45 ಬಾಲ್ಗಳಲ್ಲಿ ಮಯಾಂಕ್ ಶತಕ, 86 ಎಸೆತಗಳಲ್ಲೇ ಚೇಸಿಂಗ್; ವಿಜಯ್ ಹಜಾರೆಯಲ್ಲಿ ಕರ್ನಾಟಕ ಗೆಲುವಿನ ನಾಗಾಲೋಟ
Arunachal Pradesh vs Karnataka: ವಿಜಯ್ ಹಜಾರೆ ಟ್ರೋಫಿಯಲ್ಲಿ ಅರುಣಾಚಲ ಪ್ರದೇಶ ವಿರುದ್ಧ ಅಬ್ಬರಿಸಿದ ಕರ್ನಾಟಕ 10 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಟೂರ್ನಿಯಲ್ಲಿ ಸತತ 4ನೇ ಜಯದ ನಗೆ ಬೀರಿದೆ.
Vijay Hazare Trophy 2024-25: ವಿಜಯ್ ಹಜಾರೆ ಟ್ರೋಫಿ-2025ರಲ್ಲಿ ಕರ್ನಾಟಕ ತಂಡವು ಜಯದ ನಾಗಾಲೋಟ ಮುಂದುವರೆಸಿದೆ. ಸಿ ಗುಂಪಿನಲ್ಲಿ ಸ್ಥಾನ ಪಡೆದಿರುವ ಕರ್ನಾಟಕ ಸತತ ನಾಲ್ಕನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಆದರೆ ಸತತ ನಾಲ್ಕನೇ ಸೋಲಿಗೆ ಶರಣಾದ ಅರುಣಾಚಲ ಪ್ರದೇಶ ಕೊನೆಯ ಸ್ಥಾನದಲ್ಲಿದೆ. ಇಂದು (ಡಿಸೆಂಬರ್ 28ರ ಶನಿವಾರ) ನಡೆದ ತನ್ನ 4ನೇ ಪಂದ್ಯದಲ್ಲಿ ಅರುಣಾಚಲ ಪ್ರದೇಶ ವಿರುದ್ಧ ಕರ್ನಾಟಕ ಕೇವಲ 86 ಎಸೆತಗಳಲ್ಲೇ ಚೇಸ್ ಮಾಡಿ ಜಯದ ನಗೆ ಬೀರಿದೆ. ನಾಯಕ ಮಯಾಂಕ್ ಅಗರ್ವಾಲ್ 45 ಎಸೆತಗಳಲ್ಲೇ ಶತಕ ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಇದು ಅವರ ಸತತ ಎರಡನೇ ಶತಕ.
ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಅರುಣಾಚಲ ಪ್ರದೇಶ ಮೊದಲು ಬ್ಯಾಟಿಂಗ್ ಮಾಡಿತು. ಆದರೆ ಕರ್ನಾಟಕ ಬೌಲರ್ಗಳ ಮಾರಕ ದಾಳಿಗೆ ತತ್ತರಿಸಿತು. ಹಾರ್ದಿಕ್ ರಾಜ್ ಮತ್ತು ವಾಸುಕಿ ಕೌಶಿಕ್ ತಲಾ 4 ವಿಕೆಟ್ ಉರುಳಿಸಿ ಎದುರಾಳಿ ತಂಡವನ್ನು 43.2 ಓವರ್ಗಳಲ್ಲಿ 166 ರನ್ಗೆ ಆಲೌಟ್ ಮಾಡಿದರು. ಈ ಗುರಿ ಬೆನ್ನಟ್ಟಿದ ಕರ್ನಾಟಕ ವಿಕೆಟ್ ನಷ್ಟವಿಲ್ಲದೆ 10 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು. ಮಯಾಂಕ್ ಶತಕ ಸಿಡಿಸಿದರೆ, ಅಭಿನವ್ ಮನೋಹರ್ ಸ್ಫೋಟಕ ಅರ್ಧಶತಕ ಬಾರಿಸಿದರು. ಇವರಿಬ್ಬರ ಅಬ್ಬರಕ್ಕೆ ಅರುಣಾಚಲ ಪ್ರದೇಶದ ಗೆಲುವಿನ ಖಾತೆ ತೆರೆಯುವ ಕನಸು ನುಚ್ಚು ನೂರಾಯಿತು.
ಕರ್ನಾಟಕ ಮಾರಕ ಬೌಲಿಂಗ್ ದಾಳಿ
ಮುಂಬೈ, ಪಂಜಾಬ್, ಸೌರಾಷ್ಟ್ರ ವಿರುದ್ಧ ಸೋತಿದ್ದ ಅರುಣಾಚಲ ಪ್ರದೇಶ, ಕರ್ನಾಟಕ ಎದುರಾದರೂ ಗೆಲುವಿನ ನಿರೀಕ್ಷೆಯಲ್ಲಿತ್ತು. ಆದರೆ, ಈ ಪಂದ್ಯದಲ್ಲೂ ಕಳಪೆ ಬ್ಯಾಟಿಂಗ್ನಿಂದಾಗಿ ಮಕಾಡೆ ಮಲಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಅರುಣಾಚಲ, 43.2 ಓವರ್ಗಳಲ್ಲಿ 166 ರನ್ ಗಳಿಸಿ ಆಲೌಟ್ ಆಯಿತು. 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅಬ್ಬರಿಸಿದ ಅಭಿನವ್ ಸಿಂಗ್ 71 ರನ್ ಗಳಿಸಿದ್ದು ಗರಿಷ್ಠ ಸ್ಕೋರ್ ಆಗಿದೆ. ಹಾರ್ದಿಕ್ ವರ್ಮಾ 38, ರಾಜೇಂದರ್ ಸಿಂಗ್ 30 ರನ್ ಸಿಡಿಸಿದ್ದು ಹೊರತುಪಡಿಸಿ ಉಳಿದಂತೆ ಯಾರೂ ಒಂದಂಕಿ ದಾಟಿಲ್ಲ. ವಾಸುಕಿ ಕೌಶಿಕ್ 9 ಓವರ್ಗಳಲ್ಲಿ 30 ರನ್ ನೀಡಿ 4 ವಿಕೆಟ್, ಹಾರ್ದಿಕ್ ರಾಜ್ 7.2 ಓವರ್ಗಳಲ್ಲಿ 30 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು.
45 ಎಸೆತಗಳಲ್ಲೇ ಶತಕ, 14.2 ಓವರ್ಗಳಲ್ಲೇ ಗೆಲುವು
ಸಾಧಾರಣ ಗುರಿಯನ್ನು ಬೆನ್ನಟ್ಟಿದ ಕರ್ನಾಟಕದ ಪರ ಮಯಾಂಕ್ ಅಗರ್ವಾಲ್ ಮತ್ತು ಅಭಿನವ್ ಮನೋಹರ್ ಬಿರುಸಿನ ಬ್ಯಾಟಿಂಗ್ ನಡೆಸಿದರು. ಅರುಣಾಚಲ ಬೌಲರ್ಗಳಿಗೆ ಬೆಂಡೆತ್ತಿದ ಈ ಜೋಡಿ 14.2 ಓವರ್ ಅಂದರೆ 86 ಎಸೆತಗಳಲ್ಲೇ ಪಂದ್ಯವನ್ನು ಮುಗಿಸಿತು. ಮಯಾಂಕ್ 45 ಎಸೆತಗಳಲ್ಲಿ 7 ಬೌಂಡರಿ, 7 ಸಿಕ್ಸರ್ ಸಹಿತ ಅಜೇಯ 100 ರನ್ ಸಿಡಿಸಿದರು. ಅವರ ಸ್ಟ್ರೈಕ್ರೇಟ್ 222.22. ವಿಜಯ್ ಹಜಾರೆಯಲ್ಲಿ ಐದನೇ ವೇಗದ ಶತಕ ಇದಾಗಿದೆ. ಮತ್ತೊಂದು ತುದಿಯಲ್ಲಿ ಮಯಾಂಕ್ಗೆ ಸಾಥ್ ನೀಡಿದ ಅಭಿನವ್ 41 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಸಹಿತ ಅಜೇಯ 66 ರನ್ ಬಾರಿಸಿದರು. ಎದುರಾಳಿ ಬೌಲರ್ಗಳು ಒಂದೇ ಒಂದು ವಿಕೆಟ್ ಪಡೆಯಲಾಗಲಿಲ್ಲ.