ಆರಂಭಿಕರ ಶತಕದ ಜೊತೆಯಾಟದ ಹೊರತಾಗಿಯೂ ಸೋತ ಪಂಜಾಬ್ ಕಿಂಗ್ಸ್; ಲಕ್ನೋ ಸೂಪರ್ ಜೈಂಟ್ಸ್ಗೆ ಸೂಪರ್ ಗೆಲುವು
Lucknow super gaints vs Punjab Kings: 17ನೇ ಆವೃತ್ತಿಯ 11ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 21 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ.
ಪಂಜಾಬ್ ಕಿಂಗ್ಸ್ ವಿರುದ್ಧ ತೋರಿದ ಆಲ್ರೌಂಡ್ ಆಟದ ನೆರವಿನಿಂದ ಲಕ್ನೋ ಸೂಪರ್ ಜೈಂಟ್ಸ್ 17ನೇ ಆವೃತ್ತಿಯ ಐಪಿಎಲ್ನಲ್ಲಿ ಮೊದಲ ಗೆಲುವಿನ ನಗೆ ಬೀರಿದೆ. ತನ್ನ ಮೊದಲ ಪಂದ್ಯದಲ್ಲಿ ಗೆದ್ದು ಅಭಿಯಾನ ಆರಂಭಿಸಿದ ಪಿಬಿಕೆಎಸ್, ಸತತ ಎರಡನೇ ಸೋಲಿನ ಮುಖಭಂಗಕ್ಕೆ ಒಳಗಾಗಿದೆ. ಶಿಖರ್ ಧವನ್ ಹೋರಾಟದ ಹೊರತಾಗಿಯೂ ಪಂಜಾಬ್ 21 ರನ್ಗಳಿಂದ ಪರಾಜಯಗೊಂಡಿದೆ. ತವರಿನ ಮೈದಾನದಲ್ಲಿ ದಿಗ್ವಿಜಯ ಸಾಧಿಸಿದ ಲಕ್ನೋ, ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಪಂಜಾಬ್ 6ನೇ ಸ್ಥಾನದಲ್ಲಿದೆ.
ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಎಲ್ಎಸ್ಜಿ ತಂಡವು ಕ್ವಿಂಟನ್ ಡಿ ಕಾಕ್ (54), ನಿಕೋಲಸ್ ಪೂರನ್ (42) ಮತ್ತು ಕೃನಾಲ್ ಪಾಂಡ್ಯ (43) ಅವರ ಅಮೋಘ ಆಟದ ಬಲದಿಂದ 199 ರನ್ಗಳ ಬೃಹತ್ ಮೊತ್ತ ಪೇರಿಸಿತು. 200 ರನ್ಗಳ ಗುರಿ ಬೆನ್ನಟ್ಟಿದ ಪಿಬಿಕೆಎಸ್, ಶಿಖರ್ ಧವನ್ ಮತ್ತು ಜಾನಿ ಬೈರ್ಸ್ಟೋ ಅವರ ಶತಕದ ಜೊತೆಯಾಟದ ಹೊರತಾಗಿಯೂ 20 ಓವರ್ಗಳಲ್ಲಿ 178 ರನ್ ಗಳಿಸಲಷ್ಟೇ ಶಕ್ತವಾಯಿತು.
ಧವನ್-ಜಾನಿ ಅದ್ಭುತ ಆರಂಭ, ಮಧ್ಯಮ ಕ್ರಮಾಂಕ ಠುಸ್
ಲಕ್ನೋ ನೀಡಿದ್ದ ಟಾರ್ಗೆಟ್ ಬೆನ್ನಟ್ಟಿದ ಪಂಜಾಬ್, ಸ್ಫೋಟಕ ಆರಂಭ ಪಡೆಯಿತು. ಲಕ್ನೋ ಬೌಲರ್ಗಳಿಗೆ ಹಿಗ್ಗಾಮುಗ್ಗಾ ಜಾಡಿಸಿದ ಶಿಖರ್ ಧವನ್-ಜಾನಿ ಬೈರ್ಸ್ಟೋ ಮೊದಲ ವಿಕೆಟ್ಗೆ ಶತಕದ ಜೊತೆಯಾಟ ಬಂತು. 102 ರನ್ ಪೇರಿಸಿದ ನಂತರ ಬೈರ್ಸ್ಟೋ ವಿಕೆಟ್ ಒಪ್ಪಿಸಿದರು. ಕಳೆದ ಎರಡು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ಜಾನಿ, 29 ಬಾಲ್ಗಳಲ್ಲಿ 3 ಬೌಂಡರಿ, 3 ಸಿಕ್ಸರ್ ಸಹಿತ 42 ರನ್ ಚಚ್ಚಿದರು.
ಅಷ್ಟರಲ್ಲಾಗಲೇ ಅರ್ಧಶತಕ ಸಿಡಿಸಿದ್ದ ಧವನ್ ಮೊದಲ ವಿಕೆಟ್ ನಂತರ ನಿಧಾನವಾಗಿ ಸ್ಕೋರ್ ಮಾಡಲಾರಂಭಿಸಿದರು. ಆದರೆ ನಂತರ ಕಣಕ್ಕಿಳಿದ ಪ್ರಭುಶಿಮ್ರಾನ್ 19ಕ್ಕೆ ಆಟ ಮುಗಿಸಿದರೆ, ಜಿತೇಶ್ ಶರ್ಮಾ 6 ರನ್ ಗಳಿಸಿ ನಿರಾಸೆ ಮೂಡಿಸಿದರು. ಮಯಾಂಕ್ ಯಾದವ್ ಈ ಮೂರು ವಿಕೆಟ್ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಅಂತಿಮ 4 ಓವರ್ಗಳಲ್ಲಿ ಪಂಜಾಬ್ ಗೆಲುವಿಗೆ 60 ರನ್ ಬೇಕಿದ್ದ ಅವಧಿಯಲ್ಲಿ ಶಿಖರ್ ಧವನ್ ಔಟಾದರು. 50 ಎಸೆತಗಳಲ್ಲಿ 70 ರನ್ ಗಳಿಸಿದರು.
ಆದರೆ ಕೊನೆಯಲ್ಲಿ ಲಿಯಾಮ್ ಲಿವಿಂಗ್ಸ್ಟನ್ ಬಿರುಸಿನ ಬ್ಯಾಟಿಂಗ್ಗೆ ಕೈ ಹಾಕಲಿಲ್ಲ. ಗಾಯಗೊಂಡಿದ್ದ ಕಾರಣ ಅವರು ಜೋರು ಆಟಕ್ಕೆ ಕೈ ಹಾಕಲು ಸಾಧ್ಯವಾಗಲಿಲ್ಲ. ಲಕ್ನೋ ಬೌಲರ್ಗಳ ಎದುರು ರನ್ ಗಳಿಸಿಲು ಪರದಾಡಿದರು. ಸ್ಯಾಮ್ ಕರನ್ ಕೂಡ ಡಕೌಟ್ ಆಗಿ ಹೊರ ನಡೆದರು. ಇದರೊಂದಿಗೆ ಪಂಜಾಬ್ ಸೋಲು ಖಚಿತವಾಯಿತು. ಕೊನೆಯ ಓವರ್ನಲ್ಲಿ ಗೆಲುವಿಗೆ 41 ರನ್ ಬೇಕಿತ್ತು. ಆದರೆ 178 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಹಾಗಾಗಿ 21 ರನ್ಗಳಿಂದ ಶರಣಾಯಿತು. ಲಕ್ನೋ ಪರ ಮಯಾಂಕ್ 3, ಮೊಹ್ಸಿನ್ ಖಾನ್ 2 ವಿಕೆಟ್ ಪಡೆದರು.
ಡಿಕಾಕ್, ಪೂರನ್, ಕೃನಾಲ್ ಅಬ್ಬರ
ಮೊದಲು ಬ್ಯಾಟಿಂಗ್ ನಡೆಸಿದ ಲಕ್ನೋ ಉತ್ತಮ ಆರಂಭ ಪಡೆಯಲಿಲ್ಲ. ಇಂಜುರಿ ಕಾರಣ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಕೆಎಲ್ ರಾಹುಲ್ 15 ರನ್ ಗಳಿಸಿ ಔಟಾದರು. ದೇವದತ್ ಪಡಿಕ್ಕಲ್ (9), ಮಾರ್ಕಸ್ ಸ್ಟೋಯ್ನಿಸ್ (19) ಮತ್ತೆ ನಿರಾಸೆ ಮೂಡಿಸಿದರು. ಮೂರು ವಿಕೆಟ್ ಕಳೆದುಕೊಂಡರೂ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ತನ್ನ ಅಬ್ಬರದ ಆಟವನ್ನು ಮುಂದುವರೆಸಿ ಅರ್ಧಶತಕ ಪೂರೈಸಿದರು. ಇದರ ಬೆನ್ನಲ್ಲೇ ಔಟ್ ಆದರು.
ಡಿ ಕಾಕ್ ಜತೆಗೂಡಿದ ಪೂರನ್ ಪಂಜಾಬ್ ಬೌಲರ್ಸ್ ಬೆವರಿಳಿಸಿದರು. ನಾಲ್ಕನೇ ವಿಕೆಟ್ಗೆ 47 ರನ್ಗಳ ಪಾಲುದಾರಿಕೆ ನೀಡಿದರು. ಸಿಕ್ಸರ್-ಬೌಂಡರಿ ಸುರಿಮಳೆಗೈದ ಪೂರನ್, 21 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ಸಹಿತ 42 ರನ್ ಗಳಿಸಿ ಔಟಾದರು. ಬಳಿಕ ಆಯುಷ್ ಬದೋನಿ, ರವಿ ಬಿಷ್ಣೋಯ್ ಬೇಗನೇ ಔಟಾದರೆ 7ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಕೃನಾಲ್ ಪಾಂಡ್ಯ ಬಿರುಸಿನ ಬ್ಯಾಟಿಂಗ್ ಮೂಲಕ ಬೃಹತ್ ಮೊತ್ತ ಪೇರಿಸಲು ನೆರವಾದರು.
ಕೃನಾಲ್, 22 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ಗಳ ಬಲದಿಂದ 43 ರನ್ ಗಳಿಸಿದರು. ಪರಿಣಾಮ ತಂಡದ ಮೊತ್ತ 199 ರನ್ ಕಲೆ ಹಾಕಲು ಸಾಧ್ಯವಾಯಿತು. ಸ್ಯಾಮ್ ಕರನ್ 3, ಅರ್ಷದೀಪ್ ಸಿಂಗ್ 2, ಕಗಿಸೊ ರಬಾಡ ಮತ್ತು ರಾಹುಲ್ ಚಹರ್ ತಲಾ 1 ವಿಕೆಟ್ ಪಡೆದರು.