ಹೈದರಾಬಾದ್ ಪ್ರತಿಭಾವಂತ ಕ್ರಿಕೆಟಿಗ ಇಂದು ಐಪಿಎಸ್ ಅಧಿಕಾರಿ; ಇಲ್ಲಿದೆ ಆತನ ಸ್ಫೂರ್ತಿದಾಯಕ ಕಥೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಹೈದರಾಬಾದ್ ಪ್ರತಿಭಾವಂತ ಕ್ರಿಕೆಟಿಗ ಇಂದು ಐಪಿಎಸ್ ಅಧಿಕಾರಿ; ಇಲ್ಲಿದೆ ಆತನ ಸ್ಫೂರ್ತಿದಾಯಕ ಕಥೆ

ಹೈದರಾಬಾದ್ ಪ್ರತಿಭಾವಂತ ಕ್ರಿಕೆಟಿಗ ಇಂದು ಐಪಿಎಸ್ ಅಧಿಕಾರಿ; ಇಲ್ಲಿದೆ ಆತನ ಸ್ಫೂರ್ತಿದಾಯಕ ಕಥೆ

IPS Officer Karthik Madhira: ಕ್ರಿಕೆಟ್ ತೊರೆದು ನಾಗರಿಕ ಸೇವೆಯಲ್ಲಿ ತೊಡಗಲು ಯತ್ನಿಸಿದ ಹೈದರಾಬಾದ್ ಮೂಲದ ಕ್ರಿಕೆಟಿಗ ಇಂದು ಐಪಿಎಸ್ ಅಧಿಕಾರಿಯಾಗಿ ಸಾವಿರಾರು ಯುವಕರಿಗೆ ಮಾದರಿಯಾಗಿದ್ದಾರೆ.

ಐಪಿಎಸ್​ ಅಧಿಕಾರಿ ಕಾರ್ತಿಕ್ ಮಧಿರಾ.
ಐಪಿಎಸ್​ ಅಧಿಕಾರಿ ಕಾರ್ತಿಕ್ ಮಧಿರಾ.

ಕ್ರೀಡಾ ಕ್ಷೇತ್ರದಲ್ಲಿ ಆಳವಾಗಿ ಬೇರೂರಿದವರು ಶೈಕ್ಷಣಿಕ ಕ್ಷೇತ್ರಕ್ಕೆ ಮರಳುವುದು ಅಪರೂಪ. ಅದರಲ್ಲೂ ವಿಶೇಷವಾಗಿ ಕ್ರಿಕೆಟ್​ನಲ್ಲಿ. ಒಂದು ಕ್ರೀಡೆಯತ್ತ ಒಲವು ತೋರಿದರೆ, ಶಿಕ್ಷಣದ ಕಡೆ ಬರುವುದು ತುಂಬಾ ಕಷ್ಟದ ವಿಚಾರ. ಆದಾಗ್ಯೂ, ಇಲ್ಲೊಬ್ಬ ಕ್ರಿಕೆಟರ್​ ಐಪಿಎಸ್ ಅಧಿಕಾರಿಯಾಗುವ ಮೂಲಕ ಮಾದರಿಯಾಗಿದ್ದಾರೆ.

ಕ್ರಿಕೆಟ್​ ಕ್ಷೇತ್ರವನ್ನೇ ತೊರೆದು ಭಾರತೀಯ ಪೊಲೀಸ್​​ ಸೇವೆಗೆ ತೆರಳಿದ ಆಟಗಾರ ಹೆಸರು ಕಾರ್ತಿಕ್ ಮಧಿರಾ (Karthik Madhira). ಕ್ರಿಕೆಟ್​​ನಿಂದ ಮಹಾರಾಷ್ಟ್ರ ಕೇಡರ್‌ನಲ್ಲಿ ಐಪಿಎಸ್ ಅಧಿಕಾರಿಯಾಗಿ ಪರಿವರ್ತನೆಯಾದ ಇವರು, ಯುವ ಪೀಳಿಗೆಗೆ ಆದರ್ಶರಾಗಿದ್ದಾರೆ. ಸಾವಿರಾರು ಮಂದಿಗೆ ಪ್ರೇರಣೆ ಆಗಿದ್ದಾರೆ. ಕಾರ್ತಿಕ್ ಇಂಟ್ರೆಸ್ಟಿಂಗ್ ಜರ್ನಿ ಇಲ್ಲಿದೆ ನೋಡಿ.

ಇಲ್ಲಿದೆ ಸ್ಫೂರ್ತಿದಾಯಕ ಕಥೆ

ಕಾರ್ತಿಕ್ ಮಧಿರಾ ಮೂಲತಃ ಹೈದರಾಬಾದ್‌ನವರು. ಆತನ ವೃತ್ತಿಜೀವನ ಅನಿರೀಕ್ಷಿತ ತಿರುವು ಪಡೆಯುವುದಕ್ಕೂ ಮೊದಲು ಅಂಡರ್-13, ಅಂಡರ್-15, ಅಂಡರ್-17, ಮತ್ತು ಅಂಡರ್-19​ ಹಾಗೂ ವಿಶ್ವವಿದ್ಯಾನಿಲಯ ಮಟ್ಟದಲ್ಲೂ ಕ್ರಿಕೆಟ್​​ ಆಡಿದ್ದಾರೆ. ಈ ವೇಳೆ ಅಪಾರ ಹೆಸರನ್ನು ಸಂಪಾದಿಸುವಲ್ಲಿ ಯಶಸ್ವಿಯಾಗಿದರು.

ಐಪಿಎಸ್​ಗೆ ಪ್ರವೇಶಿಸುವ ಮೊದಲು ಕಾರ್ತಿಕ್ ಮಧಿರಾ ಜವಾಹರಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾಲಯದಿಂದ (ಜೆಎನ್‌ಟಿಯು) ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು. ಕಾರ್ತಿಕ್ ಕ್ರಿಕೆಟ್ ತೊರೆದು ಐಪಿಎಸ್​ ಆಗಲು ವೈಯಕ್ತಿಕ ಕಾರಣಗಳ ಜೊತೆಗೆ ಗಾಯವೂ ಒಂದು ಎಂದು ವರದಿಯಾಗಿದೆ.

ಕಾರ್ತಿಕ್ ತನ್ನ ಯುಪಿಎಸ್​ಸಿ ಪರೀಕ್ಷೆಯ ಸತತ ಮೂರು ವೈಫಲ್ಯಗಳ ನಂತರ ತಮ್ಮ ನಾಲ್ಕನೇ ಪ್ರಯತ್ನದಲ್ಲಿ ತೇರ್ಗಡೆಗೊಂಡು 103ನೇ ರ್ಯಾಂಕ್ ಪಡೆದರು. ಒಂದು ಸಣ್ಣ ಕೆಲಸದ ಅನುಭವವು ನಾಗರಿಕ ಸೇವೆಯಲ್ಲಿ ವೃತ್ತಿಜೀವನ ಮುಂದುವರಿಸಲು ಬಯಸಿದ ನಿರ್ಣಯವು ಅವರ ಐಪಿಎಸ್​ ಅಧಿಕಾರಿಯನ್ನಾಗಿ ರೂಪಿಸಿದೆ.

ನಾಗರಿಕ ಸೇವೆಯ ಹಾದಿ

ನಾಗರಿಕ ಸೇವೆಗಳಿಗಾಗಿ ಮಿಡಿದ ಅವರ ಹೃದಯ, ಐಚ್ಛಿಕ ವಿಷಯವಾದ ಸಮಾಜಶಾಸ್ತ್ರ ವಿಷಯದ ಮೇಲೆ ಅಧ್ಯಯನವನ್ನೂ ನಡೆಸಿದ್ದಾರೆ. ಕಾರ್ತಿಕ್ ಏಕಕಾಲದಲ್ಲಿ ಪ್ರಿಲಿಮ್ಸ್ ಮತ್ತು ಮೇನ್ ಎರಡಕ್ಕೂ ತನ್ನನ್ನು ತಾನೇ ಸಿದ್ಧಪಡಿಸಿಕೊಂಡರು. ಅವರ ನಿಖರವಾದ ಯೋಜನೆ, ನಿರಂತರ ಪರಿಷ್ಕರಣೆ, ಸಮರ್ಪಿತ ಅಭ್ಯಾಸ ವಿಜಯಕ್ಕೆ ಮೆಟ್ಟಿಲುಗಳಾಯಿತು.

ಮಹಾರಾಷ್ಟ್ರ ಕೇಡರ್‌ನಲ್ಲಿ ಐಪಿಎಸ್ ಅಧಿಕಾರಿ

ಯುಪಿಎಸ್​ಸಿ ಎರಡೂ ಹಂತಗಳಿಗೆ ಬಹು ಪರೀಕ್ಷಾ ಸರಣಿಗಳ ಮೂಲಕ ಭರ್ಜರಿ ತಯಾರಿ ನಡೆಸಿದ್ದರು. 2019ರಲ್ಲಿ ನಡೆದ ಯುಪಿಎಸ್​ಸಿ ಪರೀಕ್ಷೆಯಲ್ಲಿ ಅವರ ನಾಲ್ಕನೇ ಪ್ರಯತ್ನದಲ್ಲಿ ಶ್ಲಾಘನೀಯ 103 ನೇ ರ್ಯಾಂಕ್ ಗಳಿಸಿದರು. ವರದಿಗಳ ಪ್ರಕಾರ, ಅವರು ಪ್ರಸ್ತುತ ಮಹಾರಾಷ್ಟ್ರ ಕೇಡರ್‌ನಲ್ಲಿ ನಿಯೋಜಿಸಲ್ಪಟ್ಟಿದ್ದಾರೆ.

ಕಾರ್ತಿಕ್ ಅವರ ವಿಜಯೋತ್ಸಾಹದ ಯುಪಿಎಸ್​ಸಿ ಪ್ರಯಾಣವು ಸಮಗ್ರ ತಯಾರಿ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ. ವಿಷಯ ಪರಿಷ್ಕರಣೆ, ಬರವಣಿಗೆಯ ಕೌಶಲ್ಯ, ಅಚಲವಾದ ಸಮರ್ಪಣೆ, ಜೊತೆಗೆ ವೈಯಕ್ತಿಕ ಅಭಿವೃದ್ಧಿ ಮೇಲೆ ಹರಿಸಿದ ಗಮನವೂ ಐಪಿಎಸ್​ ಅಧಿಕಾರಿಯಾಗಿ ರೂಪಿಸುವಲ್ಲಿ ಪ್ರಮುಖವಾಗಿದೆ.

ಆದರೆ, ಅವರು ಭಾರತೀಯ ಕ್ರಿಕೆಟ್​ನಲ್ಲಿ ಸೇವೆ ಸಲ್ಲಿಸಿಲ್ಲ. ದೇಶೀಯ ಕ್ರಿಕೆಟ್​​ನಲ್ಲೂ ಅವರು ಕಣಕ್ಕಿಳಿದಿಲ್ಲ. ಆದರೆ ಅವರ ಕ್ರಿಕೆಟ್​​ ಸೇವೆ ಅಂಡರ್-19ಗೆ ಸೀಮಿತವಾಗಿದೆ. ಈ ಹಂತದಲ್ಲಿ ಕ್ರಿಕೆಟ್​ನಲ್ಲಿ ಅಪಾರ ಪ್ರತಿಭೆ ಹೊಂದಿದ್ದ ಕಾರ್ತಿಕ್, ಗಾಯಗೊಂಡಿದ್ದರು. ಅವರ ವೈಯಕ್ತಿಕ ಜೀವನವೂ ಐಪಿಎಸ್ ಆಗಲು ಕಾರಣ. ಆದರೆ ತಂದೆ-ತಾಯಿ ಯಾರು ಸೇರಿದಂತೆ ಇನ್ನೂ ಹಲವು ಮಾಹಿತಿ ಲಭ್ಯವಾಗಿಲ್ಲ.

Whats_app_banner