ; ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮ ಬೇಕು-ಬೇಡ ಎಂಬ ಚರ್ಚೆ

ಮುಂಬೈನಲ್ಲಿ ನಡೆದ ಐಪಿಎಲ್ ಸಭೆಯಲ್ಲಿ ಐಪಿಎಲ್‌ ಫ್ರಾಂಚೈಸಿ ಮಾಲೀಕರು ಮೆಗಾ ಹರಾಜಿನ ಕುರಿತು ಚರ್ಚಿಸಿದ್ದಾರೆ. ಈ ವೇಳೆ ರಿಟೆನ್ಷನ್‌ ನಿಯಮ, ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆಯೂ ಚರ್ಚಿಸಲಾಯಿತು. ಮೆಗಾ ಹರಾಜಿಗೆ ಹಲವು ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಐಪಿಎಲ್ 2025ರ ಮೆಗಾ ಹರಾಜಿಗೆ ಹಲವು ಫ್ರಾಂಚೈಸಿಗಳ ವಿರೋಧ
ಐಪಿಎಲ್ 2025ರ ಮೆಗಾ ಹರಾಜಿಗೆ ಹಲವು ಫ್ರಾಂಚೈಸಿಗಳ ವಿರೋಧ

ಐಪಿಎಲ್‌ 2025ರ ಆವೃತ್ತಿಗೂ ಮುನ್ನ ಮೆಗಾ ಹರಾಜಿನ ಕುರಿತಾಗಿ ಅಭಿಮಾನಿಗಳ ನಿರೀಕ್ಷೆ ಹೆಚ್ಚುತ್ತಿದೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆರಂಭವಾದಾಗಿನಿಂದ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಮೆಗಾ ಹರಾಜು ನಡೆಯುತ್ತಾ ಬಂದಿದೆ. ಹೀಗಾಗಿ ಮುಂದಿನ ಆವೃತ್ತಿಗೂ ಮುನ್ನ ಈ ಬಾರಿ ಮೆಗಾ ಹರಾಜು ನಡೆಯಬೇಕಿತ್ತು. ಆದರೆ, ಸದ್ಯದ ಬೆಳವಣಿಗೆ ಪ್ರಕಾರ ಮೆಗಾ ಹರಾಜು ನಡೆಯುವ ಸಾಧ್ಯತೆ ಕಾಣುತ್ತಿಲ್ಲ. ಬುಧವಾರ ಮುಂಬೈನಲ್ಲಿರುವ ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ಐಪಿಎಲ್ ಫ್ರಾಂಚೈಸ್‌ ಮಾಲೀಕರು ಹಾಗೂ ಬಿಸಿಸಿಐ ಅಧಿಕಾರಿಗಳ ಸಭೆ ನಡೆಯಿತು. ಎಲ್ಲಾ ಹತ್ತು ಫ್ರಾಂಚೈಸಿ ಮಾಲೀಕರು ಸಭೆಯಲ್ಲಿ ಭಾಗವಹಿಸಿದ್ದು, ಹಲವು ಮಾಲೀಕರು ಮೆಗಾ ಹರಾಜು ನಡೆಸುವುದು ಬೇಡ ಎಂದಿದ್ದಾರೆ.

ಮೆಗಾ ಹರಾಜಿನ ಪರವಾಗಿ ಅಭಿಪ್ರಾಯ ಇರುವವರು ಈ ವರ್ಷದ ಹರಾಜಿನಲ್ಲಿ ನಾಲ್ಕಕ್ಕಿಂತ ಹೆಚ್ಚು ರಿಟೆನ್ಷನ್‌ ಇರುಬೇಕು ಎಂಬ ಬಗ್ಗೆ ವಿಭಿನ್ನ ಅಭಿಪ್ರಾಯ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಮತ್ತೆ ಕೆಲವು ಮಾಲೀಕರು ಮೆಗಾ ಹರಾಜು ಬೇಡ. 8 ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಬಯಸಿದ್ದಾರೆ.

ಈ ಕುರಿತು ಮಾತನಾಡಿದ ಡೆಲ್ಲಿ ಕ್ಯಾಪಿಟಲ್ಸ್ ಸಹ ಮಾಲೀಕ ಪಾರ್ಥ್ ಜಿಂದಾಲ್, “ಹರಾಜು ಬೇಕೇ ಬೇಡವೇ ಎಂಬ ಚರ್ಚೆ ನಡೆಯುತ್ತಿರುವ ಬಗ್ಗೆ ನನಗೆ ಆಶ್ಚರ್ಯವಾಗಿದೆ,” ಎಂದು ಹೇಳಿದ್ದಾರೆ.

ಸಿಎಸ್‌ಕೆ, ಕೆಕೆಆರ್‌, ಮುಂಬೈ ಇಂಡಿಯನ್ಸ್‌ ಸೇರಿದಂತೆ ಕೆಲವು ಫ್ರಾಂಚೈಸಿಗಳು ಐಪಿಎಲ್ ಮೆಗಾ ಹರಾಜು ಬೇಡ ಎಂದು ಹೇಳಿವೆ. ಇದೇ ವೇಳೇ ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್‌, ಲಕ್ನೋ ತಂಡಗಳು ಹರಾಜು ಬೇಕು ಎಂದಿವೆ ಎಂಬ ಕುರಿತು ವರದಿಗಳು ತಳಿಸಿವೆ.

ಶಾರುಖ್ ಖಾನ್ ವಾದ

ಹಾಲಿ ಚಾಂಪಿಯನ್‌ ಕೋಲ್ಕತಾ ನೈಟ್ ರೈಡರ್ಸ್ ಮಾಲೀಕ ಶಾರುಖ್ ಖಾನ್, ಮೆಗಾ ಹರಾಜು ನಡೆಸಬಾರದು ಎಂದು ಸಭೆಯಲ್ಲಿ ಹೇಳಿರುವ ಕುರಿತು ತಿಳಿದುಬಂದಿದೆ. ಇದಕ್ಕೆ ಪಂಜಾಬ್ ಕಿಂಗ್ಸ್ ತಂಡದ ಸಹ ಮಾಲೀಕ ನೆಸ್ ವಾಡಿಯಾ ಇದಕ್ಕೆ ತಿರುಗೇಟು ನೀಡಿದ್ದಾರೆ. ಹೀಗಾಗಿ ಈ ವಿಚಾರವಾಗಿ ಇಬ್ಬರ ನಡುವೆ ಬಿಸಿಬಿಸಿ ಚರ್ಚೆಯಾಗಿದೆ ಎಂದು ಸಭೆಯಲ್ಲಿ ಭಾಗವಹಿಸಿದ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗಳಿಗೆ ತಿಳಿಸಿದ್ದಾರೆ.

ಇಂಪ್ಯಾಕ್ಟ್ ಪ್ಲೇಯರ್ ನಿಯಮ

ಇದೇ ವೇಳೆ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಬೇಕು ಬೇಡ ಎಂಬ ಬಗ್ಗೆಯೂ ಚರ್ಚೆ ನಡೆದಿದೆ. ಕಳೆದ ಬಾರಿ ಈ ನಿಯಮದ ಕುರಿತು ಆಟಗಾರರೇ ಅಪಸ್ವರವೆತ್ತಿದ್ದರು. ಈ ನಿಯಮದಿಂದ ಆಲ್‌ರೌಂಡರ್‌ಗಳಿಗೆ ಅವಕಾಶ ಸಿಗುತ್ತಿಲ್ಲ ಎಂಬ ವಾದವಿತ್ತು. ಹೀಗಾಗಿ ಭಾರತೀಯ ಕ್ರಿಕೆಟ್‌ನಲ್ಲಿ ಹೆಚ್ಚಿನ ಆಲ್‌ರೌಂಡರ್‌ಗಳಿಗೆ ಅವಕಾಶ ಸಿಗುವಂತಾಗಲು ಈ ನಿಯಮವನ್ನು ತೆಗೆದುಹಾಕಬೇಕೆಂದು ಜಿಂದಾಲ್ ಹೇಳಿದರು. ಇದೇ ವೇಳೆ ಕೆಲವು ಅನೇಕ ಫ್ರಾಂಚೈಸಿಗಳು ಈ ನಿಯಮದಿಂದ ಸಂತೋಷಗೊಂಡಿವೆ. ಸದ್ಯ ಹರಾಜು ಇರುವ ಬಗ್ಗೆ ಹಾಗೂ ನಿಯಮಗಳ ಬಗ್ಗೆ ಅಂತಿಮ ಮಾಹಿತಿ ಲಭ್ಯವಾಗಿಲ್ಲ.

ಡೆಲ್ಲಿ ಕ್ಯಾಪಿಟಲ್ಸ್‌ನಿಂದ ಕಿರಣ್ ಕುಮಾರ್ ಗ್ರ್ಯಾಂಡಿ ಮತ್ತು ಜಿಂದಾಲ್, ಲಕ್ನೋ ಸೂಪರ್ ಜೈಂಟ್ಸ್‌ ಮಾಲೀಕ ಸಂಜೀವ್ ಗೋಯೆಂಕಾ, ಚೆನ್ನೈ ಸೂಪರ್ ಕಿಂಗ್ಸ್‌ನ ರೂಪಾ ಗುರುನಾಥ್, ಸನ್‌ರೈಸರ್ಸ್ ಹೈದರಾಬಾದ್‌ನ ಕಾವ್ಯಾ ಮಾರನ್, ರಾಜಸ್ಥಾನ್ ರಾಯಲ್ಸ್‌ನ ಮನೋಜ್ ಬಾದಲೆ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರಿನಿಂದ ಪ್ರಥಮೇಶ್ ಮಿಶ್ರಾ ಸಭೆಯಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಮುಂಬೈ ಇಂಡಿಯನ್ಸ್ ಮಾಲೀಕರು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದರು.

Whats_app_banner