ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಯಾಗಿದ್ದ ಆಸ್ಟ್ರೇಲಿಯಾದ ಮಾರ್ಕಸ್ ಸ್ಟೋಯ್ನಿಸ್ ದಿಢೀರ್ ನಿವೃತ್ತಿ, ಆಘಾತ
Marcus Stoinis: 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಕೆಲವೇ ವಾರಗಳ ಮೊದಲು ಏಕದಿನ ಕ್ರಿಕೆಟ್ಗೆ ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ.

ಫೆಬ್ರವರಿ 19ರಿಂದ ಶುರುವಾಗುವ ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ಗೆ (ICC Champions Trophy 2025) ಆಸ್ಟ್ರೇಲಿಯಾ ತಂಡಕ್ಕೆ ಆಯ್ಕೆಯಾಗಿದ್ದ ಸ್ಟಾರ್ ಆಲ್ರೌಂಡರ್ ಮಾರ್ಕಸ್ ಸ್ಟೋಯ್ನಿಸ್ (Marcus Stoinis) ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ ಏಕದಿನ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸುವ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ಆಘಾತ ನೀಡಿದ್ದಾರೆ. 50 ಓವರ್ಗಳ ಕ್ರಿಕೆಟ್ನಲ್ಲಿ ಒಂದು ದಶಕದ ವೃತ್ತಿಜೀವನಕ್ಕೆ ಅಂತ್ಯ ಹಾಡಿರುವ ಮಾರ್ಕಸ್, ಆಸ್ಟ್ರೇಲಿಯಾ ಪರ 74 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಒಡಿಐಗೆ ರಿಟೈರ್ ನೀಡಿದ್ದರೂ ಟಿ20ಐ ಕ್ರಿಕೆಟ್ಗೆ ಆಸೀಸ್ಗೆ ಲಭ್ಯರಿರಲಿದ್ದಾರೆ.
2015ರಲ್ಲಿ ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಸ್ಟೋಯ್ನಿಸ್, ಈವರೆಗೂ ಆಡಿರುವ 74 ಪಂದ್ಯಗಳಲ್ಲಿ 1495 ರನ್ ಸಿಡಿಸಿದ್ದಾರೆ. ಜೊತೆಗೆ 48 ವಿಕೆಟ್ ಕೂಡ ಪಡೆದಿದ್ದಾರೆ. ಆಸೀಸ್ನ ಚಾಂಪಿಯನ್ಸ್ ಟ್ರೋಫಿ ತಂಡದ ಭಾಗವಾಗಿದ್ದ ಸ್ಟೋಯ್ನಿಸ್ ಬದಲಿಗೆ ಮತ್ತೊಬ್ಬ ಆಟಗಾರನ ಸೇರ್ಪಡೆ ಮಾಡಲಾಗುತ್ತದೆ. ತನ್ನ ನಿವೃತ್ತಿಯ ಕುರಿತು ಮಾತನಾಡಿರುವ ಸ್ನೋಯ್ನಿಸ್, ಆಸ್ಟ್ರೇಲಿಯಾ ಕ್ರಿಕೆಟ್, ಕೋಚಿಂಗ್ ಸಿಬ್ಬಂದಿ ಮತ್ತು ಸಹ ಆಟಗಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಹುರಿದುಂಬಿಸುವುದಾಗಿ ತಿಳಿಸಿದ್ದಾರೆ.
ನಿವೃತ್ತಿ ಬಳಿಕ ಸ್ಟೋಯ್ನಿಸ್ ಹೇಳಿದ್ದೇನು?
ಆಸ್ಟ್ರೇಲಿಯಾ ಪರ ಏಕದಿನ ಕ್ರಿಕೆಟ್ ಆಡಿರುವುದು ನಿಜಕ್ಕೂ ಅದ್ಭುತ ಪ್ರಯಾಣ. ಆಸೀಸ್ ಜೆರ್ಸಿಯಲ್ಲಿ ಕಳೆದ ಪ್ರತಿ ಕ್ಷಣಕ್ಕೂ ನಾನು ಕೃತಜ್ಞನಾಗಿದ್ದೇನೆ. ನಿವೃತ್ತಿಯು ಸುಲಭದ ನಿರ್ಧಾರವಲ್ಲ. ಆದರೆ, ಏಕದಿನ ಕ್ರಿಕೆಟ್ ಪಂದ್ಯಗಳಿಂದ ದೂರವಿರಲು ಮತ್ತು ನನ್ನ ವೃತ್ತಿಜೀವನದ ಮುಂದಿನ ಅಧ್ಯಾಯದ ಮೇಲೆ ಸಂಪೂರ್ಣವಾಗಿ ಗಮನ ಹರಿಸಲು ಇದು ಸರಿಯಾದ ಸಮಯ ಎಂದು ನಾನು ನಂಬುತ್ತೇನೆ. ನಾನು ರಾನ್ (ಆಂಡ್ರ್ಯೂ ಮೆಕ್ಡೊನಾಲ್ಡ್) ಅವರೊಂದಿಗೆ ಅದ್ಭುತ ಸಂಬಂಧವನ್ನು ಹೊಂದಿದ್ದೇನೆ. ಅವರ ಬೆಂಬಲಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ.
2023ರಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡದ ಪ್ರಮುಖ ಸದಸ್ಯರಾಗಿದ್ದ ಸ್ಟೋಯ್ನಿಸ್, ತನ್ನ ವೃತ್ತಿಜೀವನದಲ್ಲಿ 1 ಶತಕ, 6 ಅರ್ಧಶತಕ ಸಿಡಿಸಿದ್ದಾರೆ. 2018ರಲ್ಲಿ ದೇಶದ ವರ್ಷದ ಏಕದಿನ ಕ್ರಿಕೆಟರ್ ಪ್ರಶಸ್ತಿಗೆ ಭಾಜನರಾಗಿದ್ದರು. ನಿವೃತ್ತಿ ಪಡೆದಿದ್ದರೂ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸೀಸ್ ತಂಡವನ್ನು ಹುರಿದುಂಬಿಸುವೆ ಎಂದು ಹೇಳಿದ್ದಾರೆ.
ಅಭಿನಂದಿಸಿದ ಕೋಚ್ ಮೆಕ್ಡೊನಾಲ್ಡ್
ಪ್ರಸ್ತುತ ಗಾಲೆಯಲ್ಲಿ ನಡೆಯಲಿರುವ ಎರಡನೇ ಟೆಸ್ಟ್ನಲ್ಲಿ ಆಡುತ್ತಿರುವ ಆಸ್ಟ್ರೇಲಿಯಾ ಟೆಸ್ಟ್ ತಂಡದೊಂದಿಗೆ ಇರುವ ಆಸ್ಟ್ರೇಲಿಯಾದ ಕೋಚ್ ಆಂಡ್ರ್ಯೂ ಮೆಕ್ಡೊನಾಲ್ಡ್ ಮಾತನಾಡಿ, ಸ್ಟೋಯ್ನಿಸ್ಗೆ ಶುಭ ಕೋರಿದ್ದಾರೆ. ಕಳೆದ ಒಂದು ದಶಕದಿಂದ ಸ್ಟೋಯಿನ್ ನಮ್ಮ ಏಕದಿನ ಸೆಟಪ್ನ ಪ್ರಮುಖ ಭಾಗವಾಗಿದ್ದರು. ಅವರು ಅಮೂಲ್ಯ ಆಟಗಾರ. ಅವರು ನೈಸರ್ಗಿಕ ನಾಯಕ, ಅಸಾಧಾರಣ ಜನಪ್ರಿಯ ಆಟಗಾರ ಮತ್ತು ಶ್ರೇಷ್ಠ ವ್ಯಕ್ತಿ. ಅವರ ಏಕದಿನ ವೃತ್ತಿಜೀವನ ಮತ್ತು ಅವರ ಎಲ್ಲಾ ಸಾಧನೆಗಳಿಗಾಗಿ ಅವರನ್ನು ಅಭಿನಂದಿಸಬೇಕು ಎಂದು ಕೋಚ್ ಮೆಕ್ಡೊನಾಲ್ಡ್ ಹೇಳಿದ್ದಾರೆ.
