ವಿಶ್ರಾಂತಿ ಪಡೆಯುವ ವಯಸ್ಸಲ್ಲಿ ಕ್ರಿಕೆಟ್ಗೆ ಪದಾರ್ಪಣೆ; 62ನೇ ವರ್ಷದಲ್ಲಿ ಕಣಕ್ಕಿಳಿದು ವಿಶ್ವದಾಖಲೆ
Matthew Brownlee: ಮ್ಯಾಥ್ಯೂ ಬ್ರೌನ್ಲೀ ಅವರು 62 ನೇ ವಯಸ್ಸಿನಲ್ಲಿ ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಅತ್ಯಂತ ಹಿರಿಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವಯಸ್ಸು ಕೇವಲ ಸಂಖ್ಯೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕ್ರಿಕೆಟಿಗ ಅಬ್ಬಬ್ಬಾ ಅಂದರೂ 40 ವರ್ಷದ ತನಕ ಆಡುವುದೇ ಹೆಚ್ಚು. ಏಕೆಂದರೆ ಆಟಕ್ಕೆ ದೇಹ ಸ್ಪಂದಿಸಲ್ಲ ಮತ್ತು ಪ್ರದರ್ಶನದ ಮೇಲೂ ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕೆ. ಕೆಲವೊಂದಿಷ್ಟು ಮಂದಿ 50 ವರ್ಷದ ತನಕ ಆಡಿದ್ದೂ ಇದೆ. ಆದರೆ, ಇಲ್ಲೊಬ್ಬ ಕ್ರಿಕೆಟಿಗ ತನ್ನ 62ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ (International Cricket) ಪದಾರ್ಪಣೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾನೆ! ಇದು ವಿಶ್ವದಾಖಲೆಯೂ ಹೌದು.
ಮ್ಯಾಥ್ಯೂ ಬ್ರೌನ್ಲೀ (Matthew Brownlee) ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿಸ್ಡನ್ ಪ್ರಕಾರ, ಮ್ಯಾಥ್ಯೂ ಬ್ರೌನ್ಲೀ 2025ರ ಮಾರ್ಚ್ 10 ರಂದು ಗುವಾಕ್ಸಿಮಾದಲ್ಲಿ ನಡೆದ ಟಿ20 ಅಂತಾರಾಷ್ಟ್ರೀಯ (ಟಿ20ಐ) ಪಂದ್ಯದಲ್ಲಿ ಕೋಸ್ಟರಿಕಾ ವಿರುದ್ಧ ಫಾಕ್ಲ್ಯಾಂಡ್ ದ್ವೀಪದ ಪರ ಪದಾರ್ಪಣೆ ಮಾಡಿದ್ದಾರೆ. 62 ವರ್ಷ ವಯಸ್ಸಿನ ಬ್ರೌನ್ಲೀ ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಉಸ್ಮಾನ್ ಗಾಕರ್ ಅವರ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.
ಆಗಸ್ಟ್ 2019ರಲ್ಲಿ ಇಲ್ಫೋವ್ ಕೌಂಟಿಯಲ್ಲಿ ರೊಮೇನಿಯಾ ವಿರುದ್ಧ ಟಿ20ಐ ಪಂದ್ಯದಲ್ಲಿ ಒಸ್ಮಾನ್ ಗಾಕರ್ ತಮ್ಮ 59ನೇ ವಯಸ್ಸಿನಲ್ಲಿ ಟರ್ಕಿ ಪರ ತಮ್ಮ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಆಡಿದ್ದರು. ತಮ್ಮ ವೃತ್ತಿಜೀವನದುದ್ದಕ್ಕೂ, ಬ್ರೌನ್ಲಿ ಮೂರು ಟಿ20 ಪಂದ್ಯಗಳನ್ನು ಆಡಿದ್ದಾರೆ. ಮೂರು ಇನ್ನಿಂಗ್ಸ್ಗಳಲ್ಲಿ ಆರು ರನ್ ಗಳಿಸಿದ್ದು, ಕೇವಲ ಒಂದು ಓವರ್ ಎಸೆದಿದ್ದರೂ ವಿಕೆಟ್ ಪಡೆದಿಲ್ಲ. ಈ ವಯಸ್ಸಲ್ಲೂ ಬ್ರೌನ್ಲೀ ಉತ್ಸಾಹ ಎಲ್ಲರನ್ನೂ ಅಚ್ಚರಿಗೊಳಿಸಿದೆ.
ಭಾರತದ ಪರ ಪದಾರ್ಪಣೆ ಮಾಡಿದ ಹಿರಿಯ ಆಟಗಾರ ಯಾರು?
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡುವ ಮೂಲಕ 62ನೇ ವಯಸ್ಸಿನಲ್ಲಿ ಆಡಿದ ಮೊದಲ ಮತ್ತು ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಬ್ರೌನ್ಲೀ ಪಾತ್ರರಾಗಿದ್ದಾರೆ. ಇದರೊಂದಿಗೆ ಇಂಗ್ಲೆಂಡ್ನ ಜೇಮ್ಸ್ ಸೌಥರ್ಟನ್, ಪಾಕಿಸ್ತಾನದ ಮೀರಾನ್ ಬಕ್ಷ್ ಮತ್ತು ಭಾರತದ ರುಸ್ತುಂಜಿ ಜಮ್ಶೆಡ್ಜಿ ಅವರಂತಹ ಆಟಗಾರರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಾರ್ಪಣೆ ಮಾಡಿದ ಅತ್ಯಂತ ಹಿರಿಯ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಆದಾಗ್ಯೂ, 50 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಒಬ್ಬ ಆಟಗಾರನೂ ಇಲ್ಲ.
ಜೇಮ್ಸ್ ಸೌಥರ್ಟನ್ ದಾಖಲೆ ಬ್ರೇಕ್
ರುಸ್ತುಂಜಿ ಅವರು 41 ವರ್ಷ 27 ದಿನಗಳ ವಯಸ್ಸಿನಲ್ಲಿ ಭಾರತಕ್ಕಾಗಿ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. ಇಂಗ್ಲೆಂಡ್ನ ಜೇಮ್ಸ್ ಸೌಥರ್ಟನ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದು ತನ್ನ 49ನೇ ವಯಸ್ಸಿನಲ್ಲಿ. ಆ ಮೂಲಕ ಕ್ರಿಕೆಟ್ಗೆ ಡೆಬ್ಯು ಮಾಡಿದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದೀಗ ಇವರ ದಾಖಲೆ ಧ್ವಂಸಗೊಂಡಿದೆ. ಇಂಗ್ಲೆಂಡ್ನ ವಿಲ್ಫ್ರೆಡ್ ರೋಡ್ಸ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ತಮ್ಮ 52ನೇ ವಯಸ್ಸಿನಲ್ಲಿ ಕ್ರಿಕೆಟ್ ತೊರೆದರು.
