ಭಾರತ vs ಇಂಗ್ಲೆಂಡ್ 5ನೇ ಟೆಸ್ಟ್: ಇಂಗ್ಲೆಂಡ್ ತಂಡದಲ್ಲಿ ಒಂದು ಬದಲಾವಣೆ; ರಾಬಿನ್ಸನ್ ಬದಲಿಗೆ ಮಾರ್ಕ್ ವುಡ್‌ಗೆ ಸ್ಥಾನ
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ Vs ಇಂಗ್ಲೆಂಡ್ 5ನೇ ಟೆಸ್ಟ್: ಇಂಗ್ಲೆಂಡ್ ತಂಡದಲ್ಲಿ ಒಂದು ಬದಲಾವಣೆ; ರಾಬಿನ್ಸನ್ ಬದಲಿಗೆ ಮಾರ್ಕ್ ವುಡ್‌ಗೆ ಸ್ಥಾನ

ಭಾರತ vs ಇಂಗ್ಲೆಂಡ್ 5ನೇ ಟೆಸ್ಟ್: ಇಂಗ್ಲೆಂಡ್ ತಂಡದಲ್ಲಿ ಒಂದು ಬದಲಾವಣೆ; ರಾಬಿನ್ಸನ್ ಬದಲಿಗೆ ಮಾರ್ಕ್ ವುಡ್‌ಗೆ ಸ್ಥಾನ

India vs England 5th Test: ಭಾರತ ಹಾಗೂ ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಓಲಿ ರಾಬಿನ್ಸನ್ ಬದಲಿಗೆ ಮಾರ್ಕ್ ವುಡ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಧರ್ಮಶಾಲಾದಲ್ಲಿ ಉಭಯ ರಾಷ್ಟ್ರಗಳ ನಡುವಿನ ಸರಣಿಯ ನಿರ್ಣಾಯಕ ಪಂದ್ಯ ನಡೆಯುತ್ತಿದೆ.

ಇಂಗ್ಲೆಂಡ್ ತಂಡದಲ್ಲಿ ಒಂದು ಬದಲಾವಣೆ; ರಾಬಿನ್ಸನ್ ಬದಲಿಗೆ ಮಾರ್ಕ್ ವುಡ್‌ಗೆ ಸ್ಥಾನ
ಇಂಗ್ಲೆಂಡ್ ತಂಡದಲ್ಲಿ ಒಂದು ಬದಲಾವಣೆ; ರಾಬಿನ್ಸನ್ ಬದಲಿಗೆ ಮಾರ್ಕ್ ವುಡ್‌ಗೆ ಸ್ಥಾನ (AFP)

ಭಾರತ ವಿರುದ್ಧದ ಟೆಸ್ಟ್‌ ಸರಣಿಯ ಐದನೇ ಮತ್ತು ಅಂತಿಮ ಪಂದ್ಯಕ್ಕೆ ಇಂಗ್ಲೆಂಡ್ ತಂಡವು (India vs England 5th Test) ಒಂದು ದಿನ ಮುಂಚಿತವಾಗಿಯೇ ತನ್ನ ಆಡುವ ಬಳಗವನ್ನು ಪ್ರಕಟಿಸಿದೆ. ಈಗಾಗಲೇ ಸರಣಿ ಕೈಚೆಲ್ಲಿರುವ ಬೆನ್‌ ಸ್ಟೋಕ್ಸ್‌ ಪಡೆಯು, ತಂಡದಲ್ಲಿ ಹೆಚ್ಚು ಬದಲಾವಣೆ ಮಾಡಿಲ್ಲ. ಧರ್ಮಶಾಲಾದ ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ಮಾರ್ಚ್‌ 07ರ ಗುರುವಾರದಿಂದ ಆರಂಭವಾಗುವ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವು ವೇಗದ ಬೌಲಿಂಗ್ ವಿಭಾಗದಲ್ಲಿ ಒಂದು ಬದಲಾವಣೆ ಮಾಡಿಕೊಂಡಿದೆ. ರಾಂಚಿಯಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಆಡಿದ್ದ ಒಲ್ಲಿ ರಾಬಿನ್ಸನ್ ಬದಲಿಗೆ ಮಾರ್ಕ್ ವುಡ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಪ್ರಸಕ್ತ ಸರಣಿಯ ಮೊದಲ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿದ್ದ ಇಂಗ್ಲೆಂಡ್‌, ಆ ಬಳಿಕ ನಡೆದ ಸತತ ಮೂರು ಪಂದ್ಯಗಳಲ್ಲಿಯೂ ಸೋಲು ಕಂಡಿದೆ. ಇದೀಗ ಅಂತಿಮ ಪಂದ್ಯದಲ್ಲಿ ಗೆದ್ದು ಡಬ್ಲ್ಯೂಟಿಸಿ ಅಂಕಪಟ್ಟಿಯಲ್ಲಿ ಸುಧಾರಣೆ ಕಾಣುವ ಇರಾದೆಯಲ್ಲಿದೆ. ಸ್ಟೋಕ್ಸ್ ಪಡೆಯು ಅಂತಿಮ ಪಂದ್ಯಕ್ಕಾಗಿ ಮೂವರು ವೇಗಿಗಳೊಂದಿಗೆ ಕಣಕ್ಕಿಳಿಯುವ ನಿರ್ಧಾರಕ್ಕೆ ಬಂದಿದೆ. ಇದೇ ವೇಳೆ ಇಬ್ಬರು ಸ್ಪಿನ್ನರ್‌ಗಳೊಂದಿಗೆ ಆಡಲು ಮುಂದಾಗಿದೆ.

ಶೋಯೆಬ್ ಬಶೀರ್ ಮತ್ತು ಟಾಮ್ ಹಾರ್ಟ್ಲೆ ತಮ್ಮ ಚೊಚ್ಚಲ ಸರಣಿಯಲ್ಲಿಯೇ ಮಿಂಚುತ್ತಿದ್ದಾರೆ. ಹೀಗಾಗಿ, ಅನುಭವ ಕಡಿಮೆಯಿದ್ದರೂ ಈ ಇಬ್ಬರು ಸ್ಪಿನ್ನರ್‌ಗಳಾಗಿ ತಂಡದಲ್ಲಿ ಉಳಿದುಕೊಂಡಿದ್ದಾರೆ. ಅತ್ತ 700 ಟೆಸ್ಟ್ ವಿಕೆಟ್ ಪಡೆಯಲು ಕೇವಲ 2 ವಿಕೆಟ್‌ ಮಾತ್ರ ಹಿಂದಿರುವ 41 ವರ್ಷದ ಅನುಭವಿ ವೇಗಿ ಜೇಮ್ಸ್ ಆಂಡರ್ಸನ್, ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಐದನೇ ಟೆಸ್ಟ್‌ನಲ್ಲಿ ಅವರು 2 ವಿಕೆಟ್‌ ಪಡೆದರೆ, ಟೆಸ್ಟ್‌ನಲ್ಲಿ 700 ವಿಕೆಟ್‌ ಪಡೆದ ವಿಶ್ವದ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈ ಹಿಂದೆ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (800) ಮತ್ತು ಆಸ್ಟ್ರೇಲಿಯಾದ ಶೇನ್ ವಾರ್ನ್ (708) ಮಾತ್ರ ಈ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ | Rohit Sharma: ಐದನೇ ಟೆಸ್ಟ್​ನಲ್ಲಿ ರೋಹಿತ್​​ ಶರ್ಮಾ ಮುರಿಯಲಿರುವ ಐದು ದಾಖಲೆಗಳ ಪಟ್ಟಿ ಇಲ್ಲಿದೆ

ಟೆಸ್ಟ್‌ ಕ್ರಿಕೆಟ್‌ನಲ್ಲಿ ಬಜ್‌ಬಾಲ್ ತಂತ್ರ ಅಳವಡಿಸಿಕೊಂಡ ನಂತರ ಇದೇ ಮೊದಲನೆಯ ಬಾರಿಗೆ ಇಂಗ್ಲೆಂಡ್‌ ಸರಣಿ ಸೋಲು ಕಂಡಿದೆ. ಸುದೀರ್ಘ ಸರಣಿಯಲ್ಲಿ ಕನಿಷ್ಠ ಗೆಲುವಿನೊಂದಿಗೆ ತವರಿಗೆ ಮರಳುವ ಗುರಿ ಆಂಗ್ಲರದ್ದು.

ಧರ್ಮಶಾಲಾದಲ್ಲಿ ಇಂಗ್ಲೆಂಡ್‌ನಂಥಾ ಹವಾಮಾನ

ಅತ್ತ ಆಂಗ್ಲರಿಗೆ ಈ ಪಂದ್ಯ ಮತ್ತೊಂದು ಲೆಕ್ಕಾಚಾರದಲ್ಲಿ ವಿಶೇಷ. ಜಾನಿ ಬೈರ್ಸ್ಟೋವ್ ಪಾಲಿಗೆ ಇದು 100ನೇ ಟೆಸ್ಟ್ ಪಂದ್ಯವಾಗಿದ್ದು, ಭಾರತದ ವಿರುದ್ಧ ಆಡಿ ಈ ವಿಶೇಷ ಮೈಲಿಗಲ್ಲು ತಲುಪಲು ಸ್ಟೋಕ್ಸ್‌ ಪಡೆ ಎದುರು ನೋಡುತ್ತಿದೆ. ಚಳಿ ತೀವ್ರವಿರುವ ಧರ್ಮಶಾಲಾದ ಸುಂದರ ಮೈದಾನ ಹಾಗೂ ಪರಿಸರದಲ್ಲಿ ಪಂದ್ಯ ನಡೆಯಲಿದೆ. ಧರ್ಮಶಾಲಾದಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಪಂದ್ಯಕ್ಕೆ ಹಾಜರಾಗುವ ಸಾಧ್ಯತೆ ಇದೆ. ಬಹುತೇಕ ಇಂಗ್ಲೆಂಡ್‌ ವಾತಾವರಣವನ್ನೇ ಹೋಲುವ ಈ ಪರಿಸರದಲ್ಲಿ ಪಂದ್ಯ ವೀಕ್ಷಿಸಲು ಇಂಗ್ಲೆಂಡ್ ಅಭಿಮಾನಿಗಳು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸಲಿದ್ದಾರೆ. ಸಮುದ್ರ ಮಟ್ಟದಿಂದ 4,320 ಅಡಿ ಎತ್ತರದಲ್ಲಿರುವ ಧರ್ಮಶಾಲಾ ಮೈದಾನವು, ಹಿಮದಿಂದ ಆವೃತವಾದ ಶಿಖರಗಳಿಂದ ಸುತ್ತುವರಿದಿದೆ.

ಪಂದ್ಯದ ವೇಳೆ ಹಿಮಮಳೆಯಾಗುವ ಸಾಧ್ಯತೆ ಇರಲಿದ್ದು, ಗುರುವಾರ ತಾಪಮಾನವು 1 ಸೆಲ್ಸಿಯಸ್‌ಗೆ ಇಳಿಯಬಹುದು ಎಂದು ಹವಾಮಾನ ಮುನ್ಸೂಚನೆಗಳು ಹೇಳುತ್ತವೆ.

ಐದನೇ ಟೆಸ್ಟ್‌ಗೆ ಇಂಗ್ಲೆಂಡ್ ತಂಡ

ಜಾಕ್ ಕ್ರಾಲೆ, ಬೆನ್ ಡಕೆಟ್, ಒಲ್ಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋ, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್, ಟಾಮ್ ಹಾರ್ಟ್ಲೆ, ಮಾರ್ಕ್ ವುಡ್, ಜೇಮ್ಸ್ ಆಂಡರ್ಸನ್, ಶೋಯೆಬ್ ಬಶೀರ್.

ಇದನ್ನೂ ಓದಿ | ಮಳೆಯೂ, ಚಳಿಯೂ; ಭಾರತ-ಇಂಗ್ಲೆಂಡ್ 5ನೇ ಟೆಸ್ಟ್‌ಗೆ ಹಲವು ಅಡೆತಡೆ; ಧರ್ಮಶಾಲಾ ಟೆಸ್ಟ್‌ ಹವಾಮಾನ ಮುನ್ಸೂಚನೆ ಹೀಗಿದೆ

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner