ರೋಹಿತ್ ಶರ್ಮಾ ಕೆಳಗಿಳಿಸಿದ್ದೇಕೆ; ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ನಾಯಕನಾಗುವುದರ ಹಿಂದಿನ ಅಸಲಿ ಕಾರಣ ಬಹಿರಂಗ
ಕನ್ನಡ ಸುದ್ದಿ  /  ಕ್ರಿಕೆಟ್  /  ರೋಹಿತ್ ಶರ್ಮಾ ಕೆಳಗಿಳಿಸಿದ್ದೇಕೆ; ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ನಾಯಕನಾಗುವುದರ ಹಿಂದಿನ ಅಸಲಿ ಕಾರಣ ಬಹಿರಂಗ

ರೋಹಿತ್ ಶರ್ಮಾ ಕೆಳಗಿಳಿಸಿದ್ದೇಕೆ; ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ನಾಯಕನಾಗುವುದರ ಹಿಂದಿನ ಅಸಲಿ ಕಾರಣ ಬಹಿರಂಗ

Rohit Sharma: ಐಪಿಎಲ್ 2024ರ ಆವೃತ್ತಿಗೂ ಮುನ್ನ ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ ತಂಡದ ನಾಯಕರನ್ನಾಗಿ ಮಾಡಿದ ಹಿಂದಿನ ನೈಜ ಕಾರಣವನ್ನು ತಂಡದ ಕೋಚ್ ಮಾರ್ಕ್ ಬೌಚರ್ ಬಹಿರಂಗಪಡಿಸಿದ್ದಾರೆ.

ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ನಾಯಕನಾಗುವುದರ ಹಿಂದಿನ ಅಸಲಿ ಕಾರಣ ಬಹಿರಂಗ
ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ನಾಯಕನಾಗುವುದರ ಹಿಂದಿನ ಅಸಲಿ ಕಾರಣ ಬಹಿರಂಗ (PTI)

ಐಪಿಎಲ್ 2024ರ ಆವೃತ್ತಿಗೂ ಮುಂಚಿತವಾಗಿ ಮುಂಬೈ ಇಂಡಿಯನ್ಸ್ (Mumbai Indians) ಫ್ರಾಂಚೈಸಿಯು ಅಚ್ಚರಿಯ ನಿರ್ಧಾರವೊಂದಕ್ಕೆ ಬಂದಿತ್ತು. ಸುಮಾರು ಎರಡು ತಿಂಗಳ ಹಿಂದೆ, ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ಅವರನ್ನು ತಂಡದ ನೂತನ ನಾಯಕನಾಗಿ ಘೋಷಿಸಿತು. ಆ ಮೂಲಕ ಫ್ರಾಂಚೈಸಿಯ ಯಶಸ್ವಿ ನಾಯಕ ರೋಹಿತ್ ಶರ್ಮಾ (Rohit Sharma ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಯ್ತು.

ನಿರೀಕ್ಷೆಯಂತೆಯೇ, ರೋಹಿತ್ ಅವರಿಂದ ನಾಯಕನ ಪಟ್ಟವನ್ನು ಕಿತ್ತು ಪಾಂಡ್ಯಗೆ ನೀಡಿದ್ದು ಮುಂಬೈ ಅಭಿಮಾನಿಗಳಿಗೆ ಇಷ್ಟವಾಗಲಿಲ್ಲ. ಸೋಷಿಯಲ್‌ ಮೀಡಿಯಾದಲ್ಲೂ ಈ ಕುರಿತು ಸಾಕಷ್ಟು ಅಸಮಾಧಾನ ಹಾಗೂ ಆಕ್ರೋಶಗಳು ಹೊರಬಂದವು. ಹಾರ್ದಿಕ್ ಅವರನ್ನು ನಾಯಕನನ್ನಾಗಿ ಮಾಡುವ ನಿರ್ಧಾರವನ್ನು ಎಂಐ ಫ್ರಾಂಚೈಸಿ ಮೊದಲೇ ಮಾಡಿತ್ತು. ಗುಜರಾತ್ ಟೈಟಾನ್ಸ್ ತಂಡ ತೊರೆದು, ಪಾಂಡ್ಯ ಎಂಐಗೆ ಮರಳುವ ಹಿಂದೆ ನಾಯಕತ್ವದ ಒಪ್ಪಂದವೇ ಪ್ರಮುಖ ಕಾರಣ ಎಂಬುದಕ್ಕೆ ಹೆಚ್ಚುವರಿ ಸಾಕ್ಷಿ ಬೇಕಿಲ್ಲ. ಹೀಗಾಗಿ ಅಭಿಮಾನಿಗಳ ಅಸಮಾಧಾನವಿದ್ದರೂ, ರೋಹಿತ್‌ ಅವರನ್ನು ಮತ್ತೆ ನಾಯಕನಾಗಿ ಮಾಡಲು ಮುಂಬೈ ಫ್ರಾಂಚೈಸಿ ಮನಸು ಮಾಡಲಿಲ್ಲ.

ಮಹತ್ವದ ನಿರ್ಧಾರದ ಹಿಂದಿನ ಅಸಲಿ ಕಾರಣ ಬಹಿರಂಗ

ನಾಯಕತ್ವ ಬದಲಾವಣೆಯ ಕುರಿತು ಮುಂಬೈ ಫ್ರಾಂಚೈಸಿಯಿಂದ ಯಾವುದೇ ಸ್ಪಷ್ಟನೆ ಸಿಕ್ಕಿರಲಿಲ್ಲ. ಇದೇ ಮೊದಲ ಬಾರಿಗೆ, ಎಂಐ ಕೋಚ್ ಮಾರ್ಕ್ ಬೌಚರ್ ಈ ನಿರ್ಧಾರದ ಹಿಂದಿನ ನೈಜ ಕಾರಣ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ | U19 World Cup: ಹಾಟ್‌ಸ್ಟಾರ್ ಅಥವಾ ಜಿಯೋ ಸಿನಿಮಾ; ಭಾರತ ಅಂಡರ್ 19 ವಿಶ್ವಕಪ್ ಸೆಮಿಫೈನಲ್ ಉಚಿತ ವೀಕ್ಷಣೆಗೆ ಹೀಗೆ ಮಾಡಿ

ರೋಹಿತ್ ಅವರಿಂದ ಕೆಲಸದ ಹೊರೆಯನ್ನು ತಗ್ಗಿಸುವ ಸಲುವಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ದಕ್ಷಿಣ ಆಫ್ರಿಕಾದ ಮಾಜಿ ವಿಕೆಟ್ ಕೀಪರ್ ಹೇಳಿದ್ದಾರೆ. ಐಪಿಎಲ್‌ನ ಕಳೆದ ಎರಡು ಆವೃತ್ತಿಗಳಲ್ಲಿ ರೋಹಿತ್ ತಮ್ಮ ಅತ್ಯುತ್ತಮ ಫಾರ್ಮ್‌ ಅನ್ನು ಆನಂದಿಸಿಲ್ಲ. ಈ ಕಾರಣಕ್ಕೆ ಹಾರ್ದಿಕ್ ಅವರನ್ನು ನಾಯಕನನ್ನಾಗಿ ನೇಮಿಸಲಾಗಿದೆ. ಈಗಾಗಲೇ ಎಲ್ಲಾ ಮೂರು ಸ್ವರೂಪಗಳಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ರೋಹಿತ್, ಐಪಿಎಲ್‌ನ ಚಾಂಪಿಯನ್ ನಾಯಕನಾಗಿದ್ದಾರೆ. ಆದರೆ ಫ್ರಾಂಚೈಸಿಯು ಇನ್ನೂ ಮುಂದೆ ಹೋಗಬೇಕಿದೆ ಎಂದು ಬೌಚರ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ | IND vs ENG: ಯಶಸ್ವಿ ಜೈಸ್ವಾಲ್ ಪ್ರಸ್ತುತ ಭಾರತದ ಅತ್ಯಂತ ಅಪಾಯಕಾರಿ ಬ್ಯಾಟರ್; ಇಂಗ್ಲೆಂಡ್ ಮಾಜಿ ಕ್ರಿಕೆಟಿಗ

“ಇದು ಸಂಪೂರ್ಣವಾಗಿ ಕ್ರಿಕೆಟ್‌ಗೆ ಸಂಬಂಧಿಸಿದ ನಿರ್ಧಾರ ಎಂದು ನಾನು ಭಾವಿಸುತ್ತೇನೆ. ನನ್ನ ಪ್ರಕಾರ ಇದು ಪರಿವರ್ತನೆಯ ಹಂತ. ಭಾರತದಲ್ಲಿ ಬಹಳಷ್ಟು ಜನರಿಗೆ ಇದು ಅರ್ಥವಾಗುವುದಿಲ್ಲ. ಇಲ್ಲಿನ ಜನರು ಸಾಕಷ್ಟು ಭಾವುಕರಾಗುತ್ತಾರೆ. ಆದರೆ ಕ್ರಿಕೆಟ್‌ನಲ್ಲಿ ಭಾವನೆಗಳ ಹೊರತಾಗಿ ಯೋಚಿಸಬೇಕು. ಇದು ಕೇವಲ ಕ್ರಿಕೆಟ್‌ಗೆ ಸಂಬಂಧಿಸಿದ ನಿರ್ಧಾರ. ಈ ನಿರ್ಧಾರವು ಒಬ್ಬ ಆಟಗಾರನಾಗಿ, ಒಬ್ಬ ವ್ಯಕ್ತಿಯಾಗಿ ರೋಹಿತ್ ಅವರಿಂದ ಅತ್ಯುತ್ತಮ ಆಟವನ್ನು ಹೊರತರಲಿದೆ ಎಂದು ನಾನು ಭಾವಿಸುತ್ತೇನೆ. ಅವರು ಮೈದಾನಕ್ಕಿಳಿದು ಆಟವನ್ನು ಆನಂದಿಸಲು ಮತ್ತು ಉತ್ತಮ ರನ್‌ ಗಳಿಸಲು ಬಿಡಿ,” ಎಂದು ಮಾರ್ಕ್ ಬೌಚರ್ ಸ್ಮಾಶ್ ಸ್ಪೋರ್ಟ್ಸ್ ಪೋಡ್‌ಕಾಸ್ಟ್‌ನಲ್ಲಿ ಹೇಳಿದ್ದಾರೆ.

ಐಪಿಎಲ್‌ನ ಯಶಸ್ವಿ ನಾಯಕ

ಐಪಿಎಲ್‌ನಲ್ಲಿ ಸಾರ್ವಕಾಲಿಕ ಅತ್ಯಂತ ಯಶಸ್ವಿ ನಾಯಕ ರೋಹಿತ್‌ ಶರ್ಮಾ. ಎಂಎಸ್ ಧೋನಿ ಮತ್ತು ರೋಹಿತ್ ತಲಾ 5 ಐಪಿಎಲ್‌ ಟ್ರೋಫಿ ಗೆದ್ದ ನಾಯಕರು. 2020ರ ಬಳಿಕ ಮುಂಬೈ ಇಂಡಿಯನ್ಸ್ ತಂಡ ಪ್ರಶಸ್ತಿ ಗೆದ್ದಿಲ್ಲ. ಹೀಗಾಗಿ ಈ ಒತ್ತಡ ರೋಹಿತ್ ಶರ್ಮಾ ಮೇಲಿದೆ. ಇದೇ ಕಾರಣಕ್ಕೆ ಅವರ ಫಾರ್ಮ್ ಮೇಲೆ ಪರಿಣಾಮ ಬೀರಿತ್ತು. ಐಪಿಎಲ್ 2022ರ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಪ್ಲೇಆಫ್ ತಲುಪಲು ವಿಫಲವಾಗಿತ್ತು. ಆಡಿದ 14 ಪಂದ್ಯಗಳಿಂದ ಹಿಟ್‌ಮ್ಯಾನ್‌ ಕೇವಲ 268 ರನ್ ಗಳಿಸಿದ್ದರು. ಕಳೆದ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ 16 ಪಂದ್ಯಗಳಿಂದ 332 ರನ್ ಗಳಿಸುವ ಮೂಲಕ ರೋಹಿತ್‌ ಫಾರ್ಮ್‌ ಸುಧಾರಿಸಿಕೊಂಡರು. ಇದೀಗ ಹೊಸ ಆವೃತ್ತಿಗೂ ಮುನ್ನ ರೋಹಿತ್‌ ನಾಯಕತ್ವದ ಹೊರೆ ಇಲ್ಲದೆ ಆಡಲಿದ್ದಾರೆ.

Whats_app_banner