ಪಂಜಾಬ್ ವಿರುದ್ಧ 7 ವಿಕೆಟ್ ಗೆಲುವು; ರಣಜಿ ಟ್ರೋಫಿಯಲ್ಲಿ ಕರ್ನಾಟಕ ಶುಭಾರಂಭ
ಕನ್ನಡ ಸುದ್ದಿ  /  ಕ್ರಿಕೆಟ್  /  ಪಂಜಾಬ್ ವಿರುದ್ಧ 7 ವಿಕೆಟ್ ಗೆಲುವು; ರಣಜಿ ಟ್ರೋಫಿಯಲ್ಲಿ ಕರ್ನಾಟಕ ಶುಭಾರಂಭ

ಪಂಜಾಬ್ ವಿರುದ್ಧ 7 ವಿಕೆಟ್ ಗೆಲುವು; ರಣಜಿ ಟ್ರೋಫಿಯಲ್ಲಿ ಕರ್ನಾಟಕ ಶುಭಾರಂಭ

Karnataka vs Punjab: ಎರಡನೇ ಇನ್ನಿಂಗ್ಸ್‌ನಲ್ಲಿ ಗೆಲುವಿಗೆ ಕೇವಲ 52 ರನ್‌ ಗುರಿ ಪಡೆದ ಕರ್ನಾಟಕ, 3 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಮೊದಲ ಇನ್ನಿಂಗ್ಸ್‌ನಲ್ಲಿ ಡಕೌಟ್‌ ಆಗಿದ್ದ ನಾಯಕ ಮಯಾಂಕ್ ಅಗರ್ವಾಲ್ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಗೋಲ್ಡನ್‌ ಡಕ್‌ ಆದರು.

ದೇವದತ್‌ ಪಡಿಕಲ್
ದೇವದತ್‌ ಪಡಿಕಲ್ (PTI)

ರಣಜಿ ಟ್ರೋಫಿಯಲ್ಲಿ (Ranji Trophy 2023-24) ಮಯಾಂಕ್‌ ಅಗರ್ವಾಲ್ ನಾಯತ್ವದ ಕರ್ನಾಟಕ ತಂಡ ಶುಭಾರಂಭ ಮಾಡಿದೆ. ಗ್ರೂಪ್‌ ಹಂತದ ಮೊದಲ ಪಂದ್ಯದಲ್ಲಿ ಪಂಜಾಬ್‌ (Karnataka vs Punjab) ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿದೆ.

ಹುಬ್ಬಳ್ಳಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಂಜಾಬ್ ತಂಡವು ಮೊದಲ ಇನ್ನಿಂಗ್ಸ್‌​ನಲ್ಲಿ ಕೇವಲ 152 ರನ್‌​ಗಳಿಗೆ ಆಲೌಟ್ ಆಯ್ತು. ಆ ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡ, ಸ್ಫೋಟಕ ಬ್ಯಾಟಿಂಗ್‌ ನಡೆಸಿ 8 ವಿಕೆಟ್‌ ಕಳೆದುಕೊಂಡು 514 ರನ್‌ ​ಗಳಿಸಿದ್ದಾಗ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು.

ಎರಡನೇ ಇನ್ನಿಂಗ್ಸ್ ಆರಂಭಿಸಿದ ಪಂಜಾಬ್ ಪ್ರಬಲ ಬ್ಯಾಟಿಂಗ್‌ ಪ್ರದರ್ಶನ ನೀಡಿತು. ಉತ್ತಮ ಆರಂಭದ ಹೊರತಾಗಿಯೂ ಅಂತಿಮವಾಗಿ 413 ರನ್ ಕಲೆಹಾಕಿ ಆಲೌಟ್‌ ಆಯ್ತು. ಗೆಲುವಿಗೆ ಕೇವಲ 52 ರನ್‌​ಗಳ ಸುಲಭ ಗುರಿ ಪಡೆದ ಕರ್ನಾಟಕ, 3 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.‌

ಇದನ್ನೂ ಓದಿ | ರಣಜಿ ಕ್ರಿಕೆಟ್‌ನಲ್ಲಿ ಅಜೇಯ ದ್ವಿಶತಕ; ಆಯ್ಕೆದಾರರಿಗೆ ಸಾಮರ್ಥ್ಯ ಸಾಬೀತುಪಡಿಸಿದ ಚೇತೇಶ್ವರ ಪೂಜಾರ

ಪಂಜಾಬ್‌ ಮೊದಲ ಇನ್ನಿಂಗ್ಸ್

ಮೊದಲ ಇನ್ನಿಂಗ್ಸ್‌​ನಲ್ಲಿ ಪಂಜಾಬ್ ಬ್ಯಾಟರ್‌ಗಳಿಗೆ ಕ್ರೀಸ್‌ಕಚ್ಚಿ ಆಡಲು ವೇಗಿ ವಿ ಕೌಶಿಕ್ ಅವಕಾಶ ನೀಡಲಿಲ್ಲ. ನೆಹಾಲ್ ವಧೇರಾ 44 ರನ್‌ ​ಗಳಿಸುವುದರೊಂದಿಗೆ ತಂಡದ ಗರಿಷ್ಠ ಸ್ಕೋರರ್‌ ಆದರು. ಉಳಿದಂತೆ ಯಾರೂ ಉತ್ತಮ ಬ್ಯಾಟಿಂಗ್‌ ನಡೆಸಲಿಲ್ಲ. ಮಯಾಂಕ್‌ ಬಳಗದ ಪರ ಬೌಲಿಂಗ್‌ನಲ್ಲಿ ಅಬ್ಬರಿಸಿದ ಕೌಶಿಕ್ ಒಟ್ಟು 7 ವಿಕೆಟ್ ಪಡೆದು ತಂಡಕ್ಕೆ ಮುನ್ನಡೆ ತಂದುಕೊಟ್ಟರು.

ಕರ್ನಾಟಕ ಮೊದಲ ಇನ್ನಿಂಗ್ಸ್

ಮೊದಲ ಇನ್ನಿಂಗ್ಸ್‌ ಆರಂಭಿಸಿದ ಕರ್ನಾಟಕ ಆರಂಭದಲ್ಲೇ ನಾಯಕ ಮಯಾಂಕ್‌ರನ್ನು ಶೂನ್ಯಕ್ಕೆ ಕಳೆದುಕೊಂಡರೂ ಬೃಹತ್‌ ಮೊತ್ತ ಪೇರಿಸಿತು. ದೇವದತ್ ಪಡಿಕಲ್ ಒಟ್ಟು 193 ರನ್‌ ಗಳಿಸಿದರೆ, ಮನೀಶ್ ಪಾಂಡೆ 118 ರನ್ ಸಿಡಿಸಿದರು. ಅಂತಿಮವಾಗಿ 8 ವಿಕೆಟ್​ ನಷ್ಟಕ್ಕೆ 514 ರನ್‌​ಗಳಿಗೆ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.‌

ಪಂಜಾಬ್‌ ಎರಡನೇ ಇನ್ನಿಂಗ್ಸ್‌

ಮೊದಲ ಇನ್ನಿಂಗ್ಸ್‌ನಲ್ಲಿ ಅಲ್ಪಮೊತ್ತಕ್ಕೆ ಕುಸಿದಿದ್ದ ಮಂದೀಪ್‌ ಪಡೆ, ಎರಡನೇ ಇನ್ನಿಂಗ್ಸ್‌ನಲ್ಲಿ ಮೈಕೊಡವಿ ಆಡಿತು. 362 ರನ್‌​ಗಳ ಹಿನ್ನಡೆಯೊಂದಿಗೆ ಇನ್ನಿಂಗ್ಸ್ ಆರಂಭಿಸಿದ ತಂಡಕ್ಕೆ ಆರಂಭಿಕರು ಆಸರೆಯಾದರು. ಪ್ರಭ್‌ಸಿಮ್ರಾನ್‌ ಭರ್ಜರಿ ಶತಕ ಸಿಡಿಸಿ ಔಟಾದರೆ, ಅಭಿಷೇಕ್ ಶರ್ಮಾ 91 ರನ್ ಗಳಿಸಿದರು. 192 ರನ್‌ ವೇಳೆಗೆ ಮೊದಲ ವಿಕೆಟ್‌ ಕಳೆದುಕೊಂಡ ತಂಡ ಅಂತಿಮವಾಗಿ 413 ರನ್ ಗಳಿಸಿ ಆಲೌಟ್‌ ಆಯ್ತು. ಕರ್ನಾಟಕದ ಪರ ರೋಹಿತ್ ಕುಮಾರ್ ಹಾಗೂ ಶುಭಾಂಗ್ ತಲಾ 3 ವಿಕೆಟ್ ಪಡೆದು ಮಿಂಚಿದರು.

ಗೆಲುವಿಗೆ ಕೇವಲ 52 ರನ್‌ ಗುರಿ ಪಡೆದ ಕರ್ನಾಟಕ, 3 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಮೊದಲ ಇನ್ನಿಂಗ್ಸ್‌ನಲ್ಲಿ ಡಕೌಟ್‌ ಆಗಿದ್ದ ನಾಯಕ ಮಯಾಂಕ್ ಅಗರ್ವಾಲ್, ಎರಡನೇ ಇನ್ನಿಂಗ್ಸ್‌ನಲ್ಲಿ ಮತ್ತೆ ಗೋಲ್ಡನ್‌ ಡಕ್‌ ಆದರು. ನಿಕಿನ್‌ ಜೋಸ್‌ ಕೂಡಾ ಖಾತೆ ತೆರೆಯದೆ ಔಟಾದರು. ಆರ್ ಸಮರ್ಥ್​ 21 ರನ್ ಗಳಿಸಿದರೆ, ಶರತ್ ಅಜೇಯ 21 ರನ್ ಹಾಗೂ ಮನೀಶ್ ಪಾಂಡೆ ಅಜೇಯ 10 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಕರ್ನಾಟಕ ತಂಡ

ಮಯಾಂಕ್ ಅಗರ್ವಾಲ್ (ನಾಯಕ), ದೇವದತ್ ಪಡಿಕ್ಕಲ್, ರವಿಕುಮಾರ್ ಸಮರ್ಥ್, ಮನೀಶ್ ಪಾಂಡೆ, ನಿಕಿನ್ ಜೋಸ್, ಶ್ರೀನಿವಾಸ್ ಶರತ್ (ವಿಕೆಟ್‌ ಕೀಪರ್), ಶುಭಾಂಗ್ ಹೆಗ್ಡೆ, ವಿಜಯ್ ಕುಮಾರ್ ವೈಶಾಕ್, ರೋಹಿತ್ ಕುಮಾರ್, ವಿಧ್ವತ್ ಕಾವೇರಪ್ಪ, ವಾಸುಕಿ ಕೌಶಿಕ್.

Whats_app_banner