ಗೆಲ್ಲಲೇಬೇಕಾದ ಒತ್ತಡದಲ್ಲಿ ಇಂಗ್ಲೆಂಡ್; 4ನೇ ಟೆಸ್ಟ್ ಪಂದ್ಯಕ್ಕೆ ಪ್ಲೇಯಿಂಗ್ XI ಪ್ರಕಟಿಸಿದ ಆಂಗ್ಲರು, ಎರಡು ಬದಲಾವಣೆ
India vs England 4th Test: ಟೀಮ್ ಇಂಡಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್ ಪ್ರಕಟಿಸಿದೆ. ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿರುವ ಆಂಗ್ಲರು ಎರಡು ಬದಲಾವಣೆ ಮಾಡಿದ್ದಾರೆ.
ರಾಂಚಿಯ ಜೆಎಸ್‌ಸಿಎ ಇಂಟರ್‌ನ್ಯಾಷನಲ್ ಸ್ಟೇಡಿಯಂ ಕಾಂಪ್ಲೆಕ್ಸ್ನಲ್ಲಿ ನಡೆಯಲಿರುವ ಭಾರತ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ಆಡುವ ಪ್ಲೇಯಿಂಗ್ ಇಲೆವೆನ್ ಪ್ರಕಟಿಸಿದೆ. ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿರುವ ಇಂಗ್ಲೆಂಡ್ 4ನೇ ಟೆಸ್ಟ್ಗೆ ತಂಡದಲ್ಲಿ ಎರಡು ಬದಲಾವಣೆ ಮಾಡಿದೆ. ಮಾರ್ಕ್ ವುಡ್ ಮತ್ತು ರೆಹಾನ್ ಅಹ್ಮದ್ ಅವರನ್ನು ಕೈಬಿಟ್ಟಿರುವ ಬೆನ್ಸ್ಟೋಕ್ಸ್, ವೇಗಿ ಒಲ್ಲಿ ರಾಬಿನ್ಸನ್ ಮತ್ತು ಶೋಯೆಬ್ ಬಶೀರ್ರನ್ನು ಆಡುವ 11ರ ಬಳಗಕ್ಕೆ ಸೇರಿಸಿಕೊಂಡಿದ್ದಾರೆ.
ಮೂವರು ಸ್ಪಿನ್ನರ್, ಇಬ್ಬರು ವೇಗಿಗಳು ಕಣಕ್ಕೆ
ಫೆಬ್ರವರಿ 23ರ ಶುಕ್ರವಾರ ರಾಂಚಿನಲ್ಲಿ ನಡೆಯುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಬ್ಬರು ವೇಗಿಗಳು ಮತ್ತು ಇಬ್ಬರು ಸ್ಪೆಷಲಿಸ್ಟ್ ಸ್ಪಿನ್ನರ್ಗಳಿಗೆ ಇಂಗ್ಲೆಂಡ್ ಮಣೆ ಹಾಕಿದೆ. ಜೇಮ್ಸ್ ಆ್ಯಂಡರ್ಸನ್ ಮತ್ತು ಒಲ್ಲಿ ರಾಬಿನ್ಸನ್ ವೇಗಿಗಳಾಗಿದ್ದರೆ, ಶೋಯೆಬ್ ಬಶೀರ್, ಟಾಮ್ ಹಾರ್ಟ್ಲೆ ಸ್ಪಿನ್ನರ್ಗಳಾಗಿದ್ದಾರೆ. ಜೋ ರೂಟ್ ತಾತ್ಕಾಲಿಕ ಸ್ಪಿನ್ನರ್ ಆಗಿದ್ದಾರೆ. ಬೆನ್ನು ನೋವಿನ ಕಾರಣದಿಂದ ಬೌಲಿಂಗ್ ಮಾಡದ ಬೆನ್ಸ್ಟೋಕ್ಸ್ ಈ ಪಂದ್ಯದಲ್ಲಿ ಬೌಲಿಂಗ್ಗೆ ಮರಳುವ ಸಾಧ್ಯತೆ ಇದೆ.
ಜೇಮ್ಸ್ ಆಂಡರ್ಸನ್ ಕಂಬ್ಯಾಕ್
ಮೊದಲ ಮೂರು ಪಂದ್ಯಗಳಿಂದ ತಂಡದ ಬೆಂಚ್ ಕಾಯುತ್ತಿದ್ದ ವೇಗಿ ಒಲ್ಲಿ ರಾಬಿನ್ಸನ್ ಕೊನೆಗೂ ಅವಕಾಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಪಿನ್ನರ್ಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದ ಕಾರಣ ರಾಬಿನ್ಸನ್ ಅವರು ಅವಕಾಶ ಪಡೆದಿರಲಿಲ್ಲ. ಇದೀಗ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೆದ್ದು ಸರಣಿ ಉಳಿಸಿಕೊಳ್ಳಲು ತಂತ್ರ ರೂಪಿಸಿರುವ ಇಂಗ್ಲೆಂಡ್, ರಾಂಚಿ ಟೆಸ್ಟ್ಗೆ ಅವಕಾಶ ನೀಡಿದೆ.
ನಾಲ್ಕನೇ ಟೆಸ್ಟ್ಗೆ ಇಂಗ್ಲೆಂಡ್ ಪ್ರಕಟಿಸಿದ ತಂಡ
1. ಜಾಕ್ ಕ್ರಾವ್ಲಿ
2. ಬೆನ್ ಡಕೆಟ್
3. ಒಲ್ಲಿ ಪೋಪ್
4. ಜೋ ರೂಟ್
5. ಜಾನಿ ಬೈರ್‌ಸ್ಟೋ
6. ಬೆನ್ ಸ್ಟೋಕ್ಸ್ (ನಾಯಕ)
7. ಬೆನ್ ಫೋಕ್ಸ್ (ವಿಕೆಟ್ ಕೀಪರ್)
8. ಒಲ್ಲಿ ರಾಬಿನ್ಸನ್
9. ಟಾಮ್ ಹಾರ್ಟ್ಲೆ
10. ಶೋಯೆಬ್ ಬಶೀರ್
11. ಜೇಮ್ಸ್ ಆಂಡರ್ಸನ್
ಮೊದಲ ಟೆಸ್ಟ್ನಲ್ಲಿ 28 ರನ್ಗಳ ಐತಿಹಾಸಿಕ ಗೆಲುವು
ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಟೀಮ್ ಇಂಡಿಯಾ ವಿರುದ್ಧ ಇಂಗ್ಲೆಂಡ್ 28 ರನ್ಗಳ ಅಂತರದಿಂದ ಗೆದ್ದು ಐತಿಹಾಸಿಕ ಜಯ ಸಾಧಿಸಿತ್ತು. ಮೊದಲು ಬ್ಯಾಟಿಂಗ್ ನಡೆಸಿದ್ದ ಇಂಗ್ಲೆಂಡ್ 246 ರನ್ಗಳಿಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಭಾರತ ತನ್ನ ಪ್ರಥಮ ಇನ್ನಿಂಗ್ಸ್ನಲ್ಲಿ 436 ರನ್ ಕಲೆ ಹಾಕಿತ್ತು. ಆದರೆ ದ್ವಿತೀಯ ಇನ್ನಿಂಗ್ಸ್ನಲ್ಲಿ ಧೂಳೆಬ್ಬಿಸಿದ ಆಂಗ್ಲರು 420 ರನ್ ಗಳಿಸಿ ರೋಹಿತ್ ಪಡೆಗೆ 231 ರನ್ಗಳ ಟಾರ್ಗೆಟ್ ನೀಡಿದರು. ಆದರೆ ಭಾರತ 202 ರನ್ಗಳಿಗೆ ಆಲೌಟ್ ಆಗಿ ಶರಣಾಯಿತು.
ಎರಡು ಮತ್ತು ಮೂರನೇ ಟೆಸ್ಟ್ನಲ್ಲಿ ಸೋಲು
ಮೊದಲ ಟೆಸ್ಟ್ ಸೋಲಿನ ನಂತರ ತಿರುಗಿಬಿದ್ದ ಭಾರತ, ವಿಶಾಖಪಟ್ಟಣ ಮತ್ತು ರಾಜ್ಕೋಟ್ ಟೆಸ್ಟ್ಗಳನ್ನು ಗೆದ್ದುಕೊಂಡಿತು. ಎರಡನೇ ಟೆಸ್ಟ್ನಲ್ಲಿ 106 ರನ್ಗಳಿಂದ ಗೆದ್ದ ರೋಹಿತ್ ಪಡೆ ಮೂರನೇ ಟೆಸ್ಟ್ನಲ್ಲಿ 434 ರನ್ಗಳಿಂದ ಗೆದ್ದಿತ್ತು. ಇದೀಗ ನಾಲ್ಕನೇ ಪಂದ್ಯದಲ್ಲೂ ಗೆದ್ದು ಸರಣಿಯನ್ನು ಕೈವಶ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿ ಭಾರತ.